• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್ಸೆನ್‌ ಸಮಾಧಿಗೆ ನಮನ, ದುರ್ಗದ ಆಸ್ಪತ್ರೆಯಲ್ಲಿ ರೋದನ

By Staff
|

ಎಸ್ಸೆನ್‌ ಸಮಾಧಿಗೆ ನಮನ, ದುರ್ಗದ ಆಸ್ಪತ್ರೆಯಲ್ಲಿ ರೋದನ

ಜನಸ್ಪಂದನ ಕಾರ್ಯಕ್ರಮದ 2 ನೇ ದಿನದ ಪ್ರತ್ಯಕ್ಷ ವರದಿ

  • ಎಸ್ಕೆ. ಶಾಮಸುಂದರ, ಚಿತ್ರದುರ್ಗದಿಂದ

ಚಿತ್ರದುರ್ಗ : ಭೇಟಿ ನೀಡಿದಲ್ಲೆಲ್ಲ ಎಡತಾಕುವ ನೂರೆಂಟು ದೂರು ದುಮ್ಮಾನ ನೋವುಗಳ ನಡುವೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ‘ಜನ ಸ್ಪಂದನ’ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ.

‘ಜನ ಸ್ಪಂದನ’ ಯಾತ್ರೆಯ ಎರಡನೇ ದಿನ, ಅಕ್ಟೋಬರ್‌ 9 ಗುರುವಾರ ಬೆಳಗ್ಗೆ, ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ದಾವಣಗೆರೆ ಸಮೀಪದ ಸಿಬಾರದಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌.ನಿಜಲಿಂಗಪ್ಪನವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಹಿರಿಯ ನಾಯಕನ ಸಮಾಧಿಗೆ ಗೌರವ ಸಲ್ಲಿಸಿದರು.

ಐದೂವರೆ ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ನಿಜಲಿಂಗಪ್ಪ (ಎಸ್ಸೆನ್‌)ನವರ ಸಮಾಧಿಯಿದ್ದು , ಈ ಸ್ಥಳವನ್ನು ಸ್ಮಾರಕವನ್ನಾಗಿಸುವ ಯೋಜನೆ ಪ್ರಗತಿಯಲ್ಲಿದೆ. ನಿಜಲಿಂಗಪ್ಪನವರ ಪುತ್ರ ಕಿರಣ್‌ಶಂಕರ್‌ ಈ ಯೋಜನೆಯ ಕಾರ್ಯಭಾರ ಹೊತ್ತಿದ್ದಾರೆ. ಕಿರಣ್‌ಶಂಕರ್‌ ಕರ್ನಾಟಕ ಸರ್ಕಾರದ ಮುಖ್ಯ ವಾಸ್ತುಶಿಲ್ಪಿ . ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಮಹತ್ವಾಕಾಂಕ್ಷೆಯ ವಾಸ್ತುಶಿಲ್ಪ , ನಿರ್ಮಾಣ ಹಂತದಲ್ಲಿರುವ ವಿಧಾನಸೌಧ ಸೌತ್‌ಬ್ಲಾಕ್‌ ಕಟ್ಟಡದ ಮುಖ್ಯ ವಾಸ್ತುಶಿಲ್ಪಿ ಕಿರಣ್‌ಶಂಕರ್‌ಅವರದೇ.

ಎಸ್ಸೆನ್‌ ಸಮಾಧಿ ಸ್ಥಳವನ್ನು ಸ್ಮರಣಿಕೆಯಾಗಿಸುವ ಯೋಜನೆ ಕುಂಟುತ್ತಾ ಸಾಗಲು ಪ್ರಮುಖ ಕಾರಣ, ದುಡ್ಡಿನ ಕೊರತೆ. ಎರಡು ಕೋಟಿ ರುಪಾಯಿಯ ಈ ಯೋಜನೆಗೆ 68 ಲಕ್ಷ ರುಪಾಯಿ ಸಂಗ್ರಹವಾಗಿದೆ. ಈ 68 ಲಕ್ಷದಲ್ಲಿ , ದಾವಣಗೆರೆಯ ಭಾರೀ ಕುಳ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಶಾಮನೂರು ಶಿವಶಂಕರಪ್ಪ ದೇಣಿಗೆ ನೀಡಿರುವ 50 ಲಕ್ಷ ರುಪಾಯಿಯೂ ಸೇರಿದೆ.

ಸ್ಮರಣಿಕೆಗೆ ಸುರಿಯುವ ಹಣವನ್ನು ಆಸ್ಪತ್ರೆಯ ಅಭಿವೃದ್ಧಿಗೆ ಬಳಸಿದರೆ ಒಳಿತು ಎನ್ನುವ ಅಭಿಪ್ರಾಯವೂ ದುರ್ಗದ ಜನತೆಯಲ್ಲಿದೆ. ನಿಜಲಿಂಗಪ್ಪನವರು ಸ್ವಭಾವತಃ ಸರಳ ವ್ಯಕ್ತಿಯಾದರೂ ಅವರ ಸಮಾಧಿಯನ್ನು ಭವ್ಯ ಸ್ಮರಣಿಕೆಯನ್ನಾಗಿಸುವ ಅಭಿಲಾಷೆ ಎಸ್ಸೆನ್‌ ಪುತ್ರ ಕಿರಣ್‌ಶಂಕರ್‌ ಅವರದು. ಉಳ್ಳವರು ಶಿವಾಲಯವ ಮಾಡುವರು !

ಸರ್ಕಾರಿ ಆಸ್ಪತ್ರೆಯಲ್ಲಿ ಕೃಷ್ಣ

ಎಸ್ಸೆನ್‌ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಭೇಟಿ ನೀಡಿದರು. ಯಥಾ ಪ್ರಕಾರ ಸಚಿವರ ದಂಡು ಮುಖ್ಯಮಂತ್ರಿಗಳನ್ನು ಹಿಂಬಾಲಿಸಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ , ಆರೋಗ್ಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ರಂಗನಾಥ್‌ ಉತ್ಸಾಹದಿಂದ ಓಡಾಡುತ್ತಿದ್ದರು.

ಸರ್ಕಾರಿ ಆಸ್ಪತ್ರೆಯಲ್ಲಿ ನೂರಾರು ರೋಗಿಗಳು ಮುಖ್ಯಮಂತ್ರಿ ಕೃಷ್ಣ ಅವರಲ್ಲಿ ತಮ್ಮ ದುಃಖ ತೋಡಿಕೊಂಡರು. ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ದೊರೆಯದ ಗೌರಮ್ಮ ಎನ್ನುವ ಮಹಿಳೆ ಮುಖ್ಯಮಂತ್ರಿಗಳನ್ನು ಸಾರಾಸಗಟಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಎದೆನೋವು ಹಾಗೂ ಕಣ್ಣಿನ ತೊಂದರೆಯಿಂದಾಗಿ ಆಸ್ಪತ್ರೆಗೆ ಬಂದು ಔಷಧಿ ದೊರೆಯದ ಕಾರಣ ಗೌರಮ್ಮನ ಸಿಟ್ಟು ಬಾಯಿಗೆ ಬಂದಿತ್ತು . ‘ಔಷಧಿಯನ್ನೆಲ್ಲಾ ಬೆಂಗಳೂರಿನಲ್ಲೇ ಇಟ್ಕೊಂಡು ಏನು ಮಾಡ್ತೀರಿ’ ಎಂದು ಗೌರಮ್ಮ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಚಿವರು ಹಾಗೂ ಅಧಿಕಾರಿಗಳು ಗೌರಮ್ಮನನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು.

ಇದು ಕ್ಯಾನ್ಸರ್‌ಪೀಡಿತ ಆಸ್ಪತ್ರೆ !

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಗೋಳು ಇಂದಿನದಲ್ಲ . ಇಲ್ಲಿನ ರೋಗಿಗಳ ರೋದನವೂ ಇಂದಿನದಲ್ಲ . ಈ ಆಸ್ಪತ್ರೆಯ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಸ್ಥಳೀಯರು ದಟ್ಸ್‌ಕನ್ನಡ.ಕಾಂನೊಂದಿಗೆ ಅಲವತ್ತುಕೊಂಡರು.

ಒಂದು ವರ್ಷದ ಹಿಂದಷ್ಟೇ ಈ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದನ್ನು ನಾಯಿ ಕಚ್ಚಿಕೊಂಡು ಹೋದ ಘಟನೆ ಭಾರೀ ಸುದ್ದಿಯಾಗಿತ್ತು . 6 ತಿಂಗಳ ಹಿಂದೆ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲ ಅವರು ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಭ್ರಷ್ಟ ವೈದ್ಯರಿಗೆ ನೀರಿಳಿಸಿದ್ದರು. ರೋಗಿಗಳಿಂದ ವೈದ್ಯರು ಪಡೆದಿದ್ದ ಲಂಚದ ಹಣವನ್ನು ನ್ಯಾಯಮೂರ್ತಿ ವೆಂಕಟಾಚಲ ವಾಪಸ್ಸು ಕೊಡಿಸಿ, ವೈದ್ಯಾಧಿಕಾರಿಗಳಿಗೆ ಛೀಮಾರಿ ಹಾಕಿದ್ದರು. ಲೋಕಾಯುಕ್ತರ ಭೇಟಿಯಿಂದಲಾದರೂ ಆಸ್ಪತ್ರೆ ಅಭಿವೃದ್ಧಿಯಾಗುತ್ತೆ ಎಂದು ಜನ ಕನಸು ಕಂಡಿದ್ದರು. ಆದರೆ, ಆಸ್ಪತ್ರೆಗೆ ತಗುಲಿರುವ ಕ್ಯಾನ್ಸರ್‌ ರೋಗ ಸುಲಭಕ್ಕೆ ಬಗ್ಗುವಂಥದ್ದಲ್ಲ .

ಆರೋಗ್ಯ ಸಚಿವ ಕಾಗೋಡು ತಿಮ್ಮಪ್ಪ ಹದಿನೈದು ದಿನಗಳ ಹಿಂದಷ್ಟೇ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ನಡೆಸಿದ ಶಾಸ್ತ್ರವೂ ನಡೆದಿದೆ. ಆದರೂ ಮೂಲಭೂತ ಸೌಕರ್ಯಗಳು ಈವರೆಗೂ ಉತ್ತಮಗೊಂಡಿಲ್ಲ .

ಪ್ರಸ್ತುತ ಮುಖ್ಯಮಂತ್ರಿಗಳ ಭೇಟಿಯ ಕಾರಣದಿಂದಾಗಿ ಜಿಲ್ಲಾ ಆಸ್ಪತ್ರೆ ಸುಣ್ಣಬಣ್ಣ ಬಳಿದುಕೊಂಡಿದೆ. ಆದರೆ ಆಸ್ಪತ್ರೆಯಾಳಗಿನ ಜೀವಗಳಿಗೆ ಮಾತ್ರ ನೆಮ್ಮದಿ, ಸಾಂತ್ವನ ಮರೀಚಿಕೆಯಾಗಿಯೇ ಇದೆ.

ಕೃಷ್ಣ ಸಂಪುಟ ಆಸ್ಪತ್ರೆಯಲ್ಲಿದ್ದಾಗಲೇ, ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು ರಕ್ತ ಸುರಿಯುತ್ತಿದ್ದ ವ್ಯಕ್ತಿಯಾಬ್ಬನನ್ನು ಚಿಕಿತ್ಸೆಗಾಗಿ ಗುಂಪೊಂದು ಕರೆತಂದಿತು. ಆ ಗಾಯಾಳುವಿಗೆ ಯಾವ ರೀತಿಯ ಚಿಕಿತ್ಸೆ ದೊರೆಯಿತೋ ತಿಳಿಯಲಿಲ್ಲ !

ಆಸ್ಪತ್ರೆ ಮೇಲ್ದರ್ಜೆಗೆ : ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದಾಗಿ ಆರೋಗ್ಯ ಸಚಿವ ಕಾಗೋಡು ತಿಮ್ಮಪ್ಪ ಜನ ಸ್ಪಂದನ ಕಾರ್ಯಕ್ರಮದ ವೇಳೆ ಭರವಸೆ ನೀಡಿದರು. ಸರ್ಕಾರ 80 ವೈದ್ಯರನ್ನು ನೇಮಕ ಮಾಡಿಕೊಳ್ಳು ನಿರ್ಧರಿಸಿದೆ. ಈ ವೈದ್ಯರು ರಾಜ್ಯದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುವರು ಎಂದು ಕಾಗೋಡು ತಿಳಿಸಿದರು.

ಭದ್ರಾ ಯೋಜನೆಗೆ ಇನ್ನಷ್ಟು ಕಾಲ ಕಾಯಬೇಕು : ಚಿತ್ರದುರ್ಗ ಪ್ರದೇಶದ ರೈತಾಪಿ ವರ್ಗದ ಪ್ರಮುಖ ಬೇಡಿಕೆಯಾದ ಭದ್ರ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ತಗುಲುತ್ತದೆ ಎಂದು ಕೃಷ್ಣ ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಆಡಳಿತ ಮಂಜೂರಾತಿ ಸಿಕ್ಕಿದೆ. ಆದರೆ, 2700 ಕೋಟಿ ರುಪಾಯಿಗಳ ಈ ಯೋಜನೆ ತಕ್ಷಣವೇ ಪೂರ್ಣಗೊಳ್ಳುವಂತದ್ದಲ್ಲ . ಸರ್ವೆ ಕಾರ್ಯವೇ ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಕೃಷ್ಣ ಹೇಳಿದರು.

ಚಿತ್ರದುರ್ಗದ ಪೆರೇಡ್‌ ಮೈದಾನದಲ್ಲಿ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷ್ಣ ಜನತೆಯಿಂದ ದೂರುಗಳ ಅರ್ಜಿ ಸ್ವೀಕರಿಸಿದರು. ಸುಮಾರು ನಾಲ್ಕೈದು ಸಾವಿರ ಮಂದಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಡೀ ಕಾರ್ಯಕ್ರಮದಲ್ಲಿ ಕೃಷ್ಣ ಅವರೂ ಸೇರಿದಂತೆ ಯಾವ ಸಚಿವರೂ ಮಾತನಾಡಲಿಲ್ಲ . ಇಡೀ ಕಾರ್ಯಕ್ರಮ ಅರ್ಜಿ ಸ್ವೀಕಾರಕ್ಕೆ ಮಾತ್ರ ಸೀಮಿತವಾದುದು ಜನರ ಗೊಣಗಾಟಕ್ಕೆ ಆಸ್ಪದ ಕೊಟ್ಟಿತ್ತು .

ಲಾಠಿ ಪ್ರಹಾರ : ಕೃಷ್ಣ ಅವರು ಜನ ಸ್ಪಂದನ ಕಾರ್ಯಕ್ರಮದಲ್ಲಿ ತೊಡಗಿರುವಾಗಲೇ ಕೆಲವು ರೈತ ಮುಖಂಡರು ಪ್ಲೇವಿನ್‌ ಲಾಟರಿಯ ವಿರುದ್ಧ ಪ್ರತಿಭಟನೆ ನಡೆಸಿದರು. ಜಿಲ್ಲಾ ನ್ಯಾಯಾಲಯದ ಹಿಂಭಾಗದಲ್ಲಿನ ಪ್ಲೇವಿನ್‌ ಅಂಗಡಿಗಳ ಮೇಲೆ ದಾಳಿ ನಡೆಸಿದ ಉದ್ರಿಕ್ತರು, ಪ್ಲೇವಿನ್‌ ಯಂತ್ರಗಳನ್ನು ನಾಶ ಪಡಿಸಿದರು. ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಬಳಲಿದ ಕೃಷ್ಣ

ಐದು ದಿನಗಳ ಜನ ಸ್ಪಂದನ ಯಾತ್ರೆಯ ಎರಡನೇ ದಿನವೇ ಮುಖ್ಯಮಂತ್ರಿ ಕೃಷ್ಣ ಅವರು ಬಳಲಿದಂತಿದೆ. ರಾಶಿರಾಶಿಯಾಗಿ ಬರುತ್ತಿರುವ ದೂರುಗಳು, ಜನರ ಸಿಡಿಮಿಡಿ, ಬರದ ಚಿತ್ರಗಳೊಂದಿಗೆ ದೈಹಿಕ ಬಳಲಿಕೆಯೂ ಸೇರಿ ಮುಖ್ಯಮಂತ್ರಿಗಳು ತುಸು ವಿಚಲಿತರಾದಂತೆ ಕಂಡುಬರುತ್ತಿದೆ. ರೇಷನ್‌ ಕಾರ್ಡ್‌ನಿಂದ ಹಿಡಿದು, ನಿರುದ್ಯೋಗ, ಅನಾರೋಗ್ಯ, ನಿವೇಶನ, ವಸತಿ, ಕುಡಿಯುವ ನೀರು, ಜಮೀನು ಒತ್ತುವರಿ, ಪರಿಹಾರ... ಇತ್ಯಾದಿ ಸಮಸ್ಯೆಗಳನ್ನು ಜನರು ಮುಖ್ಯಮಂತ್ರಿಗಳ ಮುಂದಿಡುತ್ತಿದ್ದಾರೆ.

ಬಸ್‌ ಪ್ರಯಾಣದ ಸಂದರ್ಭದಲ್ಲಿ ದಟ್ಸ್‌ಕನ್ನಡ.ಕಾಂನೊಂದಿಗೆ ಸಾಂದರ್ಭಿಕವಾಗಿ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ ಅವರ ಮಾತುಗಳಲ್ಲಿ ತಾತ್ವಿಕತೆಯ ಹೊಳಹಿತ್ತು . ಸಮಸ್ಯೆಗಳು ದ್ವಿಗುಣಗೊಳ್ಳುತ್ತಿರುವುದಕ್ಕೆ ಜನಸಂಖ್ಯಾ ಸ್ಫೋಟ ಸೇರಿದಂತೆ ವಿವಿಧ ಕಾರಣಗಳನ್ನು ಮುಖ್ಯಮಂತ್ರಿ ವಿಶ್ಲೇಷಿಸಿದರು.

ರಾಜ್ಯವನ್ನು ಸತತವಾಗಿ ಕಾಡುತ್ತಿರುವ ಬರ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಕೃಷ್ಣ ತೀವ್ರ ಖೇದ ವ್ಯಕ್ತಪಡಿಸಿದರು. ಬರ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ನೀಡುತ್ತಿರುವ ನೆರವಿನ ಕುರಿತೂ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು. (ಬರ ಪರಿಹಾರ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರ 1800 ಕೋಟಿ ರುಪಾಯಿ ನೆರವು ಕೇಳಿದರೆ, ಕೇಂದ್ರದಿಂದ ದೊರಕಿರುವುದು ನೂರು ಚಿಲ್ಲರೆ ಕೋಟಿ ರುಪಾಯಿ ಮಾತ್ರ. )

ಬರ ನಿಭಾವಣೆಗೆ ಶಾಶ್ವತ ನೀತಿ : ಕರ್ನಾಟಕವೂ ಸೇರಿದಂತೆ ನಾಲ್ಕೈದು ರಾಜ್ಯಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಬರ ತಾಂಡವವಾಡುತ್ತಿದೆ. ಈ ಬರ ಪರಿಸ್ಥಿತಿಯ ನಿರ್ವಹಣೆಗೆ ತಾತ್ಕಾಲಿಕ ಪರಿಹಾರಗಳು ಸಾಕಾಗುವುದಿಲ್ಲ . ಶಾಶ್ವತ ಬರ ಪರಿಹಾರ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂದು ದಟ್ಸ್‌ಕನ್ನಡ.ಕಾಂ ಜೊತೆ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ ಅಭಿಪ್ರಾಯಪಟ್ಟರು.

ಬರ ಪರಿಹಾರ ನಿಧಿ ಹಂಚಿಕೆಯಲ್ಲಿ ಉಂಟಾಗುತ್ತಿರುವ ತಾರತಮ್ಯದ ಬಗ್ಗೆ ನಾನು ಕೇಂದ್ರ ಸರ್ಕಾರವನ್ನು ದೂಷಿಸುವುದಿಲ್ಲ . ಆದರೆ ಬರ ಪರಿಸ್ಥಿತಿ ನಿರ್ವಹಣೆಯ ಕುರಿತು ಕೇಂದ್ರ ಸರ್ಕಾರದ ಯೋಚನೆಯಲ್ಲೇ ಎಲ್ಲೋ ತಪ್ಪಿರುವಂತಿದೆ ಎಂದ ಕೃಷ್ಣ , ಬರ ಕಾಡುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ತಕ್ಷಣವೇ ಕರೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಚಿತ್ರದುರ್ಗದ ನಂತರ ಕೃಷ್ಣ ಅವರ ಬಸ್‌ ಯಾತ್ರೆ ಜಗಳೂರು, ಆನಂತರ ಹೊಸಪೇಟೆಗೆ ಸಾಗಲಿದೆ. ರಾಜ್ಯದ ಅತ್ಯಂತ ನಿರ್ಲಕ್ಷಿತ ತಾಲ್ಲೂಕುಗಳಲ್ಲೊಂದಾದ ಜಗಳೂರು ಗೊತ್ತಲ್ಲ - ಕಂಗೆಡಿಸುವ ಕಾಲರಾ ಹಾಗೂ ಕುಡಿಯುವ ನೀರಿನ ಸಮಸ್ಯಗೆ ಕುಖ್ಯಾತಿ ಪಡೆದ ತಾಲ್ಲೂಕಿದು.

ಊರುಗಳು ಬೇರೆಯಾದರೂ ಸಮಸ್ಯೆಗಳ ಸ್ವರೂಪದಲ್ಲಿ ಭಿನ್ನತೆಯೇನೂ ಇಲ್ಲ . ಪ್ರಜೆಗಳ ದೂರು ನೇರವಾಗಿ ಪ್ರಭುಗಳನ್ನು ಮುಟ್ಟುತ್ತದೆ ಎನ್ನುವುದೇ ಈ ಜನ ಸ್ಪಂದನ ಯಾತ್ರೆಯ ಸಾರ್ಥಕತೆ.

Post your views

ವಾರ್ತಾ ಸಂಚಯ

ಹಬ್ಬದ ಸಂತಸ ಸಡಗರದೊಂದಿಗೆ ಜನ - ಜನಾರ್ದನರ ಸ್ಪಂದನ

ಮುಖಪುಟ / ಕೃಷ್ಣಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more