ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಟ್ಟದೂರು ಗೊಮ್ಮಟೇಶ್ವರನಿಗೆ ಗಣಿಗಾರಿಕೆ ಮಂದಿಯಿಂದ ಹಳ್ಳ !

By Staff
|
Google Oneindia Kannada News

ಬೆಟ್ಟದೂರು ಗೊಮ್ಮಟೇಶ್ವರನಿಗೆ ಗಣಿಗಾರಿಕೆ ಮಂದಿಯಿಂದ ಹಳ್ಳ !
ಪ್ರಾಚೀನ ಜಿನ ಕೇಂದ್ರದಲ್ಲಿ ಕೇಂದ್ರದ ಕಾಯ್ದೆಗಳ ಉಲ್ಲಂಘನೆ, ಅವ್ಯಾಹತ ಅಕ್ರಮ ಗಣಿಗಾರಿಕೆ

  • ದಟ್ಸ್‌ ಕನ್ನಡ ಬ್ಯೂರೊ
ಮೈಸೂರಿನ ಹುಣಸೂರು ತಾಲ್ಲೂಕಿನ ಬೆಟ್ಟದೂರಿನಲ್ಲಿರುವ ಗೊಮ್ಮಟೇಶ್ವರ ಮೂರ್ತಿಯ ಅಸ್ತಿತ್ವಕ್ಕೆ ಸಂಚಕಾರ ಬಂದಿದೆ. ಬೆಟ್ಟದೂರಿನ ಗೊಮ್ಮಟಗಿರಿ ದೇವಸ್ಥಾನದ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಚಾರಿತ್ರಿಕ ಸ್ಥಳವಾದ ಗೊಮ್ಮಟೇಶ್ವರ ಮೂರ್ತಿಗೆ ಅಪಾಯವೊದಗಿದೆ.

ಗೊಮ್ಮಟಗಿರಿ ಒಂದು ಪುರಾತನ ಜಿನ ಕೇಂದ್ರ. 50 ಮೀಟರ್‌ ಎತ್ತರದಲ್ಲಿರುವ 16 ಅಡಿ ಎತ್ತರದ ಗೊಮ್ಮಟೇಶ್ವರನೇ ಈ ಗಿರಿಯ ಪ್ರಮುಖ ಆಕರ್ಷಣೆ. ಹಾಸನದ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರ ಸ್ಥಾಪನೆಯಾದ ಸಂದರ್ಭದಲ್ಲಿಯೇ ಗೊಮ್ಮಟಗಿರಿಯಲ್ಲಿಯೂ ಗೊಮ್ಮಟೇಶ್ವರನ ಸ್ಥಾಪನೆಯಾಯಿತು. ಇತ್ತೀಚೆಗೆ ಈ ಬೆಟ್ಟಪ್ರದೇಶದಲ್ಲಿ ಸುಮಾರು 30-40 ಬಡ ಕುಟುಂಬಗಳು ಅಕ್ರಮವಾಗಿ ಕಲ್ಲು ಒಡೆಯುವ ಕೆಲಸವನ್ನು ಶುರು ಮಾಡಿವೆ. ಗೊಮ್ಮಟೇಶ್ವರ ವಿಗ್ರಹದ ಸುತ್ತ ಮುತ್ತಲಿನ ಪ್ರದೇಶವನ್ನು ರಕ್ಷಿತ ಚಾರಿತ್ರಿಕ ಪ್ರದೇಶ ಎಂದು ಪರಿಗಣಿಸಿದ್ದರೂ ಕಲ್ಲು ಒಡೆಯುವ ಮಂದಿಗೆ ಈ ವಿಷಯ ಗೊತ್ತಿಲ್ಲ.

ಗೊಮ್ಮಟಗಿರಿ ದೇವಸ್ಥಾನದ ಆಡಳಿತ ಮಂಡಳಿಯವರು ಈ ಅಕ್ರಮ ಗಣಿಗಾರಿಕೆಯ ವಿರುದ್ಧ ಸಾಕಷ್ಟು ಬಾರಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಈ ದೇವಸ್ಥಾನದ ಸಂರಕ್ಷಣೆಗಾಗಿ ದೇವಳದ ಆಡಳಿತ ಮಂಡಳಿ ಸರಕಾರದ ಮೊರೆ ಹೊಕ್ಕಿದೆ.

ಸರಕಾರಕ್ಕೆ ಇಲ್ಲಿ ನಡೆಯುತ್ತಿರುವ ಕಲ್ಲು ಒಡೆಯುವ ಕೆಲಸವನ್ನು ನಿಲ್ಲಿಸುವಂತೆ ಕೋರಿ ಸಾಕಷ್ಟು ಬಾರಿ ದೂರು ಸಲ್ಲಿಸಿದ್ದರೂ ಏನೂ ಉಪಯೋಗ ಆಗಿಲ್ಲ ಎಂದು ದೇವಸ್ಥಾನದ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಡಿ. ಪ್ರಭಾ ಮಂಡಲ್‌ ಹೇಳುತ್ತಾರೆ.

ಕಲ್ಲು ಒಡೆಯುವುದಕ್ಕೋಸ್ಕರ ಪ್ರತಿ ದಿನ ಡೈನಮೈಟ್‌ ಸಿಡಿಸಲಾಗುತ್ತಿದೆ. ಕೇಂದ್ರ ಸರಕಾರದ ಆದೇಶದ ಪ್ರಕಾರ ಚಾರಿತ್ರಿಕ ಪ್ರದೇಶದಿಂದ ಸುಮಾರು ಐದು ಕಿಲೋಮೀಟರ್‌ ಆಸುಪಾಸಿನಲ್ಲಿ ಡೈನಮೈಟ್‌ ಸಿಡಿಸುವುದು, ಕಲ್ಲು ಒಡೆಯುವುದು ಅಪರಾಧ. ಆದರೆ ಕೇಂದ್ರದ ಆದೇಶ ಗೊಮ್ಮಟಗಿರಿಯಲ್ಲಿ ಪಾಲನೆಯಾಗುತ್ತಿಲ್ಲ ಎಂಬುದು ಪ್ರಭಾ ದೂರು.

ಈ ವಿಷಯವನ್ನು ಗಣಿಗಾರಿಕೆ ವಿಭಾಗಾಧಿಕಾರಿಗಳ ಗಮನಕ್ಕೆ ತರುವುದಾಗಿ ಗಣಿಗಾರಿಕೆ ಸಚಿವ ಬಿ. ಮುನಿಯಪ್ಪ ಭರವಸೆ ನೀಡುತ್ತಾರೆ. ಸದ್ಯದಲ್ಲಿಯೇ ಪರಿಣತರ ತಂಡವೊಂದು ಗೊಮ್ಮಟಗಿರಿಗೆ ಭೇಟಿ ನೀಡಿ ಕಲ್ಲು ಒಡೆಯುವ ಕೆಲಸ ನಡೆಯುತ್ತಿರುವ ಜಾಗವನ್ನು ಹಾಗೂ ಗೊಮ್ಮಟೇಶ್ವರ ಮೂರ್ತಿಯನ್ನು ವೀಕ್ಷಿಸಲಿದೆ.

ಗೊಮ್ಮಟೇಶ್ವರನಿಗೆ ನೆಮ್ಮದಿ ಸಿಗಲಿ !

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X