ಗುಲ್ಬರ್ಗಾ : ರಾಜ್ಯದ ಮೊದಲ ಡಿಡಿ ಕೇಂದ್ರ ಹೇಗಿದೆ ಗೊತ್ತಾ ?
ಗುಲ್ಬರ್ಗಾ : ರಾಜ್ಯದ ಮೊದಲ ಡಿಡಿ ಕೇಂದ್ರ ಹೇಗಿದೆ ಗೊತ್ತಾ ?
ಕುಂಭಕರ್ಣ ಸಂತತಿಯ ಅಧಿಕಾರಿಗಳ ಶಯನಕೇಂದ್ರವಾಗಿರುವ ಗುಲ್ಬರ್ಗಾ ಡಿಡಿ ಮತ್ತು ಆಕಾಶವಾಣಿ
ಕರ್ನಾಟಕದ ಪ್ರಪ್ರಥಮ ದೂರದರ್ಶನ ಕೇಂದ್ರ ಎನ್ನುವ ಅಗ್ಗಳಿಕೆಯ ಗುಲ್ಬರ್ಗಾ ದೂರದರ್ಶನ ಕೇಂದ್ರ ಕಳೆದ 7 ತಿಂಗಳುಗಳಿಂದ ಇದರ ಉಪನಿರ್ದೇಶಕರ ಜೊತೆಯಲ್ಲೇ ಗಾಢ ನಿದ್ರೆಯಲ್ಲಿದೆ. ದೂರದರ್ಶನ ಕೇಂದ್ರ ಮಹೇಶ್ ಜೋಷಿವರ ನೇತೃತ್ವದಲ್ಲಿದ್ದಾಗ ತನ್ನ ಚಟುವಟಿಕೆಗಳಿಂದ ಕಂಗೊಳಿಸುತ್ತಿತ್ತು. ಜೋಷಿಯವರ ಮಾರ್ಗದರ್ಶನದಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳು, ಹೆಚ್ಚಿನ ಪ್ರಸಾರಾವಧಿ ಮತ್ತು ನವೀಕೃತ ಡಿಜಿಟಲ್ ಸ್ಟೂಡಿಯೋಗಳ ಮೂಲಕ ದೂರದರ್ಶನ ಕೇಂದ್ರ ಜನಪರವಾಗಿತ್ತು , ಜನಪ್ರಿಯತೆಯನ್ನೂ ಗಳಿಸಿತ್ತು. ಆದರೆ, ಜೋಷಿಯವರು ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗವಾದ ಮೇಲೆ ಗುಲ್ಬರ್ಗಾ ದೂರದರ್ಶನ ಕೇಂದ್ರ ನಿಂತ ನೀರಂತೆ ನಾರುತ್ತಿದೆ.
ಕಳೆದ ಏಳು ತಿಂಗಳುಗಳಿಂದ ಗುಲ್ಬರ್ಗಾದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೂರದರ್ಶನ ಕೇಂದ್ರ ನಿರ್ಲಕ್ಷಿಸುತ್ತಿದೆ ಎಂದು ಜಿಲ್ಲೆಯ ಸಾಂಸ್ಕೃತಿಕ ವಲಯ ದೂರುತ್ತಿದೆ. ದೂರದರ್ಶನ ಕೇಂದ್ರದ ಉಸ್ತುವಾರಿ ನಿರ್ದೇಶಕ ಶಿವಾನಂದ ಬೇಕಲ್ ಅಧ್ಯಕ್ಷರಾಗಿಯೋ ಅಥವಾ ಮುಖ್ಯ ಅತಿಥಿಯಾಗಿಯೋ ಭಾಗವಹಿಸುವ ಕಾರ್ಯಕ್ರಮಗಳು ಮಾತ್ರ ದೂರದರ್ಶನದಲ್ಲಿ ಅವಕಾಶ ಪಡೆಯುತ್ತಿವೆ.
ಶಿವಾನಂದ ಬೇಕಲ್‌ರನ್ನು ಒಂದು ವರ್ಷದ ಹಿಂದೆ ಉತ್ತರ ಪ್ರದೇಶದ ದೂರದರ್ಶನ ಕೇಂದ್ರವೊಂದಕ್ಕೆ ವರ್ಗ ಮಾಡಲಾಗಿತ್ತು . ಆದರೆ, ಗುಲ್ಬರ್ಗಾ ಬಿಡಲು ಬೇಕಲ್ ಮನಸ್ಸು ಮಾಡಿಲ್ಲ . ಪ್ರಸಾರ ಭಾರತಿಯ ಕೆಲವು ಮೂಲಗಳ ಪ್ರಕಾರ, ಶಿವಾನಂದ ಬೇಕಲ್ ಈಗ ಗುಲ್ಬರ್ಗಾ ಆಕಾಶವಾಣಿ ಕೇಂದ್ರದ ಉಪ ನಿರ್ದೇಶಕ ಸ್ಥಾನಕ್ಕೆ ಭರ್ತಿಯಾಗಿದ್ದಾರೆ !
ಇನ್ನು ಆಕಾಶವಾಣಿ ಕೇಂದ್ರದ್ದು ಮತ್ತೊಂದು ಕರ್ಮಕಾಂಡ. ದೂರದರ್ಶನ ಕೇಂದ್ರದಲ್ಲಿನ ಪರಿಸ್ಥಿತಿಗೂ ಆಕಾಶವಾಣಿಯ ಕಾರ್ಯ ವೈಖರಿಗೂ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ . ಹತ್ತು ತಿಂಗಳಿಂದ ಗುಲಬರ್ಗಾ ಆಕಾಶವಾಣಿ ಕೇಂದ್ರಕ್ಕೆ ಸಮರ್ಥ ನಿರ್ದೇಶಕರೇ ಇಲ್ಲ. ಎಫ್‌ಎಂ ಕೇಂದ್ರಗಳಲ್ಲೂ ಅಧಿಕಾರಿಗಳಿಲ್ಲ. ಹೀಗಾಗಿ ಜನಪರ ಆಗಬೇಕಿದ್ದ ಎರಡು ಪ್ರಭಾವಿ ಮಾಧ್ಯಮಗಳು ಅಧಿಕಾರ ವರ್ಗದ ಅಸಡ್ಡೆಯಿಂದ ಜಡವಾಗಿವೆ.
ಭಾರತ ಪ್ರಕಾಶಿಸುತ್ತಿದೆ , ಅಲ್ಲವೇ ?
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications