ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡ ‘ನಾಡ ಮೀನುಗಳು’ ಎಲ್ಲಿ ಮಾಯವಾದವೋ...

By Staff
|
Google Oneindia Kannada News

ಮಲೆನಾಡ ‘ನಾಡ ಮೀನುಗಳು’ ಎಲ್ಲಿ ಮಾಯವಾದವೋ...
ಬಾಯಲ್ಲಿ ನೀರೂರಿಸುವ ದೇಶೀ ಮೀನುಗಳ ಸಾವಿನ ಸಮಾಚಾರ

ಶಿವಮೊಗ್ಗ : ಕುಚ್ಚು, ಅವುಲು, ಕೊರವ, ಮೊರಗೋಡು, ಬಾಲೆ, ಸುರಗಿ, ಗೊಡ್ಲೆ- ಬಾಯಲ್ಲಿ ನೀರು ತರಿಸುವ ಈ ದೇಶೀ ಜಾತಿಯ ಮಲೆನಾಡ ಮೀನುಗಳು ಎಲ್ಲಿ ಹೋದವು?

ತಲ ತಲಾಂತರಗಳಿಂದ ಕರಾವಳಿಯಲ್ಲಿ ಇಂಥಾ ದೇಶೀ ಮೀನು ಕೃಷಿ ಮಾಡಿಕೊಂಡಿದ್ದ ಕುಟುಂಬಗಳು ಇವತ್ತು ಕೂಲಿ ಕೆಲಸ ಹುಡುಕಿಕೊಂಡು ಗುಳೇ ಹೊರಟಿವೆ. ಈ ಮೂಲಕ ಜನರ ದೇಶೀ ಮೀನುಗಳ ತಲಾಷಿಗೆ ಅರ್ಥವೇ ಇಲ್ಲದಂತಾಗಿದೆ. ಕಡಲ ಕಿನಾರೆಗೆ ದೊಡ್ಡ ದೊಡ್ಡ ಹಡಗುಗಳಿಂದ ಬಂದಿಳಿರುವ ವಿದೇಶೀ ಮೀನು ಮಾರುವವರಿಗಷ್ಟೇ ಈಗ ಬರಕತ್ತಿನ ಕಾಲ.

ದೇಶೀ ಮೀನುಗಳಲ್ಲಿ ಅಂಥಾದ್ದೇನೈತಿ?

ಗಾತ್ರದಲ್ಲಿ , ತೂಕದಲ್ಲಿ ಕಡಿಮೆಯಿರುವ ಈ ಮೀನುಗಳ ರುಚಿಯೇ ಬೇರೆ. ನಾಟಿ ಪದಾರ್ಥಗಳ ಸೊಗಡಿನಂತೆ ಈ ಮೀನುಗಳಿಗೆ ನೀರು, ಕೆರೆ- ಕುಂಟೆಗಳ ತೀರಾ ಕಲುಷಿತ ನೀರಲ್ಲೂ ದೀರ್ಘ ಕಾಲ ಬದುಕುಳಿಯಬಲ್ಲ ವಿಚಿತ್ರ ಶಕ್ತಿಯಿದೆ. ಆರೋಗ್ಯಕ್ಕೆ ಈ ಮೀನುಗಳ ಸೇವನೆ ಬಲು ಒಳ್ಳೆಯದು ಅಂತ ವೈದ್ಯರು ಹೇಳುತ್ತಾರೆ.

ಇಂತಿಪ್ಪ ಮೀನುಗಳಿಗೆ ಇವತ್ತು ಉಳಿಗಾಲವಿಲ್ಲ. ಕೆರೆ- ಕುಂಟೆಗಳು ಬತ್ತಿವೆ. ನದಿಯ ನಗುವೂ ಕಮ್ಮಿಯಾಗಿದೆ. ಬಡ ಮೀನುಕೃಷಿಕರಿರುವ ಜಾಗೆಗಳಲ್ಲಿ ಅನೇಕ ಕಾರ್ಖಾನೆಗಳು ತಲೆಯೆತ್ತಿ, ನದಿ ನೀರಿಗೆ ವಿಷ ಸೇರಿ ತಾಕತ್ತಿನ ದೇಶೀ ಮೀನುಗಳ ಉಸಿರು ಕಟ್ಟಿ ಸಾಯುವಂತಾಗಿದೆ. ದೇಶೀ ಮೀನುಗಳು ನಿಧಾನವಾಗಿ ಬೆಳೆಯುವ ದೇಹ ಪ್ರಕೃತಿಯವು. ವರ್ಷಕ್ಕೆ ಪ್ರತಿ ಮೀನು ಕಾಲು ಕಿಲೋದಿಂದ ಅರ್ಧ ಕಿಲೋ ತೂಗುವಷ್ಟು ಮಾತ್ರ ಬೆಳೆಯುತ್ತದೆ. ಆದರೆ ಆಮದು ಮೀನುಗಳು 2 ರಿಂದ 4 ಕಿಲೋ ತೂಗುತ್ತವೆ. ಹೀಗಾಗಿ ವ್ಯಾಪಾರಿಗಳಿಗೆ ಕಡಲ ಕಿನಾರೆಯಲ್ಲಿ ಬಂದಿಳಿಯುವ ಗಾತ್ರದ ಮೀನೇ ಮಾರಾಟಕ್ಕೆ ಆಪ್ಯಾಯಮಾನ.

ಬಲು ಕಾಲ ಸಂಪ್ರದಾಯ ಬಿಟ್ಟುಕೊಡದೆ, ದೊಡ್ಡ ಮೀನುಗಳ ಮಾರುಕಟ್ಟೆಯ ಪ್ರವಾಹದಲ್ಲೂ ಮೀನುಕೃಷಿಕರು ವರ್ಷಗಳ ಕಾಲ ಈಜಿದರು. ಅಷ್ಟರಲ್ಲಿ ಕೊಲ್ಕತಾದಿಂದ ಮೀನು ಅಲ್ಸರ್‌ ರೋಗ ಬಂದು ಬಡಿಯಿತು. ಮೊದಲು ಬಾಲಕ್ಕೆ ಸೋಕುವ ಈ ರೋಗ ಉಲ್ಬಣಿಸಿ ಮೀನಿನ ಚರ್ಮ ಸುಲಿಯುತ್ತಾ ಹೋಗುತ್ತದೆ. ನೋಡಲು ಅಸಹ್ಯ ಎಂಬಂತೆ ಮೀನುಗಳ ಚರ್ಮ ಬೋಳಾಗಿ ಸಾಯುತ್ತವೆ. ಈ ರೋಗದಿಂದ ಸುರಗಿ, ಕುಚ್ಚಿ ಮತ್ತು ಕೊರವ ಜಾತಿಯ ಮೀನುಗಳು ಇಲ್ಲವಾದವು. ಗೋಡ್ಲಿ ಜಾತಿಯ ಮೀನು ಲಭ್ಯವಿದ್ದರೂ ಅದಕ್ಕೆ ಮುಂಬಯಿ ಹಾಗೂ ದೆಹಲಿಯಲ್ಲಿ ಭಾರೀ ಮಾರುಕಟ್ಟೆ ಇರುವುದರಿಂದ ಅಲ್ಲಿಗೆ ರಫ್ತಾಗುತ್ತವೆ. ಇದೊಂದು ವ್ಯವಸ್ಥಿತ ಉದ್ಯಮ ಆಗಿರುವುದರಿಂದ ಬಡ ಮೀನು ಕೃಷಿಕರ ಕೈಗೆ ಕಾಸು ಸಿಗೋದಿಲ್ಲ.

‘ಮೀನುಗಾರರೇ ಊಟದ ತಟ್ಟೆಗೆ ಉಗಿದುಕೊಂಡಿದ್ದಾರೆ’

ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ವೆಂಕಟೇಶಪ್ಪ ದೇಶೀ ಮೀನುಗಳ ಸಾವಿಗೆ ಬೇರೆಯದೇ ಕಾರಣ ಕೊಡುತ್ತಾರೆ. ಈಗ ಮೀನುಕೃಷಿ ಹರೀಬರಿಯ ಚಟುವಟಿಕೆಯಾಗಿಬಿಟ್ಟಿದೆ. ತೀರಾ ಚಿಕ್ಕ ತೂತುಗಳಿಗೆ ಬಲೆಗಳು ಮಾರುಕಟ್ಟೆಗೆ ಬಂದಿವೆ. ಇದರಿಂದ ಇನ್ನೂ ಸಂತಾನ ಶಕ್ತಿ ದಕ್ಕಿಸಿಕೊಂಡಿರದ ಎಷ್ಟೋ ಮೀನುಗಳು ಸಾಯುತ್ತವೆ. ಜೊತೆಗೆ ಮೀನುಗಾರಿಕೆಯ ಅವಧಿಯ ಮುನ್ನವೇ ಬಲೆ ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಜೂನ್‌ ತಿಂಗಳಿಂದ ಆಗಸ್ಟ್‌ ತಿಂಗಳಲ್ಲಿ ಕಡಲಲ್ಲಿ ಮೀನು ಹಿಡಿಯುವುದು ನಿಷಿದ್ಧ. ಆದರೆ ನಾಡ ಮೀನುಕೃಷಿಕರು ಇದನ್ನು ಲೆಕ್ಕಿಸದೆ, ನದಿ- ಹೊಳೆಗಳಲ್ಲಿ ಬಲೆ ಬೀಸುತ್ತಾರೆ. ಪರಿಣಾಮ ಮೀನಿನ ಸಂತತಿ ಬೆಳೆಯದಂತಾಗುತ್ತದೆ. ನಾಡ ಮೀನು ಕೃಷಿಕರಿಗೂ ವಿಶೇಷ ಕಾನೂನನ್ನು ಜಾರಿಗೆ ತರಬೇಕಾದ ಜರೂರತ್ತು ಈಗ ಇದೆ. ಹಾಗೆ ಮಾಡಿದಲ್ಲಿ ಮಾತ್ರ ದೇಶೀ ಮೀನುಗಳು ಬದುಕುಳಿಯುತ್ತವೆ ಎನ್ನುವುದು ವೆಂಕಟೇಶಪ್ಪನವರ ಅಭಿಪ್ರಾಯ.

(ಇನ್ಫೋ ವಾರ್ತೆ)

ಈ ಲೇಖನದ ಬಗ್ಗೆ ನಿಮ್ಮ ಪ್ರತಿಕ್ರಿಯೆ ?

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X