ರಾಜ್ಯ ಇನ್ನು ಸುರಾಪ್ರಿಯರ ಸ್ವರ್ಗ

ರಾಜ್ಯ ಇನ್ನು ಸುರಾಪ್ರಿಯರ ಸ್ವರ್ಗ
ಕುಡಿಯುವ ನೀರಿಗೆ ಕೊರತೆ ಇದ್ದರೇನಾಯಿತು ; ರಾಜ್ಯ ಸರ್ಕಾರ ಮದ್ಯದ ಹೊಳೆಯನ್ನೇ ಹರಿಸಲು ಸಿದ್ಧತೆ ನಡೆಸಿದೆ. ಇನ್ನುಮುಂದೆ, ಚೆಲುವ ಕನ್ನಡ ನಾಡಲಿ- ಮದ್ಯದ ಹೊಳೆಯಾ ಲಾಟರಿ ಮಳೆಯೋ ಎಂದು ಹಾಡಲಿಕ್ಕಡ್ಡಿಯಿಲ್ಲ !

ಪಿ. ತ್ಯಾಗರಾಜ್‌

ಸುರಾಪ್ರಿಯರಿಗೊಂದು ಸಿಹಿ ಸುದ್ದಿ !

ಮದ್ಯ ಮಾರಾಟ ತೆರಿಗೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಸಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಇನ್ನು ಮುಂದೆ ಅಗ್ಗದ ದರದಲ್ಲಿ ಗುಣಮಟ್ಟದ ಮದ್ಯ ದೊರೆಯಲಿದೆ !!

ರಾಜ್ಯ ಸರಕಾರ ಹೊರಡಿಸಿರುವ ಪೂರ್ವಭಾವೀ ಅಧಿಸೂಚನೆ ಪ್ರಕಾರ ಭಾರತೀಯ ಉತ್ಪಾದಿತ ವಿದೇಶಿ ಮದ್ಯದ ಒಂದು ಲೀಟರ್‌ ಮೇಲಿನ ತೆರಿಗೆಯನ್ನು 205 ರೂಗಳಿಂದ 97 ರೂಪಾಯಿಗಳಿಗೆ ಇಳಿಸಲು ಪ್ರಸ್ತಾಪಿಸಲಾಗಿದೆ. ಅಂದರೇ ಶೇಕಡಾ 55ರಷ್ಟು ತೆರಿಗೆ ಕಡಿಮೆ ಆಗಲಿದೆ.

ಸಮೀಪಿಸುತ್ತಿರುವ ವಿಧಾನ ಸಭೆ ಚುನಾವಣೆ ಹಾಗೂ ಮೂರು ವರ್ಷಗಳಿಂದ ಬೆನ್ನತ್ತಿರುವ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ಅನೇಕ ಕಡೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಿರುವ ಸಂದರ್ಭದಲ್ಲಿ ಸರಕಾರದ ಈ ಆಲೋಚನೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಮುಂದಿನ ತಿಂಗಳಿಂದ ಮದ್ಯ ತಯಾರಕರ ಎಲ್ಲ ಉತ್ಪಾದನೆಯನ್ನು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪಾನೀಯ ನಿಗಮದ ಮೂಲಕ ವಿತರಣೆ ಮಾಡಲಾಗುವುದು. ಇದರಿಂದ ಸೆಕೆಂಡ್ಸ್‌ ಹಾಗೂ ಥರ್ಡ್ಸ್‌ ಹಾವಳಿ ಸಂಪೂರ್ಣ ನಿವಾರಣೆ ಆಗುವುದರ ಜೊತೆಗೆ ತೆರಿಗೆ ಆದಾಯ ವಾರ್ಷಿಕ 600 ಕೋಟಿ ರೂ.ಗಳಿಂದ 1000 ಕೋಟಿ ರೂ.ಗೆ ಹೆಚ್ಚಳವಾಗಲಿದೆ. ಈಗ ಮದ್ಯ ಮಾರಾಟ ಮೇಲಿನ ತೆರಿಗೆ ಲೀಟರ್‌ಗೆ 207ರೂ. ಇರುವುದರಿಂದ ತಯಾರಕರು ಉತ್ಪಾದನೆಯ ಸ್ವಲ್ಪ ಪ್ರಮಾಣವನ್ನು ಮಾತ್ರ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ಮೂಲಕ ಮಾರಾಟ ಮಾಡುತ್ತಿದ್ದಾರೆ. ಉಳಿದ ತೆರಿಗೆಯಿಂದ ತಪ್ಪಿಸಿಕೊಂಡು ಸೆಕೆಂಡ್ಸ್‌ ಮತ್ತು ಥರ್ಡ್ಸ್‌ ಮೂಲಕ ಮಾರಾಟ ಆಗುತ್ತಿದೆ. 2.50 ಕೋಟಿ ಲೀಟರ್‌ ತೆರಿಗೆ ಸಮೇತ ಮಾರಾಟ ಆಗುತ್ತಿದ್ದರೆ, 7.5 ಕೋಟಿ ಲೀಟರ್‌ ತೆರಿಗೆ ರಹಿತ ಮಾರಾಟವಾಗುತ್ತಿದೆ.

ಇದರಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 400ರಿಂದ 600 ಕೋಟಿ ರೂ. ತೆರಿಗೆ ನಷ್ಟವಾಗುತ್ತಿದೆ. ಇದನ್ನು ತಡೆಗಟ್ಟಲು ಸರಕಾರ ಪಾನೀಯ ನಿಗಮ ಸ್ಥಾಪಿಸಿದ್ದು, ಎಲ್ಲ ಉತ್ಪನ್ನವೂ ಈ ಸಂಸ್ಥೆ ಮೂಲಕ ಸಗಟು ಮಾರಾಟಗಾರರಿಗೆ ಹಂಚಿಕೆ ಆಗಲಿದೆ. ತೆರಿಗೆ ಪ್ರಮಾಣವನ್ನು ಶೇ.55 ರಷ್ಟು ಕಡಿಮೆ ಮಾಡಲು ಉದ್ದೇಶಿಸಿರುವುದರಿಂದ ಉತ್ಪಾದಕರಿಗೆ ಯಾವುದೇ ನಷ್ಟ ಆಗುವುದಿಲ್ಲ ಎಂಬುದು ಸರಕಾರದ ವಾದವಾಗಿದೆ.

ಈಗ ಒಂದು ಲೀಟರ್‌ ಮದ್ಯ ಮಾರಾಟಕ್ಕೆ ಒಟ್ಟಾರೆ 205 ರೂ. ತೆರಿಗೆ ವಿಧಿಸಲಾಗುತ್ತಿದೆ. ಈ ಪೈಕಿ 45 ರೂ. ಅಬಕಾರಿ ತೆರಿಗೆ, 130 ರೂ. ಹೆಚ್ಚುವರಿ ಅಬಕಾರಿ ತೆರಿಗೆ ಹಾಗೂ 30 ರೂ. ಮದ್ಯ ಶುಲ್ಕ. ಈ ವಿವಿಧ ತೆರಿಗೆ ಪ್ರಮಾಣ ಕಡಿಮೆ ಮಾಡಲು ಸರಕಾರ ಈಗ ಮುಂದಾಗಿದೆ.

ಈಗ ಆಂಧ್ರ ಸೆರಿದಂತೆ ನೆರೆ ರಾಜ್ಯಗಳಲ್ಲಿ ಪಾನೀಯ ನಿಗಮಗಳು ಅಸ್ತಿತ್ವಕ್ಕೆ ಬಂದಿವೆ. ಅಲ್ಲಿ ತೆರಿಗೆ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ ಮದ್ಯ ಮಾರಾಟಗಾರರು ನೆರೆ ರಾಜ್ಯಗಳಿಂದ ಮದ್ಯ ತಂದು ಮಾರಾಟ ಮಾಡುತ್ತಿರುವುದರಿಂದ ರಾಜ್ಯದ ಬೊಕ್ಕಸದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಪಾನೀಯ ನಿಗಮ ಸ್ಥಾಪನೆ ಹಾಗೂ ತೆರಿಗೆ ಪ್ರಮಾಣ ಕಡಿಮೆ ಕ್ರಮ ಈ ಸಮಸ್ಯೆ ನಿವಾರಣೆ ಮಾಡಲಿದೆ ಎಂಬುದು ಸರಕಾರದ ವಿಶ್ವಾಸ.

ಈಗಾಗಲೇ ಪಾನೀಯ ನಿಗಮ ಅಸ್ತಿತ್ವಕ್ಕೆ ಬಂದಿದ್ದು, ಇದಕ್ಕೆ 55 ಕೋಟಿ ರೂ. ಬಜೆಟ್‌ನಲ್ಲಿ ಒದಗಿಸಲಾಗಿದೆ. ಹಿಂದೆ ವೀರೇಂದ್ರ ಪಾಟೀಲ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಕೂಡ ರಾಜ್ಯದಲ್ಲಿ ಸೆಕೆಂಡ್ಸ್‌ ತಡೆಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿತ್ತು. ಆಗ ಪಾಟೀಲರು ಮದ್ಯ ಲಾಬಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಒಂದು ಅವಧಿಯನ್ನು ಮುಗಿಸುತ್ತಾ ಬಂದಿರುವ ಕೃಷ್ಣ ಸರಕಾರ ಮುಂಬರುವ ಚುನಾವಣೆ ಮೇಲೆ ಕಣ್ಣಿಟ್ಟು ಸೆಕೆಂಡ್ಸ್‌ ತಡೆ ಹಾಗೂ ಅಗ್ಗ ದರದಲ್ಲಿ ಮದ್ಯ ಪೂರೈಕೆಗೆ ಮುಂದಾಗಿದೆ. ಮುಂದೇನಾಗುತ್ತೋ ಕಾಯ್ದು ನೋಡಬೇಕು.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+