ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಕ.ದಲ್ಲಿ ಹೈಕೋರ್ಟ್‌ ಪೀಠ : ಪಾಪುಗೆ ಕೋಪ, ಮತ್ತೆ ಚಳವಳಿ

By Staff
|
Google Oneindia Kannada News

ಉ.ಕ.ದಲ್ಲಿ ಹೈಕೋರ್ಟ್‌ ಪೀಠ : ಪಾಪುಗೆ ಕೋಪ, ಮತ್ತೆ ಚಳವಳಿ
ಭರೂಕ ವರದಿಯ ಅಂಶಗಳನ್ನು ಜಾಹೀರುಗೊಳಿಸಲು ಆಗ್ರಹ

ಬೆಂಗಳೂರು : ಕರ್ನಾಟಕಕ್ಕೆ ಇನ್ನೊಂದು ಹೈಕೋರ್ಟ್‌ ಪೀಠ ಬೇಡ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ಕೆ.ಜೈನ್‌ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯ ಹೋರಾಟ ಮತ್ತೆ ಭುಗಿಲೆದ್ದಿದೆ. ಈ ಸಮಸ್ಯೆ ರಾಜ್ಯವನ್ನೇ ಒಡೆಯುವಂಥ ಧೋರಣೆಗೆ ಕುಮ್ಮಕ್ಕು ಕೊಡುತ್ತಿದೆ.

ಹುಬ್ಬಳ್ಳಿ- ಧಾರವಾಡ ಹೈಕೋರ್ಟ್‌ ಪೀಠ ಹೋರಾಟ ಸಮಿತಿ ಅಧ್ಯಕ್ಷ ಸಿ.ಆರ್‌.ಪಾಟೀಲ್‌, ಪೀಠ ಸ್ಥಾಪನೆಯ ಬೇಡಿಕೆ ಈಡೇರದಿದ್ದರೆ ನಾಡನ್ನು ಒಡೆದು ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತದೆ ಎಂಬ ಆವೇಶದ ಮಾತಾಡಿದ್ದಾರೆ. ನಾಡೋಜ ಪಾಟೀಲ ಪುಟ್ಟಪ್ಪ ಕೂಡ ರಾಜ್ಯ ಒಡೆಯುವ ಆತಂಕ ಇದೆ ಅಂದಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯ ವಿಷಯವಾಗಿ ಸರ್ಕಾರ ಹಿರಿಯ ನ್ಯಾಯಮೂರ್ತಿ ಜೆ.ಸಿ.ಭರೂಕ ನೇತೃತ್ವದ ಏಳು ಮಂದಿಯ ಸಮಿತಿ ರಚಿಸಿತ್ತು. ಈ ಸಮಿತಿಯಲ್ಲಿ ಐವರು ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ಸ್ಥಾಪನೆಗೆ ಸಮ್ಮತಿ ಸೂಚಿಸಿದ್ದರು. ಇಬ್ಬರು ಮಾತ್ರ ಪೀಠ ಬೇಡ ಎಂದಿದ್ದರು. ಹಾಗಿದ್ದೂ ಬಹುಮತಕ್ಕೆ ಬೆಲೆ ಸಿಕ್ಕಿಲ್ಲ ಎಂದು ಪಾಪು ವಿಷಾದಿಸಿದರು.

ವಿಭಾಗೀಯ ಪೀಠ ಸಮ್ಮತಿ ಕೊಟ್ಟರೂ, ನಡುವೆ ನ್ಯಾಯಮೂರ್ತಿ ಎನ್‌.ಕೆ.ಜೈನ್‌ ಮೂಗು ತೂರಿಸಿದರು. ಪೀಠ ಬೇಡ ಎಂದು ತಗಾದೆ ತೆಗೆದರು. ನ್ಯಾಯಮೂರ್ತಿಗಳೂ ತಪ್ಪು ಮಾಡಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂಬುದು ಪಾಪು ಆರೋಪ.

ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತ ವರದಿಗಳ ಕಡತ ಧೂಳು ತಿನ್ನುತ್ತಿದೆ. ವಿಧಾನಸೌಧದಲ್ಲಿ ಕೂತವರ ಮನಸ್ಸು ಬೆಂಗಳೂರಿಂದ ಹೊರಗೆ ರಾಜ್ಯವಿದೆ ಅನ್ನುವ ಚಿಂತೆಯನ್ನೇ ಮಾಡುತ್ತಿಲ್ಲ ಎಂದು ದೂರಿದ ಪಾಪು, ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯಾಗದಿದ್ದರೆ, ಹೋರಾಟ ಭುಗಿಲೆದ್ದು ರಾಜ್ಯ ಅನಿವಾರ್ಯವಾಗಿ ಎರಡು ಹೋಳಾಗುತ್ತದೆ ಎಂದು ಎಚ್ಚರಿಸಿದರು.

ಸಮಿತಿ ಪೀಠ ಬೇಡ ಅಂದಿದು ್ದಯಾಕೆ ?
ಖಟ್ಲೆಗಳ ದಾಖಲು ಪ್ರಮಾಣ ಆಧರಿಸಿ ಭರೂಕ ಸಮಿತಿ ಹೈಕೋರ್ಟ್‌ ಪೀಠ ಬೇಡ ಅಂದಿದೆ ಅನ್ನುವುದು ಸುದ್ದಿ. ಆದರೆ, ಭರೂಕ ಸಮಿತಿ ವರದಿ ಸಲ್ಲಿಸಿ ಎರಡು ತಿಂಗಳಾದರೂ, ಸರ್ಕಾರ ಅದರ ಅಂಶಗಳನ್ನು ಜಾಹೀರುಗೊಳಿಸಿಲ್ಲ.

ಹಿಂದೆ ಮಹಾರಾಷ್ಟ್ರದ ಅಂದಿನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಔರಂಗಾಬಾದ್‌ ಪೀಠ ಸ್ಥಾಪನೆಗೆ ಶಿಫಾರಸು ಮಾಡಿದ್ದರು. ಆಗ ಖಟ್ಲೆಗಳ ದಾಖಲೆಯೇ ಮಾನದಂಡವಾಗಿದ್ದಿದ್ದರೆ ಪೀಠ ಸ್ಥಾಪನೆ ಸಾಧ್ಯವಾಗುತ್ತಿರಲಿಲ್ಲ. ಆದರೆ, ಆಗ ಸುಪ್ರಿಂಕೋರ್ಟ್‌ ಔರಂಗಾಬಾದ್‌ ಪೀಠ ಸ್ಥಾಪನೆಯ ಶಿಫಾರಸ್ಸನ್ನು ಎತ್ತಿ ಹಿಡಿಯಿತು. ಈ ಉದಾಹರಣೆ ನಮ್ಮ ಮುಂದಿದ್ದೂ ಭರೂಕ ಸಮಿತಿ ಉತ್ತರ ಕರ್ನಾಟಕಕ್ಕೆ ಹೈಕೋರ್ಟ್‌ ಪೀಠ ಸ್ಥಾಪನೆ ಬೇಡವೆಂದಿರುವುದು ತರವಲ್ಲ ಎನ್ನುತ್ತಾರೆ ಸಿ.ಆರ್‌.ಪಾಟೀಲ್‌.

ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಕಳೆದ ಮೂರು ದಶಕಗಳಿಂದ ಹೋರಾಟ ಮಾಡಿರುವ ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಡಿ.ಹಿರೇಮಠ್‌ ಕೂಡ ಭರೂಕ ವರದಿಯಿಂದ ಕ್ರುದ್ಧರಾಗಿದ್ದಾರೆ. ಪೀಠ ಸ್ಥಾಪನೆ ಕುರಿತು ನ್ಯಾಯಮೂರ್ತಿ ಜಸ್ವಂತ್‌ 21 ಅಂಶಗಳ ವರದಿ ಕೊಟ್ಟಿದ್ದರು. ಆದರೆ ಭರೂಕ ಸಮಿತಿ ಈ ವರದಿಯ ಒಂದಂಶವನ್ನು ಮಾತ್ರ ಪರಿಗಣಿಸಿ, ಹೈಕೋರ್ಟ್‌ ಪೀಠ ಬೇಡವೆಂದು ಹೇಳಿದೆ. ಜಸ್ವಂತ್‌ ಸಿಂಗ್‌ ವರದಿ ಪ್ರಕಾರ- ಪೀಠ ಸ್ಥಾಪನೆಗೆ ಆ ಭಾಗದ ಜನರ ಬೇಡಿಕೆ ಇರಬೇಕಾದ್ದು ಮುಖ್ಯ. ಆಗ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು ಪೀಠ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕಾಗುತ್ತದೆ ಎನ್ನುತ್ತಾರೆ ಹಿರೇಮಠ್‌.

ಒಟ್ಟಿನಲ್ಲಿ, ಉತ್ತರ ಕರ್ನಾಟಕ ಮತ್ತೆ ಕೆಂಡಾಮಂಡಲವಾಗಿದೆ. ಸೋಮವಾರ (ಆ.25) ಗುಲ್ಬರ್ಗಾದಲ್ಲಿ ಮುಖ್ಯ ನ್ಯಾಯಮೂರ್ತಿ ಜೈನ್‌ ತಗಾದೆ ಪ್ರತಿಭಟಿಸಿ ನ್ಯಾಯಾಧೀಶರು ಕೋರ್ಟ್‌ ಕಲಾಪ ಬಹಿಷ್ಕರಿಸಿದ್ದಾರೆ. ಧಾರವಾಡ ವಕೀಲರ ಸಂಘ ಮುಂದಿನ ಹೋರಾಟದ ರೂಪು- ರೇಷೆ ಹೊಸೆಯುತ್ತಿದೆ. ಪಾಪು ಕೋಪ ಜಾಸ್ತಿಯಾಗಿದೆ. ಪಾಟೀಲ್‌, ಹಿರೇಮಠ್‌ ಹೋರಾಟಕ್ಕೆ ಇನ್ನೂ ಫಲ ಸಿಕ್ಕದ್ದಕ್ಕೆ ಗಾಯಗೊಂಡ ಹುಲಿಯಂತಾಗಿದ್ದಾರೆ. ಹೈಕೋರ್ಟ್‌ ಪೀಠದ ಚಳವಳಿ ಮತ್ತೆ ರಂಗೇರುತ್ತಿದೆ. ಕೃಷ್ಣ ಏನಂತಾರೋ?

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X