ಜೋಡಿ ಸಂಭ್ರಮ : ನಿಸಾರ್-69, ಭಟ್ಟರಿಗೆ ಕಾವ್ಯಸಂಭ್ರಮ
ಜೋಡಿ ಸಂಭ್ರಮ : ನಿಸಾರ್-69, ಭಟ್ಟರಿಗೆ ಕಾವ್ಯಸಂಭ್ರಮ
ಕನ್ನಡಿಗರ ಪ್ರೀತಿಯ ಕವಿ ನಿಸಾರ್ 69ನೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ, ಇನ್ನೊಬ್ಬ ಒಳ್ಳೆಯ ಕವಿ ಲಕ್ಷ್ಮಿನಾರಾಯಣಭಟ್ಟರ ಸಮಗ್ರ ಕಾವ್ಯ ಬಿಡುಗಡೆಯಾಗುತ್ತಿದೆ. ಭಟ್ಟರಿಗೆ ಅಭಿನಂದನೆ ; ನಿಸಾರರಿಗೆ ಶುಭಾಶಯ.
- ದಟ್ಸ್‌ಕನ್ನಡ ಡೆಸ್ಕ್
ಯುಗಾದಿ ಹಾಗೂ ರಂಜಾನ್ ಒಟ್ಟಿಗೆ ಬಂದರೆ ಹೇಗಿರುತ್ತೆ ?
ಇಂಥದೊಂದು ಜೋಡಿ ಸಂಭ್ರಮ ಬೆಂಗಳೂರಿನ ಸಾಂಸ್ಕೃತಿಕ ಲೋಕದಲ್ಲಿ ಕೂಡಿಬಂದಿದೆ. ಮೊದಲನೆಯದು ಕವಿ ಡಾ.ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟರ ‘ಸಮಗ್ರ ಕಾವ್ಯ’ ಬಿಡುಗಡೆಯ ಖುಷಿ, ಇನ್ನೊಂದು ನಿತ್ಯೋತ್ಸವದ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್‌ರ 69ನೆಯ ಹುಟ್ಟುಹಬ್ಬ.
ನಿಸಾರ್ ಹಾಗೂ ಲಕ್ಷ್ಮಿನಾರಾಯಣ ಭಟ್ಟರ ಅಭಿಮಾನಿಗಳ ಬಳಗ ದೊಡ್ಡದು. ಆ ಕಾರಣದಿಂದಲೇ ಎರಡೂ ಸಂಭ್ರಮಗಳು ದೊಡ್ಡರೀತಿಯಲ್ಲಿ ನಡೆಯುತ್ತಿವೆ.
ನಿಸಾರರ ಹುಟ್ಟುಹಬ್ಬ ಆಚರಣೆಗೆ ಕೆ.ಎಸ್.ನಿಸಾರ್ ಅಹಮದ್ ಅಭಿನಂದನ ಸಮಿತಿ ಮತ್ತು ಕನಕಪುರದ ಕಸ್ತೂರಿ ಕನ್ನಡ ಸಂಘ ಜಂಟಿಯಾಗಿ ಕೈಜೋಡಿಸಿವೆ. ಫೆ.5ರ ಗುರುವಾರ ಬೆಂಗಳೂರಿನ ಆರ್‌ವಿ ದಂತ ಮಹಾವಿದ್ಯಾಲಯದಲ್ಲಿ ಈ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ಕಾರ್ಯಕ್ರಮ ಆರಂಭ.
ನಿಸಾರ್ ಹುಟ್ಟುಹಬ್ಬ ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಇಗೋ ಕನ್ನಡ’ ಖ್ಯಾತಿಯ ಪ್ರೊ.ಜಿ.ವೆಂಕಟಸುಬ್ಬಯ್ಯ ವಹಿಸುವರು. ಐಜಿಪಿ ಕೆಂಪಯ್ಯ ನಿಸಾರರನ್ನು ಸನ್ಮಾನಿಸುವರು. ಗಾಂಧೀವಾದಿ ಎಚ್.ಎಸ್.ದೊರೆಸ್ವಾಮಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ವಿಮರ್ಶಕ ಹಾಗೂ ವಿಸೀ ಸಂಪದದ ಅಧ್ಯಕ್ಷ ಎಂ.ಎಚ್.ಕೃಷ್ಣಯ್ಯ ನಿಸಾರರ ಕುರಿತು ಅಭಿನಂದನಾ ಭಾಷಣ ಮಾಡುವರು. ಈ ಸಮಾರಂಭದಲ್ಲಿ ನಿಸಾರರ ಗೀತೆಗಳ ಗಾಯನವೂ ನಡೆಯಲಿದೆ.
ಕಾವ್ಯ ಸಂಭ್ರಮ !
ಖ್ಯಾತ ಕವಿ ಡಾ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ ಅವರ ಕೃತಿಪ್ರಪಂಚಕ್ಕೆ ಈಗ ಇನ್ನೊಂದು ಗರಿ. ಭಟ್ಟರ ಈವರೆಗಿನ ಕವಿತೆಗಳು ಒಂದೆಡೆ ಓದಿಗೆ ಸಿಗಲು ಅನುಕೂಲವಾಗುವಂತೆ- ಸಮಗ್ರ ಕಾವ್ಯ ಗುರುವಾರ ಬಿಡುಗಡೆಯಾಗುತ್ತಿದೆ. ಅಂದಹಾಗೆ ಇದು ಸಂಪುಟ -1 ಮಾತ್ರ. ಈ ಸಂಪುಟದಲ್ಲಿ ಭಟ್ಟರ ಶಿಶುಗೀತೆ ಹಾಗೂ ಕೆಲವು ಭಾವಗೀತೆಗಳು ಸೇರಿಲ್ಲ . ಶಿಶುಗೀತೆ ಹಾಗೂ ಭಾವಗೀತೆಗಳು ನಾನ್ನೂರಕ್ಕೂ ಹೆಚ್ಚು ಪುಟ ಆಕ್ರಮಿಸಿಬಿಡುವ ಅಪಾಯದಿಂದ ಸದ್ಯಕ್ಕೆ ಅವುಗಳಿಗೆ ವಿನಾಯಿತಿ.
ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿನ ಸುಚಿತ್ರಾ ಫಿಲಂ ಸೊಸೈಟಿಯ ಬಯಲು ರಂಗ ಮಂದಿರದಲ್ಲಿ ಭಟ್ಟರ ಸಮಗ್ರ ಕಾವ್ಯ ಬಿಡುಗಡೆ ಸಮಾರಂಭ ನಡೆಯಲಿದೆ. ಸಂಜೆ 6ರಿಂದ ಕಾರ್ಯಕ್ರಮ ಶುರು. ಹಿರಿಯ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಸಮಗ್ರ ಕಾವ್ಯ-1 ಕೃತಿ ಬಿಡುಗಡೆ ಮಾಡುವರು.
ಮೋಹನ್ ಸಾರಥ್ಯದ ಉಪಾಸನಾ ಸಂಸ್ಥೆ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿದ್ದು , ಮಾತಿನೊಂದಿಗೆ ಹಾಡುಗಾರಿಕೆಯೂ ಇದೆ.
ಪೂರಕ ಓದಿಗೆ-
ಕೆ.ಎಸ್.ನಿಸಾರ್‌ಅಹಮದ್ : ಗಾಂಧಿ ಬಜಾರಿನಿಂದ ಡೆಟ್ರಾಯಿಟ್‌ಗೆ..
ಮುಖಪುಟ / ವಾರ್ತೆಗಳು












Click it and Unblock the Notifications