• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವಮೊಗ್ಗ ಸರ್ಕಾರಿ ಶಾಲೆಗೆ 150, ಶಿಥಿಲವಾಗಿ ನಡುಗುತಿದೆ ನೋಡು

By Staff
|

ಶಿವಮೊಗ್ಗ ಸರ್ಕಾರಿ ಶಾಲೆಗೆ 150, ಶಿಥಿಲವಾಗಿ ನಡುಗುತಿದೆ ನೋಡು

ಕಲಿತ ಶಾಲೆಯ ಉದ್ಧರಿಸಲು ಹಳೇ ವಿದ್ಯಾರ್ಥಿಗಳ ಸಂಘ ತಳೆದಿಹುದು ಜನ್ಮ

ಶಿವಮೊಗ್ಗದ ಬಿ.ಎಚ್‌. ರಸ್ತೆಯ ಪಕ್ಕದ ವಿಶಾಲ ಬಯಲಲ್ಲಿ ಸರ್ಕಾರಿ ಪ್ರೌಢಶಾಲೆಯ ಬಲು ಹಳೆಯ ಕಟ್ಟಡ. ತೀರಾ ಶಿಥಿಲಾವಸ್ಥೆಯಲ್ಲಿರುವ ಇದು ಯಾವಾಗ ಬಿದ್ದು ಹೋದೀತೋ ಎಂಬಂತಿದೆ. ಇದರ ವಯಸ್ಸು ನೂರೈವತ್ತು ವರ್ಷ. 1853ರಲ್ಲಿ ಶುರುವಾಗಿ, ಇಂದಿನವರೆಗೂ ಲಕ್ಷೋಪಲಕ್ಷ ಪ್ರತಿಭೆಗಳನ್ನು ಈ ಶಾಲೆ ನಾಡಿಗೆ ಕೊಟ್ಟಿದೆ. ಜಾರ್ಖಂಡ್‌ ರಾಜ್ಯದ ರಾಜ್ಯಪಾಲ ರಾಮಾ ಜೋಯಿಸ್‌, ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶ ಶತಾಯುಷಿ ನಿಟ್ಟೂರು ಶ್ರೀನಿವಾಸರಾಯರು, ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿ, ವಿಜ್ಞಾನಿ ಸಿಎನ್ನಾರ್‌ ರಾವ್‌, ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ, ‘ಅಮೆರಿಕನ್ನಡ’ ಪತ್ರಿಕೆಯ ಸಂಪಾದಕ ಶಿಕಾರಿಪುರ ಹರಿಹರೇಶ್ವರ - ಇವರೆಲ್ಲ ಈ ಶಾಲೆಯಲ್ಲಿ ಕಲಿತವರೇ.

ಇಂಥಾ ಸಾಧಕರು ಈ ಶಾಲೆಯಲ್ಲಿ ಕಲಿತ ವಿಷಯ ಗೊತ್ತಾದದ್ದೇ ತಡ, ಹಳೆಯ ವಿದ್ಯಾರ್ಥಿಗಳನ್ನು ಹುಡುಕುವ ಪ್ರಯತ್ನವನ್ನು ಶಾಲೆಯ ಉಪ ಪ್ರಾಂಶುಪಾಲ ಕಮಲಾಕರ್‌ ಪ್ರಾರಂಭಿಸಿದರು. ಹಳೇ ವಿದ್ಯಾರ್ಥಿಗಳಾಗಿದ್ದ ಇನ್ನೂ ಹಲವರು ನಾಡಿನ, ದೇಶದ, ಜಗತ್ತಿನ ಮೂಲೆಮೂಲೆಗಳಲ್ಲಿ ಒಂದಿಲ್ಲೊಂದು ಕಡೆ ಸಾಧನೆ ಮಾಡುತ್ತಿರಬಹುದೆಂಬುದು ಇವರ ನಿರೀಕ್ಷೆ. ನೂರೈವತ್ತು ತುಂಬಿರುವ ಶಾಲೆಯ ಅಮೃತಮಹೋತ್ಸವ ಆಚರಿಸುವುದು ಕನಸು. ಇದೇ ನೆವದಲ್ಲಿ ಕುಸಿದು ಬೀಳುವಂತಾಗಿರುವ ಶಾಲೆಯ ಹಳೇ ಸೌಂದರ್ಯ ಹಾಳಾಗದಂತೆ ಪುನರುಜ್ಜೀವನಗೊಳಿಸುವುದು ಗುರಿ.

150 year old Govt. School of Shimogaಈ ಉಮೇದಿನಿಂದ ಒಂದಷ್ಟು ಸಮಾನ ಮನಸ್ಕ ಹಳೇ ವಿದ್ಯಾರ್ಥಿಗಳು ಜಮೆಯಾದರು. ಈ ಪೈಕಿ ಬಿಜೆಪಿಯ ನಾಯಕ ಡಿ.ಎಚ್‌.ಶಂಕರಮೂರ್ತಿ ಇರುವುದು ಶಾಲೆಯ ಪುನರುಜ್ಜೀವನದ ಹಾದಿಯಲ್ಲಿ ಆಗಬೇಕಾದ ಸರ್ಕಾರಿ ಕೆಲಸಗಳಿಗೆ ಹೊಸ ವೇಗ ದಕ್ಕುವಂತಾಗಿದೆ. ಇಂತಿಪ್ಪ ಸಂಘ- ಅಲ್ಯುಮಿನಿಗೆ ಬುಧವಾರ (ಅ. 15) ಅಧಿಕೃತವಾಗಿ ಜೀವ ಸಿಕ್ಕಿದೆ. ಡಿ.ಎಚ್‌.ಶಂಕರಮೂರ್ತಿ ಹಳೇ ವಿದ್ಯಾರ್ಥಿಗಳ ಸಂಘದ ಮುಂಚೂಣಿಯಲ್ಲಿ ನಿಂತಿದ್ದರು. ಶಿವಮೊಗ್ಗೆಯ ಉದ್ದಿಮೆದಾರರಾದ ನಾರಾಯಣ ಶಾಸ್ತ್ರಿ ಸಂಘವನ್ನು ಉದ್ಘಾಟಿಸಿದರು.

ಇನ್ನು ಅಮೃತಮಹೋತ್ಸವದ ಮಹದಾಸೆಯ ಈಡೇರಿಕೆಯ ಹಾದಿ. ಅದರ ಸಿದ್ಧತೆಯ ಜೊತೆಯಲ್ಲೇ ಕಟ್ಟಡಕ್ಕೆ ಕಳೆ ಕೊಡುವ ಕೆಲಸದ ಭರಾಟೆ. ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಪ್ರೊ. ಬಿ.ಕೆ.ಚಂದ್ರಶೇಖರ್‌ ಅವರನ್ನು ಕಾಲೇಜಿನ ಸಿಬ್ಬಂದಿ ಭೇಟಿ ಮಾಡಿದ್ದಾರೆ. ಸರ್ಕಾರಿ ಸಂಸ್ಥೆಯಾಂದರ ವತಿಯಿಂದ ಕಟ್ಟಡದ ನೀಲಿ ನಕಾಶೆ ಕೊಡಿ ಎಂದು ಬಿ.ಕೆ.ಸಿ. ಹೇಳಿದ್ದು, ಈ ಹಾದಿಯಲ್ಲಿ ಯತ್ನಗಳು ಶುರುವಾಗಿವೆ. ಶಾಲೆಯ ಸಿಬ್ಬಂದಿ ಖಾಸಗಿಯವರಿಂದ ಈಗಾಗಲೇ ಸಿದ್ಧಪಡಿಸಿರುವ ನೀಲಿ ನಕಾಶೆ ಪ್ರಕಾರ ಹಳೇ ಕಟ್ಟಡದ ಜೀರ್ಣೋದ್ಧಾರ ಮತ್ತು ಅಗತ್ಯವಿರುವ ಹೆಚ್ಚುವರಿ ಹೊಸ ಕಟ್ಟಡಕ್ಕೆ ಬೇಕಿರುವ ಅಂದಾಜು ಹಣ 50 ಲಕ್ಷ ರುಪಾಯಿ.

ಇದ್ದಕ್ಕಿದ್ದಂತೆ ಹಳೇ ಕಟ್ಟಡದ ಬಗ್ಗೆ ಆಸ್ಥೆ ಯಾಕೆ ಹುಟ್ಟಿತು?

ಯುವಕ ಕಮಲಾಕರ್‌ ಕೆಲವು ವರ್ಷಗಳ ಹಿಂದೆ ಉಪ ಪ್ರಾಂಶುಪಾಲರಾಗಿ ಬಂದಾಗ, ತೀರಾ ಹಳೆಯದಾದ ಈ ಶಾಲೆ ಹಲವು ಸುದ್ದಿ ಹಾಗೂ ಚರಿತ್ರೆಗಳನ್ನು ಅಡಗಿಸಿಟ್ಟುಕೊಂಡಿರುವ ವಿಷಯ ಗೊತ್ತಾಯಿತು. ಅಲ್ಲಿಯವರೆಗೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಸಿಬ್ಬಂದಿ ರುಟೀನಿಗೆ ಒಗ್ಗಿ ಹೋಗಿದ್ದರು. ಕಮಲಾಕರ್‌ ಮನಸ್ಸಲ್ಲಿ ಶಾಲೆಯ ಬಗ್ಗೆ ಕಾಳಜಿ ಹುಟ್ಟಿತು. ಒಂದಷ್ಟು ಹಳೇ ವಿದ್ಯಾರ್ಥಿಗಳ ಪಟ್ಟಿ ಸಿಕ್ಕಿತು. ಈ ಪೈಕಿ ಕೆಲವರ ಪರಿಚಯವೂ ಆಯಿತು. 1917ರಲ್ಲಿ ಇಲ್ಲಿ ಕಲಿತ ನಿಟ್ಟೂರು ಶ್ರೀನಿವಾಸರಾಯರ ಮನಸ್ಸಲ್ಲಿ ಬಾಲ್ಯದ ನೆನಪಿನ ದಿನಗಳು ಇನ್ನೂ ಹಸುರಾಗಿರುವುದು ಹೊಸ ಕನಸಿಗೆ ಇಂಬುಗೊಟ್ಟಿತು.

ಶಾಲೆಯ ವಿಶಾಲ ಆವರಣದಲ್ಲಿನ ಸುಮಾರು 2 ಎಕರೆ ಜಾಗೆಯನ್ನು ಹಾಸ್ಟೆಲ್‌ ಕಟ್ಟೋಕೆ, ಅದಕ್ಕೆ ಇದಕ್ಕೆ ಅಂತ ಕಬಳಿಸಲಾಗಿತ್ತು. ಇದೇ ರೀತಿ ಮುಂದೆಯೂ ಜಾಗ ಕಬಳಿಸುವವರ ಆತಂಕ ಇದ್ದೇ ಇತ್ತು. ಆಟದ ಮೈದಾನದಲ್ಲಿ ದೇವರಾಜ್‌ ಅರಸು ಭವನ ಕಟ್ಟುತ್ತೇವೆ ಅಂತಲೂ ಸರ್ಕಾರದವರು ಹೇಳಿದ್ದರು. 1929ರಲ್ಲಿ ಈ ಶಾಲೆಗೆ ಮಹಾತ್ಮ ಗಾಂಧಿ ಭೇಟಿ ಕೊಟ್ಟಿದ್ದಕ್ಕೂ ದಾಖಲೆ ಸಿಕ್ಕಿತ್ತು. ಬಾಪೂಜಿ ಭಾಷಣ ಮಾಡಿದ ಜಾಗದಲ್ಲೊಂದು ಸ್ಮರಣೆಯ ಕಲ್ಲು ಹಾಕಿಸುವ ಯೋಚನೆ ಕಮಲಾಕರ್‌ಗೆ ಹೊಳೆಯಿತು. ಅದಕ್ಕೆಂದು ದಾಖಲೆ ಸ್ಥಳೀಯ ಆಡಳಿತದವರ ಕೈಗೆ ಸೇರಿತು. ಆಮೇಲೆ ಅದೂ ನಾಪತ್ತೆ !

ನೂರೈವತ್ತು ವರ್ಷ ತುಂಬಿದ ಈ ಶಾಲೆಯ ಹವೆಯ ನೆನಪು ಇಲ್ಲಿ ಕಲಿತ ಇನ್ನೂ ಕೆಲವರಿಗೆ ಇರಬಹುದು. ಶಾಲೆಯ ಅಮೃತಮಹೋತ್ಸವದಲ್ಲಿ ಅವರೆಲ್ಲ ಭಾಗಿಯಾಗಲಿ ಎಂಬುದು ಕಮಲಾಕರ್‌ ಕನಸು. ಸಂಘ ಹುಟ್ಟಿದ್ದಾಗಿದೆ. ಅದು ದೊಡ್ಡದಾಗುವುದು ಬಾಕಿಯಿದೆ. ನೀವೂ ಈ ಶಾಲೆಯಲ್ಲಿ ಓದಿದವರಾಗಿದ್ದು, ಅಲ್ಯುಮಿನಿಯಲ್ಲಿ ಒಂದಾಗ ಬಯಸಿದರೆ ಗೆ ಇ- ಮೇಲ್‌ ಕಳಿಸಿ.

ಅಮೃತ ಮಹೋತ್ಸವದ ದಿನಾಂಕ ಇನ್ನೂ ಗೊತ್ತಾಗಿಲ್ಲ. ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರನ್ನು ಕರೆಸಬೇಕೆಂಬುದು ಆಸೆ. ಈ ಆಸೆಗೆ ಜಾರ್ಖಂಡ್‌ ರಾಜ್ಯಪಾಲ ರಾಮಾ ಜೋಯಿಸ್‌ ಕೂಡ ಸ್ಪಂದಿಸಿದ್ದಾರೆ. ಕುಸಿಯುತ್ತಿರುವ ಕಟ್ಟಡವನ್ನು ಎಲ್ಲಾ ಕೂಡಿ, ಮತ್ತೆ ಕಟ್ಟಿ, ಎತ್ತಿ ನಿಲ್ಲಿಸಿದರೆ ಸಿಗುವ ಆನಂದವೇ ಬೇರೆ. ಕಲಿತ ಶಾಲೆಯ ಪ್ರೀತಿಗೆ ನೀವೂ ಭಾಜನರಾಗಿ.

Post your views

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more