ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಕತ್ವಕ್ಕೆ‘ಧರ್ಮ’ ರಕ್ಷಣೆ : ಐರಾವತ ಮರಳಿ ಬೆಂಗಳೂರಿಗೆ !

By Staff
|
Google Oneindia Kannada News

ನಾಯಕತ್ವಕ್ಕೆ‘ಧರ್ಮ’ ರಕ್ಷಣೆ : ಐರಾವತ ಮರಳಿ ಬೆಂಗಳೂರಿಗೆ !
ಜನ ಸ್ಪಂದನ ಯಾತ್ರೆಯ ಕೊನೆಯಲ್ಲಿ ಶಕ್ತಿ ಒಗ್ಗೂಡಿಸಿಕೊಂಡ ಕೃಷ್ಣ . ಉದ್ದಕ್ಕೂ ಗೋಳು, ಕೊನೆಗೆ ರಾಜಕೀಯದ ಧೂಳು.

ಬಿಜಾಪುರ/ಬಾಗೇವಾಡಿ / ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಎದುರಿಸುವುದಾಗಿ ಲೋಕೋಪಯೋಗಿ ಸಚಿವ ಧರ್ಮಸಿಂಗ್‌ ಘೋಷಿಸುವ ನಾಟಕೀಯ ಘಟನೆಯಾಂದಿಗೆ ಜನ ಸ್ಪಂದನ ಯಾತ್ರೆ ಭಾನುವಾರ (ಅ.13) ಸಮಾಪ್ತಿಗೊಂಡಿದೆ.

ಜನ ಸ್ಪಂದನ ಯಾತ್ರೆಯ ಅಂತಿಮ ದಿನವಾದ ಭಾನುವಾರ ಮುಖ್ಯಮಂತ್ರಿ ಕೃಷ್ಣ ಅವರು ಸರ್ಕಾರದ ಯಾವುದಾದರೂ ಪ್ರಮುಖ ತೀರ್ಮಾನವನ್ನು ಬಿಜಾಪುರದಲ್ಲಿ ಪ್ರಕಟಿಸುವ ಮೂಲಕ ರಾಜ್ಯದ ಗಮನ ಸೆಳೆಯಬಹುದೆಂದು ರಾಜಕೀಯ ವಲಯಗಳಲ್ಲಿ ನಿರೀಕ್ಷಿಸಲಾಗಿತ್ತು . ಆದರೆ, ಅಚ್ಚರಿಯ ಮಾತನಾಡಿದ್ದು ಕೃಷ್ಣ ಅವರಲ್ಲ , ಧರ್ಮಸಿಂಗ್‌.

ಮುಖ್ಯಮಂತ್ರಿ ಪದಕ್ಕೆ ಪ್ರಮುಖ ಸ್ಪರ್ಧಿಗಳಲ್ಲೊಬ್ಬರು ಎನ್ನಲಾದ ಧರ್ಮಸಿಂಗ್‌, ಭಾನುವಾರ ಜನಸ್ಪಂದನ ಕಾರ್ಯಕ್ರಮದ ಅಂತಿಮ ಹಂತದಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ಕೃಷ್ಣ ಅವರ ನಾಯಕತ್ವವನ್ನು ಒಪ್ಪುವ ಮೂಲಕ ಅಚ್ಚರಿ ಮೂಡಿಸಿದರು. ಕೃಷ್ಣ ಅವರ ನೇತೃತ್ವದಲ್ಲಿ ಪಕ್ಷ ಮುಂಬರುವ ಚುನಾವಣೆಗಳನ್ನು ಎದುರಿಸಲಿದೆ. ಜನತೆ ಪಕ್ಷಕ್ಕೆ ಆಶೀರ್ವಾದ ಮಾಡಬೇಕು ಎಂದು ಧರ್ಮಸಿಂಗ್‌ ಮನವಿ ಮಾಡಿದರು.

ಧರ್ಮಸಿಂಗ್‌ ಅವರ ಹೇಳಿಕೆಯನ್ನು ನಂಬಬಹುದು ಎಂದು ಮಾರ್ಮಿಕವಾಗಿ ನುಡಿದ ಮುಖ್ಯಮಂತ್ರಿ ಕೃಷ್ಣ , ಜನ ಸ್ಪಂದನ ಯಾತ್ರೆ ಭಾರೀ ಯಶಸ್ಸು ಗಳಿಸಿದೆ ಎಂದರು. ಪ್ರತಿಯಾಂದು ಕಾರ್ಯಕ್ರಮಕ್ಕೂ ಮಿತಿ ಇರುತ್ತದೆ, ಪ್ರತಿಯಾಬ್ಬರನ್ನೂ ಭೇಟಿ ಮಾಡಲು ಸಾಧ್ಯವಿಲ್ಲ . ಆದರೆ ತಾಲ್ಲೂಕು ಹಾಗೂ ಜಿಲ್ಲಾಡಳಿತಗಳು ಜನರ ಸಮಸ್ಯೆಗಳನ್ನು ಮುಂಬರುವ ದಿನಗಳಲ್ಲಿ ಬಗೆಹರಿಸುತ್ತವೆ ಎಂದು ಕೃಷ್ಣ ಹೇಳಿದರು.

ಜನ ಸ್ಪಂದನ ಯಾತ್ರೆಯ ಕುರಿತ ಪ್ರತಿಪಕ್ಷಗಳ ಟೀಕೆಯನ್ನು ಗೇಲಿ ಮಾಡಿದ ಕೃಷ್ಣ - ಈ ಮಂದಿ ಪ್ರತಿ ಬಾರಿಯೂ ಹೀಗೆಯೇ ಟೀಕಿಸುತ್ತಾರೆ. ಇವರಿಗೆ ರಾಜ್ಯದಲ್ಲಿ ನಡೆದಿರುವ ಉಪ ಚುನಾವಣೆಗಳಲ್ಲಿ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಸಚಿವರಾದ ಡಿ.ಕೆ.ಶಿವಕುಮಾರ್‌, ಮೋಟಮ್ಮ, ಸಗೀರ್‌ ಅಹಮದ್‌, ಕಾಗೋಡು ತಿಮ್ಮಪ್ಪ, ಬಿ.ಎಸ್‌.ಪಾಟೀಲ್‌, ಸಾಸನೂರ್‌ ಹಾಗೂ ವಿವಿಧ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಹಿಳಾ ವಿವಿಗೆ ಮೂರು ದಿನಗಳಲ್ಲಿ ಕುಲಪತಿ : ಬಿಜಾಪುರದ ಮಹಿಳಾ ವಿವಿ ಸ್ಥಾಪಿಸುವ ಮೂಲಕ ಇತಿಹಾಸದಲ್ಲಿ ಉಳಿಯುವಂತ ಕೊಡುಗೆಯನ್ನು ಬಿಜಾಪುರಕ್ಕೆ ಕಾಂಗ್ರೆಸ್‌ ಸರ್ಕಾರ ನೀಡಿದೆ. ಪ್ರಸ್ತುತ ಜಾಮ್‌ದಾರ್‌ ಅವರು ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ವಿಶ್ವವಿದ್ಯಾಲಯಕ್ಕೆ ಇನ್ನು ಮೂರು ದಿನಗಳಲ್ಲಿ ಕುಲಪತಿಗಳನ್ನು ನೇಮಿಸಲಾಗುವುದು ಎಂದು ಕೃಷ್ಣ ಹೇಳಿದರು.

ಕೃಷ್ಣಾ , ದೋಣಿ, ಭೀಮಾ ನದಿ ನೀರು ರಕ್ಷಣೆ : ಬಿಜಾಪುರದ ಸಮೀಪದ ಹಿಟ್ನಳ್ಳಿಯಲ್ಲಿ ಜನ ಸ್ಪಂದನ ಯಾತ್ರೆಯ ಸಂದರ್ಭದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣ , ಭೀಮಾ ಹಾಗೂ ಕೃಷ್ಣಾ ನದಿಯ ಒಂದು ತೊಟ್ಟು ನೀರನ್ನು ಕಳೆದುಕೊಳ್ಳಲು ರಾಜ್ಯ ಸರ್ಕಾರ ಬಯಸುವುದಿಲ್ಲ . ರಾಜ್ಯದ ಹಕ್ಕು ರಕ್ಷಣೆಗೆ ಸರ್ಕಾರ ಸಿದ್ಧವಾಗಿದೆ. ದೋಣಿ ನದಿಯ ಹೂಳೆತ್ತಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಯಾವುದೇ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿಯಲು ಬಯಸುವುದಿಲ್ಲ . ರಣ ಬೇಸಿಗೆಯಲ್ಲಿ ಕುಡಿಯುವ ನೀರು ಬಿಡಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ಕೃಷ್ಣ ಹೇಳಿದರು. ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಬಸವನ ಬಾಗೇವಾಡಿಯಲ್ಲಿ ಕೃಷ್ಣ ತಿಳಿಸಿದರು.

530 ಕಿಮೀ ಯಾತ್ರೆ, ಸಾವಿರಾರು ಅರ್ಜಿ : ಅಕ್ಟೋಬರ್‌ 8ರಂದು ಪ್ರಾರಂಭವಾಗಿ ಅ.12ರ ಭಾನುವಾರ ಕೊನೆಗೊಂಡ ಮುಖ್ಯಮಂತ್ರಿ ಕೃಷ್ಣ ಅವರ ಮಹತ್ವಾಕಾಂಕ್ಷೆಯ ಬೆಂಗಳೂರಿನಿಂದ ಬಿಜಾಪುರದವರೆಗಿನ ಜನ ಸ್ಪಂದನ ಯಾತ್ರೆ ಸುಮಾರು 530 ಕಿಮೀ ದೂರವನ್ನು ಕ್ರಮಿಸಿದೆ. ಈ ಅವಧಿಯಲ್ಲಿ ಐದಾರು ಸಾವಿರ ಅರ್ಜಿಗಳನ್ನು ಕೃಷ್ಣ ಸ್ವೀಕರಿಸಿದ್ದು , ಈ ಅರ್ಜಿಗಳಿಗೆ 30 ದಿನಗಳ ಒಳಗಾಗಿ ಉತ್ತರ ನೀಡಲು ತಮ್ಮ ಕಚೇರಿಯಲ್ಲಿ ವಿಶೇಷ ಘಟಕವೊಂದನ್ನು ತೆರೆಯುವುದಾಗಿ ಕೃಷ್ಣ ತಿಳಿಸಿದರು.

ಜನ ಸ್ಪಂದನ ಕಾರ್ಯಕ್ರಮ ಪಕ್ಷಾತೀತ ಕಾರ್ಯಕ್ರಮವಾಗಿದೆ. ಜಾತಿ, ಮತ, ಪಕ್ಷ ಯಾವುದನ್ನೂ ಪರಿಗಣಿಸದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕೃಷ್ಣ ಸ್ಪಷ್ಟಪಡಿಸಿದರು. ಜನ ಸ್ಪಂದನ ರಾಜ್ಯದ ಇತರ ಭಾಗಗಳಲ್ಲಿಯೂ ನಡೆಯುವುದಾಗಿಯೂ ತಿಳಿಸಿದರು.

ಜನ ಸ್ಪಂದನ ಯಾತ್ರೆಯ ಹಾದಿಯಲ್ಲಿ ಕಂಡದ್ದು ಎರಡು ಬಗೆಯ ಚಿತ್ರಣ. ಬೆಂಗಳೂರಿನಿಂದ ಚಿತ್ರದುರ್ಗದವರೆಗೆ ಜನತೆಯ ಮೇಲುಗೈಯಾದರೆ, ಉತ್ತರ ಕರ್ನಾಟಕ ಪ್ರಾಂತ್ಯದಲ್ಲಿ ರಾಜಕಾರಣಿಗಳದೇ ಮೇಲುಗೈ. ಬೆಂಗಳೂರು ಹೊರ ವಲಯದ ಅರಿಶಿನಕುಂಟೆ, ಬಟವಾಡಿ, ಚಿತ್ರದುರ್ಗ ಮುಂತಾದೆಡೆಗಳಲ್ಲಿ ಕೃಷ್ಣ ಅವರು ಜನತೆಯ ಅಸಮಾಧಾನವನ್ನೂ ಎದುರಿಸಬೇಕಾಯಿತು. ಕೆಲಸ ಮಾಡದ ಮಂತ್ರಿಗಳು ಜನತೆಯ ನೇರ ಕೋಪಕ್ಕೆ ತುತ್ತಾಗಬೇಕಾಯಿತು. ಆದರೆ, ಉತ್ತರ ಕರ್ನಾಟಕಕ್ಕೆ ಐರಾವತ ಬಸ್‌ ಸಾಗುತ್ತಿದ್ದಂತೆ ಚಿತ್ರ ಬದಲಾಯಿತು. ಜಗಳೂರು, ಕೂಡ್ಲಿಗಿ, ಹೊಸಪೇಟೆ ತಾಲ್ಲೂಕಿನ ಮರಮ್ಮನಹಳ್ಳಿ, ಭುವನಹಳ್ಳಿ, ಇಲಕಲ್ಲ , ನಿಡಗುಂದ, ಒಳಸಂಗಿ, ಮುನಗೋಳಿ, ಹಿಟ್ನಳ್ಳಿ, ಬಿಜಾಪುರಗಳಲ್ಲಿ ಜನ ಸ್ಪಂದನ ಯಾತ್ರೆಗೆ ಅದ್ದೂರಿ ಸ್ವಾಗತ ದೊರೆಯಿತು. ಬಿಜಾಪುರದಲ್ಲಂತೂ ಕೃಷ್ಣ ಅವರಿಗೆ ಕೆಂಪು ಹಾಸಿನ ಸ್ವಾಗತ.

ನೇಕಾರರಿಗೆ ಅಭಯ: ಇಲಕಲ್ಲದಲ್ಲಿ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಿದ ಕೃಷ್ಣ , ನೇಕಾರರ ಸಮಸ್ಯೆಗಳಿಗೆ ಶಾಶ್ವತ ಯೋಜನೆ ರೂಪಿಸುವ ಕುರಿತು ಆಶ್ವಾಸನೆ ನೀಡಿದರು. ಹಿಟ್ನಳ್ಳಿಯ ಕೃಷಿ ವಿವಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ದ್ರಾಕ್ಷಿ ಬೆಳೆಗಾರರ ಸಂಘದ ಪ್ರತಿನಿಧಿಗಳು ಹಾಗೂ ಉತ್ತರ ಕರ್ನಾಟಕ ನೀರಾವರಿ ಹೋರಾಟಗಾರರ ಸಮಿತಿಯ ರೈತರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

ಯಶಸ್ವಿನಿ, ಬಿಸಿಯೂಟದ ಬಗ್ಗೆ ಜನ ಸ್ಪಂದನ ಯಾತ್ರೆಯಲ್ಲಿ ಪ್ರಮುಖವಾಗಿ ಚರ್ಚಿಸಿದ ಕೃಷ್ಣ , ತಮ್ಮ ಸಾಧನೆಗಳ ಸಿಂಹಾವಲೋಕನ ನಡೆಸಿದರು. ಪ್ರಾದೇಶಿಕ ಅಸಮಾನತೆಯನ್ನು ನೀಗಿಸಲು ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಕೃಷ್ಣ ವಿವರಿಸಿದರು. 11, 138 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿರುವ ಆಲಮಟ್ಟಿ ಅಣೆಕಟ್ಟೆ ಪ್ರಾದೇಶಿಕ ಅಸಮಾನತೆ ನೀಗುವಲ್ಲಿನ ಪ್ರಮುಖ ಹೆಜ್ಜೆ ಎಂದು ಕೃಷ್ಣ ಬಣ್ಣಿಸಿದರು.

ಬಿಜಾಪುರ ರೈತರಿಗಾಗಿ ಸರ್ಕಾರ ಪ್ರತಿಶತ ನೂರರ ರಿಯಾಯಿತಿಯಲ್ಲಿ ರೂಪಿಸಿರುವ ಹನಿ ನೀರಾವರಿ, ತುಂತುರು ನೀರಾವರಿಯ ವಿಶೇಷ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಕೃಷ್ಣ , ಬಿಜಾಪುರ ಜಿಲ್ಲೆಯಲ್ಲಿನ ಹಣ್ಣು ಹಂಪಲಗಳ ತೋಟಗಾರಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಯೋಜನೆ ಹಮ್ಮಿಕೊಳ್ಳುವುದಾಗಿ ಹೇಳಿದರು. ಬೀದರ್‌ನಲ್ಲಿ ಪಶು ವಿವಿ ಸ್ಥಾಪಿಸುವ ಉದ್ದೇಶವನ್ನು ಸರ್ಕಾರ ಹೊಂದಿರುವುದಾಗಿ ಕೃಷ್ಣ ತಿಳಿಸಿದರು.

ಬೆಂಗಳೂರಲ್ಲಿ ಪೂಜಾರಿ ಅಳಲು : ಪಕ್ಷದಲ್ಲಿರುವ ಕೆಲವರು ತಮ್ಮ ಪದ್ಯಚ್ಯುತಿಗೆ ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಾ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿರುವುದು ಹಾಗೂ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿರುವ ತಮ್ಮ ಕಾರ್ಯವೈಖರಿ ಅನೇಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇವರು ತಮ್ಮ ಪದಚ್ಯುತಿಗೆ ಪ್ರಯತ್ನ ನಡೆಸಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಜನಾರ್ದನ ಪೂಜಾರಿ ಹೇಳಿದರು.

ತಮ್ಮ ಪದ್ಯಚ್ಯುತಿಗೆ ಪ್ರಯತ್ನಿಸುತ್ತಿರುವವರು ಯಾರೆಂಬುದು ತಮಗೆ ತಿಳಿದಿದೆ. ಕಾಲ ಬಂದಾಗ ಅವರ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ಪೂಜಾರಿ ತಿಳಿಸಿದರು.

ಯಾತ್ರೆಯ ನಂತರ ಮುಂದೇನು ?

ಪ್ರತಿಪಕ್ಷಗಳ ಟೀಕಾ ಪ್ರಹಾರದ ನಡುವೆ ಮುಖ್ಯಮಂತ್ರಿ ಕೃಷ್ಣ ಜನ ಸ್ಪಂದನ ಯಾತ್ರೆ ಮುಗಿಸಿ ಬೆಂಗಳೂರಿಗೆ ಮರಳಿದ್ದಾರೆ. ಯಾತ್ರೆಯುದ್ದಕ್ಕೂ ಜನತೆಯ ಸಂಕಷ್ಟಗಳನ್ನು ಕಣ್ಣಾರೆ ಕಂಡಿರುವ ಕೃಷ್ಣ ಅವರಿಗೆ ನೊಂದವರ ಒಡಲುರಿಯ ಬಿಸಿಯೂ ತಾಗಿದೆ. ಈ ಅನುಭವ ಅವರನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿಸಿದರೆ ಅದು ಜನ ಸ್ಪಂದನದ ಬಹುದೊಡ್ಡ ಯಶಸ್ಸು . ಧರ್ಮಸಿಂಗ್‌ ಅವರ ಮೂಲಕ ಮುಂಬರುವ ಚುನಾವಣೆಗಳಲ್ಲಿ ತಮ್ಮದೇ ನಾಯಕತ್ವ ಎಂದು ಬಿಂಬಿಸಿಕೊಂಡದ್ದು , ಕೃಷ್ಣ ಅವರಿಗೆ ಜನ ಸ್ಪಂದನದ ಮೂಲಕ ದೊರೆತ ವೈಯಕ್ತಿಕ ಯಶಸ್ಸು . ಈ ಯಶಸ್ಸಿನ ಫಲ ಸಾರ್ವತ್ರಿಕವಾದರೆ ಎಷ್ಟು ಚೆಂದ ?


ಪೂರಕ ಓದಿಗೆ
ನಾಲ್ಕನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಭುವನಹಳ್ಳಿ ‘ದತ್ತಕ’ ಸಾಕ್ಷಿ
ಐದರ ಹೊಸ್ತಿಲಲ್ಲಿ 2ನೇ ಇನಿಂಗ್ಸ್‌ ಕನಸು
ದೊರೆ ಏರಿಗೆಳೆದರೆ ಮಂತ್ರಿಗಳು ನೀರಿಗೆಳೆಯುತ್ತಿದ್ದಾರೆ !

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X