ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ಸಾವಿರ ರುಪಾಯಿ ಪಗಾರ ಪಡೆಯುವ ಈ ಪೊಲೀಸನ ಆಸ್ತಿ 100 ಕೋಟಿ !

By Staff
|
Google Oneindia Kannada News

9 ಸಾವಿರ ರುಪಾಯಿ ಪಗಾರ ಪಡೆಯುವ ಈ ಪೊಲೀಸನ ಆಸ್ತಿ 100 ಕೋಟಿ !
ಇವತ್ತು ಮಹಾರಾಷ್ಟ್ರ ರಾಜಕಾರಣದಲ್ಲಿ ಧೂಳೆದ್ದಿದೆ. ಅಲ್ಲಿ ನಕಲಿ ಛಾಪಾ ಕಾಗದ ಹಗರಣದ್ದೇ ಮಾತು. ಉಪ ಮುಖ್ಯಮಂತ್ರಿ ಛಗನ್‌ ಭುಜ್‌ಬಲ್‌ ಕೂಡ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ. ಶಿವಸೇನೆ ಹಾಗೂ ಬಿಜೆಪಿಯತ್ತಲೂ ತೋರುಬೆಟ್ಟುಗಳು ಮುಖಮಾಡಿವೆ. ಇಷ್ಟೆಲ್ಲ ಆಗಿದ್ದು ಯಾಕೆ ಗೊತ್ತೆ ? ಓದಿ...

*ರಜನೀಶ, ಮುಂಬಯಿ

ತಿಂಗಳಿಗೆ ಒಂಬತ್ತು ಸಾವಿರ ರುಪಾಯಿ ಪಗಾರ ಪಡೆಯುವ ಒಬ್ಬ ಆರ್ಡಿನರಿ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ (ಎಸ್‌ಐಟಿ) ಜೀವನ ಮುಂಬಯಿಯಂಥಾ ದುಬಾರಿ ನಗರಿಯಲ್ಲಿ ಹೇಗಿದ್ದಿರಬಹುದು? ಕ್ವಾಟರ್ಸ್‌ನ ರುಟೀನು, ಭರ್ತಿ ರೈಲಿನಲ್ಲಿ ಪ್ರಯಾಣ, ದಿನ ಬೆಳಗಾಗೆದ್ದರೆ ಸುಪಾರಿ ಕೊಲೆಗಾರರ ಹಿಂದೆ ದೌಡಾಯಿಸು- ಹೀಗೆ ಒತ್ತಡ- ಜಂಜಡದ ಜೀವನ. ಹೌದು, ಇದು ಬಹುಪಾಲು ಎಸ್‌ಐಟಿಗಳ ನಿತ್ಯ ಪರಿಪಾಟಲು. ಆದರೆ ಇದಕ್ಕೆ ದೊಡ್ಡ ಅಪವಾದ ದಿಲೀಪ್‌ ಪಾಂಡುರಂಗ ಕಾಮತ್‌.

ಬಾಂಬ್‌ ಮೂಲಕ ಭ್ರಷ್ಟರ ಬೆದರಿಸಿ, ದಿನವೂ ತರಾವರಿ ಆರೋಪಗಳಿಗೆ ಗುರಿಯಾಗುತ್ತಿರುವ ಅಪರೂಪದ ವ್ಯಕ್ತಿ ಗಿರೀಶ್‌ ಮಟ್ಟಣ್ಣನವರ್‌ ಕರ್ನಾಟಕದಲ್ಲಿ ಸುದ್ದಿಯಲ್ಲಿದ್ದಾರೆ. ಈತ ಪೊಲೀಸ್‌ ಇನ್ಸ್‌ಪೆಕ್ಟರ್‌. ಮುಂಬಯಿ ಹಾಗೂ ಬೆಂಗಳೂರು ಎರಡೂ ಕಡೆ ಮಹಾ ಭ್ರಷ್ಟನೆಂಬ ಕಾರಣಕ್ಕೆ ಸದ್ದಿಲ್ಲದೆ ಸುದ್ದಿಯಾದಾತ ಪಾಂಡುರಂಗ ಕಾಮತ್‌ ಕೂಡ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌. ತಿಂಗಳಿಗೆ 9 ಸಾವಿರ ರುಪಾಯಿ ಪಗಾರ ಪಡೆಯುವ ಈತನ ನಿವ್ವಳ ಆಸ್ತಿ ಎಷ್ಟು ಗೊತ್ತೆ ? ಬರೋಬ್ಬರಿ 100 ಕೋಟಿ ರುಪಾಯಿ!

Its a police and corruption storyಪಾಂಡುರಂಗನನ್ನು ಪೊಲೀಸರು ಬಂಧಿಸಿದ್ದು 2003, ಜೂನ್‌ 13ನೇ ತಾರೀಕು. ವಿಶೇಷ ತನಿಖಾ ದಳ ಈತನ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಸಾಕಷ್ಟು ಹೆಣಗಾಡಿತ್ತು. ಬಂಧಿತ ಪಾಂಡುರಂಗನ ಮೇಲೆ ಮಹಾರಾಷ್ಟ್ರ ವ್ಯವಸ್ಥಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಓಸಿಎ) ಯನ್ವಯ ಮೊಕದ್ದಮೆ ದಾಖಲು ಮಾಡಿಕೊಳ್ಳಲಾಯಿತು.

ಪಾಂಡುರಂಗ ಸಿಕ್ಕಿದ್ದು ನಕಲಿ ಛಾಪಾ ಕಾಗದ ಹಗರಣದ ಜಾಲವನ್ನು ಬೆಂಗಳೂರು ಹಾಗೂ ಮಹಾರಾಷ್ಟ್ರ ಪೊಲೀಸರು ಬೇಧಿಸತೊಡಗಿದಾಗ. ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್‌ ಕರೀಂ ತೆಲಗಿಯಿಂದ ಕಾಮತ್‌ 72 ಲಕ್ಷ ರುಪಾಯಿ ಹಣ ಇಸಿದುಕೊಂಡಿರುವ ಆರೋಪವೂ ಇದೆ. ಈ ಆರೋಪಕ್ಕೆ ಇನ್ನೂ ರಂಗು ಎಂಬಂತೆ, ಐಜಿಪಿ ಶ್ರೀಧರ್‌ ವಾಗಲ್‌ ಅವರ ಪರವಾಗಿ ಹಣ ಇಸಿದುಕೊಂಡ ಎಂಬುದೂ ಆರೋಪ. ವಾಗಲ್‌ ಕಳೆದ ವಾರವಷ್ಟೇ ಪೊಲೀಸರ ಅತಿಥಿಯಾದ !

ಕಾಮತ್‌ ಮಾಡಿಕೊಂಡಿರುವ ಅಕ್ರಮ ಆಸ್ತಿಗಳು ಒಂದೆರಡಲ್ಲ. ಲೋನಾವಾಲ, ಗೋವಾ ಮತ್ತು ಪಂಚಗಣಿಯಲ್ಲಿ ಕಾಮತನ ಬೇನಾಮಿ ಆಸ್ತಿಗಳಾದ ಮೂರು ಪಾಶ್‌ ಹೊಟೇಲುಗಳಿಗೆ ಪೊಲೀಸರು ಸೀಲು ಜಡಿದಿದ್ದಾರೆ. ಮೊದಲು ನಕಲಿ ಛಾಪಾ ಕಾಗದ ಮಾರಾಟಕ್ಕೆ ಕುಮ್ಮಕ್ಕು ಕೊಡುತ್ತಾ, ಲಂಚ ಇಸಿದುಕೊಂಡು ಸುಮ್ಮನಿರುತ್ತಿದ್ದ ಕಾಮತ್‌ ಆಮೇಲೆ ಖುದ್ದು ಛಾಪಾ ಕಾಗದ ಮಾರಾಟಕ್ಕೆ ನಿಂತದ್ದೂ ಉಂಟು. ಈ ವರ್ಷ ಜನವರಿಯಲ್ಲಿ ಮುಂಬಯಿಯಲ್ಲಿ 837 ಕೋಟಿ ರುಪಾಯಿ ಬೆಲೆಯ ನಕಲಿ ಛಾಪಾ ಕಾಗದಗಳನ್ನು ಪೊಲೀಸರು ವಶಪಡಿಸಿಕೊಂಡರು. ಇವನ್ನೆಲ್ಲ ಮಾರಲು ಕಾಮತ್‌ ದೊಡ್ಡದೊಂದು ತಂಡವನ್ನೇ ರಚಿಸಿದ್ದ. ಒಬ್ಬ ನಿಯತ್ತಿನ ಪೊಲೀಸ್‌ ಕೊಟ್ಟ ಮಾಹಿತಿ ಪೊಲೀಸರ ಬಲೆಗೆ ಕಾಮತ್‌ ಬೀಳಲು ಕಾರಣವಾಯಿತು.

ಮುಂಬಯಿಯ ವಿಶೇಷ ತನಿಖಾ ತಂಡದ ಪ್ರಕಾರ- 1996- 97ರಲ್ಲಿ ಅಬ್ದುಲ್‌ ಕರೀಂ ತೆಲಗಿ ಬೆಂಗಳೂರು ಜೈಲಿನಲ್ಲಿದ್ದಾಗಲೇ ಕಾಮತ್‌ ಎಂಜಲು ನಾಯಿಯಾಗಿದ್ದ. ಏರ್‌ಪೋರ್ಟ್‌ ಕ್ರೆೃಂ ವಿಭಾಗದ ಹಿರಿಯ ಪೊಲೀಸ್‌ ಇನ್ಸ್‌ಪೆಕ್ಟರ್‌ ವಶಿಷ್ಠ ಆಂಡಲೆ ಹಾಗೂ ಕರೀಂ ಗಲಸ್ಯ ಕಂಠಸ್ಯ ಎಂಬಂತಿದ್ದರು . ಕರೀಂ ಹಾಗೂ ವಶಿಷ್ಠರ ನಡುವೆ ಸಂದೇಶ ಸಾಗಿಸುವ ಕೆಲಸವನ್ನು ಕಾಮತ್‌ ಮಾಡುತ್ತಿದ್ದ. ಬೆಂಗಳೂರು ಜೈಲಿನ ಮಾಹಿತಿಯ ಪ್ರಕಾರ 2000- 01ರಲ್ಲಿ ಆಂಡಲೆ ಹಾಗೂ ಕಾಮತ್‌ ಪದೇಪದೇ ತೆಲಗಿಯನ್ನು ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲ, ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಮಂತ್ರಿ ಮಹೋದಯರ ಜೊತೆ ಮಾತನಾಡುವ ಅವಕಾಶವನ್ನೂ ಕರೀಂಗೆ ಕಲ್ಪಿಸಿಕೊಟ್ಟಿದ್ದಾರೆ. ಸದ್ಯಕ್ಕೆ ಆಂಡಲೆ ಕೂಡ ಕಂಬಿ ಎಣಿಸುತ್ತಿದ್ದಾರೆ.

2000, ಜನವರಿ 9ನೇ ತಾರೀಕು. ಅವತ್ತು ಡ್ರೆೃವರನ ಕೊಲೆಯ ವಿಚಾರವಾಗಿ ಪೊಲೀಸರು ತೆಲಗಿಯ ವಿಚಾರಣೆ ನಡೆಸುವುದಿತ್ತು. ಆ ದಿವ್ಯ ಬಂಗಲೆಯಲ್ಲಿ ಪೊಲೀಸರು ಕರೀಂಗಾಗಿ ಚಾತಕ ಪಕ್ಷಿಗಳ ತರಹ ಕಾಯುತ್ತಿದ್ದರೆ, ಆತ ಮನೆಯಾಳಗೆ ಬಾಗಿಲು ಹಾಕಿಕೊಂಡು ಚಹಾ ಹೀರುತ್ತಿದ್ದ ! ಕೆಲವೇ ದಿನಗಳ ನಂತರ ನಾಲ್ವರು ಪೊಲೀಸರನ್ನು ಅಮಾನತ್ತುಗೊಳಿಸಲಾಯಿತು. ಈ ಪೈಕಿ ಕಾಮತ್‌ ಕೂಡ ಒಬ್ಬ.

ಕಾಮತ್‌ ಅಮಾನತ್ತುಗೊಂಡಿದ್ದುದು ಅದೇ ಮೊದಲಲ್ಲ. ಅದಕ್ಕೂ ಮುಂಚೆ ಕಳ್ಳ ಕದ್ದಿದ್ದ ಕಾರನ್ನು ಮಾರಿಕೊಂಡು ಸಿಕ್ಕಿ ಬಿದ್ದಿದ್ದಾಗಲೂ ಅದೇ ಗತಿಯಾಗಿತ್ತು. ಹಾಗಿದ್ದೂ ಕಾಮತ್‌ 2001ನೇ ಇಸವಿಯ ಜೂನ್‌ನಲ್ಲಿ ಆರ್‌ಸಿಎಫ್‌ ಚೇಂಬರ್‌ನ ಅಪರಾಧ ವಿಭಾಗಕ್ಕೆ ವರ್ಗಾವಣೆಯಾಗಿ, ಕೆಲಸದಲ್ಲಿ ಮುಂದುವರೆದಿದ್ದ. ವಿಶೇಷ ತನಿಖಾ ತಂಡ ಇದು ಹೇಗೆ ಸಾಧ್ಯ ಅಂತ ಹುಡುಕತೊಡಗಿತು. ಕಾಮತ್‌ ಮೇಲಧಿಕಾರಿಯಾಗಿದ್ದ ಉಪ ಪೊಲೀಸ್‌ ಆಯುಕ್ತ ಪ್ರದೀಪ್‌ ಸಾವಂತ್‌ ಅವರನ್ನು ತಂಡ ಪ್ರಶ್ನೆಗೊಳಪಡಿಸಿತು. ಕಾಮತ್ತನ್ನು ಕೆಲಸದಿಂದ ತೆಗೆದದ್ದು ಆತನ ಬಂಧನಕ್ಕಿಂತ ಕೇವಲ 10 ದಿನಗಳ ಮುಂಚೆ ಎಂಬ ವಿಷಯ ಬಯಲಾದದ್ದೇ ಆಗ. ಸಾವಂತ್‌ ಹೇಳುವಂತೆ, ಮುಂಬಯಿ ಅಪರಾಧ ವಿಭಾಗದ ಜಂಟಿ ಪೊಲೀಸ್‌ ಆಯುಕ್ತರೇ ಕಾಮತ್‌ ಕೆಲಸದಲ್ಲಿ ಮುಂದುವರೆಯಲು ಕಾರಣ !

ನಕಲಿ ಛಾಪಾ ಕಾಗದದ ಹಗರಣದ ಹೂರಣ ಹೀಗೇ ಬೆಳೆಯುತ್ತಿದೆ. ಕಾನೂನು ರಕ್ಷಿಸಬೇಕಾದ ಖಾಕಿ ತೊಟ್ಟ ಮಂದಿಯೇ ‘ಮಾರಿಕೊಂಡವ’ರಾಗಿದ್ದಾರೆ. ಕರೀಂನಂಥಾ ತಿಮಿಂಗಲಗಳು ಒಂದೆಡೆಯಾದರೆ, ಕಾಮತ್‌ರಂಥಾ ಶಾರ್ಕ್‌ಗಳು ಇನ್ನೊಂದೆಡೆ. ಇಂಥಾ ಗುರುಮ ಘಾತುಕರ ಪಡೆಯ ನಡುವೆಯೇ ಭ್ರಷ್ಟಾಚಾರ ನಿರ್ಮೂಲನೆಯ ಕನಸು ಕಂಡು, ಶಾಸಕರ ಭವನಕ್ಕೆ ಬಾಂಬ್‌ ಇಟ್ಟು, ಅದನ್ನು ಸಿಡಿಸದ ಗಿರೀಶ್‌ ಮಟ್ಟಣ್ಣನವರ್‌ ಥರದವರೂ ಇದ್ದಾರೆ; ಹೊಸ ಆರೋಪಗಳಿಗೆ ಗುರಿಯಾಗುತ್ತಾ !

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X