ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣುರಿ- ತಲೆನೋವೂ ಮತ್ತು ತಣ್ಣನೆ ಆಫೀಸಿನ ಪರಿಸರವೂ...

By Staff
|
Google Oneindia Kannada News

ಕಣ್ಣುರಿ- ತಲೆನೋವೂ ಮತ್ತು ತಣ್ಣನೆ ಆಫೀಸಿನ ಪರಿಸರವೂ...
ಟಾಟಾ ಎನರ್ಜಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಅಧ್ಯಯನದ ವರದಿ ಇಲ್ಲಿದೆ.

ಆಫೀಸಿನಲ್ಲಿ ಕೆಲಸ ಮಾಡುತ್ತಾ ಮಾಡುತ್ತಾ ಕಣ್ಣುರಿ ಶುರುವಾಗುತ್ತಿದೆಯೇ? ಸಂಜೆಯಾಗುತ್ತಲೇ ವಿಪರೀತ ಸುಸ್ತು ಅಂತ ಅನಿಸುತ್ತಾ ? ತಲೆನೋವು ಬೇರೆ ಕಾಡುತ್ತಾ ?

ವಯಸ್ಸಾಯಿತು. ಆಫೀಸಿನಲ್ಲಿ ಕತ್ತೆ ದುಡಿತ, ಮನೆಯಲ್ಲೂ ಜವಾಬ್ದಾರಿಗಳು. ಇನ್ನು ಆರೋಗ್ಯ ಕೆಡದೆ ಏನು ? ಉಹುಂ, ನಿಮ್ಮ ದೇಹದ ಕಿರಿಕಿರಿಗೆ ಈ ಸಬುಬು ಸರಿಯಲ್ಲ . ಅಸಲಿಗೆ ಇದು ಆರೋಗ್ಯದ ಅಥವಾ ದೇಹದ ಸಮಸ್ಯೆ ಅಲ್ಲ. ಇದಕ್ಕೆಲ್ಲಾ ಕಾರಣ ನೀವು ಕೆಲಸ ಮಾಡುವ ಸ್ಥಳದ ಪರಿಸರ. ಆಫೀಸಿನಲ್ಲಿ ಸಾಕಷ್ಟು ಗಾಳಿ ಬೀಸದೇ ಇರುವುದೇ ಈ ವರ್ಕ್‌ ಲೋಡ್‌ ಕಾಯಿಲೆಗಳಿಗೆ ಕಾರಣ.

ಬೆಂಗಳೂರಿನ ಏರ್‌ಕಂಡಿಷನ್‌ ಆಫೀಸುಗಳಲ್ಲಿ ಕಣ್ಣುರಿ, ತಲೆನೋವು, ಸುಸ್ತು ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿವೆಯಂತೆ. ಈ ಬಗ್ಗೆ ಟಾಟಾ ಎನರ್ಜಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌(ಟೆರಿ) ಅಧ್ಯಯನ ನಡೆಸಿದ್ದು ವರದಿಯನ್ನು ಬಿಡುಗಡೆ ಮಾಡಿದೆ.

ವರದಿಯ ಪ್ರಕಾರ-
ಆಫೀಸುಗಳಲ್ಲಿ ದೊಡ್ಡ ದೊಡ್ಡ ಗಾಜಿನ ಕಿಟಕಿಗಳಿದ್ದರೂ, ಅವುಗಳನ್ನು ಮುಚ್ಚಿ ಎಸಿ ಹಾಕಿ ತಂಪು ಗಾಳಿ ಬರಿಸುವ ಹಿಕ್ಮತ್ತಿನಿಂದಾಗಿ ಆಫೀಸಿನ ಖೋಲಿಯಾಳಗೆ ಸಾಕಷ್ಟು ಗಾಳಿ ಓಡಾಡುತ್ತಿಲ್ಲ. ಅಂದಹಾಗೆ, ಟೆರಿ ಅಧ್ಯಯನ ನಡೆಸಿದ್ದು ಬೆಂಗಳೂರಿನ ಗಾರ್ಮೆಂಟ್‌ ಫ್ಯಾಕ್ಟರಿಗಳಲ್ಲಿ ಅಲ್ಲ. ಅತ್ಯಂತ ನಾಜೂಕಿನ ಬಿಲ್ಡಿಂಗುಗಳಾದ ಹಲವು ಮಾಹಿತಿ ತಂತ್ರಜ್ಞಾನ ಆಫೀಸುಗಳಲ್ಲಿ. ಈ ಕಚೇರಿಗಳಲ್ಲಿ ಉದ್ಯೋಗಿಗಳನ್ನು ಮಾತನಾಡಿಸಿದಾಗ ಅವರು, ತಾವು ಸಂಜೆ ಹೊತ್ತಿಗೆ ನಾಸಿಯಾ, ತಲೆನೋವು, ಉಸಿರುಗಟ್ಟುವಿಕೆಯನ್ನು ಅನುಭವಿಸುತ್ತಿರುವುದಾಗಿ ಹೇಳಿಕೊಂಡರು.

ಕೆಲವು ಕಚೇರಿಗಳಲ್ಲಿ ಉದ್ಯೋಗಿಗಳು ಆಗಾಗ ಕಾಯಿಲೆ ಬೀಳುವುದೂ ಕಂಡು ಬಂತು. ಈ ಗಾಳಿ ಸಮಸ್ಯೆಗೆ ಕಾರಣ ಆಫೀಸಿನೊಳಗಿನ ಕಾರ್ಪೆಟ್ಟುಗಳು, ಟೈಲ್ಸ್‌ಗಳಲ್ಲಿ ಜಮೆಯಾಗುವ ನೀರ ಹನಿಗಳು, ಮರದ ಕೆತ್ತನೆಗಳನ್ನು ಮಾಡುವಾಗ ಸಿಡಿಯುವ ಧೂಳು ಎಲ್ಲಕ್ಕಿಂತ ಮುಖ್ಯವಾಗಿ ಹೊರಗಿನಿಂದ ಸ್ವಚ್ಛಗಾಳಿ ಬಾರದಂತೆ ತಡೆಯುವ ನಿಯಂತ್ರಿತ ಬಾಗಿಲುಗಳಿಂದಾಗಿ ಕಚೇರಿ ಕೋಣೆ ಹವಾರಹಿತವಾಗುತ್ತವೆಯಂತೆ.

ದೊಡ್ಡ ದೊಡ್ಡ ಕಿಟಕಿಗಳಿರುವ ಆಫೀಸಿನಲ್ಲಿ , ಎ. ಸಿ. ಗೋಸ್ಕರ ಕಿಟಕಿ ಬಾಗಿಲು ತೆರೆಯದೇ ಇರುವುದರಿಂದ ಕಿಟಕಿಯನ್ನು ಅಳವಡಿಸಿರುವ ಉದ್ದೇಶವೇ ನೆರವೇರುವುದಿಲ್ಲ. ಕಚೇರಿಯಲ್ಲಿ ಕೆಲಸ ಮಾಡುವವರ ಸಂಖ್ಯೆಯನ್ನು ಗಮನಿಸಿಕೊಂಡು ಪ್ರತಿ ಮಾಳಿಗೆಯಲ್ಲಿಯೂ ಒಂದೆರಡು ಕಿಟಕಿಗಳನ್ನಾದರೂ ತೆರೆದಿಡುವುದು ಅತ್ಯಗತ್ಯ.

ಇದಲ್ಲದೆ ಆಫೀಸಿನಲ್ಲಿ ಹಗಲು ಹೊತ್ತಿನಲ್ಲಿಯೂ ನಿರಂತರವಾಗಿ ಉರಿಯುವ ವಿವಿಧ ನಮೂನೆಯ ಲೈಟುಗಳು, ಆಸನ ವ್ಯವಸ್ಥೆ ಉದ್ಯೋಗಿಯ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು ಎಂದು ಟೆರಿ ಹೇಳಿದೆ.

ಅಂದರೆ ಇನ್ನು ಮೇಲೆ ಎ.ಸಿ. ಆಫೀಸಿನ ಬಗ್ಗೆ ಹೆಮ್ಮೆ ಪಡುವಂತಿಲ್ಲ. ಬದುಕಿಗೆ ನಿಸರ್ಗ ಸಹಜ ಗಾಳಿ ಒಂದಿಷ್ಟಾದರೂ ಬೇಕೇ ಬೇಕು.

ಕಮಾನ್‌, ಕಿಟಕಿಗಳನ್ನು ತೆರೆದಿಡಿ. ಸ್ವಚ್ಛ ಗಾಳಿಗೆ ಮುಖವೊಡ್ಡಿ ಫ್ರೆಶ್‌ ಆಗಿ !

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X