ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನಲ್ಲಿ ಮಂತ್ರದಂಡ ಇಲ್ಲ -ಟೀಕಾಕಾರರಿಗೆ ಇದಿನಬ್ಬ ತಿರುಮಂತ್ರ

By Staff
|
Google Oneindia Kannada News

ನನ್ನಲ್ಲಿ ಮಂತ್ರದಂಡ ಇಲ್ಲ -ಟೀಕಾಕಾರರಿಗೆ ಇದಿನಬ್ಬ ತಿರುಮಂತ್ರ
ಒಗ್ಗಟಿನಿಂದಿರಲು ಕನ್ನಡಪರ ಹೋರಾಟಗಾರರಿಗೆ ಮನವಿ

ಬೆಂಗಳೂರು : ಇತ್ತೀಚೆಗೆ ಕೆಲವರು ತಮ್ಮ ವಿರುದ್ಧ ನೀಡುತ್ತಿರುವ ಹೇಳಿಕೆಗಳ ಹಿಂದೆ ದುರುದ್ದೇಶ ಅಡಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಎಂ.ಇದಿನಬ್ಬ ಆರೋಪಿಸಿದ್ದಾರೆ.

ಕನ್ನಡಕ್ಕೆ ತಾವು ಸಲ್ಲಿಸಿರುವ 60 ವರ್ಷಗಳ ಸೇವೆ ಗಮನಿಸಿ ಮುಖ್ಯಮಂತ್ರಿಯವರು ತಮ್ಮನ್ನು ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದಾರೆ. ಈ ಹುದ್ದೆಯನ್ನು ತಾವಾಗಿಯೇ ಬಯಸಿರಲಿಲ್ಲ . ಅರ್ಜಿಯನ್ನೂ ಹಾಕಿರಲಿಲ್ಲ . ಯಾವ ವಶೀಲಿಯನ್ನೂ ಮಾಡಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅವರ ಹೇಳಿಕೆ ಸಾರಾಂಶ ಹೀಗಿದೆ :

B.M. Idinabbaಸಾಹಿತ್ಯ ಪರಿಷತ್ತಿನಲ್ಲಿ ಕೈಗಾರಿಕೆಗಳ ಕನ್ನಡ ಸಂಘಗಳ ಒಕ್ಕೂಟದ ಸಭೆಯಲ್ಲಿ ಭಾಗವಹಿಸಲು ಒಪ್ಪಿದ್ದು ನಿಜ. ಭಾನುವಾರ ಏರ್ಪಾಡಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗದಿದ್ದರ ಬಗ್ಗೆ ನಾಲ್ಕು ದಿನಗಳ ಹಿಂದೆಯೇ ಕಾರ್ಯಕರ್ತರಿಗೆ ತಿಳಿಸಿದ್ದೇನೆ. ಸೋಮವಾರ ಮೊಮ್ಮಗಳ ವಿವಾಹ ನಿಶ್ಚಯವಾಗಿತ್ತು . ಆ ವಿಷಯ ಸಂಘಟಕರಿಗೆ ತಿಳಿದಿದ್ದರೂ ವಿನಾಕಾರಣ ಆರೋಪ ಹೊರಿಸುತ್ತಿದ್ದಾರೆ. ಪ್ರಾಧಿಕಾರ ಏನೂ ಕೆಲಸ ಮಾಡುತ್ತಿಲ್ಲವೆಂಬ ರೀತಿಯಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಆಗಿನ್ನೂ ಪ್ರಾಧಿಕಾರಕ್ಕೆ ಸದಸ್ಯರ ನೇಮಕ ಆಗಿರಲಿಲ್ಲ . ಒಂದು ಸಂಸ್ಥೆ ಕಾರ್ಯ ನಿರ್ವಹಿಸಲು ಅದರ ಎಲ್ಲ ಸದಸ್ಯರೂ ಇರಬೇಕು ಎಂಬ ಪ್ರಾಥಮಿಕ ಜ್ಞಾನದ ಅರಿವೂ ಇಲ್ಲದಿರುವುದು ವಿಷಾದನೀಯ.

