ಡಿ.10 : ಬೆಂಗಳೂರಲ್ಲಿ ಭಾರತ-ನ್ಯೂಜಿಲೆಂಡ್ ಏಕದಿನ ಕ್ರಿಕೆಟ್
ಡಿ.10 : ಬೆಂಗಳೂರಲ್ಲಿ ಭಾರತ-ನ್ಯೂಜಿಲೆಂಡ್ ಏಕದಿನ ಕ್ರಿಕೆಟ್
ಬೆಂಗಳೂರಿನ ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ
ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತೊಂದು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಸಜ್ಜಾಗಿದ್ದು , ಭಾರತ ಹಾಗೂ ನ್ಯೂಜಿಲೆಂಡ್ ಮಹಿಳೆಯರ ಒಂದು ದಿನದ ಕ್ರಿಕೆಟ್ ಪಂದ್ಯ ಡಿಸೆಂಬರ್ 10ರಂದು ನಡೆಯಲಿದೆ.
ಪ್ರಸ್ತುತ ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡ, ಭಾರತದ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯ ಡಿ.4ರಂದು ಮುಂಬಯಿಯಲ್ಲಿ , 2ನೇ ಪಂದ್ಯ ಡಿ.7ರಂದು ಔರಂಗಾಬಾದ್‌ನಲ್ಲಿ , 3 ನೇ ಪಂದ್ಯ ಡಿ.10ರಂದು ಬೆಂಗಳೂರಿನಲ್ಲಿ ನಡೆಯಲಿದೆ. ನಾಲ್ಕನೇ ಪಂದ್ಯ ಡಿ.16ರಂದು ಚೆನ್ನೈನಲ್ಲಿ ನಡೆಯಲಿದೆ.
1997ರ ನಂತರ ಇದೇ ಮೊದಲ ಬಾರಿಗೆ ಮಹಿಳೆಯರ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದು ಭಾರತ ಮಹಿಳಾ ಕ್ರಿಕೆಟ್ ಆಯ್ಕೆಗಾರರ ಸಮಿತಿ ಮುಖ್ಯಸ್ಥೆ ಶಾಂತಾ ರಂಗಸ್ವಾಮಿ ತಿಳಿಸಿದ್ದಾರೆ. 1997ರಲ್ಲಿ ಭಾರತ-ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಕ್ರಿಕೆಟ್ ಹಣಾಹಣಿ ಬೆಂಗಳೂರಿನಲ್ಲಿ ನಡೆದಿತ್ತು .
ಬೆಂಗಳೂರಿನ ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಶಾಲಾ ಮಕ್ಕಳು ಕ್ರಿಕೆಟ್ ನೋಡಲು ಅನುವಾಗುವಂತೆ ಡಿ.10ರಂದು ಬೆಂಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ನೀಡುವಂತೆ ಶಾಂತಾ ರಂಗಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಮಮತಾ ಮೇಬನ್ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು