• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಜನನಿಯಿಂದ ಪಾಠ ಕಲಿತ ಜನರೆ ಧನ್ಯರು’

By Staff
|

‘ಜನನಿಯಿಂದ ಪಾಠ ಕಲಿತ ಜನರೆ ಧನ್ಯರು’

ಮೈಸೂರಿನ ‘ಸುಪ್ರೀಮ್‌ ಕಾನ್ವೆಂಟಿ’ನ ಪೋಷಕರ ಸಭೆಯಲ್ಲಿ ಹರಿಹರೇಶ್ವರ-ನಾಗಲಕ್ಷ್ಮಿ ದಂಪತಿಗಳು

*ಸಂದೀಪ್‌ ಶೆಣೈ, ಕುವೆಂಪು ನಗರ, ಮೈಸೂರು.

‘ಉಪಾಧ್ಯಾಯ ವೃತ್ತಿ ಉತ್ಕೃಷ್ಟವಾದುದು. ಅವರ ಮಾತುಗಳನ್ನು ಪೋಷಕರು ಪರಿಗಣಿಸಬೇಕು. ಅಧ್ಯಾಪಕರೊಂದಿಗೆ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಆಗಾಗ್ಗೆ ವಿಚಾರ ವಿನಿಮಯವನ್ನು ಮಾಡುತ್ತಿರಬೇಕು. ಸಾಮೂಹಿಕ ವಿಚಾರ ವಿನಿಮಯ ಕಷ್ಟಕರ. ಪ್ರತಿಯಾಬ್ಬರಿಗೂ ಅವರದೇ ಆದ ಸಮಸ್ಯೆಗಳಿರುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಪರಿಹಾರ ಇರುವುದಿಲ್ಲ. ಒಂದೇ ಸೂತ್ರ ಅನ್ವಯಿಸಲಾರದೇ ಹೋಗಬಹುದು. ಒಬ್ಬ ವಿದ್ಯಾರ್ಥಿ ಗಣಿತದಲ್ಲಿ ಹಿಂದುಳಿದಿದ್ದರೆ, ಮತ್ತೊಬ್ಬ ವಿಜ್ಞಾನದಲ್ಲಿ ಹಾಗಿರಬಹುದು. ಒಂದು ವಿಷಯದಲ್ಲಿ ಮಿಂಚುತ್ತಿರಬಹುದು, ಇನ್ನೊಂದರಲ್ಲಿ ಆಸಕ್ತಿ ಕುಂದಿರಬಹುದು. ಹಾಗಾಗಿ ಪೋಷಕರು ಅಧ್ಯಾಪಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ತಮ್ಮ ಮಕ್ಕಳ ಅಭಿವೃದ್ಧಿಯ ಬಗ್ಗೆ ಆಗಾಗ್ಗೆ ಚರ್ಚೆ ನಡೆಸಿದಾಗ ಮಾತ್ರ ಮಕ್ಕಳ ಸರ್ವಾಂಗೀಣ ಶ್ರೇಯೋಭಿವೃದ್ಧಿ ಸಾಧ್ಯ’ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ‘ಅಮೆರಿಕನ್ನಡ’ ಪತ್ರಿಕೆಯ ಸಂಪಾದಕ ಎಸ್‌. ಕೆ. ಹರಿಹರೇಶ್ವರರವರು ಅಭಿಪ್ರಾಯಪಟ್ಟರು.

ಇತ್ತೀಚೆಗೆ ನಡೆದ, ಮೈಸೂರಿನ ಶಾರದಾ ದೇವಿ ನಗರದ ಸುಪ್ರೀಮ್‌ ಕಾನ್ವೆಂಟ್‌ನ ಐದನೇ ವರ್ಷದ ವಿದ್ಯಾರ್ಥಿಗಳ ಪೋಷಕ-ಉಪಾಧ್ಯಾಯರ ಸಭೆಯಲ್ಲಿ ಪೋಷಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

Shikaripura Harihareshwara delivering the speech‘ಶೇಕಡಾ 99 ರಷ್ಟು ಉಪಾಧ್ಯಾಯರು ನಿಷ್ಪಕ್ಷಪಾತಿಗಳಾಗಿರುತ್ತಾರೆ. ಯಾರೂ ಈ ಮಗು ನೋಡಲು ಬಲು ಚೆನ್ನಾಗಿದೆ.... ಬಂದ ಪರಿಸರ ಚೆನ್ನಾಗಿದೆ... ನಡತೆ ಚೆನ್ನಾಗಿದೆ -ಎಂದು ಹೆಚ್ಚು ಅಂಕಗಳನ್ನು ಕೊಡುವುದಿಲ್ಲ. ಪ್ರಗತಿ ವಿದ್ಯಾರ್ಥಿಯ ಕಾರ್ಯಸಾಧನೆಯನ್ನೇ ಅವಲಂಬಿಸಿರುತ್ತೆ. ನಿಜಕ್ಕೂ ಉಪಾಧ್ಯಾಯರ ವೃತ್ತಿ ಬಲು ಶ್ರೇಷ್ಠವಾದುದು, ಉದಾತ್ತವಾದದ್ದು, ಆದರೆ ಕಷ್ಟತರವಾದದ್ದೂ ಹೌದು. ಉಪಾಧ್ಯಾಯರುಗಳ ತೊಂದರೆ ಪೋಷಕರಿಗೆ ಗೊತ್ತಾಗುವುದಿಲ್ಲ. ಎಷ್ಟೋ ಬಾರಿ, ತೊಂದರೆಗೊಳಗಾದಾಗಾದ, ‘ತಮ್ಮ ಮಕ್ಕಳು ಹೇಳುತ್ತಿರುವುದೇ ಸತ್ಯ’- ಎಂದು ಮಕ್ಕಳ ನಿಲುವಿಗೇ ಪೋಷಕರು ಸಾಮಾನ್ಯವಾಗಿ ಅಂಟಿಕೊಳ್ಳುತ್ತಾರೆ. ಹೀಗಾಗಬಾರದು.... ಪೋಷಕರು ಮತ್ತು ಉಪಾಧ್ಯಾಯರು ಆಗಾಗ್ಗೆ ವಿಚಾರ ವಿನಿಮಯ ಮಾಡಿಕೊಂಡು, ಮಕ್ಕಳು ನಿರ್ವಹಿಸುತ್ತಿರುವ ಕೆಲಸದ ಫಲಿತಾಂಶ, ಸಾಧನೆಯ ಮಟ್ಟ -ಇವುಗಳನ್ನು ಕಾಲ ಕಾಲಕ್ಕೆ ತಿಳಿದುಕೊಳ್ಳುತ್ತಿರಬೇಕು’ ಎಂದು, ಭಾರತದಲ್ಲಿದ್ದಾಗ ಇಂಜನಿಯರಿಂಗ್‌ ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದು, ಅಮೆರಿಕಾದಲ್ಲೂ ಕೆಲಕಾಲ ಉಪಾಧ್ಯಾಯ ವೃತ್ತಿಯಲ್ಲಿದ್ದ ಹರಿಹರೇಶ್ವರ ಈ ಸಂದರ್ಭದಲ್ಲಿ ನುಡಿದರು.

‘ಎಲ್ಲಾ ಶಾಲೆಗಳಲ್ಲಿ ಈ ರೀತಿಯ ಪೋಷಕರ ಮತ್ತು ಉಪಾಧ್ಯಾಯರ ಸಮಾವೇಶ ನಡೆಯುತ್ತಿದೆಯೇ? ಬಹುಶ: ಇಲ್ಲ. ಎಲ್ಲಾ ಶಾಲೆಗಳಲ್ಲೂ ಇದು ಅವಶ್ಯ ನಡೆಯಬೇಕು. ಇದರ ಮಹತ್ವವನ್ನು ಪೋಷಕರು ಮುಖ್ಯವಾಗಿ ಅರಿತುಕೊಳ್ಳಬೇಕು. ಸುಪ್ರೀಮ್‌ ಕಾನ್ವೆಂಟ್‌ನ ಈ ಕೆಲಸ ಬಹಳ ಶ್ಲಾಘನೀಯ. ಇನ್ನೂ ಉತ್ತಮವಾದ ಕಾರ್ಯಗಳನ್ನು ಮಾಡಿ ಶಾಲೆಯನ್ನು ಅಭಿವೃದ್ಧಿಗೊಳಿಸಿ’ ಎಂದು ಹರಿಹರೇಶ್ವರ ಕರೆಯಿತ್ತರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನೊಬ್ಬರು ಮುಖ್ಯ ಅತಿಥಿ ನಾಗಲಕ್ಷ್ಮಿ ಹರಿಹರೇಶ್ವರ. ಭಾರತದಲ್ಲಿ ಮತ್ತು ಅಮೆರಿಕಾದಲ್ಲಿ ಉಪಾಧ್ಯಾಯಿನಿಯಾಗಿದ್ದವರು. ಅಮೆರಿಕದಲ್ಲಿ ಕನ್ನಡ ಶಾಲೆ ನಡೆಸಿದವರು. ಅವರು ಮಾತನಾಡುತ್ತಾ, ‘ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ’ ಎಂದು ನಂಬಿ ಬಂದ ಸಂಸ್ಕೃತಿ ನಮ್ಮದು. ದೇವರನ್ನು ವಿವಿಧ ರೂಪದಲ್ಲಿ ನಾವು ನೋಡುತ್ತೇವೆ. ಮೊದಲ ಸ್ಥಾನ ತಾಯಿಗೆ. ಮನೆಯೇ ಮೊದಲ ಪಾಠಶಾಲೆ - ‘ಜನನಿಯೇ ಮೊದಲ ಗುರು. ಜನನಿಯಿಂದ ಪಾಠ ಕಲಿತ ಆ ಜನರೇ ಧನ್ಯರು. ನೂಲಿನಂತೆ ಸೀರೆ ತಾಯಿಯಂತೆ ಮಗಳು’ ಎಂಬ ಗಾದೆಯ ಮಾತನ್ನು ನಾವು ಕೇಳಿದ್ದೇವೆ. ನಾವು ಏನು ಮಾಡುತ್ತೇವೆಯೋ ಮಕ್ಕಳು ಅದನ್ನೇ ಮಾಡುತ್ತಾರೆ.... ಹಾಗಾಗಿ ಮನೆಯ ಪರಿಸರ ಚೆನ್ನಾಗಿರಬೇಕು. ನಮ್ಮ ಮನೆಯಲ್ಲಿ ಸದಾಚಾರ ಇದ್ದರೆ ಮಕ್ಕಳು ಬೆಳೆದು ಸಮಾಜದಲ್ಲಿ ಗಣ್ಯ ನಾಗರೀಕರಾಗುತ್ತಾರೆ. ಡಾಕ್ಟರ್‌, ಇಂಜಿನಿಯರ್‌ ಆಗುವ ಮೊದಲು ದೇಶದ ಸತ್ಪ್ರಜೆ, ದೇಶದ ಉತ್ತಮ ಅಣ್ಣ, ಒಳ್ಳೆಯ ಅಕ್ಕ - ತಮ್ಮ - ತಂಗಿ - ಪತ್ನಿ - ಪತಿ ಆಗುವುದು ಮನೆಯ ಪರಿಸರದಿಂದ. ವ್ಯಕ್ತಿಯೋರ್ವನ ವಿಕಸನ ಮನೆಯ ಪರಿಸರದಿಂದ ಆಗುವ ಕಾರಣ ಮಕ್ಕಳೊಂದಿಗೆ ನಾವು ಹೆಚ್ಚು ಕಾಲವನ್ನು ಕಳೆಯಬೇಕು ಎಂದು ನುಡಿದರು.

ತಮ್ಮ ಮಕ್ಕಳೊಂದಿಗೆ ಕಳೆದ ರಸನಿಮಿಷಗಳ ಬಗ್ಗೆ ಸಭೆಗೆ ವಿವರಿಸಿದ ಅವರು, ‘ನಾನು ಪ್ರತಿನಿತ್ಯ ನನ್ನ ಮಕ್ಕಳೊಂದಿಗೆ 30 - 45 ನಿಮಿಷಗಳನ್ನು ಕಳೆಯುತ್ತಿದ್ದೆ. ಮಕ್ಕಳು ಶಾಲೆಯಿಂದ ಮನೆಗೆ ಬಂದೊಡನೆ ಅವರಿಗೆ ತಿಂಡಿಯನ್ನು ಕೊಟ್ಟು ‘ಇವತ್ತು ಶಾಲೆಯಲ್ಲಿ ನೀನು ಏನು ಮಾಡಿದೆ? ಯಾವ ಪಾಠ ಇಷ್ಟವಾಯಿತು? ಯಾವ ಪಾಠ ಕಷ್ಟವಾಯಿತು? ಯಾವ ಟೀಚರ್‌, ಯಾವ ಮೇಸ್ಟ್ರು ಇಷ್ಟವಾದರು?’ ಎಂದು ಕೇಳುತ್ತಿದ್ದೆ. ಪ್ರತಿಯಾಂದಕ್ಕೂ ಬೇಡ ಬೇಡ.... ಎಂದಷ್ಟೇ ಮಕ್ಕಳಿಗೆ ಹೇಳುವುದು ಬೇಡ. ನಾವು ಮಕ್ಕಳಿಗೆ ಅದು ಬೇಡ, ಇದು ಬೇಡ, ಇದೂ ಬೇಡ ಎಂದು ಎಲ್ಲದಕ್ಕೂ ‘ಮಾಡಬೇಡ, ಮುಟ್ಟಬೇಡ, ನೋಡಬೇಡ’ ಎಂದು ಯಾವಾಗಲೂ ಹೇಳುತ್ತಿದ್ದರೆ, ‘ಅದೇ ಬೇಕು’ ಎನ್ನಿಸಿಬಿಡುತ್ತದೆ.... ಈ ರೀತಿಯ ನೆಗೆಟಿವ್‌ ಅಪ್ರೋಚ್‌ನಿಂದ ಮಕ್ಕಳಲ್ಲಿ ಕೆಟ್ಟ ಹಠ, ಛಲ ಹುಟ್ಟುತ್ತದೆ. ಅಪ್ಪ ಅಮ್ಮ ಹೇಳಿದ್ದನ್ನು ಮಾಡಬೇಕು ಅನ್ನುವ ಮನೋಭಾವನೆ ಮಕ್ಕಳಲ್ಲಿ ಬೆಳೆಯಬೇಕು. ಹೆತ್ತವರಿಗೆ ಸಹನೆ ಇರಬೇಕು.... ಅವರ ಕಷ್ಟ ಸುಖಗಳಲ್ಲಿ ನಾವು ಭಾಗಿಯಾಗಬೇಕು. ಅವರ ಆಸಕ್ತಿಗಳನ್ನು ತಿಳಿದುಕೊಂಡು, ಆಸಕ್ತಿ ಇಲ್ಲದ ಕಡೆ ಅವರನ್ನು ಒಲಿಸುವ ಪ್ರಯತ್ನವನ್ನು ನಾವು ಮಾಡಬೇಕು’ ಎಂದು ನಾಗಲಕ್ಷ್ಮಿ ಹೇಳಿದರು.

‘ನಮ್ಮ ಮನೆ - ನಮ್ಮ ನಡತೆ - ನಮ್ಮ ಪರಿಸರ - ನಮ್ಮ ಜ್ಞಾನ ಹಾಗೂ ನಮ್ಮ ಮಿಲನ ಇದು ಬಹಳ ಮುಖ್ಯವಾದುದು. ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಬೇಕು. ಮನೆಯಲ್ಲಿ ಸತ್‌ ನುಡಿಗಳೊಂದಿಗೆ ನಾವು ಮಾತನಾಡುತ್ತಿದ್ದರೆ ಮಕ್ಕಳು ಅದನ್ನೇ ಅನುಸರಿಸುತ್ತಾರೆ. ಮಕ್ಕಳ ಚಟುವಟಿಕೆಗಳಿಗೆ ಪೋಷಕರು ಪ್ರೋತ್ಸಾಹವನ್ನು ನೀಡಬೇಕು. ಅವರ ಆಟಪಾಠಗಳಲ್ಲಿ ಹೆತ್ತವರು ಭಾಗವಹಿಸಿ ಉತ್ತೇಜನವನ್ನು ನೀಡಬೇಕು. ಪೋಷಕರು ಅಧ್ಯಾಪಕರಾಗಿದ್ದರೆ, ಇನ್ನೊಂದು ರೀತಿಯ ಅನುಕೂಲವಿದೆ. ಮಕ್ಕಳ ದೈನಂದಿನ ಪ್ರಗತಿಯನ್ನು ತಿಳಿದುಕೊಳ್ಳಬಹುದು. ಮಕ್ಕಳಿಗೆ ಹಾಲು ಕೊಡಿ, ತಿಂಡಿ ಕೊಡಿ, ಊಟ ಕೊಡಿ; ಜೊತೆಗೆ ಪ್ರೀತಿಯನ್ನೂ ಕೊಡಿ’ ಎಂದು ಅವರು ಹೆತ್ತವರಿಗೆ ಕರೆಯಿತ್ತರು.

‘ಸಮಯ ಪ್ರಜ್ಞೆಯನ್ನು ಪೋಷಕರು ಮೊದಲು ಅಳವಡಿಸಿಕೊಂಡರೆ ಮಕ್ಕಳು ಅಳವಡಿಸಿಕೊಳ್ಳುತ್ತಾರೆ. ಸಮಯ ಪ್ರಜ್ಞೆ ಬಹಳ ಮುಖ್ಯವಾದುದು’ ಎಂದು ಅಭಿಪ್ರಾಯಪಟ್ಟ ಅವರು ಮುಂದುವರೆದು ಮಾತನಾಡುತ್ತಾ- ‘ಈಗಿನ ಮಕ್ಕಳು ಟಿ. ವಿ. ನೋಡುತ್ತಾ ತಿಂಡಿ ತಿನ್ನುತ್ತಾರೆ, ಟಿ. ವಿ. ನೋಡುತ್ತಾ ಊಟ ಮಾಡುತ್ತಾರೆ. ಟಿ. ವಿ. ನೋಡುತ್ತಾ ಹೋಮ್‌ವರ್ಕ್‌ ಮಾಡುತ್ತಾರೆ. ಹಾಗಾದರೆ ಮಕ್ಕಳಿಗೆ ವಿದ್ಯೆ ತಲೆಗೆ ಹತ್ತುವುದಾದರೂ ಹೇಗೆ ? ಟಿ. ವಿ. ನೋಡಬೇಕು.... ಭಾನುವಾರ ಮಕ್ಕಳ ಕಾರ್ಯಕ್ರಮಗಳಿರುತ್ತವೆ. ಮಕ್ಕಳೊಂದಿಗೆ ಭಾನುವಾರ ನೀವೂ ಟಿ. ವಿ. ನೋಡಿ. ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ. ವಾಚನಾಲಯಕ್ಕೆ ಕರೆದುಕೊಂಡು ಹೋಗಿ, ಪುಸ್ತಕಭಂಡಾರಕ್ಕೆ ಕರೆದುಕೊಂಡು ಹೋಗಿ..... ನಾಲ್ಕು ಸಲ ನೀವು ಈ ರೀತಿ ಮಾಡಿದಾಗ ಮಕ್ಕಳೇ ದೇವಸ್ಥಾನಕ್ಕೆ ಕರೆದೊಯ್ಯುವಂತೆ ನಿಮಗೆ ಹೇಳುತ್ತಾರೆ. ಮಕ್ಕಳೇ ಪುಸ್ತಕಭಂಡಾರಕ್ಕೆ ಕರೆದೊಯ್ಯುವಂತೆ ನಿಮಗೆ ಹೇಳುತ್ತಾರೆ. ಅದು ಬಿಟ್ಟು, ನೀವು ನಿಮ್ಮ ಪಾಡಿಗೆ .... ಮಕ್ಕಳು ಅವರ ಪಾಡಿಗೆ...... ಹಾಗಾದರೆ ಮಕ್ಕಳು ಪೋಷಕರ ಮಾತನ್ನು ಯಾಕೆ ಕೇಳುತ್ತಾರೆ? ಯಾಕೆ ಕೇಳಬೇಕು? ಮಕ್ಕಳಿಗೆ ಚಿಕ್ಕಂದಿನಿಂದಲೇ ಸದಾಚಾರಗಳನ್ನು ಕಲಿಸಬೇಕು. ಯಾಕೆಂದರೆ ಚಿಕ್ಕಂದಿನಲ್ಲಿ ಕಲಿತದ್ದು ಕೊನೆಯ ತನಕ ಇರುತ್ತದೆ. ಮಕ್ಕಳು ಮಣ್ಣಿನ ಮುದ್ದೆ ಇದ್ದಂತೆ. ಇತರರ ಕಷ್ಟ ಸುಖಗಳಿಗೆ ಸ್ಪಂದಿಸುವ ಗುಣವನ್ನು ಅಳವಡಿಸಿಕೊಂಡ ಸತ್‌ಪ್ರಜೆಯನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ’ ಎಂದು ನಾಗಲಕ್ಷ್ಮಿ ಹರಿಹರೇಶ್ವರ ಪೋಷಕರಿಗೆ ಕಿವಿಮಾತು ಹೇಳಿದರು.

ಅಮೇರಿಕೆಯಿಂದ ಬಂದ ನನ್ನ ಮಗಳನ್ನು ಮೊನ್ನೆ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದೆ. ದೇವರ ದರ್ಶನವನ್ನು ಮಾಡಿಕೊಂಡು ದೇವಸ್ಥಾನದ ಹೊರಗೆ ಬಂದ ನಂತರ ಮಗಳು ನನ್ನ ಬಳಿ ಬಂದು, ‘ಒಂದ್ನಿಮಿಷ ನಿಂತ್ಕೋ ಅಮ್ಮ, ನಾನು ನಿನ್ನ ಕಾಲು ಮುಟ್ಟಿ ನಮಸ್ಕಾರ ಮಾಡಬೇಕು’ ಎಂದು ಹೇಳಿದಳು. ನಾನು ಆಶ್ಚರ್ಯದಿಂದ, ‘ಯಾಕೆ?’ ಎಂದು ಕೇಳಿದೆ. ಅದೂ ಇಲ್ಲಿ ಇರುವ ಇಷ್ಟು ಜನರ ಎದುರಿನಲ್ಲಿ ? ನನಗೆ ಅರ್ಥವಾಗಲಿಲ್ಲ. ಆಗ, ನನ್ನ ಮಗಳು ಉತ್ತರಿಸಿದಳು- ‘ಬಿಡಮ್ಮಾ, ಅಲ್ಲಿ ಒಳಗಿರುವುದು ಕಲ್ಲಿನ ವಿಗ್ರಹ. ನನ್ನ ಪಾಲಿಗೆ ನೀನೇ ಲಿವಿಂಗ್‌ ಗಾಡ್‌, ಜೀವಂತ ದೇವರು!’ ಎಂದು ಅವಳು ಹೇಳಿದಳು. ಇದನ್ನು ನೆನಪಿಸಿಕೊಳ್ಳುತ್ತಾ, ಭಾವುಕರಾದ ನಾಗಲಕ್ಷ್ಮಿಯವರು, ‘ಇದಕ್ಕೆ ಕಾರಣ ಏನು? ನಾನು ನನ್ನ ಮಗಳೊಂದಿಗೆ ಕಳೆದ ಆತ್ಮೀಯವಾದ ಆ ರಸ ನಿಮಿಷಗಳು. ನನ್ನ ಮತ್ತು ಅವಳ ಮಿಲನ’ ಎಂದು ಹೇಳಿದರು.

