ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊರೆ ಏರಿಗೆಳೆದರೆ ಮಂತ್ರಿಗಳು ನೀರಿಗೆಳೆಯುತ್ತಿದ್ದಾರೆ !

By Staff
|
Google Oneindia Kannada News

ದೊರೆ ಏರಿಗೆಳೆದರೆ ಮಂತ್ರಿಗಳು ನೀರಿಗೆಳೆಯುತ್ತಿದ್ದಾರೆ !
ಮುಖ್ಯಮಂತ್ರಿ ಕೃಷ್ಣ ಅವರ ಮಹತ್ವಾಕಾಂಕ್ಷೆಯ ‘ಜನ ಸ್ಪಂದನ’ ಕಾರ್ಯಕ್ರಮಕ್ಕೆ ಶುಕ್ರವಾರ (ಅ.10) ರಜೆ. ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿನ ಕಾರ್ಯಕ್ರಮಕ್ಕಾಗಿ ತೆರಳಿರುವ ಕೃಷ್ಣ , ಶನಿವಾರದಿಂದ ‘ಜನ ಸ್ಪಂದನ’ ಕಾರ್ಯಕ್ರಮದಲ್ಲಿ ಮರಳಿ ತೊಡಗಿಕೊಳ್ಳುವರು. ಈ ವಿರಾಮದ ಕಾಲದಲ್ಲಿ , ಈವರೆಗಿನ ಎರಡು ದಿನಗಳ ‘ಜನ ಸ್ಪಂದನ’ ಕಾರ್ಯಕ್ರಮದ ಹಿನ್ನೋಟ. ಇದು ಘಟನೆಗಳ ಅವಲೋಕನವಲ್ಲ ; ಪಾತ್ರಧಾರಿಗಳ ಅವಲೋಕನ.

  • ಎಸ್ಕೆ. ಶಾಮಸುಂದರ, (ಕ್ಯಾಂಪ್‌-ಹೊಸಪೇಟೆ)
    [email protected]
ವಿಧೇಯ ವಿದ್ಯಾರ್ಥಿಗಳಂತೆ ಅಕ್ಕಪಕ್ಕದಲ್ಲಿ ಸದಾ ಸುಳಿದಾಡುವ ನಾಲ್ಕಾರು ಸಚಿವರು. ಮುಖದ ಗೆರೆಗಳನ್ನೂ ಓದಿ ಅನ್ನಿಸಿಕೆಗಳನ್ನು ಅಮಲುಗೊಳಿಸುವ ಅಧಿಕಾರಿಗಳ ಪಡೆ. ಎಂಥ ರೋದನದ ಸದ್ದೂ ಅಡಗಿಹೋಗುವಂತೆ ಜೈಕಾರ ಕೂಗುವ ಅಭಿಮಾನಿ ವೃಂದ. ಒಂದೇ ಮಾತಿನಲ್ಲಿ ಹೇಳುವುದಾದರೆ, ಇಡೀ ರಾಜ್ಯದ ಚುಕ್ಕಾಣಿ ಹಿಡಿದ ದೊರೆ, ಈ ಇಂಥ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರನ್ನು ಒಂಟಿತನ ಕಾಡುತ್ತಿದೆಯಾ ? ರಾಜ್ಯಭಾರದ ಕಾರುಬಾರು ಆಡಳಿತ ಪಡೆಯ ಜೋರಿದ್ದೂ ಕೃಷ್ಣ ಒಂಟಿಯಾಗಿದ್ದಾರಾ ?

ಮುಖ್ಯಮಂತ್ರಿ ಕೃಷ್ಣ ಅವರ ಮಹತ್ವಾಕಾಂಕ್ಷೆಯ ‘ಜನ ಸ್ಪಂದನ’ ಕಾರ್ಯಕ್ರಮದಲ್ಲಿನ ಚಿತ್ರಗಳನ್ನು ಹತ್ತಿರದಿಂದ ಗಮನಿಸಿದರೆ, ಕೃಷ್ಣ ಅವರ ತಳಮಳಗಳು ಹಾಗೂ ಅವರ ಎದುರಿನ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ .

ಬೆಂಗಳೂರಿನ ಯಾವುದೋ ಕಾರ್ಯಕ್ರಮದಲ್ಲಿ ಕೃಷ್ಣ ಅವರ ವಿರುದ್ಧ ಬಂಡಾಯದ ಕಹಳೆ ಮೊಳಗಿಸುವ ವೃದ್ಧ ಸೇನಾನಿ ಜಾಫರ್‌ ಷರೀಫ್‌, ರಾಜಧಾನಿ ದೆಹಲಿಗೆ ಹೋಗಿ ಆತ್ಮಾವಲೋಕನ ಮಾಡಿಕೊಳ್ಳುವ ದಸರೆಯ ಮಂತ್ರಿ ಎಚ್‌.ವಿಶ್ವನಾಥ್‌ ಅವರ ಮಾತು ಬಿಡಿ; ಕೃಷ್ಣ ಅವರೊಡನಿದ್ದೂ ಇಲ್ಲದಂತಿರುವ ಸಚಿವರು ಕೃಷ್ಣ ಅವರಿಗೆ ಮಗ್ಗಲುಮುಳ್ಳಾಗಿದ್ದಾರೆ. ಈ ಸಚಿವರು ಕೃಷ್ಣ ಅವರ ಪಾಲಿಗೆ ಉಗುಳಲಾರದ ಬಿಸಿತುಪ್ಪವಾಗಿರುವುದು ‘ಜನ ಸ್ಪಂದನ’ ಕಾರ್ಯಕ್ರಮದಲ್ಲಿ ಸಂಶಯಕ್ಕೆಡೆಯಿಲ್ಲದಂತೆ ಸಾಬೀತಾಗಿದೆ.


ತುಮಕೂರಿನ ಬಟವಾಡಿಯಲ್ಲಿ ಎದುರಿಸಿದ ಪ್ರತಿರೋಧ, ಚಿಕ್ಕನಹಳ್ಳಿ ಪ್ರದೇಶದ ಜನತೆಯ ಅಸಮಾಧಾನ, ಚಿತ್ರದುರ್ಗದ ರೈತಾಪಿ ಮಂದಿಯ ಒಡಲುರಿ- ಇವುಗಳೆಲ್ಲದರ ಕೇಂದ್ರ ಮುಖ್ಯಮಂತ್ರಿ ಕೃಷ್ಣ ಎಂದು ಏಕಪಕ್ಷೀಯವಾಗಿ ಭಾವಿಸುವುದು ತಪ್ಪಾಗುತ್ತದೆ. ಇದೆಲ್ಲಾ ಪ್ರತಿರೋಧಕ್ಕೆ ಕೃಷ್ಣ ಅವರ ಸಂಪುಟದ ಗೆಳೆಯರೇ ಕಾರಣವಾಗಿದ್ದಾರೆ. ಅದು ಕೃಷ್ಣ ಅವರಿಗೂ ಗೊತ್ತು . ಕೆಲಸ ಮಾಡದ ಸೋಮಾರಿ ಸಚಿವರಿಗೂ ಗೊತ್ತು . ಆದರೆ, ರಥವೇರಿ ನಿಂತಿರುವುದು ಕೃಷ್ಣ ಅವರಾದ್ದರಿಂದ ಎಲ್ಲ ಪ್ರತಿರೋಧಕ್ಕೂ ಅವರೇ ಎದೆಯಾಡ್ಡಬೇಕಾಗಿದೆ.

ರಾಜಕಾರಣದ ಎಲ್ಲಾ ಗುಮಾನಿಗಳನ್ನೂ ಬದಿಗಿಟ್ಟು ‘ಜನ ಸ್ಪಂದನ’ ಕಾರ್ಯಕ್ರಮದ ಔಚಿತ್ಯವನ್ನು ಒಮ್ಮೆ ಯೋಚಿಸಿ: ಸಮಾಜದ ಕನಿಷ್ಠತಮನೂ ಮುಖ್ಯಮಂತ್ರಿಯನ್ನು ಭೇಟಿಯಾಗುವ, ಭೇಟಿಮಾಡಿ ತನ್ನ ಅಳಲನ್ನು ತೋಡಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಅಪರೂಪದ ಕಾರ್ಯಕ್ರಮವಿದು. ಪ್ರಧಾನಿಯಾದಗುವ ಮುನ್ನ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಜನತಾ ದರ್ಶನ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಆ ಕಾರ್ಯಕ್ರಮ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು . ‘ಜನ ಸ್ಪಂದನ’ ಹಾಗಲ್ಲ , ನೇರವಾಗಿ ಮುಖ್ಯಮಂತ್ರಿಗಳೇ ಜನತೆಗೆ ಬಳಿಗೆ ಹೋಗುವುದು, ಅವರ ಕಷ್ಟ ಸುಖ ಕೇಳುವುದು, ಕಣ್ಣೀರು ಒರೆಸುವುದು ಇಲ್ಲಿ ಸಾಧ್ಯವಾಗುತ್ತದೆ. ಅಂದರೆ, ‘ಜನ ಸ್ಪಂದನ’ ಮೂಲಕ ಜನತೆಯ ಎಲ್ಲ ಕಷ್ಟಗಳು ಪರಿಹಾರವಾಗುತ್ತವೆ, ರಾಜ್ಯದಲ್ಲಿ ಮಳೆಬೆಳೆಯಾಗುತ್ತದೆ, ಬರ ನೀಗುತ್ತದೆ ಎಂದರ್ಥವಲ್ಲ . ಇಂಥ ಯಾವ ಭ್ರಮೆಯೂ ಕೃಷ್ಣ ಅವರಿಗೂ ಇಲ್ಲ . ಧರೆಗೆ ಸ್ವರ್ಗವನ್ನಿಳಿಸುವ ಯಾವ ಆಶ್ವಾಸನೆಯನ್ನೂ ಕೃಷ್ಣ ಅವರು ನೀಡುತ್ತಿಲ್ಲ . ಕಾವೇರಿ ನೀರು, ಭದ್ರಾ ಮೇಲ್ದಂಡೆ ಯೋಜನೆ, ಮುಂತಾದ ಸಮಸ್ಯೆಗಳ ಬಗ್ಗೆ ಕೃಷ್ಣ ವಸ್ತುನಿಷ್ಠವಾಗಿ ಮಾತನಾಡುತ್ತಿದ್ದಾರೆ. ಹಾಗಾದರೆ, ಜನಸ್ಪಂದನದ ಔಚಿತ್ಯವೇನು ಎಂದಿರಾ? ಆ ಕುರಿತು ಕೃಷ್ಣ ಅವರು ಹೇಳುವುದೇನೆಂದರೆ :

‘ಅರ್ಜಿ ಕೊಟ್ಟ ತಕ್ಷಣ ಜನತೆಯ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದಲ್ಲ . ಎಲ್ಲ ಅರ್ಜಿಗಳಿಗೂ ಸಮರ್ಪಕ ನ್ಯಾಯ ಸಿಗುತ್ತದೆಂದೂ ನಾನು ಹೇಳಲಾರೆ. ಭರವಸೆಗಳನ್ನು ನೀಡುವುದು, ಅಂಗೈಯಲ್ಲಿ ಆಕಾಶ ತೋರಿಸುವುದು ಈ ಕಾರ್ಯಕ್ರಮದ ಉದ್ದೇಶವಲ್ಲ . ಜನರ ಕಷ್ಟಗಳನ್ನು ನೇರವಾಗಿ ಅರಿಯುವುದು, ಜನರೊಂದಿಗೆ ಸ್ಪಂದಿಸುವುದು, ಜನತೆ ಹಾಗೂ ಪ್ರಭುತ್ವದ ನಡುವೆ ನಿಕಟ ಸಂಬಂಧವನ್ನು ಏರ್ಪಡಿಸುವುದು ಈ ಯಾತ್ರೆಯ ಉದ್ದೇಶ’ ಎಂದು ಕೃಷ್ಣ ಹೇಳುತ್ತಾರೆ. ಆದರೆ, ಈವರೆಗೆ ಸಾಧ್ಯವಾಗಿರುವುದಾದರೂ ಏನು ?

ಹೋದದೆಡೆಯಲ್ಲೆಲ್ಲ ಮುಖ್ಯಮಂತ್ರಿಗಳಿಗೆ ಜನತೆಯಿಂದ ಭಾರೀ ಪ್ರತಿರೋಧ ಎದುರಾಗುತ್ತಿದೆ. ಚಿತ್ರದುರ್ಗದಲ್ಲಂತೂ ಕೃಷ್ಣ ಅವರು ಜನರೊಂದಿಗೆ ಬೆರೆತು ಮಾತನಾಡುವ ಅವಕಾಶವೇ ಸೃಷ್ಟಿಯಾಗಿಲ್ಲ . ಜನ ಸ್ಪಂದನ ಯಾತ್ರೆಯ ಎರಡನೇ ದಿನ ಕೃಷ್ಣ ಅವರ ಮೊಗದಲ್ಲಿ ಬಳಲಿಕೆ ಎದ್ದು ಕಾಣುತ್ತಿದೆ.

‘ಜನ ಸ್ಪಂದನ’ ವನ್ನು ಚುನಾವಣಾ ಸ್ಟಂಟ್‌ ಎಂದು ಪ್ರತಿಪಕ್ಷಗಳ ರೀತಿಯಲ್ಲಿ ತಳ್ಳಿಹಾಕುವುದು ಸುಲಭ. ಆದರೆ, ‘ಜನ ಸ್ಪಂದನ’ ಕಾರ್ಯಕ್ರಮದ ಆಳದಲ್ಲೊಂದು ಸದುದ್ದೇಶದ ಬೀಜವಿದೆ. ವಿಪರ್ಯಾಸವೆಂದರೆ, ಆ ಉದ್ದೇಶ- ಪ್ರತಿಪಕ್ಷಗಳ ಮಾತಿರಲಿ- ಕೃಷ್ಣ ಅವರ ಸಂಪುಟ ಸದಸ್ಯರಿಗೂ ಅರ್ಥವಾದಂತಿಲ್ಲ . ಅರ್ಥವಾದರೂ ಅದು ಅನುಷ್ಠಾನಗೊಳ್ಳುವುದು ಅವರಿಗೆ ಬೇಕಾದಂತಿಲ್ಲ .

ಕೃಷ್ಣ ಅವರ ಜೊತೆಗಿರುವ ಸಚಿವರ ಹೊಣೆಗೇಡಿತನ ಹೇಗಿದೆ ಗೊತ್ತಾ ? ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿರುವ ಬಹುತೇಕ ಸಚಿವರು ತಂತಮ್ಮ ಕ್ಷೇತ್ರಗಳ ಅಭಿವೃದ್ಧಿಯ ಕುರಿತು ತಲೆ ಕೆಡಿಸಿಕೊಂಡಿಲ್ಲ . ಕೆಲಸ ಮಾಡುವುದಿರಲಿ, ಯೋಚಿಸುವ ಕಷ್ಟವೂ ಇವರಿಗಿದ್ದಂತಿಲ್ಲ . ಚುನಾವಣಾ ತಂತ್ರಗಳನ್ನು ಬಳಸಿ, ಜನರ ಬಡತನಕ್ಕೆ ಗಾಳ ಹಾಕುವ ಮೂಲಕ ಓಟು ಗಿಟ್ಟಿಸಿಕೊಂಡು ಗೆಲ್ಲುವುದು, ಜೇಷ್ಠತೆಯ ಆಧಾರದ ಮೇಲೆ ಮಂತ್ರಿ ಸ್ಥಾನ ಗಿಟ್ಟಿಸುವುದು ಕೆಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಚಿತ್ರದುರ್ಗ ಜಿಲ್ಲೆಯ ಕೆ.ಎಚ್‌.ರಂಗನಾಥ್‌ ಅವರನ್ನೇ ತೆಗೆದುಕೊಳ್ಳಿ, ಈ ಮನುಷ್ಯನಿಗೆ ‘ಜನ ಸ್ಪಂದನ’ ಕಾರ್ಯಕ್ರಮದಲ್ಲಿ ದೊರೆತ ಸ್ವಾಗತವನ್ನು ಮರ್ಯಾದಸ್ಥರಾರೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ . ಅದಕ್ಕೆ ಕಾರಣ ರಂಗನಾಥ್‌ ತಮ್ಮ ಕ್ಷೇತ್ರದ ಬಗ್ಗೆ ಗಮನ ಹರಿಸದಿರುವುದು. ಇವತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ತಾಂಡವವಾಡುತ್ತಿರುವ ಬರಕ್ಕೆ ಬಾರದಿರುವ ಮಳೆ ಎಷ್ಟರಮಟ್ಟಿಗೆ ಕಾರಣವೋ, ಜನ ಪ್ರತಿನಿಧಿ ರಂಗನಾಥ್‌ ಅವರ ಹೊಣೆಗೇಡಿತನವೂ ಅಷ್ಟೇ ಕಾರಣ. ಜನರ ಅಳು ಒರೆಸಬೇಕಾದ ರಾಜಕಾರಣಿಗಳಿಗೆ ಬಡವರ ನೋವು ಅರ್ಥವಾಗುವುದಿಲ್ಲ . ಎಂಥ ಬೈಗುಳಗಳಿಗೂ ತೇವಗೊಳ್ಳದಷ್ಟು ಮರಗಟ್ಟಿಹೋಗಿರುವ ರಂಗನಾಥ್‌ ರೀತಿಯ ರಾಜಕಾರಣಿಗಳಿಂದಾಗಿ ಜನತೆಯ ರೋದನ ಅರಣ್ಯರೋದನವಾಗಿದೆ.

ಕೆಲಸ ಮಾಡುವುದರಲ್ಲಿ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಇದ್ದುದರಲ್ಲಿ ವಾಸಿ. ಖರ್ಗೆಯ ಪ್ರಾಮಾಣಿಕತೆಯ ಬಗೆಗೂ ಅಡ್ಡಮಾತುಗಳಿಲ್ಲ . ಆದರೆ, ಅವರಿಗೇಕೊ ‘ಜನ ಸ್ಪಂದನ’ ಯಾತ್ರೆಯಾಂದು ಹೊರೆ ಅನ್ನಿಸಿದಂತಿದೆ. ಮೊದಲ ದಿನ ಭಾರಹೃದಯದಿಂದ ಕೃಷ್ಣ ಅವರ ಜೊತೆಯಿದ್ದ ಖರ್ಗೆ, ಮಾನವ ಹಕ್ಕುಗಳ ಆಯೋಗದ ಸಭೆಯ ನೆಪದಿಂದ ಎರಡನೇ ದಿನವೇ ‘ಜನ ಸ್ಪಂದನ’ದಿಂದ ಕಳಚಿಕೊಂಡಿದ್ದಾರೆ. ಇನ್ನೊಬ್ಬ ಹಿರಿಯ ಸಚಿವ ಧರ್ಮಸಿಂಗ್‌ ಅವರ ಪಾಲಿಗೆ ‘ಜನ ಸ್ಪಂದನ’ ಯಾತ್ರೆ ವಿಶ್ರಾಂತಿಯ ಕಾಲವಾಗಿ ಪರಿಣಮಿಸಿದೆ. ಖರ್ಗೆ ಹಾಗೂ ಧರ್ಮಸಿಂಗ್‌ರಂಥ ಹಿರಿಯ ಸಚಿವರಿಗೆ ‘ಜನ ಸ್ಪಂದನ’ ಒಲ್ಲದ ಗಂಡನ ಸಹವಾಸದಂತಾಗಿದೆ. ಯಾತ್ರೆಯ ಎಲ್ಲಾ ಕ್ರೆಡಿಟ್‌ ಕೃಷ್ಣ ಅವರ ಅಕೌಂಟಿಗೆ ಜಮೆಯಾಗುವುದು ಇಷ್ಟವಿಲ್ಲದಂತೆ ಹಿರಿಯ ಸಚಿವರು ನಡೆದುಕೊಳ್ಳುತ್ತಿದ್ದಾರೆ. ಬಹುಶಃ, ಕೃಷ್ಣ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಕಲ್ಪನೆಯನ್ನೇ ಈ ಸಚಿವರುಗಳು ಅರಗಿಸಿಕೊಳ್ಳಲಾರರು. ಕಾಂಗ್ರೆಸ್‌ ಪಕ್ಷ ಇನ್ನೊಂದು ಬಾರಿ ಗೆಲ್ಲುವುದನ್ನು ಗದ್ದುಗೆ ಹಿಡಿಯುವುದನ್ನು ಎಲ್ಲರೂ ಸ್ವಾಗತಿಸುತ್ತಾರೆ. ಆದರೆ, ಮುಖ್ಯಮಂತ್ರಿ ಸ್ಥಾನದಲ್ಲಿ ಮತ್ತೆ ಕೃಷ್ಣ ಕೂರುವುದು ಇವರಾರಿಗೂ ಬೇಕಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಗುಟ್ಟು . ಆ ಕಾರಣದಿಂದಲೇ ಕೃಷ್ಣರ ಇಮೇಜು ಹೆಚ್ಚುವ ಯಾವ ಕಾರ್ಯಕ್ರಮವಾದರೂ, ಖರ್ಗೆ ಹಾಗೂ ಧರ್ಮಸಿಂಗ್‌ರ ಮುಖಗಳು ದಪ್ಪಗಾಗುತ್ತವೆ ಕಪ್ಪಗಾಗುತ್ತವೆ. ‘ಜನ ಸ್ಪಂದನ’ ಯಾತ್ರೆಯಲ್ಲಂತೂ ಕನಿಷ್ಠ ತೋರಿಕೆಯ ಜವಾಬ್ದಾರಿಯನ್ನಾದರೂ ಪ್ರದರ್ಶಿಸುವಲ್ಲಿ ಖರ್ಗೆ ಹಾಗೂ ಧರ್ಮಸಿಂಗ್‌ ಆಸಕ್ತಿ ತೋರುತ್ತಿಲ್ಲ . ಧರ್ಮಸಿಂಗ್‌ ಅವರಂತೂ ಜನ ಸಮುದಾಯದತ್ತ ಕೈ ಬೀಸುವ ಕೈ ಮುಗಿಯುವ ರಾಜಕಾರಣಿಯ ವರಸೆಗಳನ್ನು ಮರೆತವರಂತೆ ವರ್ತಿಸುತ್ತಿದ್ದಾರೆ. ಅವರದು ಐರಾವತ ಬಸ್ಸಿನಲ್ಲಿ ತೂಕಡಿಕೆ.

ಕೃಷ್ಣರ ವಿರುದ್ಧದ ಅಸಮಾಧಾನವನ್ನು ಧರ್ಮಸಿಂಗ್‌ ಈ ಮುನ್ನ ಕೂಡ ಢಾಳಾ ಢಂಗುರವಾಗಿ ಪ್ರದರ್ಶಿಸಿದ್ದಾರೆ. ದೆಹಲಿಗೆ ಹೋಗಿ ಕೃಷ್ಣರ ವಿರುದ್ಧ ಧರ್ಮಸಿಂಗ್‌ ಬಂಡಾಯದ ಬಾವುಟ ಹಾರಿಸಿದ್ದೀಗ ಇತಿಹಾಸ. ಬಂಡಾಯದ ನಂತರವೂ ಧರ್ಮಸಿಂಗ್‌ ಕೃಷ್ಣ ಅವರ ಸಂಪುಟದಲ್ಲಿ ಮುಂದುವರಿದಿದಿದ್ದಾರೆ, ಅದು ರಾಜಕಾರಣ !

ಹಿರಿಯ ಸಚಿವರ ಪಾಡು ಇದಾದರೆ, ಉಳಿದ ಸಚಿವರ ಬಗ್ಗೆ ಏನು ಹೇಳುವುದು ? ಜನಸೇವೆಯ ಎಬಿಸಿಡಿ ಗೊತ್ತಿಲ್ಲದ ಅಲ್ಲಂ ವೀರಭದ್ರಪ್ಪ , ಸಭೆ ಸಮಾರಂಭಗಳಲ್ಲಿ ಹಾಡು ಹೇಳುವುದು ಹಾಗೂ ಪೆಕರುಪೆಕರಾಗಿ ಮಾತನಾಡುವುದನ್ನೇ ಮಂತ್ರಿಗಿರಿ ಎಂದು ತಿಳಿದುಕೊಂಡಿರುವ ವಿಧೇಯ ವಿದ್ಯಾರ್ಥಿನಿ ಮೋಟಮ್ಮ , ಸಮಸ್ಕೃತಿಯ ಉದ್ಧಾರಕಿ ರಾಣಿ ಸತೀಶ್‌.... ಅಂತವರಿಂದ ಏನನ್ನು ತಾನೇ ನಿರೀಕ್ಷಿಸುವುದು? ಇದ್ದುದರಲ್ಲಿ ಹರಯವಿನ್ನೂ ಉಳಿದವರಂತೆ ಓಡಾಡುತ್ತಿರುವ ಹಾಗೂ ಮಾಡಬೇಕಿರುವ ಕೆಲಸದ ಬಗೆಗೆ ಯೋಚಿಸುವ ಸಗೀರ್‌ ಅಹಮದ್‌, ಡಾ.ಜಿ.ಪರಮೇಶ್ವರ್‌ ಅವರುಗಳೇ ವಾಸಿ. ಭಿನ್ನಮತದ ಮಾತಾಡಿದರೂ ಎಚ್‌.ವಿಶ್ವನಾಥ್‌ ಕೆಲಸದಲ್ಲಿ ಕಳಪೆಯೇನಲ್ಲ . ‘ಜನ ಸ್ಪಂದನ’ದಲ್ಲಿ ಮುಖ್ಯಮಂತ್ರಿಗಳ ಉತ್ಸಾಹ ಅಲ್ಪಸ್ವಲ್ಪವಾದರೂ ಉಳಿಯುವಲ್ಲಿ ಇಂಥ ಕಾರ್ಯತತ್ಪರ ಸಚಿವರ ಪಾತ್ರ ದೊಡ್ಡದು.

ಕೃಷ್ಣ ಅವರ ನಡೆಗಳನ್ನು ಪ್ರತಿಪಕ್ಷಗಳು ಟೀಕಿಸಿದಲ್ಲಿ ಅದರಲ್ಲೊಂದು ಅರ್ಥವಿದೆ. ಆದರೆ, ಆಡಳಿತ ಪಕ್ಷದವರೇ ಮಗ್ಗುಲು ಮುಳ್ಳಾದರೆ ರಾಜ್ಯದ ಹಿತ ಸಾಧ್ಯವಾಗುವುದಾದರೂ ಹೇಗೆ ? ಜನ ಸ್ಪಂದನದಂತಹ ಒಂದು ಅಪರೂಪದ ಕಾರ್ಯಕ್ರಮ ಹಳ್ಳ ಸೇರುವಂತೆ ಸಚಿವರುಗಳೇ ವರ್ತಿಸಿದರೆ ಹೇಗೆ ?

ಕೃಷ್ಣ ಅವರನ್ನು ಸಮರ್ಥಿಸುವುದು, ಅವರ ರಾಜಕಾರಣದ ನಡೆಗಳನ್ನು ಬೆಂಬಲಿಸುವುದು ಈ ಬರಹದ ಉದ್ದೇಶವಲ್ಲ . ಒಳ್ಳೆಯದೊ ಕೆಟ್ಟದ್ದೊ , ಒಗ್ಗಟ್ಟಿನಿಂದ ಕೆಲಸ ಮಾಡುವ ಮನಸ್ಸು ನಮ್ಮ ರಾಜಕಾರಣಿಗಳಿಗೆ ಇಲ್ಲದೆ ಇರುವ ಹಾಗೂ ಈ ಅನೈಕ್ಯತೆಯಿಂದಾಗಿ ಜನ ಸ್ಪಂದನದಂಥ ಅರ್ಥಪೂರ್ಣ ಕಾರ್ಯಕ್ರಮಗಳು ಹಾಸ್ಯಾಸ್ಪದವಾಗಿ ತೋರುತ್ತಿರುವ ವ್ಯಥೆಯಿದು. ಮನೆಯ ಕಾರ್ಯಭಾರ ಬೆನ್ನಿಗೆ ಕಟ್ಟಿಕೊಂಡ ಹಿರಿಮಗನನ್ನು ಆತನ ಪಾಡಿಗೆ ಬಿಟ್ಟು ನಿರ್ಲಕ್ಷಿಸುವ ತಮ್ಮಂದಿರಂತೆ ಕೃಷ್ಣ ಅವರ ಸಂಪುಟ ಸದಸ್ಯರೂ ವರ್ತಿಸುತ್ತಿರುವಂತಿದೆ. ಇದು ಕಾಂಗ್ರೆಸ್‌ ಸರ್ಕಾರದ ದುರಂತ ಮಾತ್ರವಲ್ಲ , ಇವತ್ತಿನ ರಾಜಕಾರಣದ ದುರಂತವೂ ಹೌದು.

ಜನಸ್ಪಂದನ ಯಾತ್ರೆಗೆ ಶುಕ್ರವಾರ (ಅ.10) ರಜೆ. ಶನಿವಾರದಿಂದ ಜನಸ್ಪಂದನ ಮತ್ತೆ ಆರಂಭ. ಬಸ್ಸು ಸಾಗಬೇಕಾದ ಹಾದಿ ದೊಡ್ಡದಿದೆ. ದಾರಿಯಲ್ಲಿ ಇನ್ನೂ ಏನೇನು ಅವಾಂತರಗಳು ಕಾದಿವೆಯಾ ?


ಜನ ಸ್ಪಂದನ ಬಸ್‌ ಯಾತ್ರೆ
ಮೊದಲ ದಿನ
ಎರಡನೇ ದಿನ

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X