ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕೋತ್ಸವಕ್ಕೆ ಭರ್ಜರಿ ಯಶಸ್ಸು

By Staff
|
Google Oneindia Kannada News

ಪಾಕೋತ್ಸವಕ್ಕೆ ಭರ್ಜರಿ ಯಶಸ್ಸು
ಇದು ಊಟದ ಮೇಳ. ಆಟದ ಮೇಳ. ದರ್ಶಿನಿ ತಿಂಡಿ-ಊಟಕ್ಕೆ ಒಗ್ಗಿ ಹೋಗಿರುವ ನಗರದ ಮಂದಿಯ ಪಾಲಿಗಿದು ಭೂರಿ ಭೋಜನ. ಮಾಯಾ ಬಜಾರಿನ ಘಟೋತ್ಕಚನೇನಾದರೂ ಈ ಮೇಳಕ್ಕೆ ಬಂದಿದ್ದರೆ....

  • ಪ್ರಕಾಶ ಸಾಗರ
ಬೆಂಗಳೂರಿನಂತಹ ತರಾತುರಿಯ ಜಂಜಾಟದ ಬದುಕಿನಲ್ಲಿ, ‘ಪಾಕೋತ್ಸವ’ ಎಂಬ ಹವ್ಯಕ ಆಹಾರ ಮೇಳ ಇಷ್ಟು ಯಶಸ್ವಿಯಾಗಿ ನಡೆಯುತ್ತದೆ ಎಂದು ಸಂಘಟಕರೇ ಭಾವಿಸಿರಲಿಕ್ಕಿಲ್ಲವೇನೋ?! ಗಿರಿನಗರದ ಶ್ರೀರಾಮಾಶ್ರಮದಲ್ಲಿ ಫೆಬ್ರವರಿ 28 ಮತ್ತು 29ರಂದು ನಡೆದ ಹವ್ಯಕ ಪಾಕೋತ್ಸವ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿತು. ಎರಡು ದಿನಗಳ ಕಾಲ ನಡೆದ ಪಾಕೋತ್ಸವದ ಇಣುಕು ನೋಟ ಇಲ್ಲಿದೆ.

ಕಾರ್ಯಕ್ರಮದ ಮೊದಲ ದಿನ ಸುಮಾರು 5,000 ಜನ ನೆರೆದಿದ್ದರು. 100 ಆಹಾರ ಮಳಿಗೆಗಳು ಕಾರ್ಯಕ್ರಮಕ್ಕೆ ಬಂದವರನ್ನು ಕೈಬೀಸಿ ಕರೆಯುತ್ತಿದ್ದವು. ಹೆಸರನ್ನೇ ಕೇಳಿರದ ನೂರಾರು ಭಕ್ಷ್ಯಗಳು, ಮಹತ್ವವನ್ನೇ ತಿಳಿದಿರದ ಹಳ್ಳಿ ಕಡೆಯ ತಂಬುಳಿ ಪದಾರ್ಥಗಳು, ಅವುಗಳ ಔಷಧೀಯ ಗುಣಗಳು ಬೆಂಗಳೂರಿನ ಹವ್ಯಕ ಸಮುದಾಯ ಮತ್ತು ಇತರರನ್ನು ಬೆರಗುಗೊಳಿಸಿಬಿಟ್ಟಿತ್ತು. ಕಾರ್ಯಕ್ರಮದ ಎರಡನೇ ದಿನ ಜನಸ್ತೋಮದ ಸಂಖ್ಯೆ 10, 000 ಮುಟ್ಟಿತ್ತು.

ಕಾರ್ಯಕ್ರಮಕ್ಕೆ ಸಹಾಯಕ ಪೊಲೀಸ್‌ ಕಮಿಷನರ್‌ ರವೀಂದ್ರನಾಥ್‌ ಠಾಗೂರ್‌, ವಿಜಯ ಕರ್ನಾಟಕ ಸಂಪಾದಕರಾದ ವಿಶ್ವೇಶ್ವರ ಭಟ್‌, ವಿ.ಆರ್‌.ಹೆಗಡೆ, ಹೆಗಡೆಮನೆ, ಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ, ಕರ್ನಾಟಕ ಹೊಟೇಲು ಮಾಲಿಕರ ಸಂಘದ ಅಧ್ಯಕ್ಷರಾದ ರಾಮನಾಥ್‌ ಭಟ್‌, ಬೆಂಗಳೂರು ಹೊಟೇಲು ಮಾಲಿಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಹೆಬ್ಬಾರ್‌, ಸಂಜೀವ್‌ ರಾವ್‌, ಹಳ್ಳಿಮನೆ, ಮಲ್ಲೇಶ್ವರಂ, ಮುಂತಾದವರು ಆಗಮಿಸಿದ್ದರು.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕಾಸರಗೋಡು, ಕೊಡಗು ಮುಂತಾದ ಕಡೆಗಳಿಂದ ಸಾವಿರಾರು ಪಾಕ ಪ್ರವೀಣರು, ಪಾಕಪ್ರಿಯರು, ಕಾರ್ಯಕರ್ತರು ಕಾರ್ಯಕ್ರಮದ ಆಕರ್ಷಣೆಯಾಗಿದ್ದರು.

ಪಾಯಸ ಕುಡಿಯುವ ಸ್ಪರ್ಧೆ ಮತ್ತು ತಯಾರಿಸಿ ತಂದ ಅಡುಗೆ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಅಡುಗೆ ತಯಾರಿ ಸ್ಪರ್ಧೆಯು ಹವ್ಯಕರಿಗಾಗಿ ನಡೆಸಲಾಗಿತ್ತು. ಹಲವಾರು ಕಡೆಯಿಂದ 63 ಸ್ಪರ್ಧಿಗಳು 40 ರಿಂದ 50 ಬಗೆಯ ಸಿಹಿತಿಂಡಿಗಳನ್ನು ತಯಾರಿಸಿ ತಂದಿದ್ದರು.

ಸಿಹಿ ಅಡುಗೆ ತಯಾರಿ ಸ್ಪರ್ಧೆಯ ವಿಜೇತರು:

ಮೊದಲ ಬಹುಮಾನ: ನಿಂಬೆ ಹಣ್ಣಿನ ಲೇಹ್ಯ (ಪದ್ಮಾವತಮ್ಮ)
ದ್ವಿತೀಯ ಬಹುಮಾನ: ಮೆಂತೆ ಗಂಜಿ ಪಾಯಸ (ಮಹಾಲಕ್ಷ್ಮಿ ತಿಮ್ಮಪ್ಪ)
ತೃತೀಯ ಬಹುಮಾನ: ಅಂಟಿನ ಉಂಡೆ (ಅನ್ನಪೂರ್ಣ ಹೆಗಡೆ)

ಸಾದಾ(ಸಿಹಿಯಲ್ಲದ) ಅಡುಗೆ ತಯಾರಿ ಸ್ಪರ್ಧೆಯ ವಿಜೇತರು :

49 ಸ್ಪರ್ಧಿಗಳು- 42 ಬಗೆಯ ಪದಾರ್ಥಗಳು

ಮೊದಲ ಬಹುಮಾನ: ಮುರುಗನ ಹಣ್ಣಿನ ತಂಬುಳಿ (ರೇಖಾ ಹೆಗಡೆ)
ದ್ವಿತೀಯ ಬಹುಮಾನ: ಮಜ್ಜಿಗೆ ಹುಲ್ಲಿನ ತಂಬುಳಿ (ಸಾವಿತ್ರಿ ಹೆಗಡೆ)
ತೃತೀಯ ಬಹುಮಾನ: ಬಾಳೆ ದಿಂಡಿನ ಸಾಸಿವೆ(ಹಶಿ) (ಕಲ್ಪನಾ ಕಲ್ಗಾಲ್‌)

ಸ್ಪರ್ಧೆಯ ನಿರ್ಣಾಯಕರಾಗಿ ದಕ್ಷಿಣ ಕನ್ನಡದಿಂದ ಸಾವಿತ್ರಿ ಭಟ್‌, ಉತ್ತರ ಕನ್ನಡದಿಂದ ಶ್ರೀಮತಿ ಹೆಗಡೆ, ಶಿವಮೊಗ್ಗದಿಂದ ನಾರಾಯಣ ಸ್ವಾಮಿ ಆಗಮಿಸಿದ್ದರು.

ಪಾಯಸ ಕುಡಿಯುವ ಸ್ಪರ್ಧೆಯ ವಿಜೇತರು :

ಹೆಸರುಬೇಳೆ ಪಾಯಸ, ಕಾಲಾವಕಾಶ: ಹತ್ತು ನಿಮಿಷ

ಮೊದಲ ಬಹುಮಾನ: ನಾಗಲಕ್ಷ್ಮಿ(12 ಕಪ್‌) ಮತ್ತು ಗುರುರಾಜ್‌(12 ಕಪ್‌)
ದ್ವೀತೀಯ ಬಹುಮಾನ: ಗೌತಮ್‌(10 ಕಪ್‌) ಮತ್ತು ಟಿ. ರಮೇಶ್‌(10 ಕಪ್‌)

100 ರೂಪಾಯಿಯ ಭೂರಿ ಭೋಜನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 16 ಬಗೆಯ ಸಿಹಿ ತಿಂಡಿಗಳು, 8 ಬಗೆಯ ಖಾರಾ ಬಾತ್‌, 7 ಬಗೆಯ ಸಾಂಬಾರು, 10 ಬಗೆಯ ರಸಂ, 10 ಬಗೆಯ ಪಲ್ಯ, 8 ಬಗೆಯ ತಂಬುಳಿ, ಗೊಜ್ಜು, 5 ಬಗೆಯ ಉಪ್ಪಿನಕಾಯಿ, 7 ಬಗೆಯ ಬೋಂಡ ಇವೆಲ್ಲವುಗಳೂ ಭೂರಿ ಭೋಜನ ಒಳಗೊಂಡಿತ್ತು. ಮೊದಲ ದಿನ ಭೂರಿ ಭೋಜನವನ್ನು 1,500 ಜನರೂ ಎರಡನೇ ದಿನ 4,000 ಜನರೂ ಸವಿದರು.

ತೆಂಕು ತಿಟ್ಟು ಮತ್ತು ಬಡಗು ತಿಟ್ಟುಗಳ ಯಕ್ಷಗಾನಗಳು ಜನಮನ್ನಣೆಗೆ ಪಾತ್ರವಾಯ್ತು. ಕೊಳಗಿ ಕೇಶವ ಹೆಗಡೆ ಮತ್ತು ಅನಂತ ಭಾಗವತ್‌ ಅವರ ಯಕ್ಷಗಾನ ಜುಗಲ್‌ಬಂದಿ ಮಧ್ಯಾಹ್ನದ ನಿದ್ದೆಯನ್ನು ಹೊಡೆದೋಡಿಸಿತ್ತು. ಚಪ್ಪರಮನೆ ಶ್ರೀಧರ ಹೆಗಡೆ ತಂಡದವರ ಹಾಸ್ಯೋತ್ಸವ ದೇಹದ ಎಲ್ಲ ಭಾಗಗಳಿಗೂ ಕುಳಿತಲ್ಲೇ ವ್ಯಾಯಾಮ ನೀಡುವಂತಿತ್ತು. ಭರತನಾಟ್ಯ, ಸುಗಮ ಸಂಗೀತ, ಜಾನಪದ ನೃತ್ಯ, ಹವ್ಯಕ ಸಾಂಪ್ರದಾಯಿಕ ಗೀತೆ, ಭಕ್ತಿಗೀತೆ ಕಾರ್ಯಕ್ರಮಗಳನ್ನು ಮಾಡಿದ ಮುದ್ದು ಮಕ್ಕಳು, ಹವ್ಯಕ ಯುವ ವೇದಿಕೆ, ಕಲಾವೇದಿಕೆ, ಬೆಂಗಳೂರು ಪ್ರಾಂತ ಪ್ರತಿನಿಧಿ ಪರಿಷತ್ತು ಮತ್ತು ಎಲ್ಲ ಭಾಗಗಳ ಸಾಂಸ್ಕೃತಿಕ ವೇದಿಕೆಗಳು ಕಾರ್ಯಕ್ರಮಕ್ಕೆ ರೂಪು ಕೊಟ್ಟವು.

ಕಾರ್ಯಕ್ರಮದ ಜವಾಬ್ದಾರಿ ಹೊತ್ತ ಶ್ರೀಕಾಂತ್‌ ಹೆಗಡೆ, ಜಿ.ಜಿ.ಹೆಗಡೆ, ಸದಾನಂದ ಹೆಗಡೆ, ಪ್ರಕಾಶ್‌ ಕೆ.ವಿ, ಡಾ. ಮಂಜುನಾಥ್‌ ಭಟ್‌ ಕಾರ್ಯಕ್ರಮದ ಯಶಸ್ಸಿನ ರೂವಾರಿಗಳಾದರು.

ಈ ಎಲ್ಲ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಹಳ್ಳಿಮನೆ, ಮಲ್ಲೇಶ್ವರಂ ಹಾಗೂ ಸ್ಪಾರ್ಕ್‌ ಇಂಟರ್‌ನ್ಯಾಷನಲ್‌ ಸದಾನಂದ ಹೆಗಡೆ ವಹಿಸಿದ್ದರು.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X