‘ನಾನು ಪಾಳೇಗಾರನಲ್ಲ , ನಿಷ್ಠಾವಂತ ಕಾಂಗ್ರೆಸ್‌ಕಾರ್ಯಕರ್ತ’
‘ನಾನು ಪಾಳೇಗಾರನಲ್ಲ , ನಿಷ್ಠಾವಂತ ಕಾಂಗ್ರೆಸ್‌ಕಾರ್ಯಕರ್ತ’
ವಿಶ್ವನಾಥ್ ನನ್ನ ಖಾಸಗಿ ಮಿತ್ರರೆಂದ ಡಿ.ಕೆ.ಶಿವಕುಮಾರ್
ಶಿವಕುಮಾರ್ ಸರ್ವಾಧಿಕಾರಿ ಧೋರಣೆ ತೋರಿಸುತ್ತಿದ್ದಾರೆ ಎಂಬ ಸಹಕಾರ ಸಚಿವ ಎಚ್.ವಿಶ್ವನಾಥ್ ಅವರ ದೂಷಣೆ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಶಿವಕುಮಾರ್, ತಾವೊಬ್ಬ ಪಕ್ಷದ ನಿಷ್ಠವಂತ ಕಾರ್ಯಕರ್ತ ಎಂದರು. ಪಕ್ಷದಲ್ಲಿ ನಾನು ಯಾವುದೇ ಹುದ್ಧೆಯನ್ನು ಕೇಳಿಲ್ಲ. ಪಕ್ಷ ವಹಿಸಿದ ಕಾರ್ಯವನ್ನು ನಿಷ್ಠೆಯಿಂದ ಮಾಡಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಗೆಲ್ಲಬೇಕಾದರೆ ಟಿಕೇಟ್ ಹಂಚಿಕೆ ಪ್ರಕ್ರಿಯಯಿಂದ ‘ಡಿಕೆಶಿ’ಯನ್ನು ದೂರವಿಡಿ ಎಂಬ ವಿಶ್ವನಾಥ್ ಹೇಳಿಕೆಯ ಕುರಿತು ಪತ್ರಕರ್ತರ ಪ್ರಶ್ನೆಗೆ- ನನಗೆ ಟಿಕೇಟ್ ನೀಡುವ ಹಕ್ಕಿದೆ ಎಂದು ತಿಳಿದೇ ಇರಲಿಲ್ಲ. ಈ ಅಧಿಕಾರವಿರುವುದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಾತ್ರವೆಂದು ತಿಳಿದಿದ್ದೇನೆ ಎಂದರು. ವಿಶ್ವನಾಥ್ ಓರ್ವ ಅನುಭವಿ ಹಿರಿಯ ನಾಯಕ. ಅವರು ಮಾಧ್ಯಮದ ಮೂಲಕ ಪಕ್ಷಕ್ಕೆ ಸಲಹೆ ನೀಡುತ್ತಿರುತ್ತಾರೆ. ಅವರ ಹೇಳಿಕೆ ಅಗತ್ಯ ಎಂದೆನಿಸಿದರೆ ಪಕ್ಷ ಅಳವಡಿಸಿಕೊಳ್ಳುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಟಿಕೇಟ್ ಹಂಚಿಕೆ ಸಮಿತಿಯಲ್ಲಿ ನನ್ನನ್ನು ಸೇರಿಸಿ ಎಂದು ಪಕ್ಷವನ್ನು ಎಂದೂ ಕೇಳಿಕೊಂಡಿಲ್ಲ. ಇದು ಪಕ್ಷದ ನಿರ್ಧಾರ. 1989ರಲ್ಲಿ ನನ್ನನ್ನು ಚುನಾವಣೆಗೆ ನಿಲ್ಲಿಸಿದ್ದು ಅಂದಿನ ಕಾಂಗೈ ಅಧ್ಯಕ್ಷ ರಾಜಿವ್‌ಗಾಂಧಿ ನಿರ್ಧಾರ. ಅವರ ನಿರ್ದೇಶನದಂತೆ ಬಂಗಾರಪ್ಪ ಸರಕಾರದಲ್ಲಿ ನನ್ನನ್ನು 29ರ ಹರೆಯದಲ್ಲೇ ಮಂತ್ರಿ ಮಾಡಲಾಯಿತು ಎಂದು ಡಿಕೆಶಿ ಹೇಳಿದರು.
ನಾನು ವಿಸರ್ಜಿತ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದ ಸಾತನೂರು ಕ್ಷೇತ್ರದಿಂದ ಟಿಕೇಟ್ ಬಯಸಿ ಅರ್ಜಿ ಸಲ್ಲಿಸಿಲ್ಲ. ಬದಲಾಗಿ ಉತ್ತರಹಳ್ಳಿ, ಕೊರಟಗೆರೆ ಮತ್ತು ಚೆನ್ನಪಟ್ಟಣದಿಂದ ಟಿಕೇಟ್ ಕೇಳಿ ಅರ್ಜಿ ಸಲ್ಲಿಸಿದ್ದೇನೆ ಎಂದ ಅವರು ಪಕ್ಷ ಯಾವುದೇ ಕ್ಷೇತ್ರದ ಅಭ್ಯರ್ಥಿ ಅಥವಾ ಕಾರ್ಯಕರ್ತನಾಗಿ ಬಯಸಿದರೆ ಅದನ್ನು ಮಾಡುವುದಾಗಿ ಹೇಳಿದರು.
ಸತತವಾದ ಟೀಕೆಗಳಿಂದ ವಿಶ್ವನಾಥ್ ಅವರಿಗೆ ವೈಯುಕ್ತಿಕ ಲಾಭಗಳಿಗಿರಬಹುದು. ಆದರೆ ಖಾಸಗಿಯಾಗಿ ನನ್ನ ಮಿತ್ರರು. ಶತ್ರುಗಳೇನಿದ್ದರೂ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಮಾತ್ರ ಎಂದು ಸಚಿವ ಶಿವಕುಮಾರ್ ಹೇಳಿದರು.
ವಿಶ್ವನಾಥ್ ಟೀಕೆಯ ಕುರಿತು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಾಲೆ ಇರುವವರಿಗೆ ಜಗವೆಲ್ಲ ಹಳದಿ ಎಂದು ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications