ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿನೌಕರರ ಅನುಕೂಲಕ್ಕೆ ತಕ್ಕಂತೆ ಕೆಲಸದ ಟೈಂ ಹೊಂದಾಣಿಕೆ

By Staff
|
Google Oneindia Kannada News

ಸರ್ಕಾರಿನೌಕರರ ಅನುಕೂಲಕ್ಕೆ ತಕ್ಕಂತೆ ಕೆಲಸದ ಟೈಂ ಹೊಂದಾಣಿಕೆ
ಮುಂದಿನ ವರ್ಷದಾರಂಭದಲ್ಲಿ ‘ಬೆಂಗಳೂರು ಒನ್‌’ ಪೋರ್ಟಲ್‌ ಯೋಜನೆ ಜಾರಿಗೆ

ಬೆಂಗಳೂರು : ‘ಅಂಡರ್‌ ಸೆಕ್ರೆಟರಿ’ ಹಂತದ ಸರ್ಕಾರಿ ನೌಕರರವರೆಗೆ ಅವರ ಅನುಕೂಲಕ್ಕೆ ತಕ್ಕಂತೆ ಕೆಲಸದ ಅವಧಿಯನ್ನು ಹೊಂದಿಸಿಕೊಳ್ಳುವಂಥಾ ಪ್ರಾಯೋಗಿಕ ಯೋಜನೆಯನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ.

ವಿಶ್ವ ಬ್ಯಾಂಕ್‌ ಹಾಗೂ ಐಎಂಎಫ್‌ (ಇಂಟರ್‌ನ್ಯಾಷನಲ್‌ ಮಾನಿಟರಿ ಫಂಡ್‌) ನಲ್ಲಿ ನೌಕರರು ತಮ್ಮ ಅಗತ್ಯಕ್ಕೆ ತಕ್ಕಂತೆ ಕಚೇರಿಗೆ ಬಂದು ಹೋಗುವ ಸವಲತ್ತಿದೆ. ತಿಂಗಳಿಗೆ ಎಷ್ಟು ತಾಸು ಕೆಲಸ ಮಾಡಬೇಕೋ ಅದನ್ನು ಪೂರೈಸಿದರೆ ಆಯಿತು. ಉದಾಹರಣೆಗೆ ಒಂದು ದಿನ ಕೇವಲ ನಾಲ್ಕು ತಾಸು ಕೆಲಸ ಮಾಡಿರುತ್ತಾರೆ ಎಂದಿಟ್ಟುಕೊಳ್ಳಿ. ಈ ಕಡಿತ ಅವಧಿಯನ್ನು ಒಂದು ತಿಂಗಳೊಳಗಾಗಿ ಹೆಚ್ಚುವರಿ ಕೆಲಸ ಮಾಡಿ ತುಂಬಬೇಕಾಗುತ್ತದೆ. ಈ ನೌಕರ ಸ್ನೇಹಿ ಪ್ರಾಯೋಗಿಕ ಯೋಜನೆ ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ಕರ್ನಾಟಕ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಕೆ.ಮಿಶ್ರ ಹೇಳಿದರು.

ನವೆಂಬರ್‌ 13ರಿಂದ 15ನೇ ತಾರೀಕಿನವರೆಗೆ ಚೆನ್ನೈನಲ್ಲಿ ನಡೆಯಲಿರುವ 7ನೇ ರಾಷ್ಟ್ರೀಯ ಇ- ಆಡಳಿತ ಸಮಾವೇಶಕ್ಕೆ ಪೂರ್ವಭಾವಿ ತಯಾರಿ ನಡೆಸುವ ಸಲುವಾಗಿ ಬೆಂಗಳೂರಲ್ಲಿ ನಡೆಯುತ್ತಿರುವ ಇ- ಆಡಳಿತ ಕಮ್ಮಟದಲ್ಲಿ ಭಾಗವಹಿಸಿ ಮಿಶ್ರ ಸೋಮವಾರ (ಅ. 20) ಪ್ರಾಸ್ತಾವಿಕ ಭಾಷಣ ಮಾಡಿದರು.

ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಹಾಗೂ ಮೈಕ್ರೋಸಾಫ್ಟ್‌ ನಡುವೆ 2002 ನವೆಂಬರ್‌ನಲ್ಲಾದ ಮಾತುಕತೆ ಪ್ರಕಾರ ನಾಗರಿಕ ಪೋರ್ಟಲ್‌ ಯೋಜನೆ ‘ಬೆಂಗಳೂರು ಒನ್‌’ ಜಾರಿಗೆ ಬರಬೇಕಿತ್ತು. ಆದರೆ ಅನೇಕ ತೊಂದರೆಗಳ ಕಾರಣ ಅದು ಸಾಧ್ಯವಾಗಿಲ್ಲ. ಮುಂದಿನ ವರ್ಷದಾರಂಭದಲ್ಲಿ ಇದು ಸಾಧ್ಯವಾಗಲಿದೆ ಎಂದರು.

ಭೂದಾಖಲೆಗಳ ಕಂಪ್ಯೂಟರೀಕರಣ ಯೋಜನೆ ‘ಭೂಮಿ’ ಸಾಕಷ್ಟು ಯಶಸ್ವಿಯಾಗಿದೆ. ಇದಲ್ಲದೆ ಇ- ಆಡಳಿತದ ಹಾದಿಯಲ್ಲಿರುವ ಇತರೆ ಕೆಲಸಗಳು ಆಂಧ್ರಪ್ರದೇಶದ ‘ಇ- ಸೇವೆ’ ಯೋಜನೆಯನ್ನೂ ಮೀರಿಸುವಂತೆ ರೂಪುಗೊಳ್ಳುತ್ತಿವೆ. ‘ಬೆಂಗಳೂರು ಒನ್‌’ ಜಾರಿಗೆ ಬಂದ ಮೇಲೆ ಅದರ ಉಪಯೋಗ ಗೊತ್ತಾಗುತ್ತದೆ ಎಂದು ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X