‘ಅರಸು ಸಂಯುಕ್ತ ಪಕ್ಷ’ : ಇದು ಶ್ರೀಹರಿ ಎಲ್.ಖೋಡೆ ಸಮಯ
‘ಅರಸು ಸಂಯುಕ್ತ ಪಕ್ಷ’ : ಇದು ಶ್ರೀಹರಿ ಎಲ್.ಖೋಡೆ ಸಮಯ
ರಾಜ್ಯದಲ್ಲಿ ಮತ್ತೊಂದು ರಾಜಕೀಯ ಪಕ್ಷದ ಉದಯ
ಉದ್ಯಮಿ ವಿಜಯ್ ಮಲ್ಯ ಪಕ್ಷ ಕಟ್ಟಿ ರಾಜಕೀಯ ಪ್ರವೇಶಿಸಿದ್ದಾಯಿತು ; ಉದ್ಯಮಿ ವಿಜಯ ಸಂಕೇಶ್ವರ ಪಕ್ಷ ಕಟ್ಟಿ ರಾಜಕೀಯ ಮಾಡುತ್ತಿದ್ದಾರೆ; ಈಗ ಮತ್ತೊಬ್ಬ ಉದ್ಯಮಿ ಶ್ರೀಹರಿ ಖೋಡೆ ಅವರ ರಾಜಕಾರಣದ ಸರದಿ.
ರಾಜಕೀಯದಲ್ಲಿ ವೃತ್ತಿಪರತೆಯನ್ನು ತರುವ ಘೋಷಣೆಯಾಂದಿಗೆ- ಅರಸು ಸಂಯುಕ್ತ ಪಕ್ಷ ಎನ್ನುವ ನೂತನ ಪಕ್ಷವನ್ನು ಉದ್ಯ ಶ್ರೀಹರಿ ಎಲ್.ಖೋಡೆ ಜ.16ರ ಶುಕ್ರವಾರ ಉದ್ಘಾಟಿಸಿದರು. ಅರಮನೆ ರಸ್ತೆಯಲ್ಲಿನ ಪಕ್ಷದ ಕಚೇರಿಯಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ನೂತನ ಪಕ್ಷವನ್ನು ಖೋಡೆ ಆರಂಭಿಸಿದರು. ಬಾಣದ ಆಧಾರದ ಮೇಲೆ ನಿಂತಿರುವ ತಕ್ಕಡಿ ಖೋಡೆ ಅವರ ಪಕ್ಷದ ಗುರುತು.
ಪಕ್ಷದ ಉದ್ಘಾಟನೆಯ ನಂತರ ಅಭಿಮಾನಿಗಳೊಂದಿಗೆ ವಿಧಾನಸೌಧಕ್ಕೆ ತೆರಳಿದ ಖೋಡೆ- ವಿಧಾನಸೌಧದ ಮುಂಭಾಗದಲ್ಲಿನ ದೇವರಾಜು ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಮುಂಬರುವ ಚುನಾವಣೆಗಳಲ್ಲಿ ಅರಸು ಸಂಯುಕ್ತ ಪಕ್ಷ ಸ್ಪರ್ಧಿಸಲಿದೆ. ರಾಜ್ಯಾದ್ಯಂತ ಪಕ್ಷದ ಸಂಘಟನೆಯ ಕಾರ್ಯ ನಡೆಯಲಿದೆ. ಸೂಕ್ತ ನಾಯಕರನ್ನು ಪಕ್ಷವು ಗುರ್ತಿಸಲಿದ್ದು , ಆ ನಾಯಕರನ್ನು ಚುನಾವಣೆಗೆ ನಿಲ್ಲುವಂತೆ ಮನ ಒಲಿಸಲಾಗುವುದು. ಸ್ಪರ್ಧಿಗಳ ಚುನಾವಣೆಯ ಖರ್ಚನ್ನು ಪಕ್ಷವೇ ಭರಿಸಲಿದೆ ಎಂದು ಪಕ್ಷದ ಉದ್ಘಾಟನೆಯ ನಂತರ ಖೋಡೆ ಸುದ್ದಿಗಾರರಿಗೆ ತಿಳಿಸಿದರು.
ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳನ್ನು ಖೋಡೆ ಸಾರಾಸಗಟಾಗಿ ತಳ್ಳಿಹಾಕಿದರು. ದೇವರಾಜ ಅರಸು ಅವರ ಪುತ್ರಿ ಭಾರತಿ ಅರಸು ಹಾಗೂ ಅಖಿಲ ಕರ್ನಾಟಕ ಕ್ಷತ್ರಿಯ ಮಹಾಸಭಾದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications