‘ಬೆಂಗಳೂರು-ತುಮಕೂರು ರೈಲ್ವೆ ಹಳಿ ದ್ವಿಗುಣ 2005ಕ್ಕೆ ಪೂರ್ಣ’
‘ಬೆಂಗಳೂರು-ತುಮಕೂರು ರೈಲ್ವೆ ಹಳಿ ದ್ವಿಗುಣ 2005ಕ್ಕೆ ಪೂರ್ಣ’
ರಾಜ್ಯದ ವಿವಿಧ ರೈಲ್ವೆ ಕಾಮಗಾರಿಗೆ 110 ಕೋಟಿ ರೂಪಾಯಿಯ ಬಿಡುಗಡೆ-ಯತ್ನಾಳ್
ದಾವಣಗೆರೆಗೆ ರೈಲಿನಲ್ಲಿ ಪ್ರಯಾಣಿಸುತ್ತಾ ಪತ್ರಕರ್ತರ ಜೊತೆ ಮಾತನಾಡಿದ ಸಚಿವ ಯತ್ನಾಳ್- ಬಿಜಾಪುರ-ಗದಗ ಬ್ರಾಡ್‌ಗೇಜ್ ಪರಿವರ್ತನಾ ಕಾರ್ಯವು ಫೆ.01 ರಂದು ಶುರುವಾಗಿದೆ. ಈ ಕಾಮಗಾರಿ 2005ರ ಹೊತ್ತಿಗೆ ಸಂಪೂರ್ಣಗೊಳ್ಳಲಿದೆ . ಬೆಂಗಳೂರು-ತುಮಕೂರು ರೈಲ್ವೆ ಹಳಿ ದ್ವಿಗುಣಗೊಳಿಸುವ ಕಾರ್ಯ ಗೊಲ್ಲಹಳ್ಳಿ ರೈಲ್ವೆ ನಿಲ್ದಾಣದವರೆಗೆ ತಲುಪಿದೆ, ಮುಂದಿನ ಕೆಲಸವನ್ನು ಶೀಘ್ರವೇ ಆರಂಭಿಸಲಾಗುವುದು ಎಂದರು.
ಈ ನಡುವೆ ಕೇಂದ್ರ ಸರಕಾರವು ಪ್ರತಿನಿತ್ಯ ಹರಿಹರ-ಬೆಂಗಳೂರು ವೇಗದೂತ ಅಥವಾ ಹುಬ್ಬಳ್ಳಿ-ಬೆಂಗಳೂರು ಅಂತರ್‌ನಗರಿ ದಿನವಹಿ ವೇಗದೂತ ರೈಲನ್ನು ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಆರಂಭಿಸುವ ಕುರಿತು ಆಲೋಚಿಸುತ್ತಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ದಾವಣಗೆರೆ-ಹಿರಿಯೂರು-ಶಿರಾ-ತುಮಕೂರು ರೈಲು ಆರಂಭದ ಕುರಿತಾದ ಸರ್ವೆ ಪೂರ್ಣಗೊಂಡಿದೆ. ಆದರೆ, ಈ ಮಾರ್ಗದಲ್ಲಿ ಗೂಡ್ಸ್ ರೈಲುಗಳ ಓಡಾಟ ಅಗತ್ಯವಿಲ್ಲ ಹಾಗೂ ಪ್ರಯಾಣಿಕ ರೈಲುಗಳು ಅಲ್ಪ ಲಾಭದಾಯಕವಾಗಿದೆ. ಆದುದರಿಂದ ಆರ್ಥಿಕವಾಗಿ ಪ್ರಯೋಜನಕಾರಿ ಆಗಿರದ ಈ ಯೋಜನೆಯನ್ನು ಕೈಬಿಡಲಾಯಿತು ಎಂದರು.
ನೈರುತ್ಯ ರೈಲ್ವೇ ವಲಯವನ್ನು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಉತ್ತಮಪಡಿಸಲು ಅತಿ ಶೀಘ್ರದಲ್ಲಿ 110 ಕೋಟಿ ರೂಪಾಯಿಯನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲಾಗುವುದು ಹಾಗೂ 15 ಹೊಸ ರೈಲುಗಳನ್ನು ಆರಂಭಿಸಲಾಗುವುದು ಎಂದು ಯತ್ನಾಳ್ ನುಡಿದರು.
ಹೆಚ್ಚಿನ ರೈಲುಗಳ ಸಂಪರ್ಕವನ್ನು ಹುಬ್ಬಳ್ಳಿಗೆ ಕಲ್ಪಿಸಿ, ಹುಬ್ಬಳ್ಳಿಯನ್ನು ಆರ್ಥಿಕ , ವ್ಯಾಪಾರಿಕ ಹಾಗೂ ಕೈಗಾರಿಕ ಕೇಂದ್ರವನ್ನಾಗಿ ಆಭಿವೃದ್ಧಿ ಪಡಿಸಲಾಗುವುದು. ಆದಕ್ಕಾಗಿ 10 ಕೋಟಿ ರೂಪಾಯಿಯನ್ನು ಮೂಲ ಅವಶ್ಯಕತಾ ಅಭಿವೃದ್ಧಿಗೆ ಬಳಸಲಾಗುವುದು ಎಂದರು.
ರೈಲ್ವೇ ವಲಯ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಬಗ್ಗೆ ಮತ್ತು ಅನುದಾನ ಮಂಜೂರಾಗದ ಕುರಿತು ಉತ್ತರ ಕರ್ನಾಟಕದ ಜನತೆ ಆತಂಕ ಪಡಬೇಕಾಗಿಲ್ಲ. ಎಲ್ಲ ಪ್ರದೇಶಗಳನ್ನು ಸಮಾನಾಂತರವಾಗಿ ಪರಿಗಣಿಸಿ, ಪ್ರಯಾಣಿಕರ ಅನುಕೂಲಕ್ಕೆ ಸರಿಯಾಗಿ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗುವುದು ಎಂದು ಪುನರುಚ್ಚರಿಸಿದರು.
ಕೇಂದ್ರ ಸರಕಾರವು 43 ರೈಲ್ವೇ ಸೇತುವೆಗಳಿಗಾಗಿ 430 ಕೋಟಿ ರೂಪಾಯಿ ನಿಯೋಜಿಸಿದೆ ಇದರಲ್ಲಿ ಅರ್ಧ ಕೇಂದ್ರ ಭರಿಸಿದರೆ ಇನ್ನರ್ಧ ರಾಜ್ಯ ಭರಿಸಬೇಕಾಗಿದೆ . ರಾಜ್ಯದಲ್ಲಿ ರೈಲ್ವೇ ಇಲಾಖೆಯಿಂದ ಹೆಚ್ಚಿನ ಕಾರ್ಯ ನಡೆದಿದೆ. ಹೆಚ್ಚಿನೆಡೆ ರೈಲು ಸಂಚಾರವನ್ನು ವಿದ್ಯುತ್ತೀಕರಣ ಮಾಡಲಾಗಿದೆ. ಕೆಲವು ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಪೂರೈಕೆ ಇಲ್ಲದ ಕಾರಣ ರೈಲ್ವೇಯು ಜಂಟಿ ಸಹಯೋಗದೊಂದಿಗೆ ವಿದ್ಯುತ್ ಉತ್ಪಾದಿಸಲು ಉದ್ದೇಶಿಸಿದೆ. ರಾಜ್ಯ ಸರಕಾರ ಸ್ಪಂದಿಸಿದ ಕಡೆಗಳಲ್ಲಿ ನಾವು ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಅನಂತಕುಮಾರ್ ನಿರ್ದೋಷಿ , ವಿನಾಕಾರಣ ಅವರನ್ನು ಹುಡ್ಕೋ ಹಗರಣದಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಲಾಗಿದೆ . ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ಪೂಜಾರಿ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದ ಅನಂತಕುಮಾರ್ ನಿಲುವು ಸರಿಯಾಗಿದೆ. ಸದ್ಯದಲ್ಲೇ ಅವರ ಸಾಚಾತನ ರುಜುವಾತಾಗಲಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಯತ್ನಾಳ್ ನುಡಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications