ಕ್ರಿಕೆಟ್ : ಭಾರತದ ಪಾಕಿಸ್ತಾನ ಪ್ರವಾಸಕ್ಕೀಗ ಸುರಕ್ಷೆಯ ಶ್ರಿರಕ್ಷೆ
ಕ್ರಿಕೆಟ್ : ಭಾರತದ ಪಾಕಿಸ್ತಾನ ಪ್ರವಾಸಕ್ಕೀಗ ಸುರಕ್ಷೆಯ ಶ್ರಿರಕ್ಷೆ
ಮಾರ್ಚ್ ಮೊದಲ ವಾರದಿಂದ ಆರು ವಾರಗಳ ಪಾಕ್ ಪ್ರವಾಸ
ಭಾರತ ಕ್ರಿಕೆಟ್ ತಂಡದ ಪಾಕಿಸ್ಥಾನ ಪ್ರವಾಸಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿಸಿದೆ. ದ್ವಿಪಕ್ಷೀಯ ಬಾಂಧವ್ಯ ಅಭಿವೃದ್ಧಿಯ ನಿಟ್ಟಿನಲ್ಲಿ ಕ್ರಿಕೆಟ್ ಪ್ರವಾಸ ಕೂಡಾ ಮಹತ್ತರ ಪಾತ್ರವಹಿಸುತ್ತಿದೆ. ಈ ಕುರಿತು ಕೇಂದ್ರ ಸರಕಾರವು ‘ಚುನಾವಣೆಯ ಬಳಿಕ ಪ್ರವಾಸ ಕೈಗೊಳ್ಳುವುದು ಉಚಿತ ’ ಎಂಬ ಸಲಹೆಯನ್ನು ಹಿಂದೆ ನೀಡಿತ್ತು. ಇನ್ನೊಂದೆಡೆ ಭಾರತೀಯ ತಂಡಕ್ಕೆ ನೀಡುವ ಭದ್ರತೆಯ ವಿಷಯ ಭಾರೀ ಚರ್ಚೆಗೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ವೀಕ್ಷಕರ ತಂಡವೊಂದು ಪಾಕ್‌ಗೆ ಭೇಟಿ ನೀಡಿ ಭದ್ರತೆಗೆ ಸಕಾರಾತ್ಮಕ ಪ್ರತಿಕ್ರಿಯೆ ತೋರಿಸಿದೆ.
ಈ ಮಧ್ಯೆ ಭಾರತ -ಪಾಕ್ ಕ್ರಿಕೆಟ್ ಪಂದ್ಯಗಳಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಎಂದು ಪಾಕಿಸ್ಥಾನದ ಮೂಲಭೂತವಾದಿ ಹಾಗೂ ಉಗ್ರಗಾಮಿ ಸಂಘಟನೆಗಳು ಹೇಳಿಕೊಂಡಿವೆ. ‘ಎರಡು ದೇಶಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದಕ್ಕೆ ಯಾವುದೇ ರೀತಿಯ ತೊಂದರೆ ಮಾಡುವುದಿಲ್ಲ. ನಮ್ಮ ನಿಲುವು ಯಾವತ್ತೂ ಸ್ಪಷ್ಟ. ಅದೇನಿದ್ದರೂ ಕಾಶ್ಮೀರದ ಮೇಲೆ ಕೇಂದ್ರೀಕೃತ. ಪಾಕಿಸ್ಥಾನಕ್ಕೆ ಭಾರತದ ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಬಂದು ಹೋಗಿಲ್ಲವೆ?’ ಎಂದು ಜೆ.ಐ. , ಜೆ.ಯು ಐ. ಮುಂತಾದ ಸಂಘಟನೆಗಳು ಹೇಳಿಕೊಂಡಿವೆ.
ಭಾರತೀಯ ಆಟಗಾರರು ಬೇಕಾದಲ್ಲಿ ಅವರ ಭದ್ರತೆ ಉಪಯೋಗಿಸಿಕೊಳ್ಳಲಿ. ಅದರ ವೆಚ್ಚವನ್ನು ಬಿಸಿಸಿಐ ಭರಿಸಬೇಕಾಗುತ್ತದೆ. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಅವರ ರಕ್ಷಣಾ ಸಿಬ್ಬಂದಿಗಳ ಒಟ್ಟು ಸಂಖ್ಯೆ ಎಷ್ಟೆಂದು ನಮಗೆ ತಿಳಿಸಿದರೆ ಸಾಕು. ಈ ಹಿಂದೆ ಕ್ರಿಕೆಟ್ ಪ್ರವಾಸ ಬಂದಿದ್ದ ನ್ಯೂಜಿಲ್ಯಾಂಡ್, ದಕ್ಷಿಣಾ ಆಫ್ರಿಕಾ ದೇಶಗಳು ಸಹ ಸ್ವಂತ ಭದ್ರತೆ ಹೊಂದಿದ್ದರು’ ಎಂದು ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ವಕ್ತಾರ ಸಾಮಿ ಉಲ್ ಹಸನ್ ಹೇಳಿದ್ದಾರೆ.
ಕಾರ್ಗಿಲ್ ಯುದ್ಧ ಸೇರಿದಂತೆ ಅಂತರ್ ಗಡಿಸಮಸ್ಯೆಯು ಭಾರತ-ಪಾಕ್ ಕ್ರಿಕೆಟ್ ಆಟಕ್ಕೆ ತೊಡಕಾಗಿತ್ತು. ‘ನಿಯೋಜಿತ ಸರಣಿಯ ಸಂದರ್ಭದಲ್ಲಿ ಏನಾದರು ಅಹಿತಕರ ಘಟನೆ ನಡೆದರೆ ಬಾಂಧವ್ಯದ ಕೊಂಡಿಗೆ ಏಟು ಬೀಳಬಹುದು. ಹಾಗೂ ಇದೇ ಸಮಯದಲ್ಲಿ ಭಾರತ ಚುನಾವಣೆ ಎದುರಿಸುತ್ತಿದೆ. ಈ ಕಾರಣದಿಂದ ಕ್ರಿಕೆಟ್ ತಂಡ ಪಾಕ್ ಪ್ರವಾಸವನ್ನು ಮುಂದೂಡಲಿ ’ಎಂದು ಭಾರತೀಯ ಗೃಹಖಾತೆ ಸಲಹೆ ನೀಡಿತ್ತು.
ಇವಲ್ಲದೆ ಭಾರತದ ಜೊತೆ ಸ್ನೇಹಕ್ಕೆ ಕೈ ಚಾಚಿದ ಪಾಕ್ ಅಧ್ಯಕ್ಷ ಮುಶರಫ್ ಮೇಲೆ ಪಾಕಿಸ್ಥಾನದಲ್ಲೇ ನಿರಂತರ ಹತ್ಯಾ ದಾಳಿಗಳು ನಡೆಯುತ್ತಿವೆ. ಇದು ಭಾರತೀಯ ಕ್ರಿಕೆಟ್ ಆಟಗಾರರಿಗೆ ಭಧ್ರತೆಯ ಕುರಿತು ಚಿಂತಿಸುವಂತೆ ಮಾಡಿತ್ತು. ಈಗ ಪ್ರಧಾನಿ ವಾಜಪೇಯಿ ಮಧ್ಯಪ್ರವೇಶಿಸಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಹಸಿರು ನಿಶಾನೆ ತೋರಿಸಿದ್ದಾರೆ.
ಮಾರ್ಚ್ ಮೊದಲ ವಾರದಿಂದ ಆರಂಭಗೊಂಡು ಆರು ವಾರಗಳ ಕಾಲ ಭಾರತ ತಂಡ ಪಾಕ್ ಪ್ರವಾಸದಲ್ಲಿರುತ್ತದೆ. ಭಾರತ ಕೊನೆಯ ಭಾರಿ ಪಾಕ್ ಪ್ರವಾಸ ಕೈಗೊಂಡದ್ದು 1989ರಲ್ಲಿ (ಟೆಸ್ಟ್ ಸರಣಿ). ಈ ನಡುವೆ 9/11ರ ಘಟನೆಯ ಬಳಿಕ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ತಂಡಗಳು ಪಾಕ್ ಪ್ರವಾಸ ನಿರಾಕರಿಸಿದ್ದವು. ನ್ಯೂಜಿಲ್ಯಾಂಡ್ ತಂಡ ಭದ್ರತೆಯ ದೃಷ್ಟಿಯಲ್ಲಿ ತನ್ನ ಪ್ರವಾಸವನ್ನು ಮೊಟಕುಗೊಳಿಸಿತ್ತು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications