‘ಲೋಕಶಕ್ತಿ’ ಪಕ್ಷಕ್ಕೆ ಕಲ್ಪವೃಕ್ಷವಾಗಿ ಬಂದ ಹೆಗಡೆ ಸಂಗಾತಿ ಪ್ರತಿಭಾ
‘ಲೋಕಶಕ್ತಿ’ ಪಕ್ಷಕ್ಕೆ ಕಲ್ಪವೃಕ್ಷವಾಗಿ ಬಂದ ಹೆಗಡೆ ಸಂಗಾತಿ ಪ್ರತಿಭಾ
ಮಾ.14 ರಂದು ಹೆಗಡೆ ಆಪ್ತರು-ಲೋಕಶಕ್ತಿ ಹಿತ ಚಿಂತಕರ ಸಭೆ
ಹೆಗಡೆ ಒಬ್ಬ ಮಹಾನ್ ರಾಜಕಾರಣಿ. ಅವರ ತತ್ವಗಳನ್ನು ವರ್ತಮಾನದಿಂದ ಮಾಯವಾಗಲು ಬಿಡುವುದಿಲ್ಲ . ಅದಕ್ಕಾಗಿ ಲೋಕಶಕ್ತಿಗೆ ಪುನಶ್ಚೇತನ ನೀಡುತ್ತಿದ್ದೇವೆ. ಅಲ್ಲದೆ ಲೋಕಶಕ್ತಿಗೆ ಮರುಜೀವ ನೀಡಲು ಹೆಗಡೆ ನಿಷ್ಠಾವಂತರ ಒತ್ತಡವೂ ಇತ್ತು. ಹಾಗಾಗಿ ಈ ನಿರ್ಣಯ ಕೈಗೊಂಡೆ ಎಂದು ಪ್ರತಿಭಾ ಪ್ರಹ್ಲಾದ್ ಹೇಳಿದ್ದಾರೆ.
ಹೆಗಡೆ ಅವರು ಬದುಕಿದ್ದಾಗಲೇ ಸಂಯುಕ್ತ ಜನತಾದಳದಲ್ಲಿ ಲೋಕಶಕ್ತಿ ವೀಲಿನವಾಗಿದೆ ಎಂದು ಘೋಷಿಸಲಾಗಿತ್ತು . ಆದರೆ, ಈ ಕುರಿತು ಕಾನೂನು ರೀತಿಯ ಯಾವ ಪ್ರಕ್ರಿಯೆಗಳು ಪೂರ್ಣಗೊಂಡಿಲ್ಲ . ಚುನಾವಣಾ ಆಯೋಗದ ಬಳಿ ಲೋಕಶಕ್ತಿಯ ತೆಂಗಿನಮರದ ಚಿಹ್ನೆ ಇನ್ನೂ ಉಳಿದಿದೆ ಎಂದು ಪ್ರತಿಭಾ ತಿಳಿಸಿದರು.
ಪಕ್ಷದ ಪುನರುತ್ಥಾನವು ಹೆಗಡೆ ಜೀವನದ ಕೊನೆಯ ಆಸೆಯಾಗಿತ್ತು. ಅವರ ಜೀವಿತಾವಧಿಯಲ್ಲಿ ರಾಜಕೀಯದಲ್ಲಿ ಇಲ್ಲದ ಅವರ ಕುಟುಂಬದವರು ಈಗ ಬಿಜೆಪಿ ಸೇರಿದ್ದಾರೆ. ಅದು ಅವರ ವೈಯುಕ್ತಿಕ ವಿಚಾರ. ಹೆಗಡೆಗೆ ಬಿಜಿಪಿ ಮಾಡಿದ ಅವಮಾನವನ್ನು ಅವರೆಲ್ಲ ಮರೆತಂತಿದೆ. ಈ ಅಪಮಾನ ಜಾರ್ಜ್ ಫರ್ನಾಂಡೀಸ್ ಕುಕೃತ್ಯದಿಂದ ನಡೆದದ್ದು. ಹೆಗಡೆಗೆ ಸಚಿವ ಸಂಪುಟದಲ್ಲಿ ಆಸಕ್ತಿ ಇಲ್ಲ ಎಂದು ಪಿತೂರಿ ಮಾಡಿದ ಜಾರ್ಜ್ ರಕ್ಷಣಾ ಖಾತೆಯನ್ನು ತಮ್ಮ ಬಗಲಿಗೆ ಹಾಕಿಕೊಂಡರು ಎಂದು ಪ್ರತಿಭಾ ಆಪಾದಿಸಿದರು.
ಪಕ್ಷದಿಂದ ಹೊರಹೋದವರೆಲ್ಲ ಮತ್ತೆ ಬರುತ್ತಾರೆ ಎಂಬ ನಿರೀಕ್ಷೆಯಿದೆ. ನನಗೆ ರಾಜಕಾರಣ ಹೊಸದಲ್ಲ. ಕಳೆದ 15 ವರ್ಷಗಳ ಕಾಲ ಹೆಗಡೆ ಸಾಂಗತ್ಯದಲ್ಲಿ ರಾಜಕಾರಣವನ್ನು ಬಹು ಸಾಮೀಪ್ಯದಿಂದ ಕಂಡಿದ್ದೇನೆ. ಸಕ್ರಿಯ ರಾಜಕಾರಣಿಯಾಗಿ ಇರಲಿಲ್ಲ ಅಷ್ಟೇ. ಮುಂದೆ ಯಾರಾದರು ಬಂದು ಪಕ್ಷದ ಜವಾಬ್ದಾರಿ ಹೊರಲು ತಯಾರಿದ್ದರೆ ಅವರಿಗೆ ವಹಿಸುತ್ತೇನೆ ಎಂದು ಹೇಳಿದರು.
ಸ್ನಾತಕೋತ್ತರ ಪದವೀಧರರಾದ ಪ್ರತಿಭಾ ಪ್ರಹ್ಲಾದ್ ಸದ್ಯ ಫಿರೋಜ್‌ಷಾ ರಸ್ತೆಯಲ್ಲಿರುವ ಹೆಗಡೆಯವರ ಗಿರಿಧರ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications