• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಳ್ಳಾರಿಯ ಪೊಲೀಸ್‌ ಪೋಸ್ಟ್‌ಕಾರ್ಡ್‌ !

By Staff
|

ಬಳ್ಳಾರಿಯ ಪೊಲೀಸ್‌ ಪೋಸ್ಟ್‌ಕಾರ್ಡ್‌ !

ಪೊಲೀಸರು ಜನಮುಖಿಯಾಗುವ ಹಾದಿಯಲ್ಲಿ ನಿಂಬಾಳ್ಕರ್‌ ತಂತ್ರ ಒಂದು ಒಳ್ಳೆಯ ಮಾದರಿ. ಬಳ್ಳಾರಿಯಲ್ಲೀಗ ಪೊಲೀಸ್‌ ಪೋಸ್ಟ್‌ ಕಾರ್ಡ್‌ ಸಂಚಲನೆ ಹುಟ್ಟಿಸಿದೆ. ಅನೇಕ ಅಪರಾಧಗಳನ್ನು ಬಯಲಿಗೆಳೆಯಲು ಈ ಪೋಸ್ಟ್‌ ಕಾರ್ಡುಗಳೇ ನೆರವಿಗೆ ಬಂದಿರುವುದನ್ನು ಪೊಲೀಸರು ಒಪ್ಪಿಕೊಳ್ಳುತ್ತಾರೆ.

  • ಶಂಕರ ಫಣೀಕರ್‌, ಧಾರವಾಡ

ಎಲ್ಲಾ ಕೊಳ್ಳೆ ಹೊಡೆದುಕೊಂಡು ದಿಡ್ಡಿ ಬಾಗಿಲು ಹಾಕುವ ಹೊತ್ತಿಗೆ ಬರುವವರೇ ಪೊಲೀಸರು ಎಂಬ ಅಭಿಪ್ರಾಯ ಜನಜನಿತ. ಅದಕ್ಕೇ ಸಿನಿಮಾಗಳಲ್ಲೂ ಈ ನಡಾವಳಿಯೇ ಲಾಗಾಯ್ತಿನಿಂದ ಬಿಂಬಿತವಾಗುತ್ತಿರುವುದು. ಆದರೂ, ಇಂಥವರ ನಡುವೆಯೇ ಭ್ರಷ್ಟರ ಬೆನ್ನುಹುರಿಯಲ್ಲಿ ಚಳುಕು ಹುಟ್ಟಿಸುವ ಗಿರೀಶ್‌ ಮಟ್ಟೆಣ್ಣನವರ್‌ ಥರದ ಪೊಲೀಸ್‌ ಇನ್ಸ್‌ಪೆಕ್ಟರ್‌ ಇರುತ್ತಾರೆ. ಈಗ ಬಳ್ಳಾರಿ ಜಿಲ್ಲೆಯಲ್ಲಿ ರ್ಯಾಗಿಂಗ್‌ ಮಾಡುವ ಪೋರನಿಗೆ ಒಂದು ಪೋಸ್ಟ್‌ ಕಾರ್ಡ್‌ ತೋರಿಸಿದರೆ ಸಾಕು ಸುಮ್ಮನಾಗುತ್ತಾನೆ. ಹುಡುಗಿಯ ಚುಡಾಯಿಸ ಬಂದವನಿಗೂ ಇದೇ ಪೋಸ್ಟ್‌ ಕಾರ್ಡ್‌ ರಾಮಬಾಣ. ಊಟ ಮಾಡದ ಪುಟ್ಟ ಮಗನ ಬಾಯಿಗೆ ತುತ್ತು ಒಳಹೋಗಲೂ ಅಮ್ಮನ ಪೋಸ್ಟ್‌ ಕಾರ್ಡ್‌ ಟ್ಯಾಕ್ಟಿಕ್ಕು !

ಒಂದು ಕ್ಷಣ ಈ ಪೋಸ್ಟ್‌ಕಾರ್ಡ್‌ ತಂತ್ರ ಏನು ಅಂತ ನೆಂಟರ ಮನೆಗೆ ಬಂದಿದ್ದ ನನಗೆ ಗೊತ್ತಾಗಲಿಲ್ಲ. ಜನರನ್ನು ಮಾತಾಡಿಸಿದಾಗ ವಿಷಯ ವೇದ್ಯವಾಯಿತು. ಇಲ್ಲಿ ಪೊಲೀಸ್‌ ಸೂಪರಿಂಟೆಂಡೆಂಟ್‌ ಹೇಮಂತ್‌ ನಿಂಬಾಳ್ಕರ್‌ ಅವರಿಗೆ ನೇರವಾಗಿ ಕಾರ್ಡ್‌ ಬರೆಯುವ ವ್ಯವಸ್ಥೆ ಇದೆ. ಇದನ್ನು ಜಾರಿಗೆ ತಂದದ್ದು ಖುದ್ದು ನಿಂಬಾಳ್ಕರ್‌.ಈ ನಿಂಬಾಳ್ಕರ್‌ ಬಗ್ಗೆ ಕುತೂಹಲ ಹುಟ್ಟಿ, ಪೊಲೀಸ್‌ ಠಾಣೆಗೆ ಹೋದಾಗ, ಅಲ್ಲಿ ಅವರು ಪೋಸ್ಟ್‌ ಕಾರ್ಡುಗಳ ಸಮೇತ ಸಿಕ್ಕಿದರು.

ಏನಿದು ಸಾರ್‌, ಪೋಸ್ಟ್‌ ಕಾರ್ಡ್‌ ಮಹಿಮೆ?

People Communicate through postcards with Bellary Policeಅಚ್ಚರಿ ಬೆರೆತ ನನ್ನ ಪ್ರಶ್ನೆಗೆ ವಿವರಣಾತ್ಮಕ ಉತ್ತರ ಕೊಡುವ ವ್ಯವದಾನ ನಿಂಬಾಳ್ಕರ್‌ ಅವರಿಗಿರಲಿಲ್ಲ. ಯಾವುದೋ ಕಾರ್ಡಿನ ಬೆನ್ನುಹತ್ತಿ ಅವರು ಹೋಗುವುದಿತ್ತು. ದಯವಿಟ್ಟು ನಾಳೆ ಬರ್ತೀರಾ ಅಂತ ಎದ್ದು ಹೋದರು. ಮರುದಿನ ಹೋದರೆ, ಪೋಸ್ಟ್‌ಕಾರ್ಡಿನ ಮಾಹಿತಿಯ ಆಧಾರದ ಮೇಲೆ ಹೊಸಪೇಟೆಯಲ್ಲಿ ಜೂಜುಕೋರರನ್ನು ಹಿಡಿದು, ಒಂದು ಲಕ್ಷ ರುಪಾಯಿ ವಶಪಡಿಸಿಕೊಂಡಿದ್ದ ವಿಷಯ ಗೊತ್ತಾಯಿತು.

ನಿಂಬಾಳ್ಕರ್‌ ಜನಮುಖಿ ಅಧಿಕಾರಿ. ಜನರಿಗೆ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತುವುದು ಮರ್ಯಾದೆಯ ಪ್ರಶ್ನೆಯಾಗಿರುತ್ತದೆ. ಇನ್ನು ಜನ ದಂಡಿದಂಡಿಯಾಗಿ ಬಂದರೆ ಅವರೆಲ್ಲರ ಅಹವಾಲಿಗೆ ಕಿವಿಗೊಡುವುದೂ ಕಷ್ಟ. ಫೋನು ಕರೆಗಳ ಜಾಡು ಹಿಡಿದು ಅಪರಾಧಿಗಳ ಹಿಡಿಯುವ ವಿಷಯದಲ್ಲಿ ಸಾಕಷ್ಟು ಬಾರಿ ಪೊಲೀಸರೇ ಚಳ್ಳೆ ಹಣ್ಣು ತಿಂದ ಉದಾಹರಣೆಗಳಿವೆ. ಅದಕ್ಕೇ ನಿಂಬಾಳ್ಕರ್‌ ಜನರಿಗೆ ಮೊದಲು ತಮ್ಮ ಮೊಬೈಲ್‌ ನಂಬರ್‌ ಕೊಟ್ಟರು. ಅದು ಅಷ್ಟಾಗಿ ಕ್ಲಿಕ್ಕಾಗಲಿಲ್ಲ. ಆಮೇಲೆ ಒಂದಷ್ಟು ಜನರಿಗೆ ತಮ್ಮ ವಿಳಾಸ ಬರೆದ ಪೋಸ್ಟ್‌ ಕಾರ್ಡುಗಳನ್ನು ಹಂಚಿ, ನಿಮ್ಮ ದೂರುಗಳೇನಿದ್ದರೂ ಇವುಗಳಲ್ಲಿ ಬರೆದು ಕಳಿಸಿ ಎಂದರು. ವಿಳಾಸ ಪ್ರಚಾರವಾಯಿತು. ಅನೇಕ ಪೋಸ್ಟ್‌ ಕಾರ್ಡುಗಳು ಠಾಣೆಗೆ ಬರತೊಡಗಿದವು. ಅಪರಾಧಿಗಳ ಜಾಡು ಹಿಡಿದು ಹೊರಡುವ ಕೆಲಸ ಕೂಡ ಸುಲಭವಾಯಿತು.

