ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಾ, ಎಂಥಾ ಸೈಬರ್‌ ವಂಚಕ !

By Staff
|
Google Oneindia Kannada News

ಅಬ್ಬಾ, ಎಂಥಾ ಸೈಬರ್‌ ವಂಚಕ !
ಎಂಜಿನಿಯರಿಂಗ್‌ ಓದುತ್ತಿರುವ ಅಮಿತ್‌ ತಿವಾರಿ ಎಂಬ 21 ವರ್ಷದ ಯುವಕ ತನ್ನ ಬುದ್ಧಿವಂತಿಕೆ ಉಪಯೋಗಿಸಿ ಮುಂಬಯಿಯ ಕ್ರೆಡಿಟ್‌ ಕಾರ್ಡ್‌ ಪ್ರೊಸೆಸಿಂಗ್‌ ಕಂಪನಿಗೆ ಭಾರಿ ವಂಚನೆ ಮಾಡಿದ್ದಾನೆ. ಅಂದಹಾಗೆ, ಇದು ಸೈಬರ್‌ ಅಪರಾಧವಲ್ಲ, ಬರೀ 420 ಕೇಸು.

*ಸುಧಾಕರ ಪಡುಕೋಣೆ, ಮುಂಬಯಿ

ನಕಲಿ ಹೆಸರು- ಸಚಿನ್‌ ದೇಶಪಾಂಡೆ, ಜೀವನ್‌ ಪಳನಿ, ಶೋಯೆಬ್‌ ಷರೀಫ್‌
ಅಸಲಿ ಹೆಸರು- ಅಮಿತ್‌ ತಿವಾರಿ
ವಯಸ್ಸು- 21 ವರ್ಷ
ಮಾಡುತ್ತಿರುವುದು- ಎಂಜಿನಿಯರಿಂಗ್‌ ಓದು
ಮಾಡಿದ ವಂಚನೆ- ಮುಂಬಯಿ ಮೂಲದ ಕ್ರೆಡಿಟ್‌ ಕಾರ್ಡ್‌ ಪ್ರೊಸೆಸಿಂಗ್‌ ಕಂಪನಿಗೆ 9 ಲಕ್ಷ ರುಪಾಯಿ ಉಂಡೆನಾಮ ತೇದು ಇಕ್ಕಿದ್ದು.

ಅಪರಾಧದ ಸ್ವರೂಪ ಬದಲಾಗುತ್ತಿದೆ. ವ್ಯೋಮ ಪ್ರಪಂಚ (ಸೈಬರ್‌ ಸ್ಪೇಸ್‌) ದಲ್ಲಿ ಜಾಡೇ ಗೊತ್ತಾಗದಂತೆ ದೋಚುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ತಮಾಷೆಯೆಂದರೆ, ಕ್ರೆಡಿಟ್‌ ಕಾರ್ಡ್‌ ಪ್ರೊಸೆಸಿಂಗ್‌ಗೆ ಸಂಬಂಧಿಸಿದಂತೆ ಮೋಸವಾದರೆ, ಅದು ಸೈಬರ್‌ ಅಪರಾಧದ ವ್ಯಾಪ್ತಿಗೆ ಬರುವುದೇ ಇಲ್ಲ. ಅಮಿತ್‌ ತಿವಾರಿ ಒಬ್ಬ ಕಂಪ್ಯೂಟರ್‌ ಜಗಜ್ಜಾಣ ವಂಚಕ !

ಅಮಿತ್‌ ತಿವಾರಿ ಉಂಡೆನಾಮ ತಿಕ್ಕಿದ್ದು ಹೀಗೆ...
Amith Tiwari ಕರ್ನಲ್‌ ವಿಕ್ರಮ್‌ ತಿವಾರಿ ಮೇ 2002ನೇ ಇಸವಿಯಲ್ಲಿ ಸಿಸಿ ಅವೆನ್ಯೂ ಎಂಬ ಇ- ಕಾಮರ್ಸ್‌ನ ಕ್ರೆಡಿಟ್‌ ಕಾರ್ಡ್‌ ಪ್ರೊಸೆಸಿಂಗ್‌ ಕಂಪನಿಯ ಸೇವೆ ಪಡೆಯಲು ಸಹಿ ಮಾಡಿದರು. ನವೆಂಬರ್‌ನಲ್ಲಿ ತಮ್ಮ ಮಗ ಅಮಿತ್‌ ತಿವಾರಿ ಜೊತೆ ವ್ಯವಹರಿಸುವಂತೆ ಕಂಪನಿಯನ್ನು ಕೇಳಿಕೊಂಡರು. ಅಮಿತ್‌ www.mafiaz.com ಎಂಬ ವೆಬ್‌ಸೈಟ್‌ ಮೂಲಕ ವೆಬ್‌ ವಿನ್ಯಾಸ ಮಾಡಿಕೊಡುವ ವ್ಯಾಪಾರ ಮಾಡುತ್ತಾನೆ ಅಂತ ಅವರಪ್ಪ ಹೇಳಿದರು. ಸಿಸಿ ಅವೆನ್ಯೂ ಭದ್ರತಾ ತಂಡ ಅಮಿತ್‌ನ ಬ್ಯಾಂಕಿನ ಸಹಿ, ಗಾಡಿಯ ಲೈಸನ್ಸು , ದೂರವಾಣಿ ಸಂಖ್ಯೆ ಮೊದಲಾದ ದಾಖಲೆಗಳನ್ನು ಪದೇಪದೇ ಖಚಿತಪಡಿಸಿಕೊಂಡ ನಂತರವೇ ಸೇವೆ ಒದಗಿಸಲು ಒಪ್ಪಿದ್ದು.

ಕ್ರೆಡಿಟ್‌ ಕಾರ್ಡ್‌ ವ್ಯವಹಾರದ ಗುಟ್ಟು ಕಂಡುಕೊಂಡ
ಅಮಿತ್‌ನ ವೆಬ್‌ಸೈಟಿನ ಮೂಲಕ ವೆಬ್‌ ವಿನ್ಯಾಸ ಮಾಡಿಸಿಕೊಳ್ಳಬಯಸುವ ಗಿರಾಕಿಗಳು ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಕೊಡುತ್ತಾರೆ. ಈ ಕ್ರೆಡಿಟ್‌ ಕಾರ್ಡ್‌ಗಳ ವಿವರ ಪರಿಶೀಲಿಸಿ, ಮೋಸ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡ ನಂತರ ಸಿಸಿ ಅವೆನ್ಯೂ ಅಮಿತ್‌ ತಿವಾರಿಗೆ ಚೆಕ್ಕುಗಳನ್ನು ಕೊಡುತ್ತದೆ. ಇದು ಸಿಸಿ ಅವೆನ್ಯೂ ಕೆಲಸ.

ನವೆಂಬರ್‌ 2002ರಿಂದ ಫೆಬ್ರವರಿ 2003ರವರೆಗೆ ಸಿಸಿ ಅವೆನ್ಯೂ ಮೂಲಕ ಅಮಿತ್‌ 31 ಲಕ್ಷದ 1 ಸಾವಿರದ 508 ರುಪಾಯಿ ವ್ಯವಹಾರ ನಡೆಸಿದ. ಆಮೇಲೆ ಇದ್ದಕ್ಕಿದ್ದಂತೆ ವ್ಯವಹಾರ ನಿಂತುಹೋಯಿತು. ಕ್ರೆಡಿಟ್‌ ಕಾರ್ಡ್‌ದಾರರು ‘ನಮಗೆ www.mafiaz.com ಜೊತೆ ವ್ಯವಹಾರವೇ ಬೇಡ, ಹಣ ವಾಪಸ್‌ ಕೊಡಿ’ ಎಂಬ ಚಾರ್ಜ್‌ ಬ್ಯಾಕ್‌ ಪತ್ರಗಳನ್ನು ಕಳುಹಿಸಲು ಶುರುಮಾಡಿದರು. ಅಮಿತ್‌ ಮನೆಗೆ ಫೋನು ಮಾಡಿದರೆ ಉತ್ತರವೇ ಇಲ್ಲ. ಬೇರೆ ಬೇರೆ ಹೆಸರುಗಳಲ್ಲಿ ಖುದ್ದು ಅಮಿತ್‌ ಕ್ರೆಡಿಟ್‌ ಕಾರ್ಡ್‌ ಮಾಡಿಸಿಕೊಂಡಿದ್ದ. ತನ್ನ ವೆಬ್‌ಸೈಟಿನ ಒಡೆಯನೂ ಇವನೇ, ಗಿರಾಕಿಗಳೂ ಇವನೇ. ಚೆಕ್ಕುಗಳನ್ನು ಕೊಟ್ಟ ಸಿಸಿ ಅವೆನ್ಯೂ, ‘ಈರಭದ್ರ’ ಅಮಿತ್‌ ಮುಂದೆ ‘ಕೋಡಂಗಿ’ಯಾಗಿತ್ತು !

ಮುಂದುವರೆದ ವಂಚನೆ...
ಜೂನ್‌ 2003ರಲ್ಲಿ ಸಚಿನ್‌ ದೇಶಪಾಂಡೆ ಹಾಗೂ ಜೀವನ್‌ ಪಳನಿ ಎಂಬುವರು ಸಿಸಿ ಅವೆನ್ಯೂ ಜೊತೆ ಇನ್ನೊಂದು ಒಡಂಬಡಿಕೆಗೆ ಸಹಿ ಮಾಡಿದರು. ಇವರೂ ಕೂಡ ವೆಬ್‌ ವಿನ್ಯಾಸಕರೇ. ಇವರಿಬ್ಬರೂ ಕ್ರಮವಾಗಿ www.infocreek.org ಮತ್ತು www.ewebsitestarter.com ಎಂಬ ವೆಬ್‌ಸೈಟುಗಳನ್ನು ಪ್ರಾರಂಭಿಸಿದ್ದರು. ಇವರೂ ಅಮಿತನಂತೆಯೇ ವ್ಯವಹರಿಸಿದರು. ವಿದೇಶೀ ವೆಬ್‌ಸೈಟುಗಳಲ್ಲಿನ ಈ ವೆಬ್‌ಸೈಟುಗಳ ಗಿರಾಕಿಗಳ ಪಟ್ಟಿಗೂ ಅಮಿತನ ಗಿರಾಕಿಗಳ ಪಟ್ಟಿಗೂ ಸಾಮ್ಯತೆ ಇತ್ತು.

ಹೀಗೆ ನಡೆಯುವ ವ್ಯವಹಾರದಲ್ಲಿ ಇ- ಮೇಲ್‌, ಕೊರಿಯರ್‌ ಮಾತುಕತೆಯೇ ಹೆಚ್ಚಾಗಿ ನಡೆಯುವುದರಿಂದ ಪದೇಪದೇ ವ್ಯಕ್ತಿಗಳನ್ನು ನೋಡುವ ಕೆಲಸವನ್ನು ಕಂಪನಿ ಮಾಡಲಿಲ್ಲ.

ಸಿಕ್ಕಿಹಾಕಿಕೊಂಡ
ಆಮೇಲೆ ಶೋಯೆಬ್‌ ಷರೀಫ್‌ ಎಂಬ ಇನ್ನೊಬ್ಬ ವೆಬ್‌ ವಿನ್ಯಾಸಕ ಸಿಸಿ ಅವೆನ್ಯೂ ಜೊತೆ ಸಹಿ ಮಾಡಲು ಮುಂದಾದ. ಸಿಸಿ ಅವೆನ್ಯೂ ಸಿಇಓ ವಿಶ್ವಾಸ್‌ ಪಟೇಲ್‌ಗೆ ಫೋನಿನ ಮೂಲಕ ಕೇಳಿದ ಶೋಯೆಬ್‌ ಧ್ವನಿ ಪರಿಚಿತ ಅನ್ನಿಸಿತು. ಆತ ಅಮಿತ್‌, ಸಚಿನ್‌ ಹಾಗೂ ಪಳನಿ ಮೂವರೂ ನೆನಪಾದರು. ಎಲ್ಲರ ಕಂಠವೂ ಒಂದೆ ಎಂಬ ತೀರ್ಮಾನಕ್ಕೆ ಬಂದ ವಿಶ್ವಾಸ್‌, ಟ್ರ್ಯಾಪ್‌ ಮಾಡಲು ತೀರ್ಮಾನಿಸಿದರು. ಆಗಸ್ಟ್‌ 21ನೇ ತಾರೀಕು ‘40 ಸಾವಿರ ರುಪಾಯಿಗಳ ಚೆಕ್‌ ಇದೆ. ಬಂದು ತಗೊಂಡು ಹೋಗಿ’ ಎಂದು ಶೋಯೆಬ್‌ಗೆ ವಿಶ್ವಾಸ್‌ ಫೋನ್‌ ಮಾಡಿದರು. ಕಂಪನಿಗೆ ಬಂದ ಶೋಯೆಬ್‌ ಹಾಗೂ ಗಾಡಿ ಲೈಸೆನ್ಸಿನಲ್ಲಿದ್ದ ಅಮಿತ್‌ ಫೋಟೋ ಮುಖ ಒಂದೇ ಆಗಿತ್ತು. ಅಮಿತ್‌ ಸಿಕ್ಕಿಹಾಕಿಕೊಂಡ.

ಸಿಕ್ಕಿಹಾಕಿಕೊಂಡ ಗಳಿಗೆಯಲ್ಲೇ ತನ್ನ ತಪ್ಪುಗಳನ್ನು ಒಪ್ಪಿಕೊಂಡ. ನಾಲ್ವರು ವ್ಯಕ್ತಿಯ ಹೆಸರಲ್ಲಿ ತಾನು ಮಾಡಿದ ವಂಚನೆಯ ಬಗ್ಗೆ ಇವನಿಗೆ ಹೆಮ್ಮೆ. ಸಿಸಿ ಅವೆನ್ಯೂದ ಕ್ರೆಡಿಟ್‌ ಕಾರ್ಡ್‌ ಪ್ರೊಸೆಸಿಂಗ್‌ ತಂತ್ರಗಳು ಕಂಪನಿ ಸಿಬ್ಬಂದಿಗಿಂತ ಚೆನ್ನಾಗಿ ಅಮಿತ್‌ಗೆ ಕರಗತವಾಗಿದ್ದವು. ಆ ತಂತ್ರವನ್ನು ಅನುಸರಿಸಿಯೇ ಈತ ಕ್ರೆಡಿಟ್‌ ಕಾರ್ಡ್‌ಗಳನ್ನು ಮಾಡಿಸಿದ್ದ.

ಮಾಡಿದ ಹಣವನ್ನು ಕ್ಯಾಪಿಟೇಷನ್‌ ಫೀಸಿಗೆ ಬಳಸಿದ
ಕಾಲೇಜಲ್ಲಿ ಎಂಜಿನಿಯರಿಂಗ್‌ ಓದುತ್ತಿರುವ 21ರ ಹರೆಯದ ಅಮಿತ್‌ ಪ್ರಚಂಡ ಬುದ್ಧಿವಂತ. ಜೀನ್ಸ್‌ ಪ್ಯಾಂಟು ಹಾಗೂ ಟೀ- ಶರ್ಟು ತೊಟ್ಟ ಈತ ಸಂಭಾವಿತನ ಹಾಗೆ ಕಾಣುತ್ತಾನೆ. ಬೇರೆ ಯುವಕರಂತೆ ಇವನಲ್ಲೂ ಹುಡುಗಾಟಿಕೆಯ ಬುದ್ಧಿ ಇದೆ. ಆದರೆ ಇವನದ್ದು ಬುದ್ಧಿವಂತ ಹುಡುಗಾಟಿಕೆ. ಯಾಕೆ ಹೀಗೆ ಮಾಡಿದೆ ಅಂತ ಕೇಳಿದರೆ, ‘ಹೀಗೆ ವಂಚಿಸುವುದು ಸುಲಭ ಅನ್ನಿಸಿತು. ಅದಕ್ಕೇ ಮಾಡಿದೆ’ ಅಂತ ನಗುವ ಅಮಿತ್‌, ವಂಚನೆಯ ಹಣವನ್ನು ಕ್ಯಾಪಿಟೇಷನ್‌ ಫೀಸು ಕಟ್ಟಲು ಬಳಸಿದ್ದಾನೆ.

ಆಗಸ್ಟ್‌ 28ನೇ ತಾರೀಕಿನವರೆಗೆ ಪೊಲೀಸ್‌ ವಶದಲ್ಲಿ ಈತ ಇರುತ್ತಾನೆ. ತಮಾಷೆಯ ಸಂಗತಿಯೆಂದರೆ, ಈತ ಮಾಡಿರುವುದು ಸೈಬರ್‌ ಅಪರಾಧವಲ್ಲ. ಕ್ರೆಡಿಟ್‌ ಕಾರ್ಡ್‌ ಪ್ರೊಸೆಸಿಂಗ್‌ ವಂಚನೆ ಸೈಬರ್‌ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಇವನ ಮೇಲೆ ಪೊಲೀಸರು 420 ಕೇಸು ಜಡಿದಿದ್ದಾರೆ.

ಹುಡುಗ ಜಾಣನಿದ್ದಾನೆ. ಸೈಬರ್‌ ವ್ಯವಸ್ಥೆಯ ಭದ್ರತೆಯನ್ನು ಬಲಪಡಿಸಲು ಮುಂದೆ ಇವನ ಬುದ್ಧಿಯನ್ನು ಬಳಸಿಕೊಳ್ಳಬಹುದು. ಆ ಕಾರಣಕ್ಕೇ ಈತನ ವಿರುದ್ಧ ಹೆಚ್ಚು ಕ್ರಮ ತೆಗೆದುಕೊಳ್ಳದಿರಲು ನಿರ್ಧರಿಸಿದ್ದೇನೆ ಎನ್ನುವ ಸಿಸಿ ಅವೆನ್ಯೂ ಕಂಪನಿಯ ವಿಶ್ವಾಸ್‌, ಅಮಿತನ ತಲೆ ಸವರಿದ್ದಾರೆ. ಮುಂದೆ ಹೀಗೆ ಮಾಡೋಲ್ಲ ಅಂತ ಅಮಿತ್‌ ಹೇಳಿದರೂ ಕೂಡ ಅವನಿಗೆ ಈಗ ಮಾಡಿರುವ ವಂಚನೆಯ ಬಗ್ಗೆ ಅಪಾರ ಹೆಮ್ಮೆ !

Post your views

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X