ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಆಗಬೇಕೆ ಚೆನ್ನಾದ ಕ್ರಿಕೆಟ್‌ ಕಲಿ? ದ್ರಾವಿಡ್‌ ಆಟ ನೋಡಿ ಕಲಿ ’

By Staff
|
Google Oneindia Kannada News

‘ಆಗಬೇಕೆ ಚೆನ್ನಾದ ಕ್ರಿಕೆಟ್‌ ಕಲಿ? ದ್ರಾವಿಡ್‌ ಆಟ ನೋಡಿ ಕಲಿ ’
ಮಿಸ್ಟರ್‌ ವಾಲ್‌ನ ಮೆಚ್ಚಿದ ಮಾಸ್ಟರ್‌ ಬ್ಲಾಸ್ಟರ್‌

ಬೆಂಗಳೂರು : ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಬೇಕಾ? ಹಾಗಿದ್ದರೆ ರಾಹುಲ್‌ ದ್ರಾವಿಡ್‌ ಅವರನ್ನು ಅನುಕರಿಸಿ- ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಕೊಟ್ಟ ಈ ಸರ್ಟಿಫಿಕೇಟಿಗೆ ಭಾರೀ ಕರತಾಡನ. ಹಾಗೆ ಚಪ್ಪಾಳೆ ಹೊಡೆದವರ ಸಾಲಿನಲ್ಲಿ ಸದಾನಂದ ವಿಶ್ವನಾಥ್‌, ಬಿ.ಕೆ.ವೆಂಕಟೇಶ ಪ್ರಸಾದ್‌ ಹಾಗೂ ದೊಡ್ಡ ಗಣೇಶ್‌ ಕೂಡ ಇದ್ದರು.

ಅದು ಮಂಗಳವಾರ (ನ. 11) ಸೇಂಟ್‌ ಜೋಸೆಫ್ಸ್‌ ಶಾಲೆಯಲ್ಲಿ ನಡೆದ ಸಮಾರಂಭ. ‘ಮಿ. ವಾಲ್‌’ ಎಂದೇ ಹೆಸರು ಗಳಿಸಿರುವ ರಾಹುಲ್‌ ದ್ರಾವಿಡ್‌ ಜೀವನ ಚರಿತ್ರೆಯ ಅನಾವರಣ. ಕ್ರೀಡಾ ಪತ್ರಕರ್ತ ವೇದಂ ಜೈಶಂಕರ್‌ ಬರೆದಿರುವ ದ್ರಾವಿಡ್‌ ಜೀವನ ಚರಿತ್ರೆಯ ಪುಸ್ತಕ ಅನಾವರಣ ಮಾಡಿದ್ದು ಸಚಿನ್‌. ಚೊಕ್ಕವಾಗಿ ಮಾತಾಡಿದ ಸಚಿನ್‌, ಖುದ್ದು ತಾವು ದ್ರಾವಿಡ್‌ ಹಾದಿಯನ್ನು ಅನುಕರಿಸುವ ಆಸೆ ಇಟ್ಟುಕೊಂಡಿರುವುದಾಗಿ ಹೇಳಿದರು.

ಸಚಿನ್‌ ಮಾತುಗಳ ಸಾರ-

ದ್ರಾವಿಡ್‌ ಒಬ್ಬ ಘನೀರ್ಭವಿತ ಬ್ಯಾಟ್ಸ್‌ಮನ್‌. ಜಗತ್ತಿನ ಅಗ್ರಮಾನ್ಯ ಆಟಗಾರರ ಪೈಕಿ ಒಬ್ಬ. 1994- 95ರಲ್ಲಿ ರಾಜ್‌ಕೋಟ್‌ನಲ್ಲಿ ನಾನು ಆತನನ್ನು ಮೊದಲ ಸಲ ನೋಡಿದೆ. ಸ್ನೇಹಿತ ಅಮುಲ್‌ ಮಜುಂದಾರ್‌ ತೋರಿಸಿದ್ದು ಇದೇ ದ್ರಾವಿಡ್‌. ಅವತ್ತು ರಾಹುಲ್‌ ಆಟವನ್ನು ಗಮನಿಸಿದೆ. ಈತ ಸಾಕಷ್ಟು ಹೆಸರು ಮಾಡುತ್ತಾನೆ ಅಂತ ಮಜುಂದಾರ್‌ಗೆ ಹೇಳಿದೆ. ಇವತ್ತು ಅದು ನಿಜವಾಗಿದೆ. ಒಬ್ಬ ಉಪ ನಾಯಕನಾಗಿ ರಾಹುಲ್‌ ಜವಾಬ್ದಾರಿ ನಿಭಾಯಿಸುವ ಪರಿ, ಆತನ ಪ್ರಾಮಾಣಿಕತೆ- ಶಿಸ್ತು- ದಕ್ಷತೆ ಅನುಕರಣೀಯ.

ಸಚಿನ್‌ ಹೊಗಳಿಕೆಯ ನಂತರ ದ್ರಾವಿಡ್‌ ಸರದಿ-

ನಾನು ಶಾಲಾ ದಿನಗಳಲ್ಲೇ ಬ್ಯಾಟು ಹಿಡಿದಿದ್ದೆ. 13- 14ನೇ ವಯಸ್ಸಲ್ಲಿ ಸಾಕಷ್ಟು ರನ್‌ ಹೊಡೆದು ಶಹಬ್ಬಾಸ್‌ಗಿರಿ ಪಡೆದಿದ್ದೆ. ಕೆಲವರಂತೂ ನಿನ್ನಂತೆ ಕ್ರಿಕೆಟ್‌ ಆಡುವ ಶಾಲಾ ಬಾಲಕನೇ ಇಲ್ಲ ಅಂತ ಅಟ್ಟಕ್ಕೇರಿಸಿದ್ದರು. 1986ರಲ್ಲಿ 15 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಮೆಂಟ್‌ ಇತ್ತು. ಕಟಕ್‌ನಲ್ಲಿ ದಕ್ಷಿಣ ವಲಯ ಮತ್ತು ಪಶ್ಚಿಮ ವಲಯದ ನಡುವೆ ಪಂದ್ಯ. ಅವತ್ತು ಮುಂಬಯಿಯ ಶಾಲಾ ಬಾಲಕನಾಗಿದ್ದ ತೆಂಡೂಲ್ಕರ್‌ ಆಟ ನೋಡಿದೆ. ಆತನಂತೆ ಒಳ್ಳೆಯ ಕ್ರಿಕೆಟ್‌ ಪಟು ಆಗಬೇಕು ಅನ್ನಿಸಿದ್ದೇ ಆಗ. ನಾನು ಕ್ರಿಕೆಟ್ಟನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಅವತ್ತಿನಿಂದಲೇ. ತೆಂಡೂಲ್ಕರ್‌ ನನಗೆ ಒಬ್ಬ ಮಾದರಿ ಕ್ರಿಕೆಟಿಗ.

ಇವತ್ತು ಕ್ರೀಡಾ ಬರಹಗಾರ ಸುರೇಶ್‌ ಮೆನನ್‌, ಸೇಂಟ್‌ ಜೋಸೆಫ್ಸ್‌ ಶಾಲೆಯ ಪ್ರಾಂಶುಪಾಲ ಫಾದರ್‌ ಮೈಕೆಲ್‌ ಜಾನ್‌ ಎಸ್‌.ಜೆ. ಸೇರಿದಂತೆ ಅನೇಕರು ನನ್ನ ಬಗ್ಗೆ ಉತ್ಪ್ರೇಕ್ಷೆಯ ಮಾತಾಡಿದ್ದಾರೆ. ಮೂವತ್ತು ವರ್ಷ ವಯಸ್ಸಿನೊಳಗೆ ಏನಾದರೂ ಸ್ವಲ್ಪ ಒಳ್ಳೆಯ ಕೆಲಸ ಮಾಡಿದರೂ ಅದೊಂದು ದೊಡ್ಡ ಸಾಧನೆ ಎಂದು ಮನಸ್ಸು ಬೀಗುತ್ತದೆ. ಆದರೆ ವಾಸ್ತವದಲ್ಲಿ ಅದು ದೊಡ್ಡ ಸಾಧನೆ ಅಲ್ಲ. ಪುಸ್ತಕದಲ್ಲಿ ನನ್ನ ಬಗೆಗಿನ ಹೊಗಳಿಕೆಯ ಮಾತುಗಳನ್ನು ಉಪ್ಪೇರಿಯಂತೆ ಓದಿಕೊಳ್ಳಿ ಎಂದು ದ್ರಾವಿಡ್‌ ಹೇಳಿದಾಗ ಅಭಿಮಾನಿಗಳಲ್ಲಿ ನಗೆಯ ಬುಗ್ಗೆ.

ದ್ರಾವಿಡ್‌ ಒಬ್ಬ ಒಳ್ಳೆಯ ಸ್ನೇಹಿತ ಮತ್ತು ಪ್ರಜಾತಾಂತ್ರಿಕ ಪ್ರತಿನಿಧಿ. ವಯೋವೃದ್ಧರಿರುವ ಆಶ್ರಮಗಳಿಗೆ, ಅಂಗವಿಕಲ ಮಕ್ಕಳಿರುವ ಜಾಗಗಳಿಗೆ ಹೋಗಿ ಅವರ ಕಣ್ಣೀರು ಒರೆಸಿ ಬಂದಿರುವ ಮಾದರಿ ವ್ಯಕ್ತಿ . ಜಗತ್ತಿನಲ್ಲಿ ಅನೇಕ ಯುವಕರಿರುತ್ತಾರೆ. ಆದರೆ, ದ್ರಾವಿಡ್‌ ಥರದವರು ಅಪರೂಪ. ಸ್ವಂತ ಪರಿಶ್ರಮ ಮತ್ತು ಒಳ್ಳೆಯ ವ್ಯಕ್ತಿತ್ವವೇ ಅವರನ್ನು ಬೆಳೆಸಿದೆ ಎಂದು ಫಾದರ್‌ ಜಾನ್‌ ಹೊಗಳಿದರು.

‘ರಾಹುಲ್‌ ದ್ರಾವಿಡ್‌ : ಎ ಬಯಾಗ್ರಫಿ’ ಪುಸ್ತಕವನ್ನು ನವದೆಹಲಿ ಮೂಲದ ಯುಬಿಎಸ್‌ ಪಬ್ಲಿಷರ್ಸ್‌ ಡಿಸ್ಟ್ರಿಬ್ಯೂಟರ್ಸ್‌ ಪ್ರೆೃ. ಲಿಮಿಡೆಟ್‌ ಪ್ರಕಟಿಸಿದೆ.

ದ್ರಾವಿಡ್‌ಗೆ ಬೋನಸ್‌

ಈ ಸಂಭ್ರಮದ ಕ್ಷಣಗಳನ್ನು ಸವಿದ ಮುನ್ನಾ ದಿನ ಕ್ಯಾಸ್ಟ್ರಾಲ್‌ ಕೊಡಮಾಡುವ ಭಾರತೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನೂ ರಾಹುಲ್‌ ದ್ರಾವಿಡ್‌ ಪಡೆದರು. ಈ ಪ್ರಶಸ್ತಿಗಾಗಿ ಸಚಿನ್‌, ಷೆವಾಗ್‌, ಹರ್ಭಜನ್‌ ಸಿಂಗ್‌ ಮತ್ತು ಜಾಹೀರ್‌ ಖಾನ್‌ ಹೆಸರುಗಳನ್ನು ಪರಿಗಣಿಸಲಾಗಿತ್ತು. ಅಂತಿಮವಾಗಿ ದ್ರಾವಿಡ್‌ ವರ್ಷದ ಕ್ರಿಕೆಟಿಗರಾಗಿ ಆಯ್ಕೆಯಾದರು. ಸುನಿಲ್‌ ಗವಾಸ್ಕರ್‌ಗೆ ಜೀವಮಾನ ಸಾಧನೆಯ ಪ್ರಶಸ್ತಿ ಹಾಗೂ ಭಾರತ ಕಿರಿಯರ ಕ್ರಿಕೆಟ್‌ ತಂಡದ ನಾಯಕ ಅಂಬಟಿ ರಾಯುಡುಗೆ ಜೂನಿಯರ್‌ ಕ್ರಿಕೆಟರ್‌ ಗೊರವ ಸಂದಿತು.

ಭಾರತ ಕ್ರಿಕೆಟ್‌ ತಂಡದ ನಾಯಕ ಸೌರವ್‌ ಗಂಗೂಲಿ, ತರಬೇತುದಾರ ಜಾನ್‌ರೈಟ್‌, ಫಿಸಿಯೋ ಆ್ಯಂಡ್ರೂ ಲೇಪಸ್‌ ಮತ್ತು ಮಾಜಿ ತರಬೇತುದಾರ ಆಡ್ರಿಯನ್‌ ಲಿ ರೌಕ್ಸ್‌ ಅವರಿಗೆ ವಿಶೇಷ ಪ್ರಶಸ್ತಿಗಳನ್ನು ಕೊಡಲಾಯಿತು. ಸಮಾರಂಭದಲ್ಲಿ ಕಪಿಲ್‌ ದೇವ್‌ ಹಾಜರಿದ್ದರು.

ಕೊನೆಮಾತು- ಬುಧವಾರ (ನ. 12) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ- ಆಸ್ಟ್ರೇಲಿಯಾ ನಡುವೆ ಹಗಲು- ರಾತ್ರಿ ಕ್ರಿಕೆಟ್‌ ಪಂದ್ಯ. ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳಲ್ಲಿ (ಕ್ವೀನ್ಸ್‌ ರಸ್ತೆ, ಲ್ಯಾವೆಲ್ಲೆ ರಸ್ತೆ, ಚರ್ಚ್‌ಸ್ಟ್ರೀಟ್‌, ಎಂ.ಜಿ.ರಸ್ತೆ ಮೊದಲಾದವು) ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಾಹನಗಳ ನಿಲುಗಡೆ ವ್ಯವಸ್ಥೆ ಇರುವುದಿಲ್ಲ. ಕ್ರಿಕೆಟ್‌ ನೋಡಲು ಬರುವ 45 ಸಾವಿರ ಮಂದಿಯ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಎಂ.ಜಿ.ರಸ್ತೆ ಹಾಗೂ ಸುತ್ತ ಮುತ್ತಲ ರಸ್ತೆಗಳ ಕಚೇರಿ- ಕಂಪನಿಗಳಲ್ಲಿ ಕೆಲಸ ಮಾಡುವವರು ಗಾಡಿಗಳನ್ನು ಮನೆಯಲ್ಲಿ ಬಿಟ್ಟು, ಬಸ್ಸು ಹತ್ತುವುದು ಒಳ್ಳೆಯದು.

(ಪಿಟಿಐ/ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X