ಮಡದಿ ಮಕ್ಕಳಿಗೆ ಭಾನುವಾರ ಮೀಸಲು -ಉಮಾ ಫರ್ಮಾನು !
ಮಡದಿ ಮಕ್ಕಳಿಗೆ ಭಾನುವಾರ ಮೀಸಲು -ಉಮಾ ಫರ್ಮಾನು !
ಮಧ್ಯಪ್ರದೇಶದ ಸಚಿವರಿಗೆ ವೇಳಾಪಟ್ಟಿ ರೂಪಿಸಿದ ಮುಖ್ಯಮಂತ್ರಿ
ಸಂಕ್ರಾಂತಿಯ ಶುಭಸಂಧರ್ಭದಲ್ಲಿ ಮಂತ್ರಿವರ್ಯರಿಗೆ ಒಂದು ವೇಳಾಪಟ್ಟಿಯನ್ನು ಉಮಾ ಭಾರತಿ ಘೋಷಿಸಿದ್ದಾರೆ. ಸೋಮವಾರದಿಂದ ಬುಧವಾರ ಕಛೇರಿಯಲ್ಲಿ, ಗುರುವಾರದಿಂದ ಶನಿವಾರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತ್ತು ಭಾನುವಾರ ಕುಟುಂಬದ ಜೊತೆಗಿರಬೇಕು- ಇದಿಷ್ಟು ವೇಳಾಪಟ್ಟಿಯಲ್ಲಿನ ಮುಖ್ಯಾಂಶಗಳು.
‘ಈ ವೇಳಾಪಟ್ಟಿಯ ಮೂಲ ಉದ್ದೇಶ , ಸರ್ಕಾರದ ನಿರ್ಣಯಗಳು ಜನರನ್ನು ತಲುಪಬೇಕು ಮತ್ತು ರಾಜ್ಯದ ಜನತೆಯ ಸಮಸ್ಯೆಗಳು ಬೆಳಕಿಗೆ ಬರಬೇಕು ಎಂಬುದಾಗಿದೆ’ ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಬಣ್ಣಿಸಿದ್ದಾರೆ.
ವೇಳಾಪಟ್ಟಿಯಂತೆ ವಾರದ ಮೊದಲ 3 ದಿನ ರಾಜ್ಯ ಸಚಿವಾಲಯದ ಕಛೇರಿಯಲ್ಲಿರುವುದು ಕಡ್ಡಾಯ. ನಂತರದ ಮೂರು ದಿನಗಳಲ್ಲಿ , ಮಂತ್ರಿಗಳು ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಬಹುದು ಇಲ್ಲವೇ ಅಧಿಕೃತ ಪ್ರವಾಸ ಕೈಗೊಳ್ಳಬೇಕು. ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ,ಭಾನುವಾರ ಮಾತ್ರ ಕಟ್ಟುನಿಟ್ಟಾಗಿ ಮನೆಯವರೊಟ್ಟಿಗೇ ಇರಬೇಕು!
ಅಲ್ಲದೇ ವಾರದಲ್ಲಿ ಒಮ್ಮೆಯಾದರೂ ಮುಖ್ಯಮಂತ್ರಿಗಳ ಜೊತೆ ಭೋಜನಕೂಟದಲ್ಲಿ ಭಾಗವಹಿಸಬೇಕು. ಉಮಾಭಾರತಿ, ತಮಗೂ ವೇಳಾಪಟ್ಟಿ ಅಳವಡಿಸಿಕೊಂಡಿದ್ದು , ಸೋಮವಾರ ಸಭಾಪತಿಯವರ ಭೇಟಿ, ಮಂಗಳವಾರ ಮತ್ತು ಗುರುವಾರ ಮಾಧ್ಯಮದವರೊಡನೆ ಮಾತುಕತೆ, ಬುಧವಾರ ಸಾರ್ವಜನಿಕರೊಂದಿಗೆ ಸಮಸ್ಯೆಗಳ ಸಮಾಲೋಚನೆ, ಭಾನುವಾರ- ?
ಉಮಾಭಾರತಿ ಅವರು ಕುಮಾರಿ ಆಗಿರುವುದರಿಂದ ಅವರಿಗೆ ಕುಟುಂಬದ ನಂಟಿನ ಅಂಟು ಅಷ್ಟೇನೂ ಬಲವಾಗಿಲ್ಲ . ಆ ಕಾರಣದಿಂದಾಗಿ ಅವರಿಗೆ ವೇಳಾಪಟ್ಟಿಯ ನಿಯಮಗಳಿಂದ ಕೊಂಚ ಸಡಿಲಿಕೆ ಏನಾದರೂ ಉಂಟಾ? ತಿಳಿದುಬಂದಿಲ್ಲ .
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications