ವಿಧಾನಸಭೆ ವಿಸರ್ಜನೆ : ಈಗ, ಇಂದು, ನಾಳೆ ಅಥವಾ ಸೆಪ್ಟಂಬರ್?
ವಿಧಾನಸಭೆ ವಿಸರ್ಜನೆ : ಈಗ, ಇಂದು, ನಾಳೆ ಅಥವಾ ಸೆಪ್ಟಂಬರ್?
ಶಾಸಕರಿಗೆ ವಿದಾಯಕೂಟ, ಚುನಾವಣೆ ಬಗ್ಗೆ ಕೃಷ್ಣ ರಹಸ್ಯ
ವಿಧಾನ ಸಭೆಯಲ್ಲಿ (ಫೆ.11) 2004-05 ರ ಬಜೆಟ್ ಕುರಿತಾದ ಚರ್ಚೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ - ‘ರಾಜ್ಯ ವಿಧಾನಸಭೆಗೆ ಸೆಪ್ಟಂಬರ್ ಮಾಸದಲ್ಲಿ ಚುನಾವಣೆ ನಡೆಯಬಹುದು. ನಾನು ಇಷ್ಟು ಶೀಘ್ರದಲ್ಲಿ ಲೋಕಸಭಾ ಚುನಾವಣೆ ನಿರೀಕ್ಷಿಸಿರಲಿಲ್ಲ. ಕೇಂದ್ರ ಸರಕಾರ ಅವಧಿಪೂರ್ವ ಚುನಾವಣೆ ಹೇರಿದೆ’ ಎಂದು ನುಡಿದರು. ಈ ಕುರಿತು ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ಫೆ.10ರಂದು ನಡೆದ ಕಾಂಗೈ ಶಾಸಕರ ಸಭೆಯಲ್ಲಿ ಲೋಕಸಭೆಯ ಜೊತೆ ಏಕಕಾಲದಲ್ಲಿ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆಸುವ ಅಭಿಪ್ರಾಯ ವ್ಯಕ್ತವಾಗಿತ್ತು. ಕೆಪಿಸಿಸಿ ಅಧ್ಯಕ್ಷ ಬಿ. ಜನಾರ್ಧನ ಪೂಜಾರಿ ಈ ಹಿಂದೆಯೇ, ಫೆ.12 ರಂದು ವಿಧಾನಸಭೆ ವಿಸರ್ಜನೆಯಾಗಲಿದೆ ಎಂದು ಘೋಷಿಸಿದ್ದರು. ಈ ಕುರಿತು ಕಾಂಗೈ ಹೈಕಮಾಂಡ್ ತನ್ನ ಅಂತಿಮ ತೀರ್ಮಾನವನ್ನು ಈವರೆಗೆ ಪ್ರಕಟಿಸಿಲ್ಲ. ‘ಇನ್ನು ಕೆಲವೇ ಗಂಟೆಗಳಲ್ಲಿ ವಿಧಾನಸಭೆ ವಿಸರ್ಜನೆಯಾಗಬಹುದು’ ಎಂದ ಸಂಪುಟ ಸಚಿವರೊಬ್ಬರ ಹೇಳಿಕೆಯೂ ಈ ನಡುವೆ ಪ್ರಕಟವಾಗಿದೆ. ಫೆ.11 ರಂದು ವಿಧಾನಸಭಾ ಅಧ್ಯಕ್ಷರು ಶಾಸಕರಿಗೆ ವಿದಾಯಕೂಟ ನೀಡಿಯಾಗಿದೆ.
ಅಂತೂ ಚಾತಕ ಪಕ್ಷಿಯಂತೆ ಚುನಾವಣೆ ದಿನಾಂಕಕ್ಕಾಗಿ ಕಾಯುತ್ತಿರುವ ವಿರೋಧ ಪಕ್ಷದವರನ್ನು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸತಾಯಿಸುತಿದ್ದಾರೆ. ಇದು ಅವರ ವಿನೂತನ ರಾಜಕೀಯ ಚದುರಂಗದಾಟ ಆಗಿರಬಹುದೇ?
(ಏಜನ್ಸೀಸ್)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications