ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಅಡುಗೆ ಪುಸ್ತಕ ಬರಿತೀನಿ-ಕ್ರಿಕೆಟಿಗ ಮ್ಯಾಥ್ಯೂ ಹೇಡನ್‌!

By Staff
|
Google Oneindia Kannada News

ನಾನು ಅಡುಗೆ ಪುಸ್ತಕ ಬರಿತೀನಿ-ಕ್ರಿಕೆಟಿಗ ಮ್ಯಾಥ್ಯೂ ಹೇಡನ್‌!
ಬೆಂಗಳೂರಲ್ಲಿ ಮ್ಯಾಥ್ಯೂ ಹೇಡನ್‌ ಅಂತರಂಗದ ಆಲಾಪ

ಬೆಂಗಳೂರು : ಭಾರತದ ಕ್ರಿಕೆಟರುಗಳು ಸುದ್ದಿಗಾರರಿಗೆ ಪೊಲೀಸ್‌ ಪಹರೆಯ ನಡುವೆಯೇ ಮುಖಾಮುಖಿಯಾಗುವ ಅನಿವಾರ್ಯತೆ ಒಂದೆಡೆ. ಇನ್ನೊಂದೆಡೆ ತಣ್ಣಗೆ ಓಡಾಡಿಕೊಂಡು ಲೋಕಾಭಿರಾಮ ಹರಟುತ್ತಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ಹೇಡನ್‌. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು, 380 ರನ್‌ ಗಳಿಸಿದ ಗರಿ ಹಚ್ಚಿಕೊಂಡು ಭಾರತಕ್ಕೆ ಬಂದಿರುವ ಹೇಡನ್‌ ಅನೇಕ ಕಾರಣಕ್ಕೆ ಗಮನಾರ್ಹ ವ್ಯಕ್ತಿ. ಒಂದು ಆಂಗ್ಲ ಪತ್ರಿಕೆ ಅವರನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತಾಡಿಸಿದೆ. ಹೇಡನ್‌ ಮಾತುಗಳನ್ನು ಕೇಳೋಣ....

ಭಾರತದ ಕ್ರಿಕೆಟಿಗರನ್ನು ನೋಡಿದರೆ ನನಗೆ ಅಯ್ಯೋ ಅನ್ನಿಸುತ್ತೆ. ಇಲ್ಲಿ ಅವರಿಗೆ ಪ್ರೆೃವೆಸಿ ಇಲ್ಲ, ಪುರುಸೊತ್ತಿಲ್ಲ. ಟೀವಿ ಹಾಕಿದರೆ ಐದು ನಿಮಿಷಕ್ಕೊಂದಾದರೂ ಅವರೇ ಇರುವ ಜಾಹೀರಾತು. ಕ್ರೀಡಾಂಗಣ ಹೊಕ್ಕರೂ ಅವರ ಮುಂದೆ ಮೈಕು ಹಿಡಿಯುವವರ ಕಾರುಬಾರು. ಅಂಗಳದಲ್ಲಿ ಬೆವರು ಹರಿಸುವ ಕ್ರಿಕೆಟಿಗರು ತಣ್ಣಗೆ ಕೂತು ಏನೂ ಮಾಡದ ಸ್ಥಿತಿ.

ನಾವು ಹಾಗಲ್ಲ. ನಾವು ಭಾರತೀಯ ಕ್ರಿಕೆಟಿಗರಂತೆ ಸೂಪರ್‌ ಸ್ಟಾರ್‌ಗಳಲ್ಲ. ನಾನು ನಾಳೆ ಬೆಳಗ್ಗೆ ಪಂದ್ಯ ಇದ್ದರೂ ಸಾಯಂಕಾಲ ಸಿನಿಮಾ ನೋಡಿಕೊಂಡು ಬಂದಿರುವ ಉದಾಹರಣೆಗಳಿವೆ. ಕ್ರಿಕೆಟಿಗರು, ನಾವೆಲ್ಲ ಒಟ್ಟಿಗೆ ಕೂತು ಆಟ ಮರೆತು ಹರಟಿರುವ ಪ್ರಸಂಗಗಳಿವೆ. ಆದರೆ, ಭಾರತೀಯ ಕ್ರಿಕೆಟಿಗರಿಗೆ ಈ ಪರಿಯ ಸ್ವಾತಂತ್ರ್ಯ ಇಲ್ಲ. ಬಿಡುವಿನ ಸಮಯದಲ್ಲಿ ಮನೆಗೆ ಬಂದರೆ, ಜಾಹೀರಾತುದಾರರಿಂದ ಡಿಮ್ಯಾಂಡು. ಅಂಗಳಕ್ಕೆ ಬಂದರೆ, ವಿ ವಾಂಟ್‌ ಸಿಕ್ಸರ್‌ ಎಂಬ ಅಭಿಮಾನಿಗಳ ಡಿಮ್ಯಾಂಡು. ಕೂತರೆ ತಪ್ಪು, ನಿಂತು ನಿಧಾನಕ್ಕೆ ಆಡಿದರೆ ಅನುಮಾನ. ಫಾರ್ಮ್‌ ಕಳೆದುಕೊಂಡರೆ ದೊಡ್ಡ ಅವಮಾನ.

ನನಗೆ ಭಾರತದ ಊಟ ತುಂಬಾ ಇಷ್ಟ. ರಮ್ಮು, ಬಿಯರ್‌ ನಮಗೆ ಮಾಮೂಲು. ಆದರೆ ಕ್ರಿಕೆಟ್‌ ಪ್ರವಾಸದಲ್ಲಿರುವಾಗ ರಾತ್ರಿ ಹೊತ್ತು ಕುಡಿಯುವುದಿಲ್ಲ. ಈ ವಿಷಯದಲ್ಲಿ ವೃತ್ತಿಪರತೆಯನ್ನು ಕಾಪಾಡಿಕೊಳ್ಳುತ್ತೇವೆ. ಮೊನ್ನೆ ಮುಂಬಯಿಯಲ್ಲಿ ದ್ರಾವಿಡ್‌ ‘ಶುಂಠಿ- ಬೆಳ್ಳುಳ್ಳಿ ನಾನ್‌’ ಮಾಡುವುದನ್ನು ಹೇಳಿಕೊಟ್ಟರು. ಮನೆಯಲ್ಲಿ ನಾನು ಬಿಡುವಾಗಿದ್ದಾಗ ಅಡುಗೆ ಮಾಡುತ್ತೇನೆ.

ಹೆಂಡತಿ ಹಾಗೂ ಒಂದೂವರೆ ವರ್ಷದ ಪುಟ್ಟ ಮಗಳ ಜೊತೆ ಸುತ್ತುತ್ತೇನೆ. ಸಿನಿಮಾ ನೋಡುತ್ತೇನೆ, ಸಂಗೀತ ನನಗೆ ಅಚ್ಚುಮೆಚ್ಚು. ಡಿಡ್‌ಗಿರಿಡೂ ಎಂಬ ವಾದ್ಯ ನುಡಿಸುವುದರಲ್ಲಿ ನಾನು ಪಳಗಿದ್ದೇನೆ. ನನ್ನ ಮುದ್ದಿನ ಮಗಳು ಗ್ರೇಸಿಗಾಗಿ ಈಗ ಒಂದು ಮನೆ ಕಟ್ಟುತ್ತಿದ್ದೇನೆ. ಅದಕ್ಕೆ ಬೇಕಾದ ಕಾರ್ಪೆಟ್‌ಗಳನ್ನು ಭಾರತದಿಂದ ಕೊಂಡುಕೊಂಡು ಹೋಗಬೇಕು ಅಂದುಕೊಂಡಿದ್ದೇನೆ. ಭಾರತದ ತೊಗರಿ ಬೇಳೆ ನನಗೆ ತುಂಬಾ ಇಷ್ಟ. ಬೇರೆ ಬೇರೆ ದೇಶಗಳ ಊಟದ ರುಚಿಯನ್ನು ಕಂಡಿರುವ ನಾನು ಅಡುಗೆ ಬಗ್ಗೆ ಒಂದು ಪುಸ್ತಕ ಬರೆಯಬೇಕು ಅಂದುಕೊಂಡಿದ್ದೇನೆ.

ನನ್ನ ಮಗಳ ಜೊತೆ ಮೊನ್ನೆ ಮಾತಾಡಿದೆ. ನಾನು ಬೇಗ ಔಟಾಗಿದ್ದನ್ನೂ ಮನ್ನಿಸಿ, ಅವಳು ಟೀವಿಯಲ್ಲಿ ಕಂಡ ನನಗೆ ಮುತ್ತು ಕೊಟ್ಟಿದ್ದಳು. ಕಣ್ಣಲ್ಲಿ ನೀರು ಬಂತು !

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X