ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ರೈತರ ಮೂಗಿಗೆ ತುಪ್ಪ, ಮೆಟ್ರೋ ಮೇಲೆ ಗೌಡರ ಕೋಪ

By Staff
|
Google Oneindia Kannada News

ಮಂಡ್ಯ ರೈತರ ಮೂಗಿಗೆ ತುಪ್ಪ, ಮೆಟ್ರೋ ಮೇಲೆ ಗೌಡರ ಕೋಪ
ಬೆಳೆಹಾನಿಯ ತೊಂದರೆ ಅನುಭವಿಸಿದ ಮಂಡ್ಯ ಜಿಲ್ಲೆಯ ರೈತರಿಗೆ 22 ಕೋಟಿ ರು. ಪರಿಹಾರ

ಬೆಂಗಳೂರು : ಕೃಷಿಗೆ ನೀರು ಬಿಡಲಾಗದ ಕಾರಣ ಕಳೆದ ವರ್ಷ ಮಂಡ್ಯ ಜಿಲ್ಲೆಯ ರೈತರಿಗೆ ಆಗಿರುವ ಲುಕಸಾನನ್ನು ಕಟ್ಟಿಕೊಡಲು 22 ಕೋಟಿ ರುಪಾಯಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.

ಮಾಜಿ ಸಂಸದ ಜಿ.ಮಾದೇಗೌಡ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್‌.ಪುಟ್ಟಣ್ಣಯ್ಯ ಮತ್ತಿತರ ರೈತ ಮುಖಂಡರು ಹಾಗೂ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ನಡುವೆ ಸೋಮವಾರ (ನ.17) ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಫಲಶೃತಿಯನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಪ್ರೊ.ಬಿ.ಕೆ.ಚಂದ್ರಶೇಖರ್‌ ಸುದ್ದಿಗಾರರಿಗೆ ತಿಳಿಸಿದರು. ಇದೇ ರೀತಿಯ ತೊಂದರೆ ಅನುಭವಿಸಿರುವ ಇತರೆ ಜಿಲ್ಲೆಗಳ ರೈತರಿಗೂ ಪರಿಹಾರ ಕೊಡುವಿರಾ ಎಂಬ ಪ್ರಶ್ನೆಗೆ, ಈ ಬಗ್ಗೆ ಸರ್ಕಾರ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಬಿ.ಕೆ.ಸಿ. ಉತ್ತರಿಸಿದರು.

ಪ್ರಮುಖ ಬೆಳೆ ಕಬ್ಬು ಸೇರಿದಂತೆ ಒಟ್ಟು ಕೃಷಿ ಮೇಲೆ ಮಂಡ್ಯ ಜಿಲ್ಲೆಯ ರೈತರು 58 ಕೋಟಿ ರುಪಾಯಿ ಸುರಿದು, ನೀರಿನ ಸಮಸ್ಯೆಯ ಕಾರಣ ಕೈಸುಟ್ಟುಕೊಂಡಿದ್ದಾರೆ ಎಂದು ಕಂದಾಯ ಆಯುಕ್ತ ವಿನಯ್‌ ಕುಮಾರ್‌ ನೇತೃತ್ವದ ಅಧಿಕಾರಿಗಳ ಸಮಿತಿ ವರದಿ ನೀಡಿತ್ತು. ಇದನ್ನು ಪರಿಗಣಿಸಿ, ಮಂಡ್ಯ ರೈತರ ಕಣ್ಣೀರನ್ನು ಒರೆಸಲು ತೀರ್ಮಾನಿಸಲಾಯಿತು ಎಂದರು.

ಮೆಟ್ರೋ ವಿರುದ್ಧ ದೇವೇಗೌಡರ ಕಿಡಿ
ಜರ್ಮನ್‌ ಮೂಲದ ವ್ಯಾಪಾರಿ ಮಳಿಗೆ ಮೆಟ್ರೋಗಳಲ್ಲಿ ಕೃಷಿ ಉತ್ಪನ್ನಗಳನ್ನು ಮಾರಲು ಅವಕಾಶ ಕಲ್ಪಿಸುವ ಸಲುವಾಗಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಸರ್ಕಾರದ ನಿರ್ಧಾರವನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಖಂಡಿಸಿದ್ದಾರೆ.

ಸೋಮವಾರ ಸುದ್ದಿಗಾರರ ಜೊತೆ ದೇವೇಗೌಡರು ಮಾತಾಡುತ್ತಿದ್ದರು. ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು, 124 ಕೃಷಿ ಉತ್ಪನ್ನಗಳನ್ನು ಮಾರಲು ವಿದೇಶೀ ಕಂಪನಿಗೆ ಅನುಮತಿ ಕೊಟ್ಟರೆ ನಮ್ಮ ರೈತರ ಹಿತಾಸಕ್ತಿಗೆ ಧಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ, ಎಪಿಎಂಸಿ ಯಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಕಾರ್ಮಿಕರು ಬೀದಿಗೆ ಬರಬೇಕಾಗುತ್ತದೆ. ಸರ್ಕಾರ ಒಂದು ವೇಳೆ ಕಾಯ್ದೆಗೆ ತಿದ್ದುಪಡಿ ತಂದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇನೆ ಎಂದು ಗೌಡರು ಧಮಕಿ ಹಾಕಿದರು.

ವಿದೇಶೀ ನೇರ ಬಂಡವಾಳ (ಎಫ್‌ಡಿಐ) ಹೂಡಲು ಕೇಂದ್ರ ಸರ್ಕಾರ ಸಮ್ಮತಿಸುವುದಿಲ್ಲ. ಹಾಗಿದ್ದೂ ಮೆಟ್ರೋಗೆ ಅದು ಅರ್ಜಿ ಹಾಕುವ ಒಂದು ದಿನ ಮೊದಲೇ ರಾಜ್ಯ ಸರ್ಕಾರ ಅನುಮತಿ ಕೊಟ್ಟಿರುವುದು ಅನುಮಾನಾಸ್ಪದ ಸಂಗತಿ. ಸರ್ಕಾರ ಹೀಗೆ ಮಾಡುತ್ತಿರುವುದು ಔಚಿತ್ಯವೇನು ಎಂದು ಗೌಡರು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಎರಡು ಮಳಿಗೆ ತೆರೆದಿರುವ ಮೆಟ್ರೋ 176 ಕೋಟಿ ರುಪಾಯಿ ಬಂಡವಾಳ ವಿನಿಯೋಗಿಸಿದೆ. ನಗರದ ಸಗಟು ವ್ಯಾಪಾರಿ ವರ್ಗ ಈ ಮಳಿಗೆಯ ವಿರುದ್ಧ ಎತ್ತಿದ್ದ ದನಿ ಕೂಡ ಈಗ ಸಾಕಷ್ಟು ತಗ್ಗಿದ್ದು, ಮೆಟ್ರೋ ವ್ಯಾಪಾರ ಸಾಂಗವಾಗಿ ಸಾಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X