ವಿಜಯ ಸಂಕೇಶ್ವರರ ‘ಕನ್ನಡ ನಾಡು’ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ
ಹುಬ್ಬಳ್ಳಿ : ಬಿಜೆಪಿಯ ಸದಸ್ಯತ್ವ ಹಾಗೂ ಲೋಕಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ವಿಆರ್‌ಎಲ್ ಸಮೂಹದ ಮುಖ್ಯಸ್ಥ ವಿಜಯ ಸಂಕೇಶ್ವರ ಅವರ ನೇತೃತ್ವದ 'ಕನ್ನಡ ನಾಡು" ಪ್ರಾದೇಶಿಕ ಪಕ್ಷ ಗುರುವಾರ ಪ್ರಾರಂಭವಾಯಿತು.
ಪಕ್ಷದ ಸಂವಿಧಾನ ಸಿದ್ಧವಾಗಿದೆ. ಪ್ರಾರಂಭಿಕ ಹಂತದಲ್ಲಿ 300 ಮಂದಿ 'ಕನ್ನಡ ನಾಡು" ಪಕ್ಷದ ಸದಸ್ಯತ್ವ ಪಡೆದಿದ್ದಾರೆ ಎಂದು ವಿಜಯ ಸಂಕೇಶ್ವರ ಹಾಗೂ ರತ್ನಪಾಲಶೆಟ್ಟಿ ಗುರುವಾರ (ಜೂನ್ 19) ಹುಬ್ಬಳ್ಳಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಿದರು.
ತಮ್ಮ ಸಂಸತ್ ಸದಸ್ಯ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ . ಈ ರಾಜೀನಾಮೆ ಅಂಗೀಕಾರವಾದ ನಂತರ ತಾವು 'ಕನ್ನಡ ನಾಡು" ಪಕ್ಷದ ಸದಸ್ಯತ್ವ ಪಡೆಯುವುದಾಗಿ ಸಂಕೇಶ್ವರ ತಿಳಿಸಿದರು. ಪ್ರಸ್ತುತ ರತ್ನಪಾಲ ಶೆಟ್ಟಿ ಅವರು 'ಕನ್ನಡ ನಾಡು" ಪಕ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವರು.
ಜುಲೈನಿಂದ ರಾಜ್ಯಾದ್ಯಂತ ಪ್ರವಾಸ : ರಾಜೀನಾಮೆ ಅಂಗೀಕಾರವಾಗಿ 'ಕನ್ನಡ ನಾಡು" ಪಕ್ಷದ ಸದಸ್ಯತ್ವ ಪಡೆದ ನಂತರ ರಾಜ್ಯಾದ್ಯಂತ ಪ್ರವಾಸ ನಡೆಸಿ ಪಕ್ಷವನ್ನು ಸಂಘಟಿಸುವುದಾಗಿ ಹೇಳಿದ ಸಂಕೇಶ್ವರ- ನೂತನ ಪಕ್ಷ ಯಾವುದೇ ಪಕ್ಷಕ್ಕೆ ಸವಾಲೆಸೆಯಲು ಕಟ್ಟಿದ್ದಲ್ಲ ಎಂದು ಸ್ಪಷ್ಟಪಡಿಸಿದರು.
'ಕನ್ನಡ ನಾಡು" ಪಕ್ಷಕ್ಕೆ ವಿವಿಧ ರೈತ ಸಂಘಟನೆಗಳು, ಮಠಾಧೀಶರು, ಸಾಹಿತಿಗಳು, ಚಿಂತಕರು, ಕನ್ನಡ ಚಳವಳಿಕಾರರು ಬೆಂಬಲ ಸೂಚಿಸಿದ್ದಾರೆ. ರೈತರ ಹಾಗೂ ಜನಸಾಮಾನ್ಯರ ಹಿತಾಸಕ್ತಿಗಾಗಿ 'ಕನ್ನಡ ನಾಡು" ಪಕ್ಷ ದುಡಿಯಲಿದೆ ಎಂದು ವಿಜಯ ಸಂಕೇಶ್ವರ ಹೇಳಿದರು.












Click it and Unblock the Notifications