ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕ ಪೇಟೆ ಮಾತು -‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’

By Staff
|
Google Oneindia Kannada News

ಪುಸ್ತಕ ಪೇಟೆ ಮಾತು -‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’
‘ಕಾವೇರಿ’ ಕುರಿತೊಂದು ಸಮಗ್ರ ಪುಸ್ತಕ

ಇವರು ನದಿಮೂಲವನ್ನು ಹುಡುಕಿಕೊಂಡು ಹೊರಟವರು. ನದಿಯ ಉದ್ದಗಲಕ್ಕೂ ಓಡಾಡಿದವರು. ನದಿಯ ಪುರಾಣದ ಪುಟಗಳ ಧೂಳು ಒರೆಸಿದವರು. ನದಿ ಬಯಲಿನ ಜನರ ದುಃಖ ದುಮ್ಮಾನ ಹಾಗೂ ಸುಖ ಸುಮ್ಮಾನಗಳಿಗೆ ಕವಿಯಾದವರು. ಇದೆಲ್ಲರದರ ಫಲ ಕಣ್ಣ ಮುಂದಿದೆ. ಹೆಸರು-

‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’.

ಪುಸ್ತಕಪೇಟೆಯಲ್ಲೀಗ ಶೇಷನಾರಾಯಣ ಬರೆದ ‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’ ಪುಸ್ತಕದ್ದೇ ಮಾತು. ಹಿರಿಯ ಲೇಖಕ ಶೇಷನಾರಾಯಣ ಈ ಪುಸ್ತಕಕ್ಕಾಗಿ ಪಟ್ಟ ಶ್ರಮ ಒಂದೆರಡಲ್ಲ . ಎಂಜಿನಿಯರುಗಳಿಂದ ಮಾಹಿತಿ ಪಡೆದಿದ್ದಾರೆ. ಕಾವೇರಿ ಹರಿಯುವ ಪ್ರಾಂತ್ಯದಲ್ಲೆಲ್ಲ ಸಂಚರಿಸಿ ನದಿಯಲೆಗೆ ಕಿವಿ ಕೊಟ್ಟಿದ್ದಾರೆ. ತಮಿಳು ಭಾಷೆಯನ್ನೂ ಬಲ್ಲ ಶೇಷನಾರಾಯಣ, ತಮಿಳರಿಂದ ಅಂಕಿ ಅಂಶಗಳನ್ನೂ ಹೆಕ್ಕಿದ್ದಾರೆ. ತಮಿಳುನಾಡಿನ ತಂಜಾವೂರು ಪ್ರದೇಶಕ್ಕೆ ಭೇಟಿ ನೀಡಿ ಸತ್ಯಾಸತ್ಯ ನ್ಯಾಯಾನ್ಯಾಯಗಳ ಪರಿಶೀಲಿಸಿದ್ದಾರೆ.

‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’ ಕೃತಿ ಏಕಕಾಲಕ್ಕೆ ಐತಿಹಾಸಿಕವೂ ವರ್ತಮಾನವೂ ಸ್ವಲ್ಪಮಟ್ಟಿಗೆ ಪುರಾಣವೂ ಹೌದು. ಕೇಶಿರಾಜನ ಶಬ್ದಮಣಿ ದರ್ಪಣದಲ್ಲಿನ ಕಾವೇರಿಯ ಉಲ್ಲೇಖ, ಕಾವೇರಿ ರಾಜಕಾರಣ ಬೆಳೆದು ಬಂದ ಬಗೆ, ಕಾವೇರಿ ಹಾಗೂ ವಿಶ್ವೇಶ್ವರಯ್ಯ, ಕಾವೇರಿ ನೀರಿಗಾಗಿ ಹೋರಾಟ, ಹಾಹಾಕಾರ, ಪರಿಸರ- ಪರಿಹಾರ, ಈ ಪರಿಯಾಗಿ ‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’ ಪುಸ್ತಕಕ್ಕೆ ಹಲವು ಆಯಾಮಗಳಿವೆ.

ಕಾವೇರಿ ನದಿ ಹಾಗೂ ನದಿಗೆ ಕಟ್ಟಿದ ಜಲಾಶಯಗಳು ಹಾಗೂ ಕಾವೇರಿಗೆ ಸಂಬಂಧಿಸಿದ ಇತರ ಚಿತ್ರಗಳನ್ನು ಪುಸ್ತಕದಲ್ಲಿ ಔಚಿತ್ಯಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಸಂಶೋಧನೆ, ವಿಮರ್ಶೆ, ಅವಲೋಕನ, ವಸ್ತುಸ್ಥಿತಿ ದಾಖಲು- ಎಲ್ಲ ಕಾರಣಗಳಿಂದಲೂ ಈ ಕೃತಿ ಮಹತ್ವಪೂರ್ಣವಾದುದು. ಇಂಥದೊಂದು ಅಪರೂಪದ ಪುಸ್ತಕವನ್ನು ಮೈಸೂರಿನ ‘ಕಾವ್ಯಾಲಯ’ ಪ್ರಕಟಿಸಿದೆ.

*

ಆಗಸ್ಟ್‌ 24, ಭಾನುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಂಗಣದಲ್ಲಿ ‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’ ಕೃತಿ ಬಿಡುಗಡೆಯಾಗಲಿದೆ. ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಪುಸ್ತಕ ಬಿಡುಗಡೆ ಮಾಡುವರು. ವಿಮರ್ಶಕ ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌, ವಿಧಾನ ಪರಿಷತ್‌ ಸಭಾಪತಿ ಬಿ.ಎಲ್‌.ಶಂಕರ್‌ ಕಾರ್ಯಕ್ರಮದಲ್ಲಿ ಹಾಜರಿರುವರು.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X