• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐದರ ಹೊಸಿತಿಲಲ್ಲಿ ಎರಡನೇ ಇನಿಂಗ್ಸ್‌ ಕನಸು

By Super
|

ಅಭಿನಂದನೆಗಳು. ಅಕ್ಟೋಬರ್‌ 11, 2003. ಶನಿವಾರದ ಬೆಳಗಿನೊಂದಿಗೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅಧಿಕಾರದ ಐದನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ನಾಲ್ಕು ವರ್ಷಗಳ ಆಡಳಿತದೊಂದಿಗೆ ದೇವರಾಜ ಅರಸು ಅವರನ್ನು ಬಿಟ್ಟರೆ ದೀರ್ಘಕಾಲದ ಮುಖ್ಯಮಂತ್ರಿ ಎನ್ನುವ ಸಾಧನೆ ಕೃಷ್ಣ ಅವರಿಗೆ ಸಂದಿದೆ. ಅವರಿಗೆ ಅಭಿನಂದನೆಗಳು.

ತಮಿಳುನಾಡಿನಲ್ಲಿ ಶ್ರೀಪೆರಂಬದೂರಿನ, ಪಕ್ಷದ ಅಧಿಕೃತ ಕಾರ್ಯಕ್ರಮವನ್ನು ಮುಗಿಸಿಕೊಂಡು, ಅಧಿನಾಯಕಿಯ ಆಶೀರ್ವಾದದೊಂದಿಗೆ ಶುಕ್ರವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ ಕೃಷ್ಣರಿಗೆ ರಾತ್ರಿ ಅಷ್ಟೇನೂ ಗಾಢ ನಿದ್ದೆ ಬಂದಿರಲಿಕ್ಕಿಲ್ಲ . ಶನಿವಾರದ ಬೆಳಗಿನೊಂದಿಗೆ ಅಧಿಕಾರದ ಐದನೇ ವರ್ಷಕ್ಕೆ ಕಾಲಿಡುವ ಮುಹೂರ್ತದ ತವಕ ತಲ್ಲಣಗಳು, ಸವಿ ನೆನಪು ಹಾಗೂ ಸವಾಲುಗಳ ನಡುವೆ ಕೃಷ್ಣ ತಣ್ಣಗೆ ಮಲಗುವುದು ಸಾಧ್ಯವೇ ಇಲ್ಲ .

ಮುಖ್ಯಮಂತ್ರಿ ಪದದ ಐದನೇ ವರ್ಷಕ್ಕೆ ಎಸ್ಸೆಂ.ಕೃಷ್ಣ ಕಾಲಿಟ್ಟಿರುವ, ಇನ್ನೊಂದು ಇನಿಂಗ್ಸ್‌ನತ್ತ ಕಣ್ಣಿಟ್ಟಿರುವ ಹಾಗೂ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿರುವ ಈ ಸಂದರ್ಭ, ಕೃಷ್ಣ ಅವರ ನಾಲ್ಕು ವರ್ಷಗಳ ಆಡಳಿತದ ಸಾಧನೆಯನ್ನು ಒರೆಗೆ ಹಚ್ಚಲಿಕ್ಕೆ ಹಾಗೂ ಒಲವು ನಿಲುವು ಏಳುಬೀಳುಗಳ ಅವಲೋಕಿಸಲಿಕ್ಕೆ ತಕ್ಕ ಕಾಲ. 1999ರಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದ ಕೃಷ್ಣ ಭಾರತದ ನಂ.1 ಮುಖ್ಯಮಂತ್ರಿ ಎನ್ನುವ ಪ್ರಶಂಸೆಗೆ ಪಾತ್ರರಾದರೂ, ಎದುರಿಸಿದ ಅಗ್ನಿಪರೀಕ್ಷೆಗಳು ಒಂದೆರಡಲ್ಲ . ಉದ್ದಕ್ಕೂ ಎಡರುತೊಡರುಗಳ ಎದುರಿಸಿ, ಅಧಿಕಾರಾವಧಿಯ ಗೆರೆಯ ಬಳಿ ನಿಂತಿರುವ ಹೊತ್ತಿನಲ್ಲೂ ಮುಖ್ಯಮಂತ್ರಿಗಳ ಮುಂದಿನ ಸಮಸ್ಯೆ ಸವಾಲುಗಳ ಬೆಟ್ಟ ಕರಗಿಲ್ಲ .

ಕೃಷ್ಣ ಅವರಿಗೆ ಶನಿಕಾಟ ಬಲವಾಗಿ ವಕ್ಕರಿಸಿಕೊಂಡದ್ದು ವರನಟ ರಾಜ್‌ಕುಮಾರ್‌ ಅವರನ್ನು ನರಹಂತಕ ವೀರಪ್ಪನ್‌ ಅಪಹರಿಸುವ ಮೂಲಕ. ವರನಟನ ವನವಾಸ ಕಾಲ -ರಾಜ್ಯದ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ಅಲ್ಲಕಲ್ಲೋಲ ಉಂಟುಮಾಡಿದ ಕಾಲ. ರಾಜ್‌ ಅವರ ಬಿಡುಗಡೆಯಾಂದಿಗೆ ಕೃಷ್ಣ ಅತ್ಯಂತ ನಿರಾಳದ ವ್ಯಕ್ತಿಯೆನ್ನಿಸಿದರು. ಆದರೆ, ಗ್ರಹಚಾರವೆನ್ನುವುದು ಅವರ ಪಾಲಿಗೆ ಬೆನ್ನುಬಿಡದ ಬೇತಾಳ.

ಮಾಜಿ ಸಚಿವ ಎಚ್‌.ನಾಗಪ್ಪನವರ ಅಪಹರಣದೊಂದಿಗೆ ವೀರಪ್ಪನ್‌ ಎರಡನೇ ಬಾರಿ ಕೃಷ್ಣ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದ್ದ. ನಾಗಪ್ಪನವರ ಹತ್ಯೆ ಗಾಯಗೊಂಡ ಸರ್ಕಾರಕ್ಕೆ ಬರೆ ಎಳೆದಂತಾಗಿತ್ತು . ಎಸ್‌ಟಿಎಫ್‌ ಪಡೆಗಳು ಮತ್ತೆ ಹುಮ್ಮಸ್ಸಿನಿಂದ ಕಾಡಿಗಿಳಿದವು. ಫಲಿತಾಂಶ ಯಥಾಪ್ರಕಾರ! ಸಾವಿರಾರು ಪೊಲೀಸರು ಕಾಡಲ್ಲಿದ್ದರೂ ವೀರಪ್ಪನ್‌ ಜಾಡು ಪತ್ತೆ ಹಚ್ಚಲು ಸಾಧ್ಯವಾಗಿಲ್ಲದಿರುವುದು ಪೊಲೀಸ್‌ ವ್ಯವಸ್ಥೆಯ ವೈಫಲ್ಯ ಮಾತ್ರವಲ್ಲದೆ ಸರ್ಕಾರದ ವೈಫಲ್ಯವೂ ಹೌದು. ನಾಗಪ್ಪನವರ ದುರಂತ ಅಂತ್ಯದ ಪ್ರಕರಣದಿಂದಾಗಿ ಕೃಷ್ಣ , ವೀರಶೈವ ಸಮುದಾಯದ ಅಸಮಾಧಾನಕ್ಕೆ ತುತ್ತಾದರು.

ಬೆಂಕಿಯ ಮಳೆ !

ಕೃಷ್ಣ ಅವರನ್ನು ಹಣ್ಣು ಮಾಡುವಲ್ಲಿ ಪ್ರಕೃತಿ ಕೂಡ ಹಿಂದೆ ಬಿದ್ದಿಲ್ಲ . ಮಳೆಯೆಂಬುದು ರಾಜ್ಯದ ನಕಾಶೆಯಿಂದ ಗುಳೆ ಹೋಗಿ, ಹ್ಯಾಟ್ರಿಕ್‌ ಬರದಿಂದಾಗಿ ನಾಡಿಗೆ ನಾಡೇ ತತ್ತರಿಸಿದೆ. ರಾಜ್ಯದ ವಿವಿಧ ಭಾಗಗಳ ರೈತರು ಪ್ರತಿನಿತ್ಯ ವಿಷ ಹಾಗೂ ನೇಣಿನ ಕುಣಿಕೆಗಳಲ್ಲಿ ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ. ಕೃಷಿಯ ಮಾತಿರಲಿ, ಕುಡಿಯುವ ನೀರಿಗೂ ಸಂಚಕಾರ ಒದಗಿದೆ. ಕುಡಿಯುವ ನೀರಿನ ಕೊರತೆಯಿಂದಾಗಿ ಜನ ಜಾನುವಾರು ಕಂಗಾಲಾಗಿವೆ. ರೈತರ ಸಂಕಷ್ಟ ನಿವಾರಣೆಗಾಗಿ ಸರ್ಕಾರ ಪ್ರಕಟಿಸಿದ 880 ಕೋಟಿ ರುಪಾಯಿಗಳ ವಿಶೇಷ ಪ್ಯಾಕೇಜ್‌ ರೈತರ ಆತ್ಮಹತ್ಯೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದು ಕೃಷ್ಣ ಅವರನ್ನು ದಿಕ್ಕೆಡಿಸಿರುವುದರಲ್ಲಿ ಅನುಮಾನವಿಲ್ಲ.

ಕಾವೇರಿ ನೀರು ಹಂಚಿಕೆ ವಿವಾದ ಕೂಡ ಕೃಷ್ಣ ಅವರನ್ನು ಪದೇಪದೇ ಇಕ್ಕಟ್ಟಿನಲ್ಲಿ ಸಿಲುಕಿಸುತ್ತಿದೆ. ಒಂದೆಡೆ ಛೀಮಾರಿ ಹಾಕುವ ಸುಪ್ರಿಂಕೋರ್ಟ್‌ನಿಂದಾಗಿ, ಇನ್ನೊಂದೆಡೆ ಯುದ್ಧ ಹೂಡುವ ತವರು ಜಿಲ್ಲೆಯ ರೈತರಿಂದಾಗಿ ಕೃಷ್ಣ ರ ಇಮೇಜು ಭಂಗವಾದದ್ದು ಈಗ ಇತಿಹಾಸ. ಕಾವೇರಿ ವಿವಾದ ತಾರಕಕ್ಕೇರಿದ ಸಂದರ್ಭದಲ್ಲಿ ಕೃಷ್ಣ ಕೈಗೊಂಡ ಪಾದಯಾತ್ರೆ, ಮಾಡಿದ ಪ್ರಮಾಣಗಳು ನಂತರದ ದಿನಗಳಲ್ಲಿ ಬಯಲಾಟದಂತೆ ತೋರಿದ್ದು ಆಕ್ಸ್‌ಫರ್ಡ್‌ ಕೃಷ್ಣರ ರಾಜಕಾರಣದ ದುರಂತಗಳಲ್ಲೊಂದು. ಕಾವೇರಿ ವಿವಾದದಲ್ಲಿ ಹುತಾತ್ಮರಾಗುವ ಅವಕಾಶವನ್ನು ಸ್ವತಃ ಕಳಕೊಂಡ ಕೃಷ್ಣ ಖಳನಾಯಕರಾದರು.

ಬಿಸಿ ಬಿಸಿ ಊಟ : ಐವತ್ತು ಲಕ್ಷ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿ ಊಟ ನೀಡುವ ಕೃಷ್ಣ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನ ದಾಸೋಹ ಯೋಜನೆ ಬುದ್ಧಿಜೀವಿಗಳ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾದರೂ, ಅನುಷ್ಠಾನಗೊಳ್ಳುವಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿತು. ಕೇಂದ್ರ ಸರ್ಕಾರ ಒದಗಿಸುವ ಆಹಾರಧಾನ್ಯ ಹಾಗೂ ಆನ್‌ಲೈನ್‌ ಲಾಟರಿಯ ಹಣದಿಂದಾಗಿ ನಡೆಯುತ್ತಿರುವ ಅನ್ನ ದಾಸೋಹ ಕೃಷ್ಣ ಸರ್ಕಾರದ ಅತ್ಯುತ್ತಮ ಕಾರ್ಯಕ್ರಮಗಳಲ್ಲೊಂದು ಎನ್ನುವುದರಲ್ಲಿ ಎರಡು ಮಾತಿಲ್ಲ . ಊಟ ನೀಡುವಲ್ಲಿನ ತೊಂದರೆಗಳನ್ನು ನೀಗಿಕೊಂಡಲ್ಲಿ ಅನ್ನ ದಾಸೋಹ ಒಂದು ಮಾದರಿ ಕಾರ್ಯಕ್ರಮವಾಗಿ ಇತರ ರಾಜ್ಯಗಳಿಗೂ ಆದರ್ಶಪ್ರಾಯವಾಗುತ್ತದೆ.

ಆನ್‌ಲೈನ್‌ ಲಾಟರಿಗೆ ನೀಡಿದ ಪ್ರೋತ್ಸಾಹ ಕೃಷ್ಣ ಅವರ ಸರ್ಕಾರವನ್ನು ಸಾಕಷ್ಟು ಮುಜುಗರಕ್ಕೆ ಸಿಕ್ಕಿಸಿದೆ. ಪ್ರತಿಪಕ್ಷಗಳು ಆನ್‌ಲೈನ್‌ ಲಾಟರಿಯ ವಿರುದ್ಧ ಕಿಡಿ ಕಾರಿದ್ದರೆ, ಜನತೆ ಕೂಡಾ ಲಾಟರಿಯ ವಿರುದ್ಧ ಬಿಡಿಬಿಡಿಯಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿರೋಧದ ಬಿಸಿ ಕೃಷ್ಣ ಅವರಿಗೆ ತಾಕಿದಂತಿದ್ದು , ಮುಂದಿನ ಬಜೆಟ್‌ನಲ್ಲಿ ಆನ್‌ಲೈನ್‌ ಲಾಟರಿಯ ಬಗ್ಗೆ ಸೂಕ್ತ ನಿಲುವು ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲಿಗೆ, ಮುಂದಿನ ಮಾರ್ಚ್‌ ತಿಂಗಳ ಐದನೇ ಹಾಗೂ ಅಂತಿಮ ಬಜೆಟ್‌ವರೆಗೂ ಆನ್‌ಲೈನ್‌ ಲಾಟರಿ ನಿಲ್ಲುವುದಿಲ್ಲ ಎಂದಾಯಿತು.

ಪ್ರತಿಪಕ್ಷಗಳ ದಾಳಿಯ ಜೊತೆಗೆ ಸ್ವಪಕ್ಷೀಯರ ಕಿರಿಕಿರಿಯನ್ನೂ ಕೃಷ್ಣ ಅವರು ಈ ನಾಲ್ಕು ವರ್ಷಗಳಲ್ಲಿ ಎದುರಿಸಿದ್ದಾರೆ. ಸಂಪುಟದ ಹಿರಿಯ ಸದಸ್ಯರು ಕೃಷ್ಣ ಅವರೊಂದಿಗೆ ವೈಮನಸ್ಯ ಹೊಂದಿರುವ ವಿಷಯ ಅನೇಕ ಸಾರಿ ಬೀದಿಗೆ ಬಿದ್ದಿದೆ. ಜಾಫರ್‌ ಷರೀಫ್‌ ಅವರಂತೂ ಸಿಕ್ಕಸಿಕ್ಕ ವೇದಿಕೆಗಳಲ್ಲೆಲ್ಲ ಕೃಷ್ಣ ಅವರನ್ನು ಹಳಿಯುತ್ತಿದ್ದರೆ, ಧರ್ಮಸಿಂಗ್‌- ವಿಶ್ವನಾಥ್‌ ಮುಂತಾದವರು ದೆಹಲಿಯಲ್ಲಿ ಪಟಾಕಿ ಹಚ್ಚಿ ಬೆಂಗಳೂರಲ್ಲಿ ಅದರ ಸಿಡಿತ ನೋಡುವ ಸುಖದಲ್ಲಿದ್ದಾರೆ. ಕ್ಲಾಸಿಕ್‌ ಕಂಪ್ಯೂಟರ್‌ ಹಗರಣದ ಕೊಳೆ ಕಳಕೊಂಡ ಹುಮ್ಮಸ್ಸಿನಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಇನ್ನೊಂದು ಇನಿಂಗ್ಸ್‌ ಕನಸು ಕಾಣಲು ಶುರು ಮಾಡುವ ಮೂಲಕ ಕೃಷ್ಣರ ಕಿರಿಕಿರಿ ಹೆಚ್ಚಿಸಿದ್ದಾರೆ. ಭಿನ್ನಮತದ ಚಟುವಟಿಕೆಗಳಿಂದಾಗಿ ಪಕ್ಷದ ಹೈಕಮಾಂಡ್‌ ಕೂಡ ಕೃಷ್ಣ ಅವರನ್ನು ಆಗಾಗ ಗದರಿಸಿದೆ. ಇಷ್ಟೆಲ್ಲಾ ಕಿರಿಕಿರಿಗಳ ನಡುವೆಯೂ ಕೃಷ್ಣ ಅವರು ತಮ್ಮ ಕುರ್ಚಿ ಉಳಿಸಿಕೊಂಡಿದ್ದಾರೆ.

ಎರಡನೇ ಇನಿಂಗ್ಸ್‌ ಕನಸು

ಪಕ್ಷದ ಹೊರಗೆ ಹಾಗೂ ಒಳಗೆ ಸಮಸ್ಯೆಗಳು ಬೆಟ್ಟದಷ್ಟಿದ್ದರೂ ಕೃಷ್ಣ ಅವರು ಎರಡನೇ ಇನಿಂಗ್ಸ್‌ ಕನಸು ಕಾಣುತ್ತಿದ್ದಾರೆ. 2004 ನೇ ಇಸವಿಯಲ್ಲಿ ಮತ್ತೆ ಪಾಂಚಜನ್ಯ ಯಾತ್ರೆ ನಡೆಸಿ ಗೆದ್ದುಬರುವ ವಿಶ್ವಾಸ ಅವರಲ್ಲಿದೆ. ಪ್ರತಿಪಕ್ಷಗಳಲ್ಲಿನ ಪರಸ್ಪರ ಕಾಲೆಳೆಯುವ ಹುಟ್ಟು ಚಾಳಿಯೇ ಕೃಷ್ಣ ಅವರ ಈ ಆತ್ಮ ವಿಶ್ವಾಸಕ್ಕೆ ಕಾರಣ. ಉತ್ತರ ದಕ್ಷಿಣ ಧ್ರುವಗಳಂತಿರುವ ಹೆಗಡೆ ಹಾಗೂ ದೇವೇಗೌಡರಿಂದಾಗಿ ನನಸಾಗದ ದಳ ವಿಲೀನದ ಕನಸು, ಬೇರು ಭದ್ರ ಪಡಿಸಿಕೊಳ್ಳಲಾಗದೆ ಹತಾಶೆಯಿಂದ ಕೇಸರಿಗೆ ಜೋತು ಬಿದ್ದಿರುವ ಬಿಜೆಪಿಯಿಂದಾಗಿ ಕೃಷ್ಣ ಅವರ ಎರಡನೇ ಇನಿಂಗ್ಸ್‌ ಕನಸು ಬಲಗೊಳ್ಳುತ್ತಿದೆ.

ಅಕ್ಟೋಬರ್‌ 8 ರಂದು ಪ್ರಾರಂಭವಾದ 5 ದಿನಗಳ 'ಜನ ಸ್ಪಂದನ' ಯಾತ್ರೆ ಕೃಷ್ಣ ಅವರ ಚುನಾವಣಾ ಸಿದ್ಧತೆಯಂತೆ ಅನೇಕರಿಗೆ ಕಂಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ . ಕೇಂದ್ರ ಹಾಗೂ ಉತ್ತರ ಕರ್ನಾಟಕದ 9 ಜಿಲ್ಲೆಗಳನ್ನು ಹಾದುಹೋಗಲಿರುವ 'ಜನ ಸ್ಪಂದನ' ಯಾತ್ರೆಯ ಮೂಲಕ ಮುಖ್ಯಮಂತ್ರಿ ಕೃಷ್ಣ ಮತದಾರರ ನಾಡಿಮಿಡಿತ ಅರಿಯುವ ಪ್ರಯತ್ನದಲ್ಲಿದ್ದಾರೆ.

ಕೃಷ್ಣ ಅವರ 'ಜನ ಸ್ಪಂದನ' ಯಾತ್ರೆಯನ್ನು ಹಿಗ್ಗಾಮುಗ್ಗಾ ಟೀಕಿಸಿರುವ ಪ್ರತಿಪಕ್ಷಗಳು, ಈ ಯಾತ್ರೆಯನ್ನು ಚುನಾವಣಾ ಸ್ಟಂಟ್‌ ಎಂದು ಬಣ್ಣಿಸಿವೆ. 'ಜನ ಸ್ಪಂದನ'ದ ವಿರುದ್ಧವಾಗಿ ಭಾರತೀಯ ಜನತಾಪಕ್ಷ ಅ.11ರಿಂದ 'ಜನ ಸಂಘರ್ಷ' ಯಾತ್ರೆಯನ್ನು ಹಮ್ಮಿಕೊಂಡಿದೆ.

ಅಬ್ಬರ ಕಳಕೊಳ್ಳುತ್ತಿರುವ ಮಾಹಿತಿ ತಂತ್ರಜ್ಞಾನ : ಸಿಇಟಿ ರಾದ್ಧಾಂತ, ಕೃಪಾಂಕದ ಕಾರಣದಿಂದಾಗಿ ಸರ್ಕಾರಿ ನೌಕರಿ ಕಳಕೊಂಡ ರೋದಿಸುತ್ತಿರುವ ನತದೃಷ್ಟರ ಪ್ರಕರಣಗಳು ಕೂಡ ಕೃಷ್ಣ ಸರ್ಕಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿವೆ. ಸ್ಥಳೀಯ ಸಮಸ್ಯೆಗಳ ಆರ್ಭಟದಿಂದಾಗಿ ರಾಜ್ಯದಲ್ಲಿನ ಮಾಹಿತಿ ತಂತ್ರಜ್ಞಾನದ ಆರ್ಭಟ ಕೂಡ ಮೊದಲಿನಂತಿಲ್ಲ . ಹೈಟೆಕ್‌ ಮುಖ್ಯಮಂತ್ರಿ ಎನ್ನುವ ಹಣೆಪಟ್ಟಿ ಕಳಕೊಳ್ಳುವ ಉದ್ದೇಶದಿಂದ, ಮುಖ್ಯಮಂತ್ರಿ ಕೃಷ್ಣ ರೈತಪರ ಮುಖವಾಡ ಕೂಡ ಮಾಹಿತಿ ತಂತ್ರಜ್ಞಾನ ಸುದ್ದಿಮರೆಗೆ ಸೇರಲು ಕಾರಣವಾಗಿದೆ. ಇಷ್ಟಾದರೂ ಸಿಲಿಕಾನ್‌ ವ್ಯಾಲಿ ಎನ್ನುವ ಬೆಂಗಳೂರಿನ ಅಗ್ಗಳಿಕೆ ಮುಂದುವರಿದಿರುವುದು ಗಮನಾರ್ಹ.

ಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಸದ್ಯಕ್ಕೆ ಉತ್ತರದ ನಾಲ್ಕು ರಾಜ್ಯಗಳ ಚುನಾವಣೆಯತ್ತ ಗಮನ ಹರಿಸಿದೆ. ನವಂಬರ್‌ ತಿಂಗಳಲ್ಲಿ ನಡೆಯಲಿರುವ ರಾಜಸ್ತಾನ, ಮಧ್ಯಪ್ರದೇಶ, ಚತ್ತೀಸ್‌ಗಢ ಹಾಗೂ ದೆಹಲಿಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದರೆ, ಕರ್ನಾಟಕದಲ್ಲಿ ಕೃಷ್ಣರ ಹಾದಿ ಸುಗಮವಾಗುತ್ತದೆ.

ಅಗ್ನಿಪರೀಕ್ಷೆಗಳು ಸಾಲುಸಾಲಾಗಿ ಎದುರಾದರೂ ಕೃಷ್ಣ ಅವರು ತಮ್ಮ ನಾಲ್ಕು ವರ್ಷಗಳ ಆಡಳಿತದಲ್ಲಿ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವುದು ಗಮನಾರ್ಹ. ಅಪಾರ ತಾಳ್ಮೆ , ಅನುಭವ ಹಾಗೂ ರಾಜಕೀಯ ಮುತ್ಸದ್ಧಿತನವನ್ನು ಮೈಗೂಡಿಸಿಕೊಂಡಿರುವ ಮುಖ್ಯಮಂತ್ರಿ ಕೃಷ್ಣರ ಎರಡನೆಯ ಇನಿಂಗ್ಸ್‌ ಕನಸು ನನಸಾದೀತೆ ಎನ್ನುವುದು ಸದ್ಯದ ಕುತೂಹಲ. ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನೂ ಸಾಕಷ್ಟು ಸಮಯವಿದೆ. ಈ ಕಾಲದಲ್ಲಿ ಕಾವೇರಿ ನದಿಯಲ್ಲಿ ಎಷ್ಟು ನೀರು ಹರಿಯುವುದೊ ಯಾರಿಗೆ ಗೊತ್ತು ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister S M Krishna, who completes four years in office on October 11 and walking in style into the fifth and final year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more