‘ಜಾತ್ಯತೀತ ದಳ ಅಧಿಕಾರಕ್ಕೆ ಬಂದರೆ ಭ್ರಷ್ಟ ಕಾಂಗ್ರೆಸ್ಸಿಗರಿಗೆ ಜೈಲು’
‘ಜಾತ್ಯತೀತ ದಳ ಅಧಿಕಾರಕ್ಕೆ ಬಂದರೆ ಭ್ರಷ್ಟ ಕಾಂಗ್ರೆಸ್ಸಿಗರಿಗೆ ಜೈಲು’
ತಿಂಗಳೊಳಗೆ ಎಫ್‌ಐಆರ್, ಸರಳಿನ ಹಿಂದೆ ಭ್ರಷ್ಟ ಕಾಂಗ್ರೆಸ್ಸಿಗರು- ದೇವೇಗೌಡ ಧಮಕಿ
ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಸಿದ್ಧರಾಮಯ್ಯ ಮೈಸೂರಿನಲ್ಲಿ ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆಯ ಮುಂದುವರಿದ ಭಾಗದಂತೆ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ- ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಭ್ರಷ್ಟ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ಸಲ್ಲಿಸಿ, ಅವರನ್ನು ಸರಳಿನ ಹಿಂದೆ ಕಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ (ಫೆ.22) ದೇವೇಗೌಡ ಮಾತನಾಡುತ್ತಿದ್ದರು.
ಸಾವಿರಾರು ಬಡವರ ಜಮೀನನ್ನು ಕಾಂಗ್ರೆಸ್ ಸರ್ಕಾರ ಕಬಳಿಸಿದೆ. ಈ ಬಡವರ ಪರವಾಗಿ ನಾನು ಧ್ವನಿ ಎತ್ತುತ್ತೇನೆ. ಪ್ರತಿಪಕ್ಷದ ಮುಖಂಡನಾಗಿ ಕಾವಲು ನಾಯಿಯಂತೆ ಸರ್ಕಾರದ ಆಡಳಿತದ ಕುರಿತು ನಿಗಾ ವಹಿಸುತ್ತೇನೆ ಎಂದು ದೇವೇಗೌಡ ಹೇಳಿದರು. ತಮ್ಮ ಬಗ್ಗೆ ಯಾರು ಏನೇ ಹೇಳಿದರೂ ಗಮನ ನೀಡುವುದಿಲ್ಲ ಎಂದೂ ಮಾಜಿ ಪ್ರಧಾನಿ ಸ್ಪಷ್ಟಪಡಿಸಿದರು.
ಜೈಲುಗಳನ್ನು ರಿಪೇರಿ ಮಾಡಿಸುತ್ತಿದ್ದೇನೆ -ಕೃಷ್ಣ
ಜಾತ್ಯತೀತ ಜನತಾದಳದ ದೇವೇಗೌಡ ಹಾಗೂ ಸಿದ್ಧರಾಮಯ್ಯ ಅವರ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕೃಷ್ಣ - ಜಾತ್ಯತೀತ ಜನತಾದಳದ ನಾಯಕರು ಪಾಳೇಗಾರಿಕೆ ಮನೋಭಾವ ಮೆರೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ಸಿಗರನ್ನು ದೇವೇಗೌಡರು ಜೈಲಿಗೆ ಕಳಿಸಲು ಅನುಕೂಲವಾಗುವಂತೆ ರಾಜ್ಯದ ಎಲ್ಲಾ ಜೈಲುಗಳನ್ನು ರಿಪೇರಿ ಮಾಡಿಸುತ್ತಿದ್ದೇನೆ ಎಂದು ಕೃಷ್ಣ ಮಾರ್ಮಿಕವಾಗಿ ನುಡಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications