ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.9ರ ಭಾನುವಾರ ಬೆಳ್ಳಂಬೆಳಗ್ಗೆ ಖಗ್ರಾಸ ಗ್ರಸ್ತಾಸ್ತ ಚಂದ್ರಗ್ರಹಣ

By Staff
|
Google Oneindia Kannada News

ನ.9ರ ಭಾನುವಾರ ಬೆಳ್ಳಂಬೆಳಗ್ಗೆ ಖಗ್ರಾಸ ಗ್ರಸ್ತಾಸ್ತ ಚಂದ್ರಗ್ರಹಣ
ಬೆಳಗ್ಗಿನ ಜಾವ 3.45ಕ್ಕೆ ಗ್ರಹಣ ಸ್ಪರ್ಶ, ಬೆಳಗ್ಗೆ 9.52ಕ್ಕೆ ಗ್ರಹಣ ಮೋಕ್ಷ

ಬೆಂಗಳೂರು: ನವೆಂಬರ್‌ 9ರಂದು ಬೆಳಗ್ಗೆ ಚಂದ್ರಗ್ರಹಣ ಸಂಭವಿಸಲಿದೆ. ಪೂರ್ಣ ಚಂದ್ರಗ್ರಹಣ ಇದಾಗಿದ್ದು, ಗ್ರಹಣ ಸಂದರ್ಭದಲ್ಲಿಯೇ ಚಂದ್ರನು ಅಸ್ತನಾಗುವುದರಿಂದ ಇದು ಗ್ರಸ್ತಾಸ್ತ ಚಂದ್ರಗ್ರಹಣ.

ರಾಜ್ಯದಲ್ಲಿ ಗ್ರಹಣ ಕಾಲದ ಚಟುವಟಿಕೆಯ ಕುರಿತ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ. ಬಾಹ್ಯಾಕಾಶ ವೀಕ್ಷಣೆಯ ಹವ್ಯಾಸ ಇರುವವರು ಗ್ರಹಣ ವೀಕ್ಷಣೆಗೆ ಕುತೂಹಲದಿಂದ ಕಾಯುತ್ತಿದ್ದರೆ- ಸಂಪ್ರದಾಯಸ್ಥರು ಗ್ರಹಣ ಶಾಂತಿ ಹೋಮಕ್ಕೆ ತಯಾರಿ ನಡೆಸುತ್ತಿದ್ದಾರೆ.

ನವೆಂಬರ್‌ 9ರ ಬೆಳಗ್ಗಿನ ಜಾವ ಅಂದರೆ ಭಾನುವಾರದಂದು 3.45ಕ್ಕೆ ಗ್ರಹಣ ಸ್ಪರ್ಶವಾಗುತ್ತದೆ. ಬೆಳಗ್ಗೆ 9.52ಕ್ಕೆ ಗ್ರಹಣ ಮೋಕ್ಷವಾಗಲಿದೆ. 3.45ಕ್ಕೆ ಅರೆ ಛಾಯಾ ಪ್ರದೇಶ ಪ್ರವೇಶಿಸಲಿರುವ ಚಂದ್ರನ ಪೂರ್ಣ ಛಾಯಾ ಪ್ರದೇಶದ ಪ್ರವೇಶ ಆರಂಭವಾಗುವುದು ಬೆಳಗ್ಗೆ 6.36ಕ್ಕೆ. ಸಂಪೂರ್ಣ ಚಂದ್ರಗ್ರಹಣದ ಸಂದರ್ಭದಲ್ಲಿ ಚಂದ್ರನು ತಾಮ್ರದ ಗೋಲದಂತೆ ಹೊಳೆಯುತ್ತಾನೆ. ಆಕಾಶ ಶುಭ್ರವಾಗಿದ್ದಲ್ಲಿ ಈ ಅಪೂರ್ವ ದೃಶ್ಯವನ್ನು ನೋಡಬಹುದು.

ಚಂದ್ರಗ್ರಹಣದ ಆರಂಭಿಕ ಹಂತಗಳು ಭಾರತದ ಎಲ್ಲ ಕಡೆಯಲ್ಲಿಯೂ ಕಾಣಸಿಗುತ್ತದೆ. ಆದರೆ ಸಂಪೂರ್ಣ ಗ್ರಹಣದ ದೃಶ್ಯ ಪಂಜಾಬ್‌, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ದೆಹಲಿ, ಉತ್ತರ ಪ್ರದೇಶ, ರಾಜಸ್ತಾನ, ಗುಜರಾತ್‌ ಮತ್ತು ಮುಂಬೈಯಲ್ಲಿ ಕಂಡು ಬರುತ್ತದೆ.

ಗ್ರಹಣ ಕುರಿತು ಶಾಸ್ತ್ರ ಏನು ಹೇಳುತ್ತದೆ ?:
ಗ್ರಹಣ ಸಂದರ್ಭದಲ್ಲಿ ವಿಶೇಷವಾಗಿ ಭರಣಿ ನಕ್ಷತ್ರ ಮೇಷ ರಾಶಿಯವರು ಅನಿಷ್ಟ ನಿವಾರಣೆಗಾಗಿ ಸರ್ವಗ್ರಹಣ ನಿಯಾಮಕ ಹೋಮ ಹಾಗೂ ವಿಘ್ನ ನಿವಾರಕ ನರಸಿಂಹ ಹೋಮ, ಜಪ, ಪೂಜೆ, ಸತ್ಪಾತ್ರ ದಾನ ಮಾಡಬೇಕು.

ಶನಿವಾರ ಮಧ್ಯಾಹ್ನ 3.04ಕ್ಕೆ ವೇದಾರಂಭವಾಗಲಿದ್ದು, 3 ಗಂಟೆಗೆ ಮುಂಚಿತವಾಗಿ ಭೋಜನಾದಿಗಳನ್ನು ಮುಗಿಸಬೇಕು. ಮತ್ತು ಮರುದಿನ ಬೆಳಗ್ಗೆ ಚಂದ್ರಗ್ರಸ್ತಾಸ್ತನಾಗುವುದರಿಂದ ಸಂಜೆ ಶುಭ್ರ ಚಂದ್ರನನ್ನು ಕಂಡು ಸ್ನಾನ-ಭೋಜನ ಮಾಡಬೇಕು. ಅಶಕ್ತರು, ಬಾಣಂತಿಯರು, ಗರ್ಭಿಣಿಯರು, ವೃದ್ಧರು ಹಾಗೂ ಬಾಲಕರು ವೇದ ಕಾಲದಲ್ಲಿ ಹಾಲು ಹಣ್ಣುಗಳನ್ನು ಸೇವಿಸಬಹುದು.

ಮಿಥುನ, ಕರ್ಕಾಟಕ, ವೃಶ್ಚಿಕ, ಕುಂಭ ರಾಶಿಯವರಿಗೆ ಗ್ರಹಣದಿಂದ ಶುಭ ಫಲ. ಮೀನ, ತುಲಾ, ಸಿಂಹ, ಧನು, ಮೇಷ, ಮಕರ ರಾಶಿಯವರಿಗೆ ಅನಿಷ್ಟ ಫಲವಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X