ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಚಿವ, ಪ್ರಗತಿಪರ ಜನತಾದಳದ ಸಿ.ಭೈರೇಗೌಡ ನಿಧನ

By Staff
|
Google Oneindia Kannada News

ಮಾಜಿ ಸಚಿವ, ಪ್ರಗತಿಪರ ಜನತಾದಳದ ಸಿ.ಭೈರೇಗೌಡ ನಿಧನ
ಕಮ್ಯುನಿಸ್ಟ್‌ ವಿಚಾರಧಾರೆಯ ನಾಯಕನ ನಿರ್ಗಮನ

ಬೆಂಗಳೂರು : ಅಖಿಲ ಭಾರತ ಪ್ರಗತಿಪರ ಜನತಾದಳ ಕರ್ನಾಟಕ ಘಟಕದ ಅಧ್ಯಕ್ಷ ಹಾಗೂ ಮಾಜಿ ಸಚಿವ ಸಿ.ಭೈರೇಗೌಡ ಜುಲೈ 29ರ ಮಂಗಳವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು . ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂವರು ಪುತ್ರರನ್ನು ಭೈರೇಗೌಡ ಅಗಲಿದ್ದಾರೆ.

ಕೋಲಾರ ಜಿಲ್ಲೆಯ ವೇಮಗಲ್‌ ಕ್ಷೇತ್ರವನ್ನು ರಾಜ್ಯ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದ ಭೈರೇಗೌಡರು, ಐದು ಬಾರಿ ವೇಮಗಲ್‌ ವಿಧಾನಕ್ಷೇತ್ರದಿಂದ ವಿಜಯ ಸಾಧಿಸಿ ಶಾಸಕರಾಗಿದ್ದರು.

ಸಂಯುಕ್ತ ಜನತಾದಳದ ಅಧ್ಯಕ್ಷರಾಗಿದ್ದ ಭೈರೇಗೌಡರು, ಸಂಯುಕ್ತ ದಳ ಹಾಗೂ ಜಾತ್ಯತೀತ ಜನತಾದಳಗಳ ವಿಲೀನದ ಕನಸು ಕಂಡಿದ್ದರು. ಈ ವಿಲೀನ ಪ್ರಯತ್ನದ ಅಂಗವಾಗಿ ಬೊಮ್ಮಾಯಿ ನೇತೃತ್ವದಲ್ಲಿ ರೂಪುಗೊಂಡ ಪ್ರಗತಿಪರ ಜನತಾದಳದ ಮುಂಚೂಣಿಯಲ್ಲಿ ಭೈರೇಗೌಡರು ಕಾಣಿಸಿಕೊಂಡಿದ್ದರು. ದಳ ಬಣಗಳ ವಿಲೀನ ಪ್ರಯತ್ನ ಮತ್ತೊಮ್ಮೆ ಚುರುಕಾಗಿರುವ ಸಂದರ್ಭದಲ್ಲೇ ಭೈರೇಗೌಡ ಹಠಾತ್‌ ಮರಣ ಹೊಂದಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಎಸ್‌.ಆರ್‌.ಬೊಮ್ಮಾಯಿ, ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮುಂತಾದವರು ಭೈರೇಗೌಡರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಹೋರಾಟಗಾರ : ರೈತ ನಾಯಕರಾಗಿ ಗುರ್ತಿಸಿಕೊಂಡಿದ್ದ ಭೈರೇಗೌಡರು ವಿಧಾನಸಭೆಯಲ್ಲಿ ರೈತರ ದನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾಮಕೃಷ್ಣ ಹೆಗಡೆ, ದೇವೇಗೌಡ ಹಾಗೂ ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅಗ್ಗಳಿಕೆ ಭೈರೇಗೌಡರದು.

ಭೈರೇಗೌಡರು ಕಮ್ಯುನಿಸ್ಟ್‌ ವಿಚಾರ ಧಾರೆಗಳಿಂದ ಪ್ರಭಾವಿತರಾಗಿದ್ದರು. 1984ರಲ್ಲಿ ಅವರು ಸ್ಫೋಟಿಸಿದ ಮೊಯ್ಲಿ ಟೇಪ್‌ ಪ್ರಕರಣ ಭಾರೀ ಸುದ್ದಿ ಮಾಡಿತ್ತು . ಹೆಗಡೆ ಸಂಪುಟದಲ್ಲಿ ಭಿನ್ನಮತ ಸೃಷ್ಟಿಸಲು ಕಾಂಗ್ರೆಸ್‌ನ ಮುಖಂಡ ಎಂ.ವೀರಪ್ಪ ಮೊಯ್ಲಿ ಅವರು ತಮಗೆ 2 ಲಕ್ಷ ರುಪಾಯಿ ಲಂಚದ ಆಮಿಷ ಒಡ್ಡಿದ್ದರು. ಈ ಕುರಿತ ಟೇಪ್‌ ಕೂಡ ತಮ್ಮ ಬಳಿಯಿರುವುದಾಗಿ ಭೈರೇಗೌಡರು ಹೇಳಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X