ನಾಗಲಕ್ಷ್ಮಿಯವರು ಮುಂದುವರಿಸುತ್ತಾ , ‘ಒಂದು ದಿನ ಮಧ್ಯ ರಾತ್ರಿ ಹನ್ನೊಂದು ಮುವತ್ತಕ್ಕೆ, ದೂರದ ಊರಿನಲ್ಲಿದ್ದ ನನ್ನ ಇನ್ನೊಬ್ಬಳು ಮಗಳು ಸುಮನಾಳ ಫೋನು ಕರೆ ಬಂತು. ಏನೆಂದು ವಿಚಾರಿಸಿದಾಗ ‘ನಾಳೆ ನೀನು ನನ್ನ ಬಳಿ ಬರುವಾಗ ನಿನ್ನ ಹತ್ತಿರ ಇರುವ ಆ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಬಾ’ ಎಂದು ಹೇಳಿದಳು. ಚಕಿತಳಾದ ನಾನು ಯಾಕೆಂದು ವಿಚಾರಿಸಿದೆ; ‘ನನಗೊಬ್ಬ ಕ್ರಿಶ್ಚಿಯನ್‌ ಫ್ರೆಂಡ್‌ ಇದ್ದಾನೆ. ಬಹಳ ಒಳ್ಳೆಯವನು. ಅವನಿಗೆ ವಿಪರೀತ ಜ್ವರ. ಅವನು ಒಂದು ಮುಖ್ಯವಾದ ಪರೀಕ್ಷೆಯನ್ನ ಬರೆಯಬೇಕಾಗಿದೆ. ನೀನು ಹೇಳುತ್ತೀಯಲ್ಲಾ.... ಗಣೇಶ ವಿಘ್ನ ನಿವಾರಕ- ಅಂತ. ನನ್ನ ಬಳಿ ಗಣೇಶನ ವಿಗ್ರಹವಿಲ್ಲ. ನೀನು ತೆಗೆದುಕೊಂಡು ಬಂದರೆ ನಾನು ನನ್ನ ಫ್ರೆಂಡಿಗೆ ಅದನ್ನು ಕೊಟ್ಟು, ಅವನಿಗಾಗಿ ಪ್ರಾರ್ಥಿಸುತ್ತೇನೆ’ ಎಂದು ಅವಳು ಹೇಳಿದಳು. ಮುಗ್ಧಭಾವದಿಂದ ಆಡಿದ ಮಾತು ಅದು. ಆದರೆ, ಅದು ಒಂದು ನಂಬಿಕೆಯಿಂದ, ನೊಂದವರಿಗೆ ಏನಾದರೂ ಸಹಾಯ ಮಾಡುವ ಭಾವನೆಯಿಂದ ಆಡಿದ ಮಾತೂ ಸಹ ಹೌದು. ನೋಡಿ, ಇತರರ ಕಷ್ಟ ಸುಖಗಳಿಗೆ ಸ್ಪಂದಿಸುವ ಗುಣವನ್ನು ನಮ್ಮ ಮಕ್ಕಳು ಅಳವಡಿಸಿಕೊಳ್ಳುವಂತೆ ಅವರನ್ನು ನಾವು ಬೆಳೆಸಬೇಕಾಗಿದೆ. ಮಕ್ಕಳನ್ನು ಸತ್ಪ್ರಜೆಯನ್ನಾಗಿ ಅಥವಾ ಸಮಾಜ ಕಂಟಕರನ್ನಾಗಿ ರೂಪಿಸುವ ಕೆಲಸ ನಮ್ಮನ್ನೇ ಅವಲಂಬಿಸಿದೆ’ ಎಂದು ನಾಗಲಕ್ಷ್ಮಿ ನುಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಎಸ್‌. ಕೆ. ಹರಿಹರೇಶ್ವರ ಅವರು, ಬೋಳುವಾರು ಮೊಹಮದ್‌ ಕುಂಞ ಅವರ ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಎಂಬ ಶಿಶು ಗೀತೆಗಳ ಪುಸ್ತಕವನ್ನು ಸುಪ್ರೀಮ್‌ ಕಾನ್ವೆಂಟಿನ ರವಿಯವರಿಗೆ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಪೋಷಕರೆಲ್ಲರಿಗೂ ಹರಿಹರೇಶ್ವರ ಅವರು ಸರ್‌. ಎಂ. ವಿಶ್ವೇಶ್ವರಯ್ಯನವರ ಒಂದೊಂದು ಭಾವಚಿತ್ರ, ಹಾಗೂ ಕನ್ನಡದ ಬಗ್ಗೆ ವಿಶಿಷ್ಟ ಮಾಹಿತಿಯುಳ್ಳ ‘ಕನ್ನಡ - ಕನ್ನಡಿಗ’ ಶೀರ್ಷಿಕೆಯ ಒಂದೊಂದು ಪುಸ್ತಕವನ್ನು ಉಡುಗೊರೆಯಾಗಿ ವಿತರಿಸಿದರು.

Post your views

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more