ಬೆಂಗಳೂರಲ್ಲಿ ಭಾರತ ಉದಯ, ಉದಯವಾಗಲಿದೆ ಕರ್ನಾಟಕ !
ಬೆಂಗಳೂರಲ್ಲಿ ಭಾರತ ಉದಯ, ಉದಯವಾಗಲಿದೆ ಕರ್ನಾಟಕ !
ರಾಜ್ಯದಲ್ಲಿ ಅಡ್ವಾಣಿ ಬಿರುಗಾಳಿ, ಉಪ ಪ್ರಧಾನಿ ಹೇಳೋದೇನು ಗೊತ್ತಾ ?
ರಾಜ್ಯದ ಕಾಂಗ್ರೆಸ್ ಸರ್ಕಾರ ಅನೇಕ ಹಗರಣಗಳಿಗೆ ಬಲಿಯಾಗಲಿದೆ. ಅದರಲ್ಲೂ ಕರೀಂಲಾಲ ತೆಲಗಿಯ ಛಾಪಾ ಪಾಪದ ಹಗರಣ ಕಾಂಗ್ರೆಸ್ ಪಾಲಿಗೆ ಕರಾಳವಾಗಲಿದೆ ಎಂದು ಅಡ್ವಾಣಿ ಶನಿವಾರ ಹೇಳಿದರು. ಭಾರತ ಉದಯ ಯಾತ್ರೆಯ ಅಂಗವಾಗಿ ಬೆಂಗಳೂರಿಗೆ ಬಂದಿದ್ದ ಅವರು ಮಾ.13ರ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಅದಕ್ಷ ಹಾಗೂ ಅಸಮರ್ಥ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಡ್ವಾಣಿ ಟೀಕಿಸಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಗಮನ ಸೆಳೆದಿದೆ ಎನ್ನುವ ಮಾತು ಪ್ರಶ್ನಾತೀತ. ಆದರೆ ರಾಜ್ಯ ಸರ್ಕಾರದ ಪಾತ್ರ ಯಾವುದರಲ್ಲಿ ಇಲ್ಲವೋ ಆ ಕ್ಷೇತ್ರಗಳಲ್ಲಿ ನ ಸಾಧನೆ ಗಮನ ಸೆಳೆಯುವಂತಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ಬರ ಪರಿಸ್ಥಿತಿಯ ನಿಭಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಆದುದರಿಂದ 2004 ಕರ್ನಾಟಕದಲ್ಲಿ ಬಿಜೆಪಿಯ ವರ್ಷವಾಗಲಿದೆ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ಅಡ್ವಾಣಿ ಹೇಳಿದರು.
ವಾಜಪೇಯಿ ಅದ್ವಿತೀಯ ನಾಯಕ
ಪ್ರಧಾನಿ ವಾಜಪೇಯಿ ಅವರು ಬಿಜೆಪಿಯ ಅಗ್ರನಾಯಕರಾಗಿದ್ದು , ಜನಸಂಘದ ದಿನಗಳಿಂದಲೂ ವಾಜಪೇಯಿ ಪ್ರಮುಖ ನಾಯಕರಾಗಿದ್ದಾರೆ ಎಂದು ಅಡ್ವಾಣಿ ಬಣ್ಣಿಸಿದರು. ಬಿಜೆಪಿ ವಾಜಪೇಯಿ ಕೇಂದ್ರಿತ ಪಕ್ಷವಾಗುತ್ತಿದೆ ಎನ್ನುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅಡ್ವಾಣಿ- ವಾಜಪೇಯಿ ರಾಷ್ಟ್ರೀಯ ತತ್ವ ಹಾಗೂ ಸಿದ್ಧಾಂತಗಳನ್ನು ಒಳಗೊಂಡ ಅತ್ಯುಚ್ಛ ನಾಯಕರಾಗಿದ್ದು , ಅವರನ್ನು ಪ್ರಮುಖವಾಗಿ ಬಿಂಬಿಸಲು ಬಿಜೆಪಿ ಹಿಂಜರಿಯದು ಎಂದರು. 1969 ರ ದಿನಗಳಲ್ಲೇ ವಾಜಪೇಯಿ ಅವರನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಬಿಂಬಿಸಿದ್ದನ್ನು ಅಡ್ವಾಣಿ ನೆನಪಿಸಿಕೊಂಡರು.
ಸುರಕ್ಷತೆಯೇ ಮಂತ್ರ
ಹಿಂದುತ್ವ ತತ್ವವನ್ನು ಬಲವಂತವಾಗಿ ಹೇರಲು ಬಿಜೆಪಿ ಇಚ್ಛಿಸುವುದಿಲ್ಲ . ರಕ್ಷಣೆ, ಸ್ಥಿರತೆ ಹಾಗೂ ದೇಶವನ್ನು ಪ್ರಮುಖ ಶಕ್ತಿಯಾಗಿ ರೂಪಿಸುವುದೇ ಬಿಜೆಪಿಯ ಗುರಿಯಾಗಿದೆ ಎಂದು ಅಡ್ವಾಣಿ ಹೇಳಿದರು.
1994-95ರಲ್ಲಿ ಜೈಪುರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ‘ಹಿಂದೂಗಳನ್ನು ಯಾರು ರಕ್ಷಿಸುವುರೋ ಅವರು ದೇಶವನ್ನು ಆಳುತ್ತಾರೆ’ ಎನ್ನುವ ಘೋಷಣೆಯನ್ನು ಬಳಸುವ ವಿಷಯ ಪ್ರಸ್ತಾಪಕ್ಕೆ ಬಂದಿತ್ತು . ಆದರೆ ಈ ಘೋಷಣೆಗೆ ತಾವು ವಿರೋಧ ಸೂಚಿಸಿದ್ದಾಗಿ ಅಡ್ವಾಣಿ ಹೇಳಿದರು.
ಅಡ್ವಾಣಿ ಸುದ್ದಿಗೋಷ್ಠಿಯ ಮುಖ್ಯಾಂಶಗಳು :
- ಒಂದು ಒಳ್ಳೆಯ ಸರ್ಕಾರ ಶೇ.82ರಷ್ಟಿರುವ ಹಿಂದೂಗಳ ಹಿತಾಸಕ್ತಿಯನ್ನಷ್ಟೇ ಬಯಸದೆ, ಪ್ರತಿಶತ ನೂರು ಜನತೆಯನ್ನು ತೃಪ್ತಿಗೊಳಿಸಲು ಪ್ರಯತ್ನಿಸುತ್ತದೆ. ಬಿಜೆಪಿಯ ಪ್ರಯತ್ನವೂ ಈ ದಿಕ್ಕಿನಲ್ಲೇ ಸಾಗಿದೆ ಎಂದರು.
- ವೈಯಕ್ತಿಕವಾಗಿ ಹಾಗೂ ನನ್ನ ಧಾರ್ಮಿಕ ನಂಬಿಕೆಗಳ ಪ್ರಕಾರ ನಾನೊಬ್ಬ ಹಿಂದೂ. ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಆದರೆ, ಹಿಂದೂ ನಾಯಕ ಎಂದು ಬಿಂಬಿಸಿಕೊಳ್ಳಲು ಇಷ್ಟಪಡುವುದಿಲ್ಲ . ನಾನೊಬ್ಬ ರಾಜಕಾರಣಿಯಾಗಿದ್ದು , ನೂರು ಕೋಟಿ ಜನರ ಹಿತಾಸಕ್ತಿಯ ಕುರಿತು ಚಿಂತಿಸುತ್ತೇನೆ.
- ಮಹಾತ್ಮ ಗಾಂಧಿ ಕೂಡ ತಮ್ಮನ್ನು ಹಿಂದೂ ಎಂದು, ಸನಾತನ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದರು.
- ಗೋಧ್ರಾ ಘಟನೆ ಒಂದು ದುರಂತ ಎಂದು ಬಿಜೆಪಿ, ವಾಜಪೇಯಿ ಹಾಗೂ ನಾನು ನಂಬುತ್ತೇನೆ. ಗೋಧ್ರಾ ಘಟನೆ ಹಾಗೂ ಆನಂತರ ನಡೆದ ಅಮಾಯಕರ ಕಗ್ಗೊಲೆ ಅಸಮರ್ಥನೀಯ.
- ಭಾರತ ಹಾಗೂ ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯಗಳನ್ನು ಭಾರತ ಉದಯ ಯಾತ್ರೆಯಿಂದ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ ಸ್ಕೋರ್ ಕುರಿತು ನಿಗಾ ಇರಿಸಿದ್ದೇನೆ.
- ಭಾರತ ಹಾಗೂ ಪಾಕಿಸ್ತಾನದ ನಡುವಣ ತುರುಸಿನ ಸ್ಪರ್ಧೆಯಲ್ಲಿ ಗೆಲುವು ಯಾರಿಗೆ ಎಂದು ಹೇಳುವುದು ಯಾರಿಗೂ ಸಾಧ್ಯವಿಲ್ಲ . ಆದರೆ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ರಾಜಕೀಯ ಸಮರದಲ್ಲಿ ಗೆಲುವು ಯಾರಿಗೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಗುಟ್ಟು .
- ನೆಹರೂ ಅವರ ಕಾಲದಲ್ಲಿ ಚುನಾವಣೆಗೆ ಮುನ್ನವೇ ಫಲಿತಾಂಶ ಎಲ್ಲರಿಗೂ ಗೊತ್ತಿರುತ್ತಿತ್ತು . ಈಗ ಪರಿಸ್ಥಿತಿ ತಿರುಗುಮುರುಗಾಗಿದೆ.
ಮಾ.12ರ ಶುಕ್ರವಾರ ಇಳಿಸಂಜೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಭಾರೀ ಬಹಿರಂಗ ಸಭೆಯನ್ನುದ್ದೇಶಿಸಿ ಅಡ್ವಾಣಿ ಮಾತನಾಡಿದರು. ಎನ್‌ಡಿಎ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕುರಿತು ಅಡ್ವಾಣಿ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ 12 ಜಿಲ್ಲೆಗಳಲ್ಲಿ ಅಡ್ವಾಣಿಯವರ ಭಾರತ ಉದಯ ರಥಯಾತ್ರೆ ಸಾಗಲಿದ್ದು , ಸುಮಾರು 800 ಕಿಮೀ ದೂರವನ್ನು ಉಪ ಪ್ರಧಾನಿ ಕ್ರಮಿಸಲಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications