ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯ ಮಹಿಮೆ ! ದೇವೇಗೌಡರ ಪಟಾಲಂನತ್ತ ಹೆಗಡೆ ನಿಷ್ಠರು?

By Staff
|
Google Oneindia Kannada News

ಮಲ್ಯ ಮಹಿಮೆ ! ದೇವೇಗೌಡರ ಪಟಾಲಂನತ್ತ ಹೆಗಡೆ ನಿಷ್ಠರು?
ಹೆಗಡೆ ಹುಟ್ಟುಹಬ್ಬ ಸಮಾರಂಭಕ್ಕೆ ಅನೇಕ ಶಿಷ್ಯರ ಗೈರುಹಾಜರಿ

ಬೆಂಗಳೂರು : ಜನತಾ ದಳ ವಿಲೀನದ ಕನಸಿಗೆ ಗರಿ ಮೂಡಿಸಿದ್ದ ರಾಮಕೃಷ್ಣ ಹೆಗಡೆ ಹೇಳಿಕೆಗಳು ಈಚೀಚೆಗೆ ದ್ವಂದ್ವದಿಂದ ಕೂಡಿದ್ದವು. ವಿಜಯ್‌ ಮಲ್ಯ ಬಗ್ಗೆ ಅವರು ಒಲವು ತೋರಿದಾಗ, ಹೆಗಡೆ ನಿಷ್ಠರು ಒಳಗೊಳಗೇ ಉರಿದುಕೊಂಡಿದ್ದರು. ಆಗಸ್ಟ್‌ 28ರಂದು ಮಲ್ಯ ಅವರಿಗೇ ತಮ್ಮ ಆಶೀರ್ವಾದ ಅಂತ ಹೆಗಡೆ ಘಂಟಾಘೋಷವಾಗಿ ಹೇಳಿದ ನಂತರ, ಈಗ ಅವರೆಲ್ಲ ದೇವೇಗೌಡರ ಪಟಾಲಂನತ್ತ ಧಾವಿಸುವ ಸೂಚನೆಗಳು ಕಾಣುತ್ತಿವೆ.

ಶುಕ್ರವಾರ (ಆ.29) ರಾಮಕೃಷ್ಣ ಹೆಗಡೆ ಅವರ 77ನೇ ಹುಟ್ಟುಹಬ್ಬ. ಅಖಿಲ ಭಾರತ ಪ್ರಗತಿಪರ ಜನತಾದಳದ (ಎಬಿಪಿಜೆಡಿ) ಶಾಸಕರು, ಮುಖಂಡರಾದ ಎಂ.ಪಿ.ಪ್ರಕಾಶ್‌, ಉಮೇಶ್‌ ಕತ್ತಿ, ಎ.ಬಿ.ಪಾಟೀಲ್‌ ಮೊದಲಾದವರು ಬರ್ತಡೇ ಪಾರ್ಟಿಯಲ್ಲಿ ಸುಳಿಯಲೇ ಇಲ್ಲ. ಸಮಾರಂಭ ಕೇವಲ ಹೆಗಡೆ ಹುಟ್ಟುಹಬ್ಬಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅಖಿಲ ಭಾರತ ಪ್ರಗತಿಪರ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯನ್ನು ಕೆ.ಎನ್‌.ನಾಗೇಗೌಡ ಅವರಿಗೆ ಹಸ್ತಾಂತರಿಸುವ ಕಾರ್ಯಕ್ರಮವೂ ಅದಾಗಿತ್ತು.

ವಿಲೀನ ಹೇಗೆ ಆಗಬೇಕೋ ಹಾಗೆ ಆಗುತ್ತೆ
ಜನತಾ ಪರಿವಾರದಲ್ಲಿ ಒಗ್ಗಟ್ಟು ತರುವ ವಿಷಯಕ್ಕೆ ನನ್ನ ವಿರೋಧವಿಲ್ಲ. ಅದು ಹೇಗೆ ಆಗಬೇಕೋ ಹಾಗೆ ಆಗುತ್ತದೆ ಎಂದು ಸಮಾರಂಭದಲ್ಲಿ ರಾಮಕೃಷ್ಣ ಹೆಗಡೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು. ಯುವಕರ ಬೆನ್ನುತಟ್ಟಿ, ಅವರಿಂದ ಪಕ್ಷ ಸಂಘಟನೆ ಬಲವಾಗುತ್ತದೆ ಎಂಬ ಕಿವಿಮಾತನ್ನು ಎಬಿಪಿಜೆಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಸ್‌.ಆರ್‌.ಬೊಮ್ಮಾಯಿ ಅವರಿಗೆ ಹೇಳಿದರು.

ಶಾಸಕ ಉಮೇಶ ಕತ್ತಿ ನಿವಾಸದಲ್ಲಿ ಸಭೆ
ರಾಮಕೃಷ್ಣ ಹೆಗಡೆ ಹುಟ್ಟುಹಬ್ಬದ ಸಮಾರಂಭಕ್ಕೆ ಹಾಜರಾಗದ ಅವರ ಅನೇಕ ನಿಷ್ಠರು ಶಾಸಕ ಉಮೇಶ ಕತ್ತಿ ಅವರ ನಿವಾಸದಲ್ಲಿ ವಿಲೀನದ ಬಗ್ಗೆ ಬೇಗ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಲು ಸಭೆ ನಡೆಸಿದರು. ಕೆ.ಎನ್‌.ನಾಗೇಗೌಡ ಅವರ ಅಧ್ಯಕ್ಷಗಿರಿಯನ್ನು ಒಪ್ಪಿಕೊಂಡು ಪಕ್ಷ ಕಟ್ಟುವುದು ಸಾಧ್ಯವಿಲ್ಲ. ಹಾಗಾಗಿ ವಿಲೀನ ಕುರಿತಂತೆ ಆದಷ್ಟು ಬೇಗ ಅಂತಿಮ ನಿರ್ಧಾರಕ್ಕೆ ಬರಬೇಕು ಎಂದು ಎಬಿಪಿಜೆಡಿ ಶಾಸಕರು ಹಾಗೂ ಮುಖಂಡರು ಒಮ್ಮತದ ತೀರ್ಮಾನಕ್ಕೆ ಬಂದರು. ಜೆ.ಎಚ್‌.ಪಟೇಲ್‌ ಮಗ ಮಹಿಮಾ ಪಟೇಲ್‌ ಮಾತ್ರ ವಿಲೀನಕ್ಕೆ ಒಲವು ತೋರಲಿಲ್ಲ.

ಉಮೇಶ್‌ ಕತ್ತಿ ಮನೆಯಲ್ಲಿ ನಡೆದ ಸಭೆಯ ನಂತರ ಬೊಮ್ಮಾಯಿಯವರಿಗೆ ವಿಲೀನ ಚುರುಕುಗೊಳಿಸಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು. ಹೆಗಡೆಯವರು ಜಾತ್ಯತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಜೊತೆಯಲ್ಲಿ ಚರ್ಚೆ ನಡೆಸಿ, ಅದರ ಫಲಶೃತಿಯ ನಂತರ ವಿಲೀನದ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಬೇಕು. ಇಲ್ಲವಾದರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಬೇಕು ಎಂಬುದು ಉಮೇಶ್‌ ಕತ್ತಿ ಹಾಗೂ ಬಳಗದ ಮನವಿ.

ದೇವೇಗೌಡರ ಜೊತೆ ಮಾತುಕತೆ ನಡೆಸಲು ಹೆಗಡೆ ಸುತಾರಾಂ ಸಿದ್ಧರಿಲ್ಲ. ಹೀಗಾಗಿ ಈ ಹೊಣೆಯನ್ನು ಖುದ್ದು ಬೊಮ್ಮಾಯಿ ಹೊರಬೇಕಾಗಿದೆ. ಹೆಗಡೆ ನಿಷ್ಠೆ ಹಾಗೂ ಪಕ್ಷದ ಇತರರ ಮನವಿ- ಎರಡರ ನಡುವೆ ಉಭಯ ಸಂಕಟಕ್ಕೆ ಸಿಕ್ಕಿರುವ ಬೊಮ್ಮಾಯಿ ಗೌರಿ ಹಬ್ಬದ ದಿನ ದೇವೇಗೌಡರ ಜೊತೆ ವಿಲೀನದ ವಿಷಯದಲ್ಲಿ ಅಂತಿಮ ಮಾತುಕತೆ ನಡೆಸಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X