ನಿಂಬಾಳ್ಕರ್‌ ಹೇಳುತ್ತಾರೆ- ಎಂತೆಂಥ ಕಾರ್ಡ್‌ಗಳನ್ನ ಬರೀತಾರ್ರೀ... ಮನೆಯವರು ಮದುವೆಗೆ ಒಪ್ಪಿಲ್ಲ , ಬಂದು ನೀವೇ ಮಾಡಿಸಿ ಅಂತಾರೆ. ನಾನು ಐಪಿಎಸ್‌ ಓದಬೇಕು, ಪಾಠ ಮಾಡಿ ಅಂತ ಕೇಳ್ತಾರೆ. ನಾನು ತುಂಬಾ ಪ್ರೀತಿಸುತ್ತಿರುವ ಹುಡುಗಿ ನಿಮಗೆ ಕಾರ್ಡ್‌ ಬರೀತೀನಿ ಅಂತ ಹೆದರಿಸುತ್ತಿದ್ದಾಳೆ, ನೀವು ಅವಳ ಪತ್ರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಅಂತ ಒಬ್ಬ ಹುಚ್ಚು ಹುಡುಗ ಮೊನ್ನೆ ಬರೆದಿದ್ದ. ಈಗ ನನ್ನ ಅಸಿಸ್ಟೆಂಟ್‌ ಬರುವ ಪತ್ರಗಳನ್ನೆಲ್ಲ ಓದಿ, ನಮ್ಮ ಕೆಲಸಕ್ಕೆ ಬರುವಂಥವನ್ನು ಮಾತ್ರ ನನ್ನ ಗಮನಕ್ಕೆ ತರುತ್ತಾರೆ. ಜನರಿಗೆ ನಾವು ಹತ್ತಿರವಾಗಿರಬೇಕು. ಬಂದಿರುವ ಅನೇಕ ಪೋಸ್ಟ್‌ ಕಾರ್ಡುಗಳಿಂದ ನಮಗೆ ಹಲವಾರು ಅಪರಾಧಗಳನ್ನು ಪತ್ತೆ ಮಾಡುವುದು ಸಾಧ್ಯವಾಗಿದೆ.

ಸುಖಾಸುಮ್ಮನೆ ನಿಮಗೆ ನೀರು ಕುಡಿಸಲು ಪತ್ರ ಬರೆದರೆ?

ಮೊದಮೊದಲು ಹಾಗೆ ನಡೆಯುತ್ತಿತ್ತು. ಆದರೀಗ ಇಲ್ಲಿನ ಕೆಲಸ ಹಾಗೂ ಪೊಲೀಸರ ಬಗ್ಗೆ ಜನರಲ್ಲಿ ಸ್ವಾಭಾವಿಕವಾಗಿಯೇ ಒಂದು ರೀತಿಯ ಭಯ ಇದೆ. ಪೋಸ್ಟ್‌ ಕಾರ್ಡ್‌ ಸೌಲಭ್ಯದ ಗಂಭೀರತೆ ಅರ್ಥವಾಗಿದೆ. ದಿನಕ್ಕೆ ಕನಿಷ್ಠ 10 ಪೋಸ್ಟ್‌ ಕಾರ್ಡ್‌ಗಳು ಬರುತ್ತವೆ. ಕಾರ್ಡಲ್ಲಿ ಕೆಲವರು ಹೆಸರನ್ನೇ ಬರೆಯುವುದಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ. ಆದರೆ ಹೀಗೆ ಬರುವ ಅನಾಮಧೇಯ ಪತ್ರಗಳು ಸಹ ಒಳ್ಳೊಳ್ಳೆಯ ಮಾಹಿತಿ ತಲುಪಿಸಿವೆ ಎನ್ನುತ್ತಾರೆ ನಿಂಬಾಳ್ಕರ್‌.

ಒಟ್ಟಿನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಈ ಪೊಲೀಸ್‌- ಪೋಸ್ಟ್‌ ಕಾರ್ಡ್‌ ಸಂಬಂಧ ಸಾಕಷ್ಟು ಸದ್ದು ಮಾಡುತ್ತಿದೆ. ಸಾಮಾಜ ಘಾತುಕ ಶಕ್ತಿಗಳಿಗೆ ಈಗ ಯಾವಾಗ ಪೊಲೀಸರು ಧುತ್ತೆಂದು ಎರಗುತ್ತಾರೋ ಎಂಬ ಆತಂಕ. ಕಾಲೇಜುಗಳಲ್ಲಿನ ತಂಟೆ, ಫುಟ್‌ಪಾತುಗಳದುಡ್ಡಿನಾಟ- ಇಂಥ ಸಣ್ಣದಾಗಿ ಕಾಣುವ ಬಲು ಸ್ವರೂಪದ ಅಪರಾಧಗಳಿಗೆ ಈಗ ಸಹಜ ನಿಯಂತ್ರಣ. ಪೋಸ್ಟ್‌ ಕಾರ್ಡ್‌ ಮೂಲಕ ಜನಮುಖಿಯಾಗುವ ನಿಂಬಾಳ್ಕರ್‌ ಅವರ ಇಂಥಾ ತಂತ್ರವನ್ನು ಇನ್ನಷ್ಟು ಪೊಲೀಸರು ಅಳವಡಿಸಿಕೊಳ್ಳಬಹುದಲ್ಲವೇ?

Post your views

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more