ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ ಕೊಡುಗೆ-ಗ್ರಾಮೀಣ ಕೃಪಾಂಕ ನೌಕರರಿಗೆ ಮತ್ತೆ ಕೆಲಸ

By Staff
|
Google Oneindia Kannada News

ರಾಜ್ಯೋತ್ಸವ ಕೊಡುಗೆ-ಗ್ರಾಮೀಣ ಕೃಪಾಂಕ ನೌಕರರಿಗೆ ಮತ್ತೆ ಕೆಲಸ
‘ನವೆಂಬರ್‌ ಮೊದಲ ವಾರದಲ್ಲಿ ನೌಕರಿಗೆ ಸೇರಿಸಿಕೊಳ್ಳುವ ಆದೇಶ’

ಬೆಂಗಳೂರು : ಸುಪ್ರಿಂಕೋರ್ಟ್‌ ಆದೇಶದಂತೆ ಸದ್ಯಕ್ಕೆ ಕೆಲಸ ಕಳೆದುಕೊಂಡಿರುವ 5014 ಗ್ರಾಮೀಣ ಕೃಪಾಂಕ ನೌಕರರಿಗೆ ರಾಜ್ಯೋತ್ಸವದ ಉಡುಗೊರೆಯಾಗಿ ಮತ್ತೆ ಸರ್ಕಾರಿ ನೌಕರಿ ಕೊಡುವುದಾಗಿ ಸರ್ಕಾರ ಹೇಳಿದೆ.

ಕೃಂಪಾಕದ ಕಾರಣ ಕೆಲಸ ಕಳೆದುಕೊಂಡಿರುವ ನೌಕರರಿಗೆ ನವೆಂಬರ್‌ ಮೊದಲ ವಾರದೊಳಗೆ ಸರ್ಕಾರಿ ಕೆಲಸ ಕೊಡಲಾಗುವುದು. ಆದರೆ ಈ ಹಿಂದೆ ಮಾಡಿದ ಕೆಲಸದ ಅವಧಿಯನ್ನು ಹಿರಿತನ ನಿರ್ಧಾರಕ್ಕೆ ಹಾಗೂ ಬಡ್ತಿ ಕೊಡಲು ಪರಿಗಣಿಸಲಾಗುವುದಿಲ್ಲ. ಇದು ಹೊಸ ನೇಮಕಾತಿಯೂ ಅಲ್ಲ, ಹಳೆಯ ಸೇವೆಯ ಮುಂದುವರಿಕೆಯೂ ಅಲ್ಲ ಎಂದು ಕಾನೂನು ಸಚಿವ ಡಿ.ಬಿ.ಚಂದ್ರೇಗೌಡ ಸೋಮವಾರ (ಅ. 27) ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಆರೋಗ್ಯ ಸಚಿವ ಕಾಗೋಡು ತಿಮ್ಮಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌ ಕೂಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಕೃಪಾಂಕದ ಕಾರಣ ಕೆಲಸ ಕಳೆದುಕೊಂಡವರಿಗೆ ಮತ್ತೆ ಸರ್ಕಾರಿ ಕೆಲಸ ಕೊಡುವ ಅಂತಿಮ ಅಧಿಸೂಚನೆ ಸಿದ್ಧವಾಗಿದೆ. ಸದ್ಯದಲ್ಲೇ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಧಿಸೂಚನೆಗೆ ಹಸಿರು ನಿಶಾನೆ ಪಡೆಯಲಾಗುವುದು ಎಂದು ಸಚಿವರೆಲ್ಲರೂ ಹೇಳಿದರು.

ಆಗಸ್ಟ್‌ 28ನೇ ತಾರೀಕು ಕರಡು ಅಧಿಸೂಚನೆ ಸಿದ್ಧವಾಗಿತ್ತು. ಆದರೆ 208 ಆಕ್ಷೇಪಗಳು ವ್ಯಕ್ತವಾದ ಕಾರಣ ಸೂಕ್ತ ತಿದ್ದುಪಡಿ ತಂದು, ಅಂತಿಮ ಅಧಿಸೂಚನೆ ಸಿದ್ಧಪಡಿಸಲಾಗಿದೆ ಎಂದು ಚಂದ್ರೇಗೌಡ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಲ್ಲಿ ಆಗುತ್ತಿರುವ ವಿಳಂಬಕ್ಕೆ ಕಾರಣ ಕೊಟ್ಟರು.

ಕೆಲಸ ಕಳೆದುಕೊಂಡಿರುವವರ ಪೈಕಿ 3489 ಶಿಕ್ಷಕರೇ ಇದ್ದಾರೆ. ಈಗ ಅನೇಕರು ಹತಾಶರಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ತಪ್ಪು ನಿರ್ಧಾರ. ಆತುರದಲ್ಲಿ ಚಳವಳಿ, ಪ್ರತಿಭಟನೆ ನಡೆಸುವವರೂ ಹೆಚ್ಚಾಗುತ್ತಿದ್ದಾರೆ. ಇದು ತರವಲ್ಲ. ಯಾವುದೇ ಕಾರಣಕ್ಕೂ ಪ್ರಾಣ ಕಳೆದುಕೊಳ್ಳಬೇಡಿ. ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟ ಕಾರಣ ರಾಜ್ಯೋತ್ಸವದ ಸಂದರ್ಭದಲ್ಲಿ ಕೆಲಸವನ್ನು ಮತ್ತೆ ಕೊಡಿಸಲು ಸಾಧ್ಯವಾಗುತ್ತಿದೆ. ಇದು ಕೇವಲ ಮಾನವೀಯ ನೆಲೆಗಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಎಂದು ಸಚಿವರು ನೌಕರರಿಗೆ ಕಿವಿಮಾತು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X