ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.15: ಕೃಷ್ಣರ ಮೋಡಬಿತ್ತನೆ ಕನಸು, ವಾಜಪೇಯಿ ‘ಪುರ’ದ ಧ್ಯಾನ

By Staff
|
Google Oneindia Kannada News

ಆ.15: ಕೃಷ್ಣರ ಮೋಡಬಿತ್ತನೆ ಕನಸು, ವಾಜಪೇಯಿ ‘ಪುರ’ದ ಧ್ಯಾನ
ಬೆಂಗಳೂರಿಂದ ದೆಹಲಿವರೆಗೆ ಕೇಸರಿ ಬಿಳಿ ಹಸಿರು

ಬೆಂಗಳೂರು : ಆಗಸ್ಟ್‌ 18ರಿಂದ ಬೆಂಗಳೂರು, ಬೀದರ್‌ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳನ್ನು ಉಪಯೋಗಿಸಿಕೊಂಡು ಮೋಡ ಬಿತ್ತನೆ ನಡೆಸಿ, ಬರ ಪರಿಸ್ಥಿತಿಯ ತೀವ್ರತೆಯನ್ನು ಕಡಿಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ತಿಳಿಸಿದರು.

ರಾಜ್ಯದಲ್ಲಿರುವ ಬರ ಪರಿಸ್ಥಿತಿಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಕೃಷ್ಣ , ಬರ ಕಾಮಗಾರಿಗೆ ಸಕಲ ಪ್ರಯತ್ನಗಳನ್ನೂ ಕೈಗೊಳ್ಳುವುದಾಗಿ ಹೇಳಿದರು. ನಗರದ ಫೀಲ್ಡ್‌ ಮಾರ್ಷಲ್‌ ಮಾಣಿಕ್‌ ಶಾ ಪೆರೇಡ್‌ ಮೈದಾನದಲ್ಲಿ ಆ.15ರ ಸ್ವಾತಂತ್ರ್ಯ ಹಬ್ಬದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಮಾತನಾಡಿದರು.

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಕ್ಷರ ದಾಸೋಹದಿಂದ ಉಂಟಾಗಿರುವ ತೊಂದರೆಗಳು ತಾತ್ಕಾಲಿಕ ಎಂದ ಕೃಷ್ಣ , ಈ ಯೋಜನೆಯಂದ ರಾಜ್ಯದ 50 ಲಕ್ಷ ಬಡ ಮಕ್ಕಳಿಗೆ ಅನುಕೂಲವಾಗುತ್ತಿದೆ ಎಂದರು. ಸ್ತ್ರೀ -ಶಕ್ತಿ ಯೋಜನೆ, ಮಹಿಳಾ ಸ್ವ ಸಹಾಯ ಗುಂಪು ಯೋಜನೆ ಹಾಗೂ ಸಾಫ್ಟ್‌ ವೇರ್‌ ರಫ್ತುಗಳಲ್ಲಿನ ರಾಜ್ಯದ ಯಶಸ್ಸನ್ನು ಉದಾಹರಣೆ ಸಮೇತ ಕೃಷ್ಣ ಸ್ಮರಿಸಿಕೊಂಡರು.

ನವದೆಹಲಿ ವರದಿ : ಗ್ರಾಮೀಣ ಪ್ರದೇಶದಲ್ಲಿ ನಗರದ ಸೌಲಭ್ಯಗಳನ್ನು ಒದಗಿಸುವ ‘ಪುರ’ (PURA) ಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ಹೊಸ ಯೋಜನೆಗಳನ್ನು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸ್ವಾತಂತ್ರ್ಯ ದಿನದ ತಮ್ಮ ಭಾಷಣದಲ್ಲಿ ಪ್ರಕಟಿಸಿದ್ದಾರೆ.

ಅಲೆಮಾರಿಗಳಿಗೆ ಮತ್ತು ಅಂಗವಿಕಲರಿಗೋಸ್ಕರ ಆಯೋಗವೊಂದನ್ನು ಆರಂಭಿಸುವ ಹಾಗೂ ಪ್ರವಾಸೋದ್ಯಮದ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪಿಸುವ ಬಗ್ಗೆ ಪ್ರಧಾನಿ ಆ. 15ರ ತಮ್ಮ ಭಾಷಣದಲ್ಲಿ ಪ್ರಕಟಿಸಿದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಸಾಮಾಜಿಕ - ಆರ್ಥಿಕ ಸಮತೋಲನವನ್ನು ಕಾಪಾಡಲು ಪುರ ಯೋಜನೆ ನೆರವಾಗಲಿದೆ ಎಂದರು.