ನಾನು ಅವರ ಮನವಿಗೆ ಸ್ಪಂದಿಸಿಲ್ಲ ಎಂಬ ಆರೋಪ ಬಂದಿದೆ. ಐಟಿಐ ಕಾರ್ಖಾನೆಯಲ್ಲಿ ನಡೆಯುತ್ತಿರುವ ನೇಮಕದಲ್ಲ್ಲಿ ಕನ್ನಡಿಗರಿಗೆ ವಂಚನೆಯಾಗುತ್ತಿದ್ದರೂ ಗಮನ ಹರಿಸಿಲ್ಲ ಎಂಬುದೇ ಆ ಆರೋಪ. ಈ ಸಂಬಂಧ ಕಾರ್ಖಾನೆ ಆಡಳಿತ ವರ್ಗದವರನ್ನು ಸಂಪರ್ಕಿಸಿದಾಗ ಯಾವುದೇ ನೇಮಕ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಇಎಲ್‌ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಮತ್ತೊಂದು ದೂರಿನ ಸಂಬಂಧ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಾಗ ಅವರಿಂದ ಉತ್ತರ ಬಂತು. ಕನ್ನಡ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳನ್ನು ಪತ್ರದಲ್ಲಿ ವಿವರಿಸಿದ್ದರು.

ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಹಾಗೂ ಬ್ಯಾಂಕ್‌ಗಳಲ್ಲಿನ ನೇಮಕ ಸಂಬಂಧ ಪ್ರಾಧಿಕಾರ ಸ್ಥಾಪನೆಯಾದಾಗಿನಿಂದ ಎಲ್ಲ ಅಧ್ಯಕ್ಷರುಗಳೂ ಪ್ರಯತ್ನಿಸುತ್ತಲೇ ಇದ್ದಾರೆ. ಯಾವ ಅಧ್ಯಕ್ಷರ ಅವಧಿಯಲ್ಲಿ ಎಷ್ಟು ಪ್ರಗತಿಯಾಗಿದೆ ಎಂಬುದನ್ನು ಆರೋಪ ಮಾಡಿದವರು ತಿಳಿಸಿದರೆ ಉತ್ತಮ. ಅಧಿಕಾರ ವಹಿಸಿಕೊಂಡ ಐದು ತಿಂಗಳಲ್ಲಿ ಎಲ್ಲವನ್ನೂ ಸರಿ ಮಾಡಲು ನನ್ನಲ್ಲಿ ಯಾವುದೇ ಮಂತ್ರದಂಡ ಇಲ್ಲ . ಪೂರ್ವಾಗ್ರಹವಿಲ್ಲದೆ ಸದುದ್ದೇಶದಿಂದ ಕೂಡಿದ ಗಟ್ಟಿ ಸಲಹೆ ನೀಡಿದರೆ ಜಾರಿಗೆ ತರಲು ಪ್ರಯತ್ನಿಸುತ್ತೇನೆ.

ಚಿಮೂ ವರ್ತನೆ : ಕೈಗಾರಿಕೆಗಳ ಕನ್ನಡ ಸಂಘಟನೆಗಳ ಒಕ್ಕೂಟದ ಮನವಿಯ ಮೇರೆಗೆ ಪ್ರಾಧಿಕಾರದಲ್ಲಿ ಸಭೆ ಕರೆಯಲಾಗಿತ್ತು . ಸ್ವತಃ ಚಿದಾನಂದ ಮೂರ್ತಿಯವರೇ ಸಭೆ ಕರೆಯಲು ಹೇಳಿದ್ದರು. ಸಭೆ ಆರಂಭವಾಗಿ 45 ನಿಮಿಷವಾದರೂ ಅವರು ಬರಲಿಲ್ಲ . ಕಾರ್ಯಕರ್ತರು ಸಮಯಕ್ಕೆ ಸರಿಯಾಗಿ ಕಾರು ಕಳುಹಿಸಲಿಲ್ಲ . ಅದಕ್ಕೆ ಬರಲಾಗಲಿಲ್ಲ ಎಂದು ಹೇಳಿದರು. ವಿದ್ವಾಂಸರ ಇಂತಹ ವರ್ತನೆ ಬಹುಶಃ ಅವರ ಪಾಲಿಗೆ ಸರಿ ಇರಬಹುದೇನೋ.

ಕನ್ನಡದ ಪರವಾಗಿ ಹೋರಾಟ ಮಾಡುವವರು ಇನ್ನು ಮುಂದಾದರೂ ವಸ್ತುಸ್ಥಿತಿ ಅರಿತು ಒಗ್ಗಟ್ಟಿನಿಂದ ಕಾರ್ಯಪ್ರವೃತ್ತರಾಗಲಿ ಎಂದು ಇದಿನಬ್ಬ ಹೇಳಿದ್ದಾರೆ.

(ಸ್ನೇಹ ಸೇತು: ವಿಜಯ ಕರ್ನಾಟಕ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X