ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಲಿವೆ ಪಂಪನ ‘ಆದಿಪುರಾಣ’, ‘ಪಂಪಭಾರತ’ದ ಸಿ.ಡಿ.ಗಳು

By Staff
|
Google Oneindia Kannada News

ಬರಲಿವೆ ಪಂಪನ ‘ಆದಿಪುರಾಣ’, ‘ಪಂಪಭಾರತ’ದ ಸಿ.ಡಿ.ಗಳು
ಇದು ಕನ್ನಡ ಗಣಕ ಪರಿಷತ್‌ನ ಮಹತ್ವದ ಯೋಜನೆ

ಬೆಂಗಳೂರು : ಆದಿಕವಿ ಪಂಪನ ಬಗ್ಗೆ ಸಮಗ್ರ ಮಾಹಿತಿಗಳನ್ನೊಳಗೊಂಡ ಸಿ.ಡಿ.ಗಳನ್ನು ಕನ್ನಡ ಗಣಕ ಪರಿಷತ್ತು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

ಅ. 03, ಶುಕ್ರವಾರ ‘ಮಾಹಿತಿ ತಂತ್ರಜ್ಞಾನ ಮತ್ತು ಪಂಪನ ಕಾವ್ಯಗಳು’ ಕುರಿತ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ಕನ್ನಡ ಗಣಕ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಚಿ.ವಿ.ಶ್ರೀನಾಥ ಶಾಸ್ತ್ರಿ ಮತ್ತು ಕಾರ್ಯದರ್ಶಿ ಜಿ.ಎನ್‌.ನರಸಿಂಹಮೂರ್ತಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಪಂಪನ ‘ಆದಿಪುರಾಣ’ ಹಾಗೂ ‘ಪಂಪಭಾರತ’ಗಳನ್ನು ನುಡಿ ತಂತ್ರಾಂಶ ಬಳಸಿ ಕನ್ನಡ ಗಣಕ ಪರಿಷತ್ತು ಸಿ.ಡಿ.ಯಲ್ಲಿ ಅಳವಡಿಸುತ್ತಿದೆ. ಪಂಪನ ಕುರಿತ ಆಕರ ಗ್ರಂಥಗಳು, ಶಾಸನಗಳು, ಚಿತ್ರಗಳು ಮೊದಲಾದ ಮಾಹಿತಿಗಳನ್ನು ಕೂಡ ಸಿ.ಡಿ.ಗಳು ಒಳಗೊಂಡಿರುತ್ತವೆ ಎಂದು ಶ್ರೀನಾಥ ಶಾಸ್ತ್ರಿ ಹೇಳಿದರು.

‘ಪಂಪ ಭಾರತ’ವನ್ನು ಸಿ.ಡಿ.ಗೆ ಅಳವಡಿಸುವ ಕೆಲಸ ಮುಗಿದಿದೆ. ‘ಆದಿ ಪುರಾಣ’ದ ಕೆಲಸ ಶುರುವಾಗಿದೆ. ಇನ್ನೆರಡು ತಿಂಗಳಲ್ಲಿ ಯೋಜನೆ ಮುಗಿಯಲಿದೆ. ಪಂಪನ ಕೆಲಸಗಳನ್ನು ಇನ್ನಷ್ಟು ಅಚ್ಚುಕಟ್ಟಾಗಿ ಸಿ.ಡಿ.ಗೆ ಅಳವಡಿಸಲು ಸಾರ್ವಜನಿಕರ ಸಲಹೆಗಳನ್ನು ನಾವು ಮುಕ್ತವಾಗಿ ಪರಿಗಣಿಸುತ್ತಿದ್ದೇವೆ ಎಂದರು.

ಪಂಪನ ಎರಡೂ ಮಹಾಕಾವ್ಯಗಳ ಮಹತ್ವದ ಪದ್ಯಗಳನ್ನು ಗಮಕಿಗಳ ಕೈಲಿ ಹಾಡಿಸಿ, ಮುದ್ರಿಸಿಕೊಂಡು ಸಿ.ಡಿ.ಯಲ್ಲಿ ಅಳವಡಿಸಲಾಗುತ್ತಿದೆ. ಜೊತೆಗೆ ಉಪಾಧ್ಯಾಯರು ವಿದ್ಯಾರ್ಥಿಗಳಿಗೆ ಪಾಠ ಹೇಳುವ ರೀತಿಯಲ್ಲೇ ವಿವರಣೆ ಇರುತ್ತದೆ. ಬೇಕಾದ ಪದ್ಯಗಳನ್ನು ಆಯ್ಕೆ ಪಟ್ಟಿಯಲ್ಲಿ ಕ್ಲಿಕ್ಕಿಸಿ ಓದುವ ಅವಕಾಶ, ಪದ್ಯಗಳ ‘ಅ’ಕಾರಾದಿ ವಿಂಗಡಣೆ, ಕ್ಲಿಷ್ಟ ಪದಗಳ ಅರ್ಥ, ಯಾವ್ಯಾವ ಪ್ರಕಾರದ ಎಷ್ಟೆಷ್ಟು ಪದ್ಯಗಳಿವೆ (ಚಂಪೂ, ಚಂಪಕಮಾಲೆ ಮೊದಲಾದ ಪ್ರಕಾರದವು), ಯಾವ್ಯಾವ ಪದ್ಯಗಳು ಯಾವ್ಯಾವ ಆಶ್ವಾಸದಲ್ಲಿವೆ ಮೊದಲಾದ ಮಾಹಿತಿಗಳನ್ನು ನೋಡುಗರಿಗೆ ತೀರಾ ಅನುಕೂಲವಾಗುವ ರೀತಿಯಲ್ಲಿ ಸಿ.ಡಿ.ಯಲ್ಲಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಬಳ ಬಿಟ್ಟರೆ ಮತ್ತೇನು ಸೌಲಭ್ಯವನ್ನೂ ಸರ್ಕಾರ ಗಣಕ ಪರಿಷತ್ತಿಗೆ ಒದಗಿಸುತ್ತಿಲ್ಲ. 1 ಕೋಟಿ ರುಪಾಯಿ ಅನುದಾನ ಕೊಡುವುದಾಗಿ ಕೊಟ್ಟಿರುವ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ. ಹಣ ಬಿಡುಗಡೆಯಾಗುವ ಬಗ್ಗೆ ಖಾತ್ರಿಯಿಲ್ಲ. ಹಾಗಿದ್ದೂ ಕನ್ನಡ ಸಾಹಿತ್ಯ ಪರಿಷತ್ತು ಸಿ.ಡಿ. ಬಿಡುಗಡೆಗೆ ಅಗತ್ಯ ನೆರವನ್ನು ಕೊಡಲಿದೆ ಎಂದು ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಇ- ಆಡಳಿತ ಅನುಷ್ಠಾನಕ್ಕೆ ಗಣಕ ಪರಿಷತ್ತಿನ ನೆರವು ಪಡೆಯದ ಸರ್ಕಾರವನ್ನು ಪುನರೂರು ತರಾಟೆಗೆ ತೆಗೆದುಕೊಂಡರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X