ಕಾಸರಗೋಡಲ್ಲಿ ‘ಯಕ್ಷತೇರು’ ಅಭಿಯಾನ
ಕಾಸರಗೋಡಲ್ಲಿ ‘ಯಕ್ಷತೇರು’ ಅಭಿಯಾನ
ಕುಂಬಳೆಯಿಂದ ಬೆಂಗಳೂರಿಗೆ ಯಕ್ಷತೇರು ಪ್ರಯಾಣ
ಬೆಂಗಳೂರು: ಅಳಿವಿನತ್ತ ಸಾಗುತ್ತಿರುವ ಕರಾವಳಿಯ ಪೌರಾಣಿಕ ಕಲೆ ಯಕ್ಷಗಾನದ ಉಳಿವಿಗಾಗಿ ‘ಯಕ್ಷತೇರು- ಕಾಸರಗೋಡು ಕನ್ನಡಿಗರ ಸಾಂಸ್ಕೃತಿಕ ಅಭಿಯಾನ’ ಎಂಬ ಆಂದೋಳನವೊಂದನ್ನು ಕಾಸಗೋಡಿನ ಗೀತಾ ವಿಹಾರ ಯಕ್ಷ ಸಂಸ್ಥೆ ಆಯೋಜಿಸಿದೆ.
ಯಕ್ಷಗಾನ ಕುರಿತು ಜಾಗೃತಿ ಮೂಡಿಸುವುದಲ್ಲದೆ, ಸಂಕಷ್ಟದಲ್ಲಿರುವ ಯಕ್ಷ ಕಲಾವಿದರಿಗೆ ಪುನರ್ವಸತಿ, ಆರ್ಥಿಕ ಭದ್ರತೆ ಒದಗಿಸಿಕೊಡಬೇಕು ಎಂಬ ಆಗ್ರಹದೊಂದಿಗೆ ನಡೆಯುವ ಈ ಅಭಿಯಾನವು ಅಕ್ಟೋಬರ್ 27ರಂದು ಯಕ್ಷಗಾನ ಪಿತಾಮಹ ಪಾರ್ತಿಸುಬ್ಬನ ಹುಟ್ಟೂರು ಕಾಸರಗೋಡಿನ ಕುಂಬಳೆಯಿಂದ ಬೆಂಗಳೂರಿಗೆ ಹೊರಡಲಿದೆ.
ಈ ಯಕ್ಷತೇರಿನಲ್ಲಿ ಯಕ್ಷಗಾನ ರಂಗದ ಖ್ಯಾತ ಕಲಾವಿದರು ಹಾಗೂ ಹಿಮ್ಮೇಳ ಕಲಾವಿದರು ಭಾಗವಹಿಸುವರು. ಯಕ್ಷತೇರು ಕಾಸರಗೋಡು ಮಾತ್ರವಲ್ಲದೆ ರಾಜ್ಯದ ಇತರ 31 ಪ್ರದೇಶಗಳಲ್ಲಿ ಸಂಚರಿಸಲಿದೆ. ಈ ಅಭಿಯಾನದ ರೂಪು ರೇಷೆಯನ್ನು ನಟ ಕಾಸರಗೋಡು ಚಿನ್ನಾ ರೂಪಿಸಿದ್ದಾರೆ.
ಕೇರಳದ ಹದಿನಾಲ್ಕು ಪ್ರದೇಶಗಳಲ್ಲಿ ಸಂಚರಿಸಿ, ಸುಳ್ಯಮೂಲಕ ಕರ್ನಾಟಕ ಪ್ರವೇಶಿಸಿ, ಮಡಿಕೇರಿ, ಮೈಸೂರು, ಮಂಡ್ಯ ದಾರಿಯಾಗಿ, ಒಟ್ಟು 14 ಕಡೆಗಳಲ್ಲಿ ಪ್ರದರ್ಶನ ನೀಡಿ ನಂತರ ಬೆಂಗಳೂರಿಗೆ ಬರಲಿದೆ. ನವೆಂಬರ್ 2ರಂದು ಬೆಂಗಳೂರಿನ ವಿಧಾನ ಸೌಧದ ಮುಂಭಾಗದಲ್ಲಿ ಸಮಾರೋಪಗೊಳ್ಳಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು