ಶ್ರೀನಿವಾಸಪುರ ಮಾವು ಬೆಳೆಗಾರರ ಕನಸುಗಳಿಗೆ ಬೋರರ್ ಕೀಟ
ಶ್ರೀನಿವಾಸಪುರ ಮಾವು ಬೆಳೆಗಾರರ ಕನಸುಗಳಿಗೆ ಬೋರರ್ ಕೀಟ
ಬೋರರ್ ಎಂಬ ಹಾರರ್ ! ತೆಂಗು ನಾಶವಾದ ನೆಲದಲ್ಲಿ ಮಾವಿಗೂ ಕುತ್ತು
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ರಾಜ್ಯದಲ್ಲಿ ಮಾವಿನ ಬೆಳೆಗೆ ಹೆಸರುವಾಸಿ. ಒಂದರ್ಥದಲ್ಲಿ ಶ್ರೀನಿವಾಸಪುರದ ಪ್ರಸಿದ್ಧಿ ರಾಷ್ಟ್ರೀಯ ಮಟ್ಟದ್ದು. ರಾಜ್ಯದ ಮಾವಿನ ಬೆಳೆಯಲ್ಲಿನ ಅಗ್ರಪಾಲು ಶ್ರೀನಿವಾಸಪುರ ತಾಲ್ಲೂಕಿನಿಂದಲೇ ಬರಬೇಕು. ಇಂತಿಪ್ಪ ಶ್ರೀನಿವಾಸಪುರದ ಮಾವು ಬೆಳೆಗಾರರ ಮುಖದಲ್ಲೀಗ ನಗುವಿಲ್ಲ !
ಮಾವಿನ ಸಸಿಗಳಿಗೆ ಬೋರರ್ ಕೀಟ ತಗುಲಿರುವುದು ಮಾವು ಬೆಳೆಗಾರರ ನಿದ್ದೆ ಕೆಡಿಸಿದೆ. ತಟ್ಟೆಯಾಕಾರದ ತಲೆ ಹಾಗೂ ಚೂಪು ್ಫಮೂತಿಯನ್ನು ಹೊಂದಿರುವ ಬೋರರ್ ಹೂಳುಗಳು ಮಾವಿನ ಮರದ ರೆಂಬೆಗಳನ್ನು ಕೊರೆಯುತ್ತವೆ. ಇದರಿಂದಾಗಿ ಮರ ಅಶಕ್ತಗೊಂಡು ಫಸಲು ಕುಂಠಿತಗೊಳ್ಳುತ್ತದೆ. ರೆಂಬೆಕೊಂಬೆಗಳು ಮುರಿದು ಬೀಳುವುದರಿಂದ ಫಸಲು ಹಾಳಾಗಿ ಈ ಬಾರಿಯ ಮಾವಿನ ಸುಗ್ಗಿ ಕರಾಳವಾಗುವ ಆತಂಕ ರೈತರನ್ನು ಬಾಧಿಸುತ್ತಿದೆ.
ಶ್ರೀನಿವಾಸಪುರ ತಾಲ್ಲೂಕಿನಲ್ಲಿನ ತೆಂಗಿನ ಬೆಳೆ ನುಸಿಪೀಡೆಯಿಂದಾಗಿ ಹೆಚ್ಚೂಕಮ್ಮಿ ಸರ್ವನಾಶದ ಅಂಚಿಗೆ ಬಂದಾಗಿದೆ. ಈಗ ಬೋರರ್ ಕೀಟದಿಂದಾಗಿ ಮಾವಿನ ಮರಗಳು ಕೂಡ ಆತಂಕ ಎದುರಿಸುವಂತಾಗಿದೆ. ಮತ್ತೊಂದು ಬೆಳೆಯಾದ ಟೊಮೊಟೊಗೆ ಕೂಡ ಹಲವಾರು ರೋಗಗಳು ಕಾಡುತ್ತಿರುವುದು ರೈತರನ್ನು ಇನ್ನಷ್ಟು ಕಂಗೆಡಿಸಿದೆ.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್‌ಚಂದ್ರ ಅವರು ಮಾವಿನ ಗಿಡಗಳು ಆತಂಕ ಎದುರಿಸುತ್ತಿರುವುನ್ನು ಒಪ್ಪಿಕೊಳ್ಳುತ್ತಾರೆ. ಬೋರರ್ ಕೀಟಗಳಿಂದಾಗಿ ಮಾವಿನ ಮರ ದುರ್ಬಲಗೊಳ್ಳುತ್ತಿವೆ. ಎಲೆಗಳು ಉದುರಿ ಬೀಳುತ್ತಿವೆ. ನೆಲದಲ್ಲಿನ ತೇವಾಂಶ ಕಡಿಮೆಯಾಗಿರುವುದು ಕೂಡ ಗಿಡಗಳ ದುರ್ಬಲತೆಗೆ ಕಾರಣವಾಗಿದೆ ಎನ್ನುತ್ತಾರೆ ಸುರೇಶ್‌ಚಂದ್ರ.
ಅಂದಹಾಗೆ, ಬೋರರ್ ಕೀಟ ನಿಯಂತ್ರಣಕ್ಕೆ ಮದ್ದಿಲ್ಲವೇ ? ಖಂಡಿತಾ ಇದೆ, ಕೀಟನಾಶಕಗಳನ್ನು ಅಧಿಕ ಪ್ರಮಾಣದಲ್ಲಿ ಬಳಸುವುದೇ ಬೋರರ್ ಕೀಟ ನಿಯಂತ್ರಣಕ್ಕೆ ಮದ್ದು ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು. ಆದರೆ, ದುಬಾರಿ ಬೆಲೆ ಹಾಗೂ ಗಾತ್ರದ ಕೀಟನಾಶಕ ಕೊಳ್ಳಲಿಕ್ಕೂ ನಮ್ಮ ರೈತರಿಗೆ ಶಕ್ತಿಯಿಲ್ಲ ! ನೆರವಿಗೆ ಸರ್ಕಾರ ಮುಂದಾಗಬೇಕಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications