• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಲ್ಕನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಭುವನಹಳ್ಳಿ ‘ದತ್ತಕ’ ಸಾಕ್ಷಿ

By Staff
|

ನಾಲ್ಕನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಭುವನಹಳ್ಳಿ ‘ದತ್ತಕ’ ಸಾಕ್ಷಿ

ಪ್ರಸನ್ನ ಚಿತ್ತ ಮುಖ್ಯಮಂತ್ರಿ ಕೃಷ್ಣರ ಮೊಗದಲ್ಲಿ ಮರಳಿದ ನಗು, ಜನ ಸ್ಪಂದನದೊಂದಿಗೆ ಆಡಳಿತದ ಅವಲೋಕನ.

  • ಎಸ್‌.ಕೆ. ಶಾಮಸುಂದರ, ಭುವನಹಳ್ಳಿಯಿಂದ.

shami.sk@greynium.com

ಭುವನಹಳ್ಳಿ : ಹೊಸಪೇಟೆ ಸಮೀಪದ ಪುಟ್ಟ ಗ್ರಾಮ ಭುವನಹಳ್ಳಿಯಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನೇತೃತ್ವದ ರಾಜ್ಯ ಸರ್ಕಾರದ ಐದನೇ ಹುಟ್ಟುಹಬ್ಬ ಸರಳವಾಗಿ ನಡೆಯಿತು.

ಅಕ್ಟೋಬರ್‌ 11, 2003ರ ಶನಿವಾರ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಮುಖ್ಯಮಂತ್ರಿ ಪದ ಹಾಗೂ ರಾಜ್ಯ ಸರ್ಕಾರಕ್ಕೆ ನಾಲ್ಕನೇ ವರ್ಷವನ್ನು ದಾಟಿ ಐದನೇ ವರ್ಷಕ್ಕೆ ಕಾಲಿಟ್ಟ ಹರ್ಷ. ಈ ಹರ್ಷವನ್ನು ಭುವನಹಳ್ಳಿ ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಮೂಲಕ ಕೃಷ್ಣ ಸರ್ಕಾರ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿತು.

ರಾಜ್ಯ ಸರ್ಕಾರದ ನಾಲ್ಕನೇ ವರ್ಷದ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ ಕೃಷ್ಣ ತಮ್ಮ ಗ್ರಾಮೀಣ ಪ್ರಿಯತೆಗೆ ಈ ಕಾರ್ಯಕ್ರಮ ಸಾಕ್ಷಿ ಎಂದರು. ‘ಈವರೆಗಿನ ಮುಖ್ಯಮಂತ್ರಿಗಳು ತಮ್ಮ ಹುಟ್ಟುಹಬ್ಬ ಹಾಗೂ ಸರ್ಕಾರದ ವಾರ್ಷಿಕೋತ್ಸವದ ಅಂಗವಾಗಿ ಅದ್ಧೂರಿ ಸಾಧನಾ ಸಮಾವೇಶಗಳನ್ನು ನಡೆಸಿದ್ದಾರೆ. ನಾವು ಆ ಪೈಕಿ ಅಲ್ಲ . ಹಳ್ಳಿಗಳ ಬಗೆಗಿನ ನಿಷ್ಠೆ ಹಾಗೂ ಪ್ರೀತಿಯಿಂದಾಗಿ ಭುವನಹಳ್ಳಿಯಲ್ಲಿ ಸರ್ಕಾರದ ವಾರ್ಷಿಕೋತ್ಸವ ನಡೆಸುತ್ತಿದ್ದೇವೆ’ ಎಂದು ಕೃಷ್ಣ ಬಣ್ಣಿಸಿದರು.

ಕೋಮು ಸೌಹಾರ್ದತೆಯ ಭುವನಹಳ್ಳಿ : ರಾಜ್ಯ ಸರ್ಕಾರದಿಂದ ದತ್ತು ಸ್ವೀಕಾರಕ್ಕೆ ಒಳಗಾಗಿರುವ ಭುವನಹಳ್ಳಿ ಕೋಮು ಸೌಹಾರ್ದತೆಗೆ ಹೆಸರಾದ ಗ್ರಾಮ. ಅಂಕೋಲ ಹಾಗೂ ಗುತ್ತಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 63ರಲ್ಲಿ ಬರುವ ಭುವನಹಳ್ಳಿ, ಬಳ್ಳಾರಿ ಜಿಲ್ಲೆಯ ತೋರಣಗಲ್‌ಗೆ 4 ಕಿಮೀ ದೂರದಲ್ಲಿದೆ. 1500 ಜನಸಂಖ್ಯೆಯ ಭುವನಹಳ್ಳಿಯಾಂದಿಗೆ ಗಾದಿಗನೂರು ಹಾಗೂ ಕೊಟ್ಟಿಗೆಹಳ್ಳಿ ಸೇರಿ ಒಂದು ಪಂಚಾಯ್ತಿ ರೂಪುಗೊಂಡಿದೆ. ಭುವನಹಳ್ಳಿಯಲ್ಲೊಂದು ಅಚ್ಚುಕಟ್ಟಾಗಿ ನಡೆಯುವ ಪ್ರಾಥಮಿಕ ಶಾಲೆಯಿದೆ. ಈ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಯಾವುದೇ ತಕರಾರಿಲ್ಲದೆ ಅನುಷ್ಠಾನಗೊಂಡಿರುವುದೊಂದು ವಿಶೇಷ. ಅಂದಮೇಲೆ, ಮಕ್ಕಳು ಶಾಲೆಗೆ ಸರಿಯಾಗಿ ಬರುತ್ತಿದ್ದಾರೆ ಎಂದಾಯಿತು.

ಭುವನಹಳ್ಳಿಗೆ ಹೊಂದಿಕೊಂಡಿರುವ ಗಾದಿಗನಹಳ್ಳಿ ರಾಜ್ಯದ ಪ್ರಪ್ರಥಮ ಸ್ವಚ್ಛಗ್ರಾಮ. ಪ್ರಸ್ತುತ ಈ ಸ್ವಚ್ಛಗ್ರಾಮದ ಆಸುಪಾಸಿನ ಭುವನಹಳ್ಳಿ ರಾಜ್ಯ ಸರ್ಕಾರದ ದತ್ತು ಸ್ವೀಕಾರಕ್ಕೆ ಒಳಗಾಗುವುದರೊಂದಿಗೆ ಅಭಿವೃದ್ಧಿಯ ಕನಸು ಕಾಣುತ್ತಿದೆ.

ಭುವನಹಳ್ಳಿಯಲ್ಲೊಂದು ಪಂಚಾಯ್ತಿ ಕಟ್ಟೆಯಿದೆ. ಅಲ್ಲೇ ಸಮೀಪದಲ್ಲಿ ಈಶ್ವರನ ಗುಡಿ, ಆಂಜನೇಯನ ಗುಡಿ ಹಾಗೂ ದರ್ಗಾ - ಕೋಮು ಸೌಹಾರ್ದತೆಯ ಸಾಕಾರ ರೂಪದಂತೆ ನಿಂತಿವೆ. ಪಂಚಾಯ್ತಿ ಕಟ್ಟೆಯ ಸಮೀಪದ ಬೇವಿನ ಮರದ ಕೆಳಗೆ ಮುಖ್ಯಮಂತ್ರಿ ಕೃಷ್ಣರ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ಸಂಭ್ರಮ ನಡೆಯಿತು. ಇದೇ ಬೇವಿನಮರದ ಕೆಳಗೆ ಚಕ್ಕಳಮಕ್ಕಳ ಕುಳಿತ ಕೃಷ್ಣ ಹಾಗೂ ಸಂಪುಟ ಸದಸ್ಯರು ಸುದ್ದಿಗಾರರೊಂದಿಗೆ ಸರ್ಕಾರದ ವಾರ್ಷಿಕೋತ್ಸವದ ಸಂತಸ ಹಂಚಿಕೊಂಡರು. ಪ್ರಶ್ನೆಗಳಿಗೆ ಉತ್ತರಿಸಿದರು.

ಬರದಿಂದಾಗಿ ಬದಲಾದ ಆದ್ಯತೆಗಳು : ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗದಿದ್ದರೆ ಸರ್ಕಾರದ ಆದ್ಯತೆಗಳು ಬೇರೆಯೇ ಇರುತ್ತಿದ್ದವು. ಬರದ ಕಾರಣದಿಂದಾಗಿ ಸರ್ಕಾರದ ಆದ್ಯತೆಗಳು ಬದಲಾದವು ಎಂದು ಕೃಷ್ಣ ಹೇಳಿದರು.

ಜನ ಸ್ಪಂದನ ಕಾರ್ಯಕ್ರಮದ ಔಚಿತ್ಯದ ಬಗ್ಗೆ ಮಾತನಾಡಿದ ಕೃಷ್ಣ - ಯಾವುದೇ ಜನಪರ ಸರ್ಕಾರ ಮಾಡಲೇಬೇಕಾದ ಕಾರ್ಯಕ್ರಮವಿದು. ಈ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಯಾವಾಗಲಾದರೂ ಮಾಡಲೇಬೇಕಾಗಿತ್ತು , ಈಗ ಮಾಡುತ್ತಿದ್ದೇವೆ ಎಂದರು.

ಜನ ಸ್ಪಂದನ ಮುಖ್ಯಮಂತ್ರಿಗಳಿಗೆ ಗ್ರಾಮೀಣ ಕರ್ನಾಟಕದ ನೋವು ನಲಿವುಗಳನ್ನು ಇನ್ನಷ್ಟು ಸ್ಪಷ್ಟವಾಗಿ ಮನದಟ್ಟಾಗಿಸಿದೆ. ಕುಡಿಯುವ ನೀರಿನ ಸಮಸ್ಯೆಯ ತೀವ್ರತೆಯನ್ನು ಜನ ಸ್ಪಂದನದ ಮೂಲಕ ಅರಿತಿರುವುದಾಗಿ ತಿಳಿಸಿದ ಕೃಷ್ಣ , ಜನ ಸ್ಪಂದನದ ವೇಳೆಯಲ್ಲಿ ಪ್ಲೇವಿನ್‌ ಲಾಟರಿ ಕುರಿತು ಸರ್ಕಾರದ ನಿಲುವಿನ ಕುರಿತು ಈಗಾಗಲೇ ಸುಳಿವು ನೀಡಲಾಗಿದೆ ಎಂದರು.

ನಾನು ಸಂತೋಷದ ಮನುಷ್ಯ : ಜನತೆ ಬರದಿಂದಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಬರ ನಿಭಾವಣೆಗಾಗಿ ಸರ್ಕಾರ ಕೈಗೊಂಡಿರುವ ಪ್ರಾಮಾಣಿಕ ಪ್ರಯತ್ನಗಳ ಕುರಿತು ಜನತೆಗೆ ಅರಿವಿದೆ. ಜನ ಸ್ಪಂದನದ ಸಮಯದಲ್ಲಿ ಜನತೆ ಹಾಗೂ ಸರ್ಕಾರದ ನಡುವಿನ ಸಹ ಸ್ಪಂದನದ ಕುರಿತು ನನಗೆ ಸ್ಪಷ್ಟವಾಗಿದೆ. ಜನರಿಂದ ಸರ್ಕಾರದ ಸಾಧನೆಯ ಕುರಿತು ಪ್ರಮಾಣ ಪತ್ರ ದೊರೆತಿದೆ. ಈ ಪ್ರಮಾಣ ಪತ್ರದ ಸಾರ್ಥಕತೆಯಿಂದಾಗಿ ನಾನಿಂದು ಅತ್ಯಂತ ಸಂತೋಷದ ಮನುಷ್ಯನಾಗಿದ್ದೇನೆ ಎಂದು ಕೃಷ್ಣ ಹರ್ಷಚಿತ್ತರಾಗಿ ನುಡಿದರು.

ಸುದ್ದಿಗೋಷ್ಠಿಯ ಮುಖ್ಯಾಂಶಗಳು :

  • ರಾಜ್ಯ ಸರ್ಕಾರದ ಜನ ಸ್ಪಂದನ ಯಾತ್ರೆಗೆ ಪ್ರತಿಯಾಗಿ ಭಾರತೀಯ ಜನತಾ ಪಕ್ಷ ಅ.11ರಿಂದ ಹಮ್ಮಿಕೊಂಡಿರುವ ಜನ ಸಂಘರ್ಷ ಯಾತ್ರೆಯ ಕುರಿತು ಪ್ರತಿಕ್ರಿಯಿಸಿದ ಕೃಷ್ಣ , ಬಿಜೆಪಿ ಯಾತ್ರೆಯನ್ನು ನಕಲಿ ಎಂದು ಬಣ್ಣಿಸಿದರು. ಎಲ್ಲಿ ಅಸಲಿ ಇರುತ್ತದೆಯೋ ಅಲ್ಲಿ ನಕಲಿ ಇರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
  • ಕೆಲಸ ಮಾಡದ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೇಟ್‌ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿ ನೀಡಿರುವ ಎಚ್ಚರಿಕೆಯ ಕುರಿತು ಪ್ರತಿಕ್ರಿಯಿಸಿದ ಕೃಷ್ಣ , ಅದು ಪಕ್ಷವನ್ನು ಬಲಪಡಿಸುವ ಕೆಲಸ ಎಂದು ಪೂಜಾರಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಪಕ್ಷ ಹಾಗೂ ಸರ್ಕಾರದ ಕೆಲಸಗಳು ಬೇರೆ ಬೇರೆ. ಪೂಜಾರಿ ಅವರ ಕೆಲಸ ಮಾಡುತ್ತಾರೆ, ನಾವು ನಮ್ಮ ಕೆಲಸ ಮಾಡುತ್ತೇವೆ ಎಂದರು.
  • ಲೋಕಾಯುಕ್ತರನ್ನು ಇನ್ನಷ್ಟು ಬಲಗೊಳಿಸುವ ಕುರಿತು ಸರ್ಕಾರ ಚಿಂತಿಸುತ್ತಿದೆ ಎಂದು ಕೃಷ್ಣ ಸುದ್ದಿಗಾರರ ಪ್ರಶ್ನೆಯಾಂದಕ್ಕೆ ಉತ್ತರಿಸಿದರು.
  • ಕೇಂದ್ರ ಸರ್ಕಾರ ಕಾಳು ಕೊಟ್ಟರೆ ಬಿಸಿಯೂಟ ಕಾರ್ಯಕ್ರಮವನ್ನು 7ನೇ ತರಗತಿವರೆಗೆ ವಿಸ್ತರಿಸಲಾಗುವುದು. ಹೀಗಾದಲ್ಲಿ , ಬಿಸಿಯೂಟ ಯೋಜನೆಯನ್ನು 10ನೇ ತರಗತಿಯವರೆಗೂ ವಿಸ್ತರಿಸಲು ತಮ್ಮಲ್ಲಿ ಪ್ರತ್ಯೇಕ ಯೋಜನೆಯಿರುವುದಾಗಿ ಹೇಳಿದರು.
  • 2004 ನೇ ಇಸವಿಯ ಮಾರ್ಚ್‌ ಬಜೆಟ್‌ ಎಂದಿನಂತೆ ಜನಪರವಿರುವುದಾಗಿ ಹೇಳಿದ ಕೃಷ್ಣ , ಬಜೆಟ್‌ ವಿಶೇಷತೆಗಳನ್ನು ಕಾದು ನೋಡಿ ಎಂದರು.

ಐಕ್ಯತೆಯೆಂಬುದು ಸರ್ಕಾರದ ಸೌಂದರ್ಯ : ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಭಿನ್ನಮತ ಪ್ರಬಲ ಸಮಸ್ಯೆಯಾಗಿ ಕಾಡದಿರುವ ರಹಸ್ಯದ ಕುರಿತು ಸುದ್ದಿಗಾರರ ಪ್ರಶ್ನೆಗೆ ಮುಗುಳುನಗೆಯಾಂದಿಗೆ ಉತ್ತರಿಸಿದ ಕೃಷ್ಣ , ಭಿನ್ನಮತ ರಹಿತ ಆಡಳಿತ ತಮ್ಮ ಸರ್ಕಾರದ ಸೌಂದರ್ಯಗಳಲ್ಲೊಂದು ಎಂದರು.

ಚಿತ್ರದುರ್ಗದಲ್ಲಿ ಕಾಲ್ಕಿತ್ತ ಕೃಷ್ಣ ಎನ್ನುವ ಕೆಲವು ಪತ್ರಿಕೆಗಳ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಸಾಂದರ್ಭಿಕವಾಗಿ ಮಾತನಾಡಬಹುದೇ ಹೊರತು ಭಾಷಣ ಮಾಡುವ ಕಾರ್ಯಕ್ರಮ ಜನ ಸ್ಪಂದನ ಯೋಜನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್‌, ಎಂ.ವೈ.ಘೋರ್ಪಡೆ, ಅಲ್ಲಂ ವೀರಭದ್ರಪ್ಪ , ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಕೊಂಡಯ್ಯ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬೆಂಗಳೂರು ವರದಿ : ರಾಜ್ಯ ಸರ್ಕಾರದ ಜನ ಸ್ಪಂದನ ಯಾತ್ರೆಗೆ ಪ್ರತಿಯಾಗಿ ಭಾರತೀಯ ಜನತಾ ಪಕ್ಷದ ಜನ ಸಂಘರ್ಷ ಯಾತ್ರೆ ಶನಿವಾರ ಪ್ರಾರಂಭವಾಯಿತು. ಬೆಂಗಳೂರಿನಿಂದ ಬೀದರ್‌ವರೆಗೆ 12 ದಿನಗಳ ಕಾಲ ಸಾಗುವ ಈ ಯಾತ್ರೆಯ ನೇತೃತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷ ಅನಂತಕುಮಾರ್‌ ವಹಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವುದು ಈ ಯಾತ್ರೆಯ ಉದ್ದೇಶ.

ಪೂರಕ ಓದಿಗೆ

ಐದರ ಹೊಸ್ತಿಲಲ್ಲಿ 2ನೇ ಇನಿಂಗ್ಸ್‌ ಕನಸು

ದೊರೆ ಏರಿಗೆಳೆದರೆ ಮಂತ್ರಿಗಳು ನೀರಿಗೆಳೆಯುತ್ತಿದ್ದಾರೆ !

ಜನ ಸ್ಪಂದನ ಬಸ್‌ ಯಾತ್ರೆ

ಮೊದಲ ದಿನ

ಎರಡನೇ ದಿನ

ಮುಖಪುಟ / ಕೃಷ್ಣಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more