ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಹೇಳನಕ್ಕೆ ನೊಂದ ಅನಂತಮೂರ್ತಿ; ‘ಅಗ್ನಿ’ ವಿರುದ್ಧ ಪ್ರತಿಭಟನೆ ಅಸ್ತ್ರ

By Staff
|
Google Oneindia Kannada News

ಅವಹೇಳನಕ್ಕೆ ನೊಂದ ಅನಂತಮೂರ್ತಿ; ‘ಅಗ್ನಿ’ ವಿರುದ್ಧ ಪ್ರತಿಭಟನೆ ಅಸ್ತ್ರ
ವಿನಾಕಾರಣ ನಿಂದನೆ ಲೇಖನಕ್ಕೆ ಬೇಸರ, ‘ಅಗ್ನಿ’ ವಾರಪತ್ರಿಕೆ ಕಚೇರಿಯ ಮುಂದೆ ಬುಧವಾರ (ನ.26) ಬೆಳಗ್ಗೆ ಪತ್ನಿಯಾಂದಿಗೆ ಧರಣಿ.

  • ಎಸ್ಕೆ. ಶಾಮಸುಂದರ
ತಮ್ಮ ಬಗ್ಗೆ ‘ಇಲ್ಲಸಲ್ಲದ ಆರೋಪಗಳನ್ನು’ ಮಾಡಿ ಅವಹೇಳನಕಾರಿ ಲೇಖನಗಳನ್ನು ಪ್ರಕಟಿಸಿದ ‘ಅಗ್ನಿ’ ವಾರಪತ್ರಿಕೆಯ ವಿರುದ್ಧ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಡಾ. ಯು. ಆರ್‌. ಅನಂತಮೂರ್ತಿ ಸೌಮ್ಯ ಪ್ರತಿಭಟನೆಯನ್ನು ದಾಖಲಿಸಲು ಮುಂದಾಗಿದ್ದಾರೆ.

ಅವರು ತಮ್ಮ ಪತ್ನಿ ಎಸ್ತರ್‌ ಸಮೇತ ನಾಳೆ ( ನವೆಂಬರ್‌ 26, ಬುಧವಾರ) ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಇಸ್ರೋ ಲೇ ಔಟ್‌ನಲ್ಲಿರುವ ಅಗ್ನಿ ಪತ್ರಿಕಾ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಕುಳಿತುಕೊಳ್ಳುತ್ತಾರೆ.

ಕಳೆದೆರಡು ವಾರಗಳಿಂದ ಅಗ್ನಿ ಪತ್ರಿಕೆ ಪ್ರಕಟಿಸುತ್ತಿರುವ ವಿನಾಕಾರಣ ನಿಂದಿಸುವ ಲೇಖನಗಳಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿರುವುದಾಗಿ ಅನಂತಮೂರ್ತಿ ದಟ್ಸ್‌ಕನ್ನಡ ಡಾಟ್‌ಕಾಂಗೆ ಮಂಗಳವಾರ ತಿಳಿಸಿದರು.

‘ಬ್ರಾಹ್ಮಣರನ್ನು ಬೈಯುವುದೇ ಒಂದು ಉದ್ಯೋಗವಾಗಿದೆ , ಈ ಉದ್ಯೋಗದಲ್ಲಿ ಬಹಳಷ್ಟು ಕೊಳಕು ತುಂಬಿಕೊಂಡಿದೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

‘ಬೇಜವಾಬ್ದಾರಿಯಿಂದ ಮತ್ತು ಜಾತಿಭ್ರಾಂತಿಯಿಂದ ಬರೆಯುವವರ ವಿರುದ್ಧ ನನಗೆ ಅತೀವ ಕೋಪ ಉಂಟಾಗಿದೆ. ಆದರೆ ಇವರ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಲು ಇಷ್ಟವಿಲ್ಲ. ಯಾಕೆಂದರೆ, ಅಂಥ ಮೊಕದ್ದಮೆಗಳು ಇತ್ಯರ್ಥವಾಗಬೇಕಾದರೆ ವರ್ಷಗಳೇ ಹಿಡಿಯುತ್ತವೆ. ಆದಕಾರಣ ಸಿಟ್ಟನ್ನು ಸೌಮ್ಯವಾಗಿ, ಸಾಂಕೇತಿಕವಾಗಿ ವ್ಯಕ್ತಪಡಿಸುವ ಪ್ರತೀಕವಾಗಿ ನಾನು ಮತ್ತು ನನ್ನ ಕುಟುಂಬ ಧರಣಿ ಸತ್ಯಾಗ್ರ ಮಾಡುತ್ತಿದ್ದೇವೆ. ಇಂಥ ಪ್ರತಿಭಟನೆಯನ್ನು ಯಾರು ಬೇಕಾದರೂ ಮಾಡಬಹುದಾಗಿತ್ತು. ಈಗ ನಾನೇ ಮಾಡುತ್ತಿದ್ದೇನೆ. ಬ್ರಾಹ್ಮಣರಿಗೆ ಕೋಪ ಬರುವುದಿಲ್ಲ ಎಂದು ಇವರೆಲ್ಲ ಅಂದು ಕೊಂಡಿದ್ದಾರೆ’.

‘ಹಿಂದಿನ ಕಾಲದಲ್ಲಾಗಿದ್ದರೆ ಕಪಾಳಕ್ಕೆ ಎರಡು ಹೊಡೆದು ನೀನು ಮಾಡುತ್ತಿರುವುದು ತಪ್ಪು ಎಂದು ಹೇಳಬಹುದಾಗಿತ್ತು. ಇವತ್ತು ಕಾಲ ಬದಲಾಗಿದೆ. ಏನೆಂದರೆ ಅದನ್ನು ಬರೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು ಈ ಬೆಳವಣಿಗೆ ಅಪಾಯಕಾರಿಯಾದದ್ದು’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ಪತ್ರಿಕೆಯ ಸಂಪಾದಕ ಶ್ರೀಧರ್‌ ಅವರಿಗೆ ಫೋನು ಮಾಡಿ ಈ ವಿಷಯ ಪ್ರಸ್ತಾಪ ಮಾಡಿದೆ. ಅವರು ‘ನನಗೇನೂ ಗೊತ್ತೇ ಇಲ್ಲ ಸಾರ್‌, ಯಾರೋ ಹುಡುಗರು ಹೀಗೆ ಬರೆದುಬಿಟ್ಟಿದ್ದಾರೆ’ ಎಂದು ಹೇಳಿದರಲ್ಲದೆ, ಹಾಗೆಲ್ಲ ಬೇಜಾರು ಮಾಡಿಕೊಳ್ಳಬೇಡಿ ಸಾರ್‌’ ಎಂಬ ಪ್ರತಿಕ್ರಿಯೆ ನೀಡಿದರೆಂದು ಅನಂತಮೂರ್ತಿ ವಿವರಿಸಿದರು.

ಧರಣಿ ಸತ್ಯಾಗ್ರಹದಲ್ಲಿ ನಿಮ್ಮ ಜತೆಗೆ ಇನ್ಯಾರಾರು ಇರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅನಂತಮೂರ್ತಿ ‘ನಾನು ಮತ್ತು ನನ್ನ ಹೆಂಡತಿ ಮಾತ್ರ ಇರುತ್ತೇವೆ. ಪತ್ರಿಕೆಯ ಧೋರಣೆಯಿಂದ ನೊಂದ ಇತರರು ಧರಣಿಯಲ್ಲಿ ಪಾಲ್ಗೊಳ್ಳಬೇಕೆಂಬ ಇಷ್ಟ ಇದ್ದರೆ ಪಾಲ್ಗೊಳ್ಳಬಹುದು’ ಎಂದರು.

ಮುಂದುವರೆದು ಮಾತನಾಡಿದ ಅವರು ‘ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುವುದು, ಸಂಕಿರಣಗಳಲ್ಲಿ ಭಾಗವಹಿಸುವುದು ಮುಂತಾದ ಚಟುವಟಿಕೆಗಳಲ್ಲಿ ಇನ್ನು ಮುಂದೆ ನಾನು ಭಾಗವಹಿಸುವುದಿಲ್ಲ. ಬಡಬಗ್ಗರೊಂದಿಗೆ ಇರುತ್ತೇನೆ ’ ಎಂದೂ ಅನಂತಮೂರ್ತಿ ಘೋಷಿಸಿದರು.

ಕಾನೂನು ಮತ್ತು ಮಾನವೀಯತೆಯನ್ನು ಮೀರಿ ನಾನು ಯಾವ ಆಸ್ತಿ ಪಾಸ್ತಿ ಯನ್ನೂ ಮಾಡಿಲ್ಲ. ಮೂಲತಃ ಬರೆದು ಬದುಕುವವನು ನಾನು ಎಂದು ಹೇಳಿದ ಅನಂತಮೂರ್ತಿ, ‘ಆದಾಯ ತೆರಿಗೆಯನ್ನು ಚಾಚೂ ತಪ್ಪದೆ ಕಟ್ಟುತ್ತಾ ಬಂದಿದ್ದೇನೆ. ಅಷ್ಟೇ ಏಕೆ, ಯಾವತ್ತೂ ನನ್ನ ಬರಹಗಳ ಪರವಾಗಿ ನಿಂತು ನಾನು ಯಾವತ್ತೂ ಬರೆದಿಲ್ಲ, ಮಾತನಾಡಿಲ್ಲ ’ ಎಂದು ಅವರು ಹೇಳಿದರು.

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X