ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಊಟದ ರಾಜಧಾನಿ ಹಾದಿಯಲ್ಲಿ ಐಟಿ ಸಿಟಿ

By Staff
|
Google Oneindia Kannada News

ಭಾರತದ ಊಟದ ರಾಜಧಾನಿ ಹಾದಿಯಲ್ಲಿ ಐಟಿ ಸಿಟಿ
ಊಟದ ವಿಷಯದಲ್ಲಿ ಬೆಂಗಳೂರು ಬೆಳೆದಿರುವ ಪರಿ ಹೇಗಿದೆ ನೋಡಿ? ಇಲ್ಲಿನ ಹೊಟೇಲು ಮಾರುಕಟ್ಟೆಯ ಸ್ಪರ್ಧೆಯಲ್ಲಿ ದೊಡ್ಡಾತಿದೊಡ್ಡವರೇ ಅಂಗಡಿ ಮುಚ್ಚುವಂತಾಗಿದೆ. ಕಡಿಮೆ ಕಾಸಿಗೆ ರುಚಿ ತಿನಿಸು ಕೊಟ್ಟವನಷ್ಟೇ ಇಲ್ಲಿ ನಳ.

*ರಾಘವೇಂದ್ರ, ಬೆಂಗಳೂರು

ಬೆಂಗಳೂರಲ್ಲಿ ಯಾವ ಬ್ಯುಸಿನೆಸ್ಸು ಸೇಫು ಅಂತೊಂದು ಪ್ರಶ್ನೆಯಿಟ್ಟುಕೊಂಡು ಓಡಾಡಿದರೆ, ಬಾರು, ಮೆಡಿಕಲ್‌ ಶಾಪು ಮತ್ತು ಹೊಟೇಲು ಎಂಬ ಉತ್ತರ ಸಿಗುತ್ತದೆ. ಅದರಲ್ಲೂ ರುಚಿ- ಶುಚಿ ಕಾಯ್ದುಕೊಂಡು, ಅಗ್ಗದ ಬೆಲೆಗೆ ತಿನಿಸು ಕೊಟ್ಟರಂತೂ ದರ್ಶಿನಿಗಳ ಗಲ್ಲಾ ಝಣಝಣ.

ಇತ್ತೀಚೆಗೆ ನಡೆಸಿರುವ ಒಂದು ಸಮೀಕ್ಷೆಯ ಪ್ರಕಾರ ಬೆಂಗಳೂರು ಭಾರತದ ಆಹಾರ ರಾಜಧಾನಿಯಾಗಿ ಬೆಳೆಯುತ್ತಿರುವುದು ಗೊತ್ತಾಗುತ್ತದೆ. ಯಾಕೆಂದರೆ, ನಗರದ ನಲವತ್ತು ಲಕ್ಷ ಜನ ಇವತ್ತು ಹೊಟೇಲ್‌ ಊಟವನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಈ ಪೈಕಿ ಪ್ರವಾಸಿಗರು ಇದ್ದರೂ ಸಹ ನಗರವಾಸಿ ಗಿರಾಕಿಗಳ ಸಂಖ್ಯೆಯೇ ಹೆಚ್ಚು. ಅಷ್ಟೇ ಅಲ್ಲ, ಬೆಂಗಳೂರಿನ ಜನಸಂಖ್ಯೆಯ ಪ್ರತಿಶತ 67ರಷ್ಟು ಮಂದಿ ಮಾಂಸಾಹಾರಿಗಳು ! ಇಲ್ಲಿ ಪ್ರತಿ ಮೂರು ತಿಂಗಳಿಗೆ 25 ರಿಂದ 30 ದರ್ಶಿನಿ/ಹೊಟೇಲುಗಳು ತಲೆಯೆತ್ತುತ್ತವೆ.

Bangalore and Hotel Industryಬೆಂಗಳೂರಲ್ಲಿ ಗಲ್ಲಾ ತುಂಬಿಸಬಲ್ಲ ವ್ಯಾಪಾರ ಹೊಟೇಲಿನದ್ದಾಗಿರಬಹುದು. ಆದರೆ ಇಲ್ಲಿ ಹೊಟೇಲು ತೆರೆಯಲು ತಿಂಗಳುಗಟ್ಟಲೆ ತಯಾರಿ ಮಾಡಿರಬೇಕಾಗುತ್ತದೆ. ಅದೇ ಸ್ವಲ್ಪ ಏಮಾರಿದರೂ ರಾತ್ರೋರಾತ್ರಿ ಬಾಗಿಲು ಹಾಕಬೇಕಾಗುತ್ತದೆ. ಒಂದು ‘ಪಾಷ್‌’ಆದ ಪಿಡ್ಝಾ ಕಾರ್ನರನ್ನು ಒಬ್ಬಾತ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾಂದರಲ್ಲಿ ತೆರೆಯುತ್ತಾನೆ. ಎರಡು ತಿಂಗಳಲ್ಲೇ ಅವನ ವ್ಯಾಪಾರ ಜೋರು. ಇಲ್ಲಿ ಒಂದು ಪಿಡ್ಝಾಗೆ ಕನಿಷ್ಠ 185 ರುಪಾಯಿ. ಅಷ್ಟು ಹಣ ಇಡದಿದ್ದರೆ ಅವನ ಅದ್ಧೂರಿ ಹೊಟೇಲಿನ ನಿರ್ವಹಣೆಯ ವೆಚ್ಚ ಭರಿಸುವುದು ಸುಲಭದ ಮಾತಲ್ಲ. ಇಂತಿಪ್ಪ ಪಿಡ್ಝಾ ಕಾರ್ನರಿನಿಂದ ನಾಲ್ಕು ಅಂಗಡಿಯ ನಂತರ ಇನ್ನೊಂದು ಪುಟ್ಟ ಚಾಟ್‌ ಅಂಗಡಿ ಹುಟ್ಟಿಕೊಳ್ಳುತ್ತದೆ. ಅಲ್ಲೂ ಪಿಡ್ಝಾ ಸಿಗುತ್ತದೆ. ಏಸಿ ರೂಮು, ಚೆಂದದ ಉಡುಗೆ ತೊಟ್ಟ ಸರ್ವರ್‌ ಅಲ್ಲಿರುವುದಿಲ್ಲ ಅನ್ನುವುದನ್ನು ಬಿಟ್ಟರೆ ಪಿಡ್ಝಾ ರುಚಿಗೆ ಕೊರೆಯಿರುವುದಿಲ್ಲ. ಸಹಜವಾಗೇ ಪಾಷ್‌ ಪಿಡ್ಝಾ ಕಾರ್ನರಿನ ಗಿರಾಕಿಗಳ ಸಿಂಹಪಾಲು ಪುಟ್ಟ ಚಾಟ್‌ ಅಂಗಡಿಯತ್ತ ವಾಲುತ್ತಾರೆ. ರಾತ್ರೋರಾತ್ರಿ ಪಿಡ್ಝಾ ಕಾರ್ನರ್‌ ಬಾಗಿಲು ಮುಚ್ಚಿಕೊಂಡು ಹೋಗುತ್ತದೆ.

ಕಳೆದ ಕೆಲವು ದಿನಗಳಲ್ಲಿ ಹಠಾತ್ತನೆ ದಿಡ್ಡಿ ಬಾಗಿಲು ಹಾಕಿದ ಹೊಟೇಲುಗಳ ಪಟ್ಟಿ ನೋಡಿ-ಸಿಎಂಎಚ್‌ ರಸ್ತೆಯ- ಥಾಲಿವಾಲ, ಶೆಝಾಲಿಯಾಸ್‌ ಮತ್ತು ರಸ್ತಾ ಫುಡ್‌, ಜಯನಗರದ- ಫೈರ್‌ ಅಂಡ್‌ ಐಸ್‌, ಚರ್ಚ್‌ಸ್ಟ್ರೀಟಿನ- ಪಾಲ್ಮ್ಸ್‌, ಕಾಟನ್ಸ್‌ ಕಾಂಪ್ಲೆಕ್ಸ್‌ನ- ಸ್ಪೈಸಿ ತಂದೂರ್‌, ಕನ್ನಿಂಗ್‌ಹ್ಯಾಮ್‌ ರಸ್ತೆಯ- ಬ್ರೌನ್‌ ಅಂಡ್‌ ವೈಟ್ಸ್‌ ಹಾಗೂ ಆರ್ಚಿಡ್ಸ್‌ ಅಂಡ್‌ ರೋಸಸ್‌.

ನಮಗೆ ಇಲ್ಲಿನ ಜನರ ಜೇಬು ಅಳೆಯುವುದು ಗೊತ್ತಿರಲಿಲ್ಲ. ಹೈ ಫೈ ಬಾರ್‌ ಅಂಡ್‌ ರೆಸ್ಟೋರೆಂಟ್‌ ಬ್ಯುಸಿನೆಸ್‌ನಲ್ಲಿ ನಮ್ಮದು ಪಳಗಿದ ಕೈ. ಆದರೆ ಬೆಂಗಳೂರಲ್ಲಿ ಅದ್ಧೂರಿತನ ಒಂದರಿಂದಲೇ ಹೊಟೇಲುಗಳನ್ನು ಉಳಿಸಿಕೊಂಡು ಹೋಗುವುದು ಕಷ್ಟ ಎನ್ನುತ್ತಾರೆ ಥಾಲಿವಾಲಾಗೆ ದುಡ್ಡು ಹಾಕಿದ್ದ ಜೈ ಸಿಂಗ್‌.

ಫೈರ್‌ ಅಂಡ್‌ ಐಸ್‌ನ ತ್ರಿಮೂರ್ತಿ ಅವರಿಗೂ ಈ ಉದ್ದಿಮೆಯಲ್ಲಿ ಆದದ್ದು ಕಹಿ ಅನುಭವವೇ. ಅವರನ್ನುತ್ತಾರೆ- ನಾನು ಹೊಟೇಲಿಟ್ಟ ಜಾಗದಲ್ಲಿ ಆಮೇಲೆ ಎರಡು ಸಣ್ಣ ಪುಟ್ಟ ಹೊಟೇಲುಗಳು ಹುಟ್ಟಿದವು. ಆ ಸ್ಪರ್ಧೆಯಲ್ಲೂ ನಾವು ಏಗಿದೆವು. ಆದರೆ, ಬರಬರುತ್ತಾ ಅಣಬೆಗಳಂತೆ ಸಣ್ಣ ಹೊಟೇಲುಗಳೆದ್ದವು. ಐದು ಫುಡ್‌ ಹ್ಯಾಂಗ್‌ಔಟ್‌ಗಳ ಜೊತೆ ಸ್ಪರ್ಧಿಸುವುದು ನನ್ನ ಕೈಲಿ ಸಾಧ್ಯವಾಗಲಿಲ್ಲ. ಬೆಂಗಳೂರಲ್ಲಿ ಊಟದ ವ್ಯಾಪಾರದ ವಿಷಯದಲ್ಲಿ ದೊಡ್ಡದಾಗಿ ಯೋಚಿಸಬೇಕು. ಹೀಗೆ ಯೋಚಿಸಿದ್ದನ್ನು ಚಿಕ್ಕ ಹೊಟೇಲಿನಲ್ಲೇ ಸಾಕಾರಗೊಳಿಸಬೇಕು. ಜನರ ಜೇಬಿಗೆ ಹಿತವಾಗಿರುವ ಹೊಟೇಲುಗಳಿಗಷ್ಟೇ ಇಲ್ಲಿ ಉಳಿಗಾಲ.

ಇವತ್ತು ಕೆಫೆ ಕಾಫಿ ಡೇ, ನಾಗಾರ್ಜುನ ಮತ್ತು ನಂದಿನಿ ಡೀಲಕ್ಸ್‌ ನ ಹೊಟೇಲುಗಳು ಬೆಂಗಳೂರಿನ ಮೂಲೆಮೂಲೆಯಲ್ಲಿ ತಲೆಯೆತ್ತುತ್ತಿವೆ. ಇನ್ನು ಶಾಂತಿ ಸಾಗರಗಳಿಗೆ ಬರವಿಲ್ಲ. ಜೊತೆಗೆ ಮಧ್ಯಮ ವರ್ಗದವರ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಹುಟ್ಟಿಕೊಳ್ಳುತ್ತಿರುವ ಪಿಡ್ಝಾ ಹಟ್‌ಗಳು ದೊಡ್ಡಾತಿದೊಡ್ಡ ಹೊಟೇಲುಗಳ ಗಲ್ಲಾ ಭಣಭಣಗುಟ್ಟಲು ಕಾರಣವಾಗಿವೆ.

ಬೆಂಗಳೂರು ಹೊಟೇಲ್‌ ಗ್ರಾಹಕರ ಸಂಘದ ಅಧ್ಯಕ್ಷ ಪ್ರಭಾಕರ್‌ ರಾವ್‌ ಪ್ರಕಾರ- ಇಲ್ಲಿ ಹೊಟೇಲುಗಳು ಕ್ಲಿಕ್ಕಾಗಬೇಕಾದರೆ ಇರುವ ಮಂತ್ರಗಳೆಂದರೆ... ಚಿಟಿಕೆ ಹೊಡೆಯುವಷ್ಟರಲ್ಲಿ ಸರ್ವಿಸ್‌ ಇರಬೇಕು. ವಿವಿಧ ಪ್ರದೇಶಗಳ ಊಟ ಒಂದೇ ಕಡೆ ಸಿಗುವಂತಿರಬೇಕು (ಆಂಧ್ರ ಶೈಲಿ, ಉತ್ತರ ಭಾರತ, ಚೈನೀಸ್‌, ವೆಸ್ಟರ್ನ್‌ ಮೊದಲಾದ ಥರದವು). ಈ ಊಟಗಳ ದರ ದಕ್ಷಿಣ ಭಾರತದ ಊಟಕ್ಕಿಂತ ತುಂಬಾ ದುಬಾರಿಯಾಗಿರಕೂಡದು.

ಒಂದು ಕಾಲದಲ್ಲಿ ಉಡುಪಿಯ ಮಂದಿ ಎಲ್ಲಾದರೂ ಹೊಟೇಲಿಟ್ಟು ಏಗಬಲ್ಲರು ಎಂಬ ನಾಣ್ಣುಡಿಯೇ ಹುಟ್ಟಿಕೊಂಡಿತ್ತು. ಆದರೀಗ ಅದು ಪೂರ್ತಿ ನಿಜವಲ್ಲ. ಇಲ್ಲಿ ಶುಚಿ- ರುಚಿಯ ತಿನಿಸುಗಳನ್ನು ತ್ವರಿತ ಸರ್ವಿಸಿನ ಮೂಲಕ ಮಿತ ದರದಲ್ಲಿ ಯಾರೇ ಕೊಟ್ಟರೂ ಗಿರಾಕಿಗಳು ಒಪ್ಪಿಕೊಳ್ಳುತ್ತಾರೆ. ಪದೇಪದೇ ಗಿರಾಕಿಗಳು ತನ್ನತ್ತ ಬರುವಂತೆ ಸೆಳೆಯುವ ಹೊಟೇಲುಗಳಿಗಷ್ಟೇ ಈಗ ಬೆಂಗಳೂರಲ್ಲಿ ಉಳಿಗಾಲ. ದಾವಣಗೆರೆ ಬೆಣ್ಣೆ ದೋಸೆ ಮಾರುವ ಪುಟ್ಟ ಹೊಟೇಲಿನ ಮುಂದೆಯೇ ತೆರೆಯಲಾಗುವ ಡೀಲಕ್ಸ್‌ ಹೊಟೇಲಿನವರು ಇಲ್ಲಿ ನೊಣ ಹೊಡೆಯುತ್ತಿರುವುದು ಇದೇ ಕಾರಣಕ್ಕೆ.

Post your views

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X