ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸನಾದರೆ ಒಳಬಾಳು, ಕಾವ್ಯ ಹುಲುಸು ನೋಡು -ಕಾಯ್ಕಿಣಿ

By Staff
|
Google Oneindia Kannada News

ಹಸನಾದರೆ ಒಳಬಾಳು, ಕಾವ್ಯ ಹುಲುಸು ನೋಡು -ಕಾಯ್ಕಿಣಿ
ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಕೃತಿ ಶಿಬಿರ ಪ್ರಾರಂಭ

ಹೆಗ್ಗೋಡು : ಒಳಬಾಳನ್ನು, ಮನಸ್ಸನ್ನು ಸರಿ ಮಾಡಿಕೊಂಡರೆ ಮಾತ್ರ ಒಳ್ಳೆಯ ಕವಿತೆ ಬರೆಯುವುದು ಸಾಧ್ಯ ಎಂದು ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ (ಅ. 17) ನೀನಾಸಂ ಸಭಾಂಗಣದಲ್ಲಿ ನಡೆದ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮಕಾಲೀನ ಕನ್ನಡ ಕಾವ್ಯದ ಬಗ್ಗೆ ಕಾಯ್ಕಿಣಿ ಮಾತಾಡಿದರು. ನಮ್ಮ ಸುತ್ತಲಿನ ಎಲ್ಲದರ ಬಗ್ಗೆ ಮುಕ್ತ ಮನಸ್ಸಿನಿಂದ ಸ್ಪಂದಿಸುವ , ಮತ್ತೊಬ್ಬರ ಬಗ್ಗೆ ಆಸಕ್ತಿ ಹಾಗೂ ಪ್ರೀತಿ ತಳೆಯುವ ಅತಃಕರಣ ಕಾವ್ಯಕ್ಕೆ ಬೇಕು. ಒಳಬಾಳು ಸರಿ ಇಲ್ಲದಿದ್ದರೆ ಕಾವ್ಯವೂ ಒಂದೆರಡು ಹೊತ್ತಿನ ಊಟವುಳ್ಳವರ ಪಾಲಿನ ಆಟವಾಗಿ ಹೋಗುತ್ತದೆ ಎಂದರು.

ಇವತ್ತು ಕಾವ್ಯದ ಹೂರಣದ ಚರ್ಚೆಗಿಂತ ಹೆಚ್ಚಾಗಿ ಕವಿತೆ ಪ್ರಕಟವಾದದ್ದರ ಬಗ್ಗೆ, ಅದಕ್ಕೆ ಸಿಕ್ಕ ಬಹುಮಾನಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಬರೆವ ಕವಿಗಳಿಗೋ ಪ್ರಕಟಿಸುವ ಧಾವಂತ. ನಿಜವಾದ ಕಾವ್ಯಕ್ಕೆ ಬೇಕಾದ ಮನಸ್ಥಿತಿ ಮತ್ತು ಚಟುವಟಿಕೆಯನ್ನು ಅರ್ಥಹೀನ ಚರ್ಚೆಗಳು ಹಾಳುಗೆಡವುತ್ತಿವೆ. ಪ್ರಕಟಿಸುವ ಧಾವಂತದಲ್ಲಿ ಹುಟ್ಟುವ ಕಾವ್ಯ ಬರಿ ಕ್ರಿಯಾಪದಗಳ ಗುಚ್ಛವಾಗಿಯೇ ವಿಜೃಂಭಿಸುತ್ತಿದೆ ಎಂದು ಕಾಯ್ಕಿಣಿ ವಿಷಾದಿಸಿದರು.

2002ನೇ ಇಸವಿಯ ಬಿ.ಎಂ.ಶ್ರೀ ಪ್ರಶಸ್ತಿಯನ್ನು ಕವಿ ವಸಂತ ಬನ್ನಾಡಿ ಅವರ ಮೊದಲ ಕವನ ಸಂಕಲನ ‘ಕಡಲಿನ ಧ್ಯಾನ’ಕ್ಕೆ ಗೆ ನೀಡಲಾಯಿತು. ಜ್ಞಾನಪೀಠ ಪುರಸ್ಕೃತ ಯು.ಆರ್‌.ಅನಂತಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು. ವಿಮರ್ಶಕ ಟಿ.ಪಿ.ಅಶೋಕ್‌, ಬನ್ನಾಡಿ ಅವರ ಕೆಲವು ಕವಿತೆಗಳನ್ನು ಓದಿದರು. ಕೆ.ವಿ.ಸುಬ್ಬಣ್ಣ, ಡಾ. ಚಂದ್ರಶೇಖರ ಕಂಬಾರ, ಸಮೀಕ್‌ ಬ್ಯಾನರ್ಜಿ, ಸುಧೇಷ್ಣಾ ಬ್ಯಾನರ್ಜಿ, ಕೆ.ವಿ.ಅಕ್ಷರ ಮೊದಲಾದವರು ವೇದಿಕೆ ಮೇಲಿದ್ದರು.

ವಾಸುದೇವ್‌ ಕಲೆ ಬಲೆ : ಶುಕ್ರವಾರ ಶುರುವಾದ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಕಲಾವಿದ ವಾಸುದೇವ್‌ ಜತೆಗಿನ ‘ಮಾತುಕತೆ’ ಕಳೆಗಟ್ಟಿತ್ತು. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ , ಲಂಕೇಶ, ವೈಎನ್ಕೆ, ಗಿರೀಶ್‌ ಕಾರ್ನಾಡ್‌, ಬೇಂದ್ರೆ, ಜಿ.ಬಿ.ಜೋಷಿ, ಕುರ್ತಕೋಟಿ, ಅನಂತಮೂರ್ತಿ, ಕಂಬಾರರ ಜೊತೆಗಿನ ಹಳೆಯ ಕ್ಷಣಗಳನ್ನು ವಾಸುದೇವ್‌ ಸ್ಮರಿಸಿಕೊಂಡರು.ಗೋಷ್ಠಿಯಲ್ಲಿ ವಾಸುದೇವ್‌ ಅವರ ಚಿತ್ರ ಮತ್ತು ಕಾರ್ವಿಂಗ್‌ಗಳ ಪ್ರದರ್ಶನವೂ ಇತ್ತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X