ಕೈಕೊಟ್ಟರೂ ಮಳೆ, ಬರದಲ್ಲೂ ಬೆಳೆ : ರೈತರಿಗೆ ವಿಜ್ಞಾನಿಗಳ ಸಾಥಿ
ಕೈಕೊಟ್ಟರೂ ಮಳೆ, ಬರದಲ್ಲೂ ಬೆಳೆ : ರೈತರಿಗೆ ವಿಜ್ಞಾನಿಗಳ ಸಾಥಿ
ಚರಿತ್ರೆಯ ಪುಟದ ಧೂಳನ್ನು ಕೊಡವಿ ನೋಡಿದರೆ...
ಬೆಂಗಳೂರು : ಬರದ ಅಬ್ಬರದಲ್ಲಿ ಹತಾಶನಾಗುವ ರೈತನಿಗೆ ಪರ್ಯಾಯಗಳೇ ಇಲ್ಲವೇ? ಒಂದಷ್ಟು ದಶಕಗಳ ಹಿಂದೆ ಬರ ಬಂದ ಸಂದರ್ಭಗಳಲ್ಲಿ ಯಾಕೆ ರೈತ ಹೀಗೆ ವರ್ತಿಸುತ್ತಿರಲಿಲ್ಲ? ಮಳೆ ಕೈಕೊಟ್ಟಾಗ ಬದುಕುವ ದಾರಿಯನ್ನು ರೈತ ಬಲು ಹಿಂದೆ ಹೇಗೆ ಕಂಡುಕೊಂಡಿದ್ದ ?
ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್) ಯ ಕೆಲವು ವಿಜ್ಞಾನಿಗಳು ಇಂಥಾ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರ ಕಂಡುಕೊಳ್ಳುವ ಯತ್ನ ಮಾಡಿದ್ದಾರೆ. ಸಿಕ್ಕ ಉತ್ತರವನ್ನು ಕಾರ್ಯರೂಪಕ್ಕೆ ತಂದು ಅಳುತ್ತಿರುವ ರೈತರ ಕಣ್ಣೀರೊರೆಸುವ ಯತ್ನಕ್ಕೂ ಕೈ ಹಾಕಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ತುಮಕೂರು ಜಿಲ್ಲೆಯ ಪಾವಗಡ ರೈತರ ಜೊತೆ ಈ ಹಾದಿಯಲ್ಲಿ ಕೆಲಸ ಮಾಡುತ್ತಿರುವ ಸುಲೋಚನ ಗಾಡ್ಗಿಲ್ ಭಾರತೀಯ ವಿಜ್ಞಾನ ಕೇಂದ್ರದ ಸೆಂಟರ್ ಫಾರ್ ಅಟ್ಮಾಸ್‌ಫೆರಿಕ್ ಅಂಡ್ ಓಷನಿಕ್ ಸೈನ್ಸಸ್‌ನ ವಿಜ್ಞಾನಿ. ಈಕೆ ಕೆಲವು ಮಹತ್ತರ ರೈತ ಉಪಯೋಗಿ ಮಾಹಿತಿಗಳನ್ನು ಹೇಳುತ್ತಾರೆ...
- 1876- 77 ನೇ ಇಸವಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಯಂಕರ ಬರಗಾಲ ತಲೆದೋರಿತ್ತು. ಹಾಗಿದ್ದೂ ಅಲ್ಲಿನ ಜನ ಧೃತಿಗೆಟ್ಟಿರಲಿಲ್ಲ. ತಣ್ಣಗೆ ಇದ್ದರು. ತುತ್ತಿನ ಚೀಲ ತುಂಬಿಸಿ ಕೊಳ್ಳುವುದಕ್ಕೆ ಯೋಚನೆಯೇ ಇರಲಿಲ್ಲ. ಯಾಕೆಂದರೆ, ಆ ಅವಧಿಯಲ್ಲಿ ಭಯಂಕರ ಬರಗಾಲ ಬರುತ್ತದೆ ಅನ್ನುವುದು ಅಲ್ಲಿನ ರೈತರಿಗೆ ವರ್ಷಗಳ ಮುಂಚೆಯೇ ಗೊತ್ತಿತ್ತು ! ಹಾಗಾಗಿ ಅದನ್ನು ನಿರೀಕ್ಷಿಸಿ, ಎದುರಿಸಲು ರೈತರು ಸಜ್ಜಾಗಿದ್ದರು. ಇದನ್ನು ಕಂಡು ಆಗಿನ ಬಾಂಬೆಯ ರಾಜ್ಯಪಾಲರೂ ದಂಗಾಗಿದ್ದರು.
- ನಿತ್ಯ ಹಸಿರಿನ ನಡುವೆ ಬದುಕುವ ಮಂದಿಗೆ ಬರಗಾಲ ಅನ್ನೋದು ಇಂತಿಂಥ ಹವೆಯ ನಂತರ ಬರುತ್ತದೆ ಅನ್ನುವುದು ಬ್ರಿಟಿಷರು ಆಳುತ್ತಿದ್ದ ಕಾಲದಲ್ಲೂ ಗೊತ್ತಿತ್ತು. ಆದರೆ, ಆಮೇಲೆ ಸ್ವಾಭಾವಿಕವಾಗಿ ರೂಪುಗೊಂಡಿದ್ದ ಸಾಮಾಜಿಕ ಸಂಸ್ಥೆಗಳು ಸತ್ತವು.
- ಹವಾಮಾನ ಇಲಾಖೆಯನ್ನು ಕೂಡ ದಂಗುಬಡಿಸುವಂತೆ ಮಳೆಯ ಅಳೆಯುತ್ತಿದ್ದ ಹಿರೀಕರಿದ್ದರು. ಈ ವರ್ಷ ಇಷ್ಟೇ ಬೆಳೆಯಾಗುತ್ತದೆ ಅಂತ ಒಂದು ಕಣ್ಣಳತೆಯಲ್ಲೇ ಹೇಳಿ ಬಿಡುವಷ್ಟು ಅಗಾಧ ಅನುಭವ ಅವರದ್ದಾಗಿತ್ತು. ಮುಖ್ಯವಾಗಿ ಮಳೆಯ ಪ್ರಮಾಣ ನೋಡಿಕೊಂಡು ಆಯಾ ಹವೆಗೆ ತಕ್ಕಂತೆ ಬೆಳೆಯನ್ನೂ ಬದಲಿಸುವ ಜಾಣ್ಮೆ ಕೂಡ ಅವರಲ್ಲಿತ್ತು. ಧಾನ್ಯ ಬೆಳೆಯುವ ಮಂದಿ ಹಣ್ಣು- ತರಕಾರಿ ಬೆಳೆಯುವುದು, ಪ್ರಾಣಿಗಳಿಂದ ಅವನ್ನು ರಕ್ಷಿಸುವುದು, ಕಡಿಮೆ ಮಳೆಯಲ್ಲಿ ಯಾವುದು ಹುಲುಸಾಗುತ್ತದೋ ಅದನ್ನು ಮಣ್ಣಿನ ಸೊಗಡಿಗೆ ತಕ್ಕಂತೆ ಬೆಳೆವುದು- ನಮ್ಮ ಚರಿತ್ರೆಯಲ್ಲಿ ಇಂಥ ಸಾಕಷ್ಟು ಉದಾಹರಣೆಗು ಸಿಗುತ್ತವೆ.
- ಈಗ ಬೆಂಬಲ ಬೆಲೆ, ಬೆಳೆ ಖರೀದಿ ಇತ್ಯಾದಿ ಅಂಶಗಳು ಜಾರಿಗೆ ಬಂದಿವೆ. ಆದರೆ ಇವ್ಯಾವ ಸವಲತ್ತೂ ಇಲ್ಲದೇ ಇದ್ದಾಗಲೂ ಜಾಣ ರೈತರು ಹವಾಮಾನಕ್ಕೆ ತಕ್ಕಂತೆ ಬೆಳೆ ತೆಗೆಯುವ ಮೂಲಕ ಬದುಕು ಸಾಗಿಸಿರುವ ಉದಾಹರಣೆಗಳಿವೆ.
- ಪಾವಗಡದಲ್ಲಿ ಈಗ ನೆಲಗಡಲೆ ಮುಖ್ಯ ಬೆಳೆ. ಆದರಿದು ಇಲ್ಲಿ ಸದ್ದು ಮಾಡಲು ಶುರುವಿಟ್ಟಿರುವುದೇ ಕಳೆದ 25 ವರ್ಷಗಳಲ್ಲಿ. ಇಲ್ಲಿನ 20 ಕೃಷಿ ತಜ್ಞರು ಹಾಗೂ 20 ಜಮೀನ್ದಾರರನ್ನು ಸೇರಿಸಿ, ನಾನು ಮತ್ತು ನನ್ನ ಸಹ ವಿಜ್ಞಾನಿಗಳು ಕೃಷಿಕರಿಗೆ ಹವೆ ಗಮನದಲ್ಲಿಟ್ಟುಕೊಂಡು ನೆಲಗಡಲೆ ಬೆಳೆಯುವ ಬಗ್ಗೆ ಕೈ ಪಳಗಿಸುತ್ತಿದ್ದೇವೆ. ಕೆಲವು ವರ್ಷಗಳಿಂದ ಬೆಳೆಯ ಪ್ರಮಾಣ ಏರಿರುವುದನ್ನು ರೈತರೂ ಒಪ್ಪುತ್ತಾರೆ. ಕೇವಲ ನೆಲಗಡಲೆಗೆ ಮಾತ್ರ ವೈಜ್ಞಾನಿಕ ನೆಲೆಗಟ್ಟಿನ ಕೃಷಿ ನಿಲ್ಲಬಾರದು. ಇತರ ಬೆಳೆಗಳಿಗೂ ಅದು ವಿಸ್ತರಿಸುವಂತಾಗಬೇಕು.
- ಕೃಷಿಯನ್ನು ‘ಪ್ಲಾನ್’ ಮಾಡಿಕೊಂಡು ಬೆಳೆ ತೆಗೆಯುವ ಜರೂರತ್ತು ಈಚೀಚೆಗೆ ಹೆಚ್ಚಾಗುತ್ತಿದೆ. ಕೃಷಿ ವಿಜ್ಞಾನಿಗಳಿಗೆ ನಮ್ಮಲ್ಲಿ ಕೊರೆಯಿಲ್ಲ. ಅಧ್ಯಯನಕ್ಕೆ ಸಾಕಷ್ಟು ಅವಕಾಶಗಳೂ ಉಂಟು. ಸರ್ಕಾರ ಈ ಹಾದಿಯಲ್ಲಿ ಮನಸ್ಸು ಮಾಡಿ, ಸರ್ಕಾರೇತರ ಸಂಸ್ಥೆಗಳನ್ನೂ ತೊಡಗಿಸಿಕೊಂಡು ರೈತ ಮನಸ್ಸುಗಳನ್ನು ಹವಾಮಾನ ಅಂದಾಜು ಮಾಡಿ, ಬೆಳೆ ತೆಗೆಯುವ ಮಟ್ಟಕ್ಕೆ ರೂಪಿಸಬೇಕು. ಆಗ ಬರದ ಬೇಗೆಯ ಬಿಸಿ ಬೇಗ ತಟ್ಟಲು ಸಾಧ್ಯವಾಗದು.
Post your views
ಮುಖಪುಟ / ವಾಟ್ಸ್ ಹಾಟ್












Click it and Unblock the Notifications