ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ರಾಜೀವ್‌ ದೀಕ್ಷಿತ್‌

By Staff
|
Google Oneindia Kannada News

ಬೆಂಗಳೂರಲ್ಲಿ ರಾಜೀವ್‌ ದೀಕ್ಷಿತ್‌
ಸಾಲದ ಹೊಳೆಯಲ್ಲಿ ತಾನೂ ಮುಳುಗುತ್ತಾ ಜನರನ್ನೂ ಮುಳುಗಿಸುತ್ತಿರುವ ಸರ್ಕಾರವನ್ನು ಅಂಕಿ- ಅಂಶಗಳ ಸಮೇತ ತರಾಟೆಗೆ ತೆಗೆದುಕೊಳ್ಳುವ ರಾಜೀವ್‌ ದೀಕ್ಷಿತ್‌ರ ಸ್ವಾತಂತ್ರ್ಯ ಉಳಿಸುವ ಚಳವಳಿಯ ಕಳಕಳಿಗಳು...

*ನಾಡಿಗೇರ್‌ ಚೇತನ್‌

ಆಜಾದಿ ಬಚಾವೋ ಆಂದೋಲನ ಸಮಿತಿ ಬೆಂಗಳೂರಿನ ಹೆಚ್‌. ಎನ್‌. ಕಲಾಕ್ಷೇತ್ರದಲ್ಲಿ ಬುಧವಾರ ರಾಜೀವ ದೀಕ್ಷಿತರ ಭಾಷಣವನ್ನು ಏರ್ಪಡಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದವರು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ. ಮಾಜಿ ಸಂಸದ ವಿ.ಎಸ್‌. ಕೃಷ್ಣ ಅಯ್ಯರ್‌, ಮನ್ವಂತರದ ಟಿ.ಎನ್‌. ಸೀತಾರಾಂ ವೇದಿಕೆ ಮೇಲಿದ್ದರು.

ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ಆಜಾದಿ ಪ್ರಶಸ್ತಿಯನ್ನು ‘ನುಡಿ’ ತಂತ್ರಾಂಶ ಅಭಿವೃದ್ಧಿ ಪಡಿಸಿರುವ ಕನ್ನಡ ಗಣಕ ಪರಿಷತ್ತಿಗೆ ನೀಡಲಾಯಿತು. ಗಣಕ ಪರಿಷತ್ತಿನ ಹೊರೆ ಹೊತ್ತಿರುವ ಶ್ರೀನಾಥ ಶಾಸ್ತ್ರಿಗಳು ಪ್ರಶಸ್ತಿ ಸ್ವೀಕರಿಸಿದರು.

ಅದಕ್ಕೂ ಮುಂಚೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾವು ಇಂದು ಅಗ್ನಿಪರ್ವತದ ಮೇಲೆ ಇದ್ದೀವಿ, ಅದು ಒಳಗೆ ಹೊಗೆ ಆಡುತ್ತಿದೆ, ಯಾವ ಕ್ಷಣವಾದರೂ ಸ್ಫೋಟಿಸಬಹುದು. ನಮ್ಮನ್ನು ಅನೇಕ ಜ್ವಲಂತ ಸಮಸ್ಯೆಗಳು ಕಾಡುತ್ತಿವೆ. ನಮ್ಮ ಜನಕ್ಕೆ ಅದರ ಅರಿವಿಲ್ಲ, ಜಾಗೃತಿ ಇಲ್ಲ. ನಾವು ಆನಂದದಿಂದ ಇದ್ದೇವೆ. ರಾಜೀವ ದೀಕ್ಷಿತ್‌ ಇಂತಹವರನ್ನು ಕಟ್ಟಿಕೊಂಡು ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಸತ್ತಂತಿಹರನು ಬಡಿದೆಚ್ಚರಿಸು : ಯುವ ಜನಾಂಗ ಕ್ರಾಂತಿ ಮಾಡಿ, ಸಮಾಜದಲ್ಲಿ ಮಾರ್ಪಾಡು ತರಬೇಕು, ತಿಳಿವಳಿಕೆ ಮತ್ತು ವಿಚಾರ ಕ್ರಾಂತಿಯ ಬೀಜ ಬಿತ್ತಬೇಕು. ಸಂಘಟನೆ ಮಾಡಬೇಕು. ಕೊನೆಗೇನಿದ್ದರೂ ಸಾಮಾಜಿಕ ಹೋರಾಟ. ಬಡವ ಬಲ್ಲಿದರ ಮಧ್ಯೆ ಅಂತರ ಅಧಿಕವಾಗುತ್ತಿದೆ. ಉಳುವವನಿಗೆ ಭೂಮಿ, ಉದ್ಯೋಗಾವಕಾಶ, ಚುನಾವಣಾ ಪದ್ಧತಿ ಬದಲಾವಣೆ, ಯೋಗ್ಯರು ಶಾಸನಸಭೆಗೆ ಮುಂತಾದ ಬದಲಾವಣೆಗಳನ್ನು ತರಬೇಕಾಗಿದೆ. ಪ್ರಜೆಗೆ ಪ್ರಜಾಪ್ರಭುತ್ವದಲ್ಲಿ ಏನಧಿಕಾರವಿದೆ ಹೇಳಿ? ನಾವೆಲ್ಲ ಕುಂಭಕರ್ಣರಾಗುತ್ತಿದ್ದೀವಿ. 5 ವರ್ಷಕ್ಕೊಮ್ಮೆ ಎದ್ದು ಮತ ಚಲಾಯಿಸಿ ಮತ್ತೆ ಮಲಗುತ್ತಿದ್ದೇವೆ. ನಮ್ಮಲ್ಲಿ ಸಾವಿರ ಸಂಘಟನೆಗಳೇನೋ ಇದೆ. ತಿಳುವಳಿಕೆಯುಳ್ಳ ಯೋಗ್ಯರು ಇದ್ದಾರೆ. ಆದರೆ ಅವೆಲ್ಲಾ ಒಂದಾಗಿ ಕೆಲಸ ಮಾಡುವುದೆಂದು ಎಂದು ದೊರೆಸ್ವಾಮಿ ಪ್ರಶ್ನೆ ಹಾಕಿದರು.

ನಾವು ಸ್ವಾತಂತ್ರ್ಯಕ್ಕೆ ಅರ್ಹರೇ? ಎಲ್ಲರು ನಿಷ್ಕಿೃಯರಾಗುತ್ತಿದ್ದಾರೆ, ಸತ್ತಂತಾಗಿದ್ದಾರೆ. ಇಂತಹ ಅವಸ್ಥೆ ನೋಡಲು ಬದುಕಿದ್ದೇವೆ. ಮಾತು ಕೇಳಿ ಸುಮ್ಮನಾಗದೇ, ಅದಕ್ಕೆ ಹೊಣೆಗಾರರಾಗಿ ಚಳುವಳಿಯನ್ನು ಮುಂದುವರಿಸಬೇಕೆಂದು ಯುವ ಜನಾಂಗಕ್ಕೆ ಕರೆ ನೀಡಿದರು.

ಮಾಜಿ ಸಂಸದ ಕೃಷ್ಣ ಅಯ್ಯರ್‌ ಮಾತನಾಡಿ, ನಮಗೆಲ್ಲಾ ಸ್ವದೇಶದ ಬಗ್ಗೆ ಬಹಳ ವಿಶ್ವಾಸವಿದೆ. ಆದರೆ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಸ್ವದೇಶಿ ಮಂತ್ರ ಜಪಿಸುತ್ತಿದ್ದ ರಾಜಕೀಯ ಪಕ್ಷಗಳೇ ಇಂದು ಅದಕ್ಕೆ ತಿಲಾಂಜಲಿ ಬಿಟ್ಟಿವೆ. ಸ್ವದೇಶಿ ಎಂದರೆ ಮುಂದಿನ ಪೀಳಿಗೆಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಇದಕ್ಕೆ ಕಾರಣ ರಾಜಕೀಯ ಪಕ್ಷಗಳು. ಯುವ ಶಕ್ತಿ ಸಂಘಟನೆ ಮೂಲಕ ಸ್ವದೇಶಿ ಚಳುವಳಿ ಪ್ರಾರಂಭ ಮಾಡಬೇಕು. ಇದರಲ್ಲಿ ರಾಜೀವ ದೀಕ್ಷಿತ್‌ ಯಶಸ್ವಿಯಾಗುತ್ತಿದದ್ದಾರೆ. ಹಿಂದೆ ಈ ಚಳವಳಿ ಮೊದಲು ಪ್ರಾರಂಭ ಮಾಡಿದವರು ದೊರೆಸ್ವಾಮಿ. ಏಕಾಂಗಿಯಾಗಿ ಮಾಡಿದರು. ಅವರಿಗೆ ನಿಜವಾದ ಅರ್ಹತೆ ಇತ್ತು. ಮಹಾತ್ಮ ಗಾಂಧಿಯವರ ಬಳಿ ಅವರು ಸಾಕಷ್ಟು ಕಲಿತಿದ್ದಾರೆ ಎಂದರು.

ರಾಜೀವ್‌ ದೀಕ್ಷಿತ್‌ ಮಾತುಗಳು

ಕೊನೆಗೆ ಮಾತನಾಡಿದ್ದು ರಾಜೀವ ದೀಕ್ಷಿತ್‌.ನನಗೆ ಕನ್ನಡ ಬರುವುದಿಲ್ಲ. ಇಂಗ್ಲೀಷ್‌ನಲ್ಲಿ ಮಾತನಾಡಲು ಇಷ್ಟವಿಲ್ಲ ಅಂತ ಮಾತು ಪ್ರಾರಂಭಿಸಿದ ಅವರು ನಿರರ್ಗಳವಾಗಿ ವಿಚಾರ ಧಾರೆ ಹರಿಬಿಟ್ಟರು....

1947ರಲ್ಲಿ ಸ್ವಾತಂತ್ರ ಬಂದ ನಂತರ ಭಾರತ ಸಾಲ ಮುಕ್ತ ದೇಶವಾಗಿತ್ತು. ಆದರೆ ಈಗ ದೇಶದ ತುಂಬಾ ವಿದೇಶಿ ಸಾಲವಾಗಿದೆ. ಆರ್ಥಿಕ ಪರಿಸ್ಥಿತಿ ಭಯ ಹುಟ್ಟಿಸುವ ಹಾಗಿದೆ. 1952ರಲ್ಲಿ ನೆಹರೂ ರೂಪಿಸಿದ ಪಂಚವಾರ್ಷಿಕ ಯೋಜನೆಯಿಂದ ಪ್ರಾರಂಭವಾದ ಸಾಲ ಇಂದು ಬೃಹದಾಕಾರವಾಗಿ ಬೆಳೆದಿದೆ. ಪಂಚವಾರ್ಷಿಕ ಯೋಜನೆ ಜಾರಿಗೆ ತರಲು ನಮ್ಮ ಬಳಿ ಹಣವಿರಲಿಲ್ಲ. ಮಧ್ಯೆ ದೇಶ ಚೀನಾ ಯುದ್ಧ ಎದುರಿಸಬೇಕಾಯಿತು. ಅದರಲ್ಲಿ ಸೋತು ಹೈರಾಣಾದ ಭಾರತ, ತನ್ನ ರಕ್ಷಣಾ ವ್ಯವಸ್ಥೆ ಬಲಪಡಿಸಲು ಮತ್ತಷ್ಟು ಸಾಲ ಮಾಡಿತು. ಹೀಗೆ ಸಾಲ ಬೆಳೆಯುತ್ತಾ ಹೋಯಿತು. 1992ರಲ್ಲಿ ಪಿ.ವಿ. ನರಸಿಂಹರಾಯರು ನೆಹರು ಮಾಡಿದ ಸಾಲ ತೀರಿಸಲು ಹೊಸ ಸಾಲ ಮಾಡಿದರು.

ಜಿ-7 ದೇಶಗಳು ಭಾರತಕ್ಕೆ ಸಾಲ ನೀಡಿದರೆ ನಮ್ಮ ರೂಪಾಯಿ ಬೆಲೆ ಕಡಿಮೆ ಆಗುತ್ತಾ ಹೋಗುತ್ತದೆ. 1952ರಿಂದ ನಮ್ಮ ರೂಪಾಯಿಯ ಬೆಲೆ (ಡಾಲರೊಂದಕ್ಕೆ) ಕಡಿಮೆ ಆಗುತ್ತಾ ಹೋಗಿ, 2003ರಲ್ಲಿ ಸುಮಾರು 48ರೂಪಾಯಿಯಾಗಿದೆ. ಬಡ್ಡಿ ಬೆಲೆ ಅಧಿಕವಾಗಿದೆ. ಆದ್ದರಿಂದ ಆ ನಷ್ಟವನ್ನು ತುಂಬಲು ನಾಗರಿಕರಿಗೆ ಅಧಿಕ ತೆರಿಗೆ ಹೇರಲಾಗಿದೆ. ನಮ್ಮ ಸರ್ಕಾರಗಳು ಬೇರೆ ದೇಶೀಯರ ಗುಲಾಮರಾಗುತ್ತಿದ್ದಾರೆ.

ಝೆಹೆರ್‌ ಪೆಪ್ಸಿ : ಪೆಪ್ಸಿ ಕೋಕ್‌ ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ದ ಮಾತನಾಡಿದ ದೀಕ್ಷಿತ್‌, ನಾವು ಪೆಪ್ಸಿ, ಕೋಕ್‌ ಮುಂತಾದ ಪಾನೀಯಗಳನ್ನು ಕುಡಿದು ನಮ್ಮ ಶತ್ರುವಾದ ಪಾಕಿಸ್ತಾನಕ್ಕೆ ನೆರವು ನೀಡುತ್ತಿದ್ದೇವೆ. ಸುಮಾರು 3 ಸಾವಿರ ಕೋಟಿ ರೂಪಾಯಿ ಪ್ರತಿ ವರ್ಷ ಪೆಪ್ಸಿ ಕೋಕ್‌ನಿಂದ ಅಮೆರಿಕಾಕ್ಕೆ ಆದಾಯವಿದೆ. ಆ ಹಣವನ್ನು ಅವರು ಪಾಕಿಸ್ತಾನಕ್ಕೆ ನೆರವಿನ ರೂಪದಲ್ಲಿ ನೀಡುತ್ತಿದ್ದಾರೆ. ಅದೂ ಅಲ್ಲದೆ ಪೆಪ್ಸಿ ಮತ್ತು ಕೋಕ್‌ನಲ್ಲಿ ಆಸಿಡ್‌ ಅಂಶ ಅಧಿಕವಿದ್ದು ಕ್ಯಾನ್ಸರ್‌ ಬರುವ ಆತಂಕವಿದೆ. ಜನ ಕುಡಿಯುತ್ತಿರುವುದು ಲೆಹರ್‌ ಪೆಪ್ಸಿಯಲ್ಲ, ಝೆಹೆರ್‌ ಪೆಪ್ಸಿ !

ನಮ್ಮ ಕ್ರಿಕೆಟಿಗರು ಮತ್ತು ಸಿನಿಮಾ ತಾರೆಗಳಿಗೆ ಸಾಮಾಜಿಕ ಜವಾಬ್ದಾರಿಗಳಿರುವುದಿಲ್ಲ . ದುಡ್ಡಿನ ಆಸೆಗಾಗಿ ವಿದೇಶೀ ಕಂಪೆನಿಗಳ ಜಾಹಿರಾತಿನಲ್ಲಿ ನಟಿಸಿ ಕೋಟ್ಯಂತರ ರೂಪಾಯಿ ಪಡೆಯುತ್ತಿದ್ದಾರೆ. ಅವರ ಆಸೆಯಿಂದ ಆ ಉತ್ಪನ್ನಗಳನ್ನು ಖರೀದಿಸುವ ನಮ್ಮ ಜನರು ಸ್ಥಳೀಯ ಕಂಪೆನಿಗಳನ್ನು ಕಡೆಗಣಿಸುತ್ತಿದ್ದಾರೆ.

ವಿದೇಶಿ ಚಾನಲ್ಲುಗಳಲ್ಲಿ ಬರಿ ಅನೈತಿಕ ಸಂಬಂಧ ಮತ್ತು ಹಿಂಸೆಯ ಬಗ್ಗೆ ಕಾರ್ಯಕ್ರಮ ಮತ್ತು ಧಾರಾವಾಹಿಗಳನ್ನು ಪ್ರಸಾರ ಮಾಡುತ್ತವೆ. ಅದರಿಂದ ನಮ್ಮ ಪ್ರೇಕ್ಷಕರು ಹಾಳಾಗುತ್ತಿದ್ದಾರೆ.

ಗುಲಾಮಗಿರಿ ಸರ್ಕಾರ : ಅಮೆರಿಕಾದಲ್ಲಿ ವಾಣಿಜ್ಯ ಹಿನ್ನಡೆಯುಂಟಾದಾಗ ನಮ್ಮವರನೇಕರು ಕೆಲಸ ಕಳೆದುಕೊಂಡರು. ಆ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಮ್ಮ ಸಂಸದ್‌ ಭವನದ ಮೇಲೆ ದಾಳಿ ನಡೆದಾಗ ನಾವು ಯಾವುದೇ ಕಾರ್ಯಾಚರಣೆ ಮಾಡಲು ಬಿಡಲಿಲ್ಲ. ನಮ್ಮ ಸೇನೆ 10 ತಿಂಗಳು ಕಾಯುತ್ತಾ ಕೂರಬೇಕಾಯಿತು. ಪ್ರಧಾನಿಗಳು ಮನಾಲಿಗೆ ರಜೆಗೆಂದು ಹೊರಟರು. ಸರ್ಕಾರ ಏನೂ ಮಾಡುತ್ತಿಲ್ಲ. ಎಲ್ಲಾ ಸರ್ಕಾರಗಳು ಗುಲಾಮಗಿರಿ ಮಾಡುತ್ತಿವೆ. ನಮ್ಮ ಮಾನಕ್ಕಿಂತ ಅವರಿಗೆ ಗ್ಯಾಟ್‌, ಜಾಗತೀಕರಣ ಮುಖ್ಯವಾಗಿದೆ. ಮಾಜಿ ಪ್ರಧಾನಿಗಳಾದ ಚಂದ್ರಶೇಖರ್‌ ಸಂಸತ್ತಿನಿಂದ ಇನ್ನೇನು ಬಯಸಬೇಡಿ ಎಂದು ಹೇಳಿದ್ದಾರೆ. ಅದು ಅಮೆರಿಕಾದ ಮತ್ತು ಬಹು ರಾಷ್ಟ್ರೀಯ ಕಂಪೆನಿಯ ಕೈಯಲ್ಲಿದೆ. ಅವರಿಗೆ ಅನುಕೂಲವಾಗುವಂತೆ ಶಾಸನಗಳನ್ನು ರಚಿಸಲಾಗುತ್ತಿದೆ. ವಿದೇಶಿ ಕಂಪೆನಿಗಳಿಗೆ ಮೊದಲ ಆದ್ಯತೆ ನಿಡಲಾಗುತ್ತಿದೆ. ಅವರಿಗೆ ಭೂಮಿ, ನೀರು ಎಲ್ಲವು ಸಿಗುತ್ತದೆ. ಆದರೆ ಭಾರತೀಯರನ್ನು ಭಾರತದಲ್ಲೇ ಕಡೆಗಣಿಸಲಾಗುತ್ತಿದೆ ಮತ್ತು ಈ ಎಲ್ಲ ಕೆಲಸಗಳನ್ನು ಗಾಂಧಿ, ಮಾರ್ಕ್ಸ್‌ ಮುಂತಾದವರ ಹೆಸರಿನಲ್ಲಿ ಮಾಡಲಾಗುತ್ತಿದೆ.

ದೇಶೀ ಪದಾರ್ಥ ಕೊಳ್ಳಿ, ಎಂಎನ್‌ಸಿಗಳನ್ನು ಓಡಿಸಿ

ನನ್ನ ಕಳಕಳಿಯ ಪ್ರಾರ್ಥನೆಯಿಂದರೆ ಸರ್ಕಾರ ಮಾಡದ ಕೆಲಸವನ್ನು ಜನರು ಮಾಡಬಹುದಾಗಿದೆ. ರಾಜಕಾರಣಿಗಳು ಕೆಲಸ ಮಾಡುತ್ತಾರೆಂದು ನಂಬುವುದರಲ್ಲಿ ಅರ್ಥವಿಲ್ಲ. ರಾಜಕೀಯ ಪಕ್ಷಗಳು ತಮ್ಮ ಆದರ್ಶಗಳನ್ನು ಬಿಟ್ಟು ಇತರೆ ರಾಜಕೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುತ್ತಾರೆ. ಅಧಿಕಾರಿಗಳು ಕೂಡ ಅವರೊಟ್ಟಿಗೆ ಕೆಲಸ ಮಾಡತ್ತಾರೆ. ರಾಷ್ಟಪತಿ ಕಲಾಂ, ಪ್ರಧಾನ ಮಂತ್ರಿ ವಾಜಪೇಯಿ, ಜಾರ್ಜ್‌ ಫರ್ನಾಂಡಿಸ್‌ ಮಾಡದ ಕೆಲಸ ಜನ ಮಾಡಬಹುದು. ಅದೆಂದರೆ ಪೆಪ್ಸಿ ಕೋಕ್‌ ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳನ್ನು ಭಾರತದಿಂದ ಓಡಿಸುವುದು. ಅವರ ಉತ್ಪನ್ನಗಳನ್ನು ಬಹಿಷ್ಕರಿಸಿದಾಗ ತಂತಾನೆ ಬಿಟ್ಟು ಹೋಗುತ್ತಾರೆ. ಜನರ ನಿಲುವಿನ ಮುಂದೆ ಯಾವುದು ಇಲ್ಲ.

ನಮ್ಮ ಉತ್ಪನ್ನಗಳು ಚೆನ್ನಾಗಿದ್ದರೂ, ಅದು ಜಾಹಿರಾತು ನೀಡುವುದಿಲ್ಲವಾದ್ದರಿಂದ ಜನ ಕೊಳ್ಳುವುದಿಲ್ಲ. ನಮ್ಮ ಕಾರ್ಖಾನೆಗಳು ಕೂಡ ಸುಧಾರಿಸುತ್ತವೆ. ನಮ್ಮ ಬಡತನ ನಿರ್ಮೂಲನೆಯಾಗುತ್ತದೆ, ಉದ್ಯೋಗವಕಾಶ ಹೆಚ್ಚುತ್ತದೆ.

ದುಷ್ಟರ ತೊಂದರೆ ಹಾನಿಕರವಲ್ಲ, ಆದರೆ ಸಜ್ಜನರ ನಿಷ್ಕಿೃಯತೆ ತುಂಬಾ ಅಪಾಯಕರ. ಸಂಕಲ್ಪವಿದ್ದರೆ ಮನುಷ್ಯ ದೊಡ್ಡವನಾಗುತ್ತಾನೆ. ನೀವು ಒಂದು ಹೆಜ್ಜೆ ಮುಂದಿಟ್ಟರೆ ನಿಮ್ಮ ಹಿಂದೆ ಹಿಂಬಾಲಕರಿರುತ್ತಾರೆ. ಜಾಹಿರಾತುಗಳಿಗೆ ಮಾರುಹೋಗದೆ ವಿದೇಶಿ ಉತ್ಪನ್ನಗಳನ್ನು ಕೊಳ್ಳದೇ ಆದಷ್ಟು ಸ್ವದೇಶಿ ವಸ್ತುಗಳನ್ನೇ ಕೊಳ್ಳಿ. ಜನತೆಗೆ ಒಳ್ಳೆಯ ಶಿಕ್ಷಣ ಕೊಡಿ. ದೇಶ ಉದ್ಧಾರವಾಗದಿದ್ದರೆ ಕೇಳಿ !

ಭಾರತದ ಇಂದಿನ ಆರ್ಥಿಕ ಪರಿಸ್ಥಿತಿ : ರಾಜೀವ್‌ ದೀಕ್ಷಿತ್‌ ಅಂಕಿ- ಅಂಶ

ರಾಜೀವ್‌ ದೀಕ್ಷಿತ್‌ ವಾದವನ್ನು ನೀವು ಒಪ್ಪುತ್ತೀರಾ?

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X