ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಪ್ಸಿ- ಕೋಲಾ ಕೋಲಾಹಲ

By Staff
|
Google Oneindia Kannada News

ಪೆಪ್ಸಿ- ಕೋಲಾ ಕೋಲಾಹಲ
ಪೆಪ್ಸಿ- ಕೋಕಕೋಲಾದಲ್ಲಿ ಕ್ರಿಮಿ ನಾಶಕಗಳಿವೆ ಎನ್ನುವ ವರದಿ ಸಂಸತ್‌ನಲ್ಲಿ ಪ್ರಸ್ತಾಪವಾದದ್ದೇ ತಡ- ಕೋಲಾ ಮಾರುಕಟ್ಟೆಯಲ್ಲಿ ಕೋಲಾಹಲ, ವ್ಯಾಪಾರ ಠುಸ್ಸೋ ಠುಸ್ಸು ! ರಾಜ್ಯದ ವಿವಿಧ ಭಾಗಗಳಲ್ಲಿ ಪೆಪ್ಸಿ-ಕೋಲಾ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಮೈಸೂರಿನಲ್ಲಿ ಪೆಪ್ಸಿ-ಕೋಲಾ ಸಾಗಿಸುವ ವಾಹನಗಳ ಮೇಲೆ ದಾಳಿ ನಡೆದಿದೆ. ಮಂಗಳೂರಿನಲ್ಲಿ ಸ್ಥಳೀಯ ತಂಪು ಪಾನೀಯಗಳದೇ ಸದ್ದು . ಸ್ವದೇಶಿ ಪಾನೀಯಗಳಿಗೆ ಹಾಗೂ ಎಳನೀರಿಗೆ ಈಗ ಬೊಂಬಾಟ್‌ ಮಾರುಕಟ್ಟೆ .

*ದಟ್ಸ್‌ಕನ್ನಡ ಬ್ಯೂರೋ

ಬೆಂಗಳೂರು : ಸಂಸತ್‌ ಭವನದ ಅಂಗಳದಲ್ಲಿ ಪೆಪ್ಸಿ- ಕೋಕಕೋಲಾ ಮೊದಲಾದ ತಂಪು ಪಾನೀಯ ಮಾರಾಟ ನಿಷಿದ್ಧವಾಗಿದ್ದೇ ತಡ, ಜನ ಕೂಡ ಈ ಪಾನೀಯಗಳಿಂದ ದೂರ ಉಳಿಯತೊಡಗಿದ್ದಾರೆ. ಮಲ್ಲೇಶ್ವರಂನಲ್ಲಿ ಗುರುವಾರ ಒಂದು ಸುತ್ತಿನ ನಡೆಯಲ್ಲೇ ತಂಪುಪಾನೀಯ ಮಾರಾಟ ಡಲ್ಲಾಗಿರುವುದು ಸ್ಪಷ್ಟವಾಯಿತು.

ಸಂಪಿಗೆ ರಸ್ತೆಯಲ್ಲಿ ಬರೀ ತಂಪು ಪಾನೀಯ ಮಾರುವವರು ನೊಣ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಐಸ್‌ ಐಸ್‌ ಕ್ರೀಮನ್ನೂ ಮಾರುವ ಕಂಪನಿಗಳು ಬಚಾವ್‌. ಗುರುವಾರ ವ್ಯಾಪಾರ ಸುಮಾರು 80 ಪ್ರತಿಶತ ತಗ್ಗಿದೆ ಅಂತ ಬಹುತೇಕ ಅಂಗಡಿ ಮಾಲೀಕರು ಅಲವತ್ತುಕೊಂಡರು. ಪೆಪ್ಸಿ- ಕೋಲಾಗಳಲ್ಲಿ ವಿಷ ಇದೆಯೋ ಇಲ್ಲವೋ ಅಂತ ಸ್ಪಷ್ಟವಾಗಿ ಪತ್ತೆಯಾಗೋಕೆ ಇನ್ನೂ ಹದಿನೈದು ದಿನ ಇದೆ. ಆದರೆ, ಸಂಸತ್ತಿನಲ್ಲಿ ಮಂತ್ರಿ ಮಹೋದಯರೇ ಈ ಪಾನೀಯಗಳ ಸಹವಾಸ ಬೇಡ ಅಂದಿರುವುದು ಜನರಿಗೆ ಪಾಠವಾಗಿದೆ.

Coca Cola - Pepsiಮಲ್ಲೇಶ್ವರದ ಒಂದು ಅಂಗಡಿಯ ಶಂಕರ್‌ ಭಾರೀ ತಲೆ ಕೆಡಿಸಿಕೊಂಡಿದ್ದಾರೆ. ಒಂದೇ ದಿನ ಈ ಪಾಟಿ ಬ್ಯುಸಿನೆಸ್ಸು ಡಲ್ಲಾದರೆ ಹೆಂಗೆ ಸ್ವಾಮಿ ತಡಕೊಳ್ಳೋದು ಅಂತಲೇ ಮಾತಿಗೆ ನಿಲ್ಲುವ ಅವರು ಹೇಳ್ತಾರೆ- ನನ್ನ ಅಂಗಡೀಲಿ ಒಂದು ಎಸ್‌ಟಿಡಿ ಮತ್ತು ಒಂದು ಕಾಯಿನ್‌ ಬೂತಿದೆ. ಇಲ್ಲಿಗೆ ಬರುವ ಅನೇಕರು ಪಡ್ಡೆಗಳು. ಅವರೆಲ್ಲ ಮಾತೆತ್ತಿದರೆ ಕೂಲ್‌ ಡ್ರಿಂಕ್ಸನ್ನೇ ಕುಡೀತಿದ್ದರು. ಒಬ್ಬಾಕಿ ಅದರಲ್ಲಿ ವಿಷ ಇದೆ. ಪಾರ್ಲಿಮೆಂಟಿನಲ್ಲೇ ಅದನ್ನ ಯಾರೂ ಕುಡೀತಿಲ್ಲ. ಅದನ್ನ ಕುಡೀಬ್ಯಾಡ್ರಿ ಅಂತ ಬೆಳ್ಳಂಬೆಳಗ್ಗೆಯೇ ಘೋಷಿಸಿದಳು. ಅದು ಜೋರಾಗಿ ಹಬ್ಬಿತು. ಇಡೀ ದಿನ ಕೇವಲ 5 ಕೂಲ್‌ ಡ್ರಿಂಕ್‌ ಖರ್ಚಾಗಿದೆ. ಒಂದು ಸಾಫ್ಟಿ ಹಾಕಿಸೋಣ ಅಂತ ಶಂಕರ್‌ ಯೋಚಿಸುತ್ತಿದ್ದಾರೆ.

ಬೇಕರಿ ಮತ್ತು ಬಾರ್‌ಗಳಲ್ಲೂ ಕೋಲಾ ಬ್ಯುಸಿನೆಸ್ಸು ಠುಸ್ಸಾಗಿದೆ. ಬೆಂಗಳೂರಿನ ಥಿಯೇಟರುಗಳಲ್ಲೂ ಗುರುವಾರ ಇದೇ ಸ್ಥಿತಿ. ಬಾರ್‌ ಮತ್ತು ರೆಸ್ಟೊರಾಂಟ್‌ಗಳಲ್ಲಿ ಕೋಲಾಗಳ ಮಾರಾಟ ಪ್ರತಿಶತ 50ರಷ್ಟು ತಗ್ಗಿದ್ದು, ಸೋಡಾಗೆ ಎಂದಿಗಿಂತ ಜಾಸ್ತಿ ಬೇಡಿಕೆ ಬಂದಿದೆ.

ಕೋಲಾ ವಿಷಯ ಸುದ್ದಿ ಗಾಳಿಯಲ್ಲಿ ಬೆರೆಯುತ್ತಿದ್ದಂತೆ ಎಂಟಿಆರ್‌ನ ಸಾಫ್ಟಿ ಐಸ್‌ ಕ್ರೀಂ ಬ್ಯುಸಿನೆಸ್ಸು ಗರಿಗೆದರಿದೆ. ಎಳನೀರು ಮಾರುವವರ ಪಾಲಿಗೂ ಕೋಲಾದಲ್ಲಿನ ವಿಷ ಅಮೃತವಾಗಿ ಪರಿಣಮಿಸಿದೆ.

ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ಕೋಲಾದಂಥ ತಂಪು ಪಾನೀಯ ಬೇಕೆ, ಬೇಡವೇ ಅಂಥ ಒಂದು ಸಮೀಕ್ಷೆಯನ್ನೇ ನಡೆಸಿದೆ. ಇಲ್ಲಿ ಒಂದು ದಿನದಲ್ಲಿ ಓಟು ಹಾಕಿರುವವರ ಪೈಕಿ ಶೇ.80ರಷ್ಟು ಮಂದಿ ಇವುಗಳ ಸಹವಾಸವೇ ಬೇಡ ಅಂದಿದ್ದಾರೆ. ಎಲ್ಲೋ ಕೆಲವರು ಮಾತ್ರ, ಜಗತ್ತಿನಲ್ಲೇ ಒಳ್ಳೆಯ ಬ್ರಾಂಡ್‌ಗಳಾದ ಪೆಪ್ಸಿ ಮತ್ತು ಕೋಕಕೋಲಾಗಳಿಗೆ ಮಸಿ ಬಳಿಯಲು ಯಾರೋ ಈ ರೀತಿ ವಿಷ ಇದೆ ಅಂತ ಪುಕಾರೆಬ್ಬಿಸಿದ್ದಾರೆ ಅಂತ ಬರೆದಿದ್ದಾರೆ. ಕೆಲವರಂತೂ ಸ್ಲೋಗನ್‌ಗಳನ್ನು ತಿರುಚಿ ಬರೆದಿದ್ದಾರೆ. ನಮೂನೆಗೆ- ‘ಥಂಡ ಮತ್‌ಲಬ್‌ ಥಂಡಾ ಪಾನಿ’, ‘ಯೇ ದಿಲ್‌ ನ ಮಾಂಗೆ ಮೋರ್‌’!

ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಭಾರತದಲ್ಲಿ ಮಾರಾಟವಾಗುತ್ತಿರುವ 12 ಬ್ರಾಂಡುಗಳ ತಂಪು ಪಾನೀಯಗಳನ್ನು ಪರೀಕ್ಷಿಸಿ, ಅದರಲ್ಲಿ ವಿಷಾಂಶ ಇದೆ ಅಂತ ಹೇಳಿದೆ. ಆಹಾರ ಸಂಸ್ಕರಣ ಸಚಿವಾಲಯ ಇದು ಸತ್ಯವೇ ಅಂತ ಈಗ ಪರೀಕ್ಷೆಗೆ ತೊಡಗಿದ್ದು, ಇನ್ನು 15 ದಿನದಲ್ಲಿ ಈ ಬಗ್ಗೆ ಸಮಗ್ರ ವರದಿ ಸಿಗಲಿದೆ. ಇದರ ನಡುವೆ ಕೋಲಾ ಕಂಪನಿಗಳು ತಮ್ಮ ಪಾನೀಯಗಳು ವಿಷ ರಾಸಾಯನಿಕಗಳನ್ನು ಒಳಗೊಂಡಿಲ್ಲ ಎಂದು ಪ್ರತಿಪಾದಿಸಲು ಅಂಕಿ- ಅಂಶಗಳನ್ನು ಪ್ರಕಟಿಸುವ ಸಾಹಸ ನಡೆಸುತ್ತಿವೆ. ಕೋಲಾ ಕಂಪನಿಗಳು ಹಾಗೇನಾದರೂ ಮಾಡಿದಲ್ಲಿ, ಕೋರ್ಟಿನ ಕಟೆಕಟೆ ಹತ್ತುವುದಾಗಿ ಸಿಎಸ್‌ಇ ಧಮಕಿ ಹಾಕಿದೆ. ಸಂಸತ್ತಿನಲ್ಲಿ ಮಾರಾಟ ನಿಷೇಧಿಸಿದ್ದು ಆತುರದ ನಿರ್ಣಯ ಅಂತ ಕೋಲಾ ಕಂಪನಿಗಳು ಅಲವತ್ತುಕೊಳ್ಳುತ್ತಿವೆ.

ನೀವು ಪೆಪ್ಸಿ- ಕೋಲಾ ಕುಡಿಯುತ್ತೀರೋ, ಇಲ್ಲವೋ?

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X