ಈ ಯೋಜನೆಯು ರಸ್ತೆ ಸಾರಿಗೆ ಹಾಗೂ ವಿದ್ಯುತ್‌ ಸಂಪರ್ಕದ ಕುರಿತು ನಿಗಾ ವಹಿಸಲಿದ್ದು, ಇಂಟರ್‌ನೆಟ್‌ ಹಾಗೂ ಐಟಿ ಸೇವೆ, ಉತ್ತಮ ಶಿಕ್ಷಣದ ಮೂಲಕ ಜ್ಞಾನ ಸಂಪರ್ಕ, ಮಾರುಕಟ್ಟೆ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಹಳ್ಳಿ- ನಗರದ ನಡುವೆ ಇರುವ ವಿಪರೀತ ಅಂತರವನ್ನು ಕಡಿಮೆ ಮಾಡಲಾಗುವುದು.

ಇನ್ನೈದು ವರ್ಷದೊಳಗೆ ದೇಶದ 500 ಗ್ರಾಮೀಣ ಸಮುದಾಯಗಳಲ್ಲಿ ಪುರ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ಈ ವಿಷಯದಲ್ಲಿ ದೇಶದ ಆಗ್ನೇಯ ರಾಜ್ಯ, ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಒತ್ತು ಕೊಡಲಾಗುವುದು. ಒರಿಸ್ಸಾದ ಕಾಳಹಂದಿ, ಬೊಲಂಗೀರ್‌, ಕೊರಪುಟ್‌ ಜಿಲ್ಲೆಗಳಿಂದ ಈ ಯೋಜನೆಯು ಆರಂಭವಾಗಲಿದ್ದು , ಇಡೀ ಯೋಜನೆಯು ಕೇಂದ್ರ ಸರಕಾರದ ನಿಧಿಯಾಂದಿಗೆ ಮುಂದುವರೆಯಲಿದೆ.

ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಪ್ರಧಾನಿ ಭಾಷಣ ಶುರು ಮಾಡುತ್ತಿದ್ದಂತೆಯೇ ಹನಿ ಹನಿ ಮಳೆಗರೆಯಿತು. ಗುರುವಾರ ಮಧ್ಯರಾತ್ರಿಯಿಂದಲೇ ಆರಂಭವಾದ ಮಳೆ ಬೆಳಗ್ಗಿನ ಕಾರ್ಯಕ್ರಮದುದ್ದಕ್ಕೂ ಸುರಿಯುತ್ತಿತ್ತು. ಆದರೂ ಕೊಡೆ ಹಿಡಿದುಕೊಂಡ ಸಂಸದರು ಹಾಗೂ ವಿರೋಧಪಕ್ಷದ ನಾಯಕರು, ತಿಳಿ ನೀಲಿ ರೈನ್‌ ಕೋಟ್‌ ಧರಿಸಿ ಕುಳಿತ ಶಾಲಾ ಮಕ್ಕಳು ಕಾರ್ಯಕ್ರಮ ಪೂರ್ತಿ ಭಾಗವಹಿಸಿದರು.

ಸುಮಾರು 45 ಶಾಲೆಗಳಿಂದ ಆಗಮಿಸಿದ 3, 500ಕ್ಕೂ ಹೆಚ್ಚು ಮಂದಿ ಪುಟಾಣಿಗಳು ಕಾರ್ಯಕ್ರಮಕ್ಕೆ ಶೋಭೆ ನೀಡಿದರು. ದೇಶಭಕ್ತಿ ಗೀತೆ ಹಾಡಿ, ರಾಷ್ಟ್ರಗೀತೆಯನ್ನು ಹಾಡಿದ ಮಕ್ಕಳ ಉತ್ಸಾಹಕ್ಕೆ ಎಣೆಯಿರಲಿಲ್ಲ.

ವರ್ಷಾಂತ್ಯದಲ್ಲಿ ನದಿ ಜೋಡಣೆಗೆ ಚಾಲನೆ : ತಮ್ಮ ಭಾಷಣದಲ್ಲಿ ವಾಜಪೇಯಿ ಪ್ರಸ್ತಾಪಿಸಿದ ಇನ್ನೊಂದು ಅಂಶವೆಂದರೆ ನದೀ ಜೋಡಣೆ ಯೋಜನೆ. ಉತ್ತರದ ರಾಜ್ಯಗಳಲ್ಲಿ ಪ್ರತೀ ವರ್ಷ ಕಾಣಿಸಿಕೊಳ್ಳುತ್ತಿರುವ ನೆರೆ ಹಾವಳಿ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಕಂಡು ಬರುವ ಬರ ಪರಿಸ್ಥಿತಿಯನ್ನು ನಿವಾರಿಸಲು ನದೀ ಜೋಡಣೆ ಯೋಜನೆ ನೆರವಾಗಲಿದೆ. ರಾಜ್ಯಸರಕಾರ ಮತ್ತು ಕೇಂದ್ರ ಸರಕಾರದ ನೆರವಿನೊಂದಿಗೆ ಈ ಯೋಜನೆ ಈ ವರ್ಷಾಂತ್ಯದಲ್ಲಿ ಪ್ರಾರಂಭವಾಗಲಿದೆ. ಮೊದಲನೆಯದಾಗಿ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಕೆನ್‌ ಮತ್ತು ಬೆಟುವಾ ನದಿಯ ಜೋಡಣೆ ಎಂದು ಪ್ರಧಾನಿ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X