ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

19 ಶತಾಯುಷಿ ಸರದಾರರೊಡನೆ ಪಟ್ಟಾಂಗ

By Super
|
Google Oneindia Kannada News

'31ರ ಹರೆಯದಲ್ಲಿ ಮೊದಲ ನರೆ ಕೂದಲು ನೋಡಿಕೊಂಡಾಗ, ಬದುಕಿನ ದಿಕ್ಕು ಬದಲಾಗತೊಡಗಿತು. ಮುಪ್ಪು ನನ್ನತ್ತ ಮೊದಲ ಹೆಜ್ಜೆ ಇಟ್ಟುಕೊಂಡು ಬರುತ್ತಿದೆಯೋ ಎಂಬಂತೆ ಭಾಸವಾಯಿತು. ಆಗ ಹುಟ್ಟಿದ ಕುತೂಹಲ ಶತಾಯುಷಿಗಳ ಜೀವನ ಗುಟ್ಟು. ಅವರ ಮನಸ್ಸಿನ ಗಟ್ಟಿತನ. ಅದಕ್ಕೇ ಅವರ ಜೊತೆ ನಾನು ಮುಖಾಮುಖಿಯಾಗಬಯಸಿದೆ'.
- ಕ್ಯಾಲಿಫೋರ್ನಿಯಾದ ಸಾಫ್ಟ್‌ವೇರ್‌ ಕಂಪನಿಯಾಂದರಲ್ಲಿ ವಿತ್ತ ನಿಯಂತ್ರಕಳಾಗಿ ಕೆಲಸ ಮಾಡುತ್ತಿದ್ದ ಮೈಸೂರು ಮೂಲದ ಮೀರಾ ಶಶಿಧರ ತಮ್ಮ ಅಪ್ರಕಟಿತ ಇಂಗ್ಲಿಷ್‌ ಕೃತಿ 'ಏಜ್‌ ಅನ್‌ಲಿಮಿಟೆಡ್‌'ನಲ್ಲಿ ಹೀಗೆ ಬರೆಹ ಶುರುಮಾಡುತ್ತಾರೆ. ಆಮೇಲೆ ಬರವಣಿಗೆ 19 ಶತಾಯುಷಿಗಳ ಜೀವನ ಗುಟ್ಟನ್ನು ತೆರೆದಿಡುತ್ತದೆ. ಈ ಪೈಕಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್‌ ಮತ್ತು ಇತ್ತೀಚೆಗೆ ನಮ್ಮನ್ನಗಲಿದ 'ದೇವರು' ಖ್ಯಾತಿಯ ಎ.ಎನ್‌.ಮೂರ್ತಿರಾವ್‌ ಕೂಡ ಇದ್ದಾರೆ.

ವಿಶ್ವ ವ್ಯಾಪಾರ ಕೇಂದ್ರದ ಮೇಲೆ 2001 ಸೆಪ್ಟೆಂಬರ್‌ 11ನೇ ತಾರೀಕು ದಾಳಿಯಾದಾಗ ಸೂಕ್ಷ್ಮ ಮನಸ್ಸಿನ ಮೀರಾಗೆ ಆಘಾತವಾಯಿತು. ತನ್ನ ಕಂಪನಿಗೇ ಹಿರೀಕರು ತಮ್ಮ ಮಕ್ಕಳು ಮರಿಗಳ ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಾ ಮಾಡಿದ ಫೋನ್‌ ಕರೆಗಳು ಮೀರಾ ಕಿವಿಗೆ ಬಿದ್ದವು. ಮನಸ್ಸು ಅವಿಶ್ರಾಂತವಾಯಿತು. ಕೆಲ ಕಾಲ ನಿಶ್ಚೇಷ್ಟಿ ತರಾದ ಮೀರಾಗೆ ಬೇರುಗಳು ಕಾಡಿದವು. ಬೆಂಗಳೂರಿಗೆ ಬಂದು, ಮೈಸೂರು ಟೂರ್‌ ಹೊರಟ ಮೀರಾ ದೂರದ ಸಂಬಂಧಿ ಶತಾಯುಷಿ ಬಾಪು ರಾಮಣ್ಣನವರನ್ನು ಭೇಟಿಯಾದರು. ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಆಡುತ್ತಿದ್ದ ನಾಟಕಗಳ ಪದಗಳನ್ನು ಸುಲಲಿತವಾಗಿ ಈಗಲೂ ಹೇಳುವ ರಾಮಣ್ಣನವರ ಹುಮ್ಮಸ್ಸು ಕಂಡು ಮೀರಾ ಬೆಕ್ಕಸ ಬೆರಗಾದರು. ಇನ್ನಷ್ಟು ಶತಾಯುಷಿಗಳನ್ನು ಮಾತಾಡಿಸಿದರೆ ಹೇಗೆ ಅಂತ ಮನಸ್ಸಿಗೆ ಹೊಳೆದದ್ದೇ ಆಗ.

ಚಾಮರಾಜಪೇಟೆಯ ಗೃಹಿಣಿ ಶತಾಯುಷಿ ಲಕ್ಷ್ಮಿದೇವಮ್ಮ, ನಿಟ್ಟೂರು ಹಾಗೂ ಮೂರ್ತಿರಾಯರನ್ನು ಮಾತಾಡಿಸಿಕೊಂಡು ಕ್ಯಾಲಿಫೋರ್ನಿಯಾಗೆ ಮರಳಿದ ಮೀರಾ ಅಲ್ಲೂ ಸುಮ್ಮನೆ ಕೂರಲಿಲ್ಲ. ಶತಾಯುಷಿಗಳ ಹುಡುಕಾಟ ಮುಂದುವರೆಸಿದರು. ಇನ್ನೂ 16 ಶತಾಯುಷಿಗಳು ಮಾತಿಗೆ ಸಿಕ್ಕರು.

ಇವರನ್ನೆಲ್ಲ ಮಾತಾಡಿಸಿದ ಮೀರಾ ಕಂಡುಕೊಂಡ ಸತ್ಯವೆಂದರೆ-

ಶತಾಯುಷಿಗಳೆಲ್ಲ ಆಶಾ ಜೀವಿಗಳು, ಸೇವಾ ಮನೋಭಾವದವರು, ಸಾತ್ವಿಕ ಪ್ರಜ್ಞೆ ಇರುವವರು, ಬೇರೆಯವರಿಗೆ ಕೆಡುಕನ್ನುಂಟು ಮಾಡದವರು.
ಅವರೆಲ್ಲರಲ್ಲಿ ಅದಮ್ಯ ಜೀವನೋತ್ಸಾಹವಿದೆ.
ಶತಾಯುಷಿಗಳಿಗೆ ಚೆನ್ನಾಗಿ ಅಡುಗೆ ಮಾಡೋದಕ್ಕೆ ಬರುತ್ತೆ.
ಸ್ವತಂತ್ರ ಜೀವನ ನಡೆಸಿದ ಶತಾಯುಷಿಗಳು ಕ್ರಿಯಾಶೀಲರಾಗಿದ್ದು, ಬದುಕಿನ ಬಗ್ಗೆ ಅವರಿಗೆ ತುಂಬುಪ್ರೀತಿ ಇರುತ್ತದೆ.
ಅವರಲ್ಲೊಂದು ವಿಲಕ್ಷಣ ನಿರ್ಲಿಪ್ತತೆ ಇರುತ್ತದೆ. ಹೀಗಾಗಿ ಬದುಕಿನ ಏರಿಳಿತಗಳಿಂದ ಅವರು ಅಷ್ಟಾಗಿ ವಿಚಲಿತರಾಗಿರುವುದಿಲ್ಲ.

ಮೀರಾ ಸಂದರ್ಶಿಸಿದವರ ಪೈಕಿ ದಂಪತಿಗಳಾಗಿ ಉಳಿದಿದ್ದವರೆಂದರೆ (ಕೆಲವರು ಹೆಂಡತಿಯನ್ನು, ಇನ್ನು ಕೆಲವರು ಗಂಡನನ್ನು ಕಳೆದುಕೊಂಡಿದ್ದರು. ಸಂದರ್ಶಿಸಿದ 14 ಮಂದಿ ಜೀವನದಲ್ಲಿ ಒಮ್ಮೆಯಾದರೂ ಡೈವೊರ್ಸ್‌ ಕೊಟ್ಟ ಅಥವಾ ಪಡೆದವರಾಗಿದ್ದರು. ) ಲೀ ಆಕ್ಲಿ ಹಾಗೂ ಆತನ ಪತ್ನಿ. 104 ವರ್ಷದ ಲೀ ಆಕ್ಲಿ ತಿಂಡಿ ಮಾಡಿಕೊಂಡು ಟೆರೇಸಿನ ಮೇಲೆ ಕೂತ 96 ವಯಸ್ಸಿನ ಹೆಂಡತಿಗೆ ತಿನ್ನಿಸಲು ಮಹಡಿ ಹತ್ತುವುದನ್ನು ನೋಡಿ ಮೀರಾ ಬಾಯ ಮೇಲೆ ಕೈಯಿಟ್ಟಿದ್ದಾರೆ. ಊಟದ ವಿಷಯದಲ್ಲಿ ಪಥ್ಯವೇ ಮಾಡದ ಆಕ್ಲಿಗೆ ಐಸ್‌ಕ್ರೀಮು, ಚಾಕೊಲೇಟ್‌ ಹಾಗೂ ಹೆಂಡತಿ ಅಂದರೆ ಪ್ರಾಣ.ಮೀರಾ ಭೇಟಿ ಮಾಡಿದ ಮತ್ತೊಬ್ಬ ಇಂಟರೆಸ್ಟಿಂಗ್‌ ವ್ಯಕ್ತಿ ವಾಟರ್‌ ಹಾಲ್‌. ಅಣು ಬಾಂಬ್‌ ತಯಾರಿಸಿದ ಮ್ಯಾನ್‌ಹಟನ್‌ ಯೋಜನೆಯಲ್ಲಿ ಕೆಲಸ ಮಾಡಿರುವ ವಾಟರ್‌ ಹಾಲ್‌ 102 ವಯಸ್ಸಿನ ಹುಡುಗ ! ಯಾಕೆಂದರೆ, Life is short; you better hurry up and enjoy yourself ಅಂತ ಹೇಳುತ್ತಾ ವಾಟರ್‌ ನಿರಾಯಾಸವಾಗಿ ರಾಕ್‌ ಅಂಡ್‌ ರೋಲ್‌ ಮಾಡುತ್ತಾರೆ.

ಸಂದರ್ಶನ ಮಾಡಿದ ಎಲ್ಲರೂ ಮೆಚ್ಚಾದರೂ, ನಿಟ್ಟೂರು ಮತ್ತು ಡೊಮಿಂಗ್ಟ ಮೀರಾ ಅವರಿಗೆ ತುಂಬಾ ಹಿಡಿಸಿದ್ದಾರೆ. ಮೆಕ್ಸಿಕೋದಿಂದ ಅಮೆರಿಕಕ್ಕೆ ವಲಸೆ ಬಂದಿರುವ ಡೋಮಿಂಗ್ಟ ಆಕ್‌ಲೆಂಡಿನಲ್ಲಿ ನಡೆದ ಮೆಕ್ಸಿಕನ್‌- ಅಮೆರಿಕನ್‌ ಚಳವಳಿಯ ರೂವಾರಿ. ತನ್ನ ಮರೆಯಲಾರದಂಥ ಕೆಲಸಗಳಿಂದ ಆಕ್‌ಲೆಂಡ್‌ ಚರಿತ್ರೆ ವಸ್ತು ಸಂಗ್ರಹಾಲಯದಲ್ಲಿ ಈಕೆಯ ಕುರಿತು ಮಾಹಿತಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಸಾತ್ವಿಕ ಆಹಾರ ತಿಂದು ಬೆಳೆದಿರುವ ಶತಾಯುಷಿಗಳು ಬಲು ದೂರ ನಡೆಯುತ್ತಿದ್ದಂಥವರು. ಆಗ ಕೃಷಿ ಕ್ಷೇತ್ರಕ್ಕೆ ರಾಸಾಯನಿಕ ಜಾಡ್ಯ ಬಡಿದಿರಲಿಲ್ಲ. ಬೆಳೆ ಮುಗ್ಧ ಹಾಗೂ ಅಗಾಧವಾಗಿತ್ತು. ಹೀಗಾಗಿ ಶತಾಯುಷಿಗಳ ಮನಸ್ಸು ಕೂಡ ಆಗಿನ ಬೆಳೆಯಂತೆ ಹುಲುಸು ಎನ್ನುವ ಮೀರಾ ಅವರಿಗೀಗ 33 ವಯಸ್ಸು. ಈ ಮೂರು ವರ್ಷಗಳಲ್ಲಿ ಬಾಳಿನುದ್ದಕ್ಕೂ ಮರೆಯಲಾರದಂಥ ಅನುಭವ ಸಾರವನ್ನು ಅವರು ಪಡೆದಿದ್ದಾರೆ. ಅಷ್ಟೇ ಅಲ್ಲ, ಬೇರುಗಳ ಅವರ ಹುಡುಕಾಟ ಈಗ ಅವರನ್ನು ಬೆಂಗಳೂರಿಗೇ ಬರಮಾಡಿಕೊಂಡಿದೆ. ಇಬ್ಬರು ಮಕ್ಕಳ ಅವರ ಬದುಕಿನ ರಥ ಈಗ ಬೆಂಗಳೂರಲ್ಲೇ ಸಾಗುತ್ತಿದೆ.

ಸದ್ಯದಲ್ಲೇ ಶತಾಯುಷಿಗಳ ಸುಂದರ ಬದುಕಿನ ಚಿತ್ರಣಗಳ ಕೃತಿಯನ್ನು ಪ್ರಕಟಿಸಿ, ಅನಾವರಣಗೊಳಿಸುವುದು ಮೀರಾ ಕನಸು. ಅದನ್ನು ನನಸಾಗಿಸುವ ಪ್ರಯತ್ನದಲ್ಲಿ ಅವರೀಗ ಬ್ಯುಸಿ.

English summary
Meera Shashidhara who left California and is back in Bangalore has written a rare book interviewing 19 centenarians